ನಿಸರ್ಗದಾಟ
ತಳಿರ ತೋರಣಗಟ್ಟಿ,
ತಾನತಾನದಿ ಗಾನಗೈವ
ಕಾಜಾಣಗಳ ತಾನು
ಮುದದಿ ಕರೆಯುತಿಹುದು!
ನೇಸರನು ಕುಂಚವನು
ತಾ ಮೆಲ್ಲ ಬೀಸುತಲಿ,
ಮುಂಬಿಸಿಲ ಹೊಂಬಣ್ಣ
ಎಲ್ಲೆಲ್ಲೂ ಸವರಿಹನು!
ಮುತ್ತನೆರಚಿ ನಲಿವ
ಸಲಿಲದ ನೀರ್ಗೊರಳು,
ಕಣ್ತಣಿಸಿ, ಕಿವಿಗಿಂಪಾಗಿ
ಮನವನಪಹರಿಸಿಹುದು!
ಕಂದರದೊಳಲೆಯುತಿಹ
ಮಂದ ಮಾರುತ ತಾನು,
ಪರಪುಟ್ಟನಿಂಚರವ
ಪ್ರತಿಧ್ವನಿಸುತಿಹನು !
ಶ್ರೀವಲ್ಲಿ ಮಂಜುನಾಥ
ಬೆಂಗಳೂರು