ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಜೀವನ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ. ಈವಾಗ ಇದ್ದ ಜೀವ ಮತ್ತೊಂದು ಕ್ಷಣ ಇಲ್ಲವಾಗದೆ ಇರಬಹುದು. ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡು ಬದುಕನ್ನು ಸಾಗಿಸುತ್ತಾ ಇರುತ್ತೇವೆ. ಜೀವನದಲ್ಲಿ ಅಡೆತಡೆಗಳು ಬಂದಾಗ ಕುಗ್ಗಿ ಹೋಗುತ್ತೇವೆ. ನಾವೆಲ್ಲಾ ಯಾಕೆ ಜೀವನವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎನ್ನೋದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕ್ಷಣಿಕ ಸುಖಕ್ಕಾಗಿ ಜೀವನದಲ್ಲಿ ಓಡುತ್ತಲೇ ಇದ್ದೇವೆ. ಹೋರಾಟ ನಡೆಸುತ್ತಲೇ ಇದ್ದೇವೆ. ಕ್ಷಣಿಕ ಸುಖಕ್ಕಾಗಿ ಪಡಬಾರದ ಪಾಡು ಪಡುತ್ತೇವೆ. ನಾವು ನಾಗಾಲೋಟದ ಜಗತ್ತಿನ ಓಡುವಿಕೆಯೊಂದಿಗೆ ಪಾಪ ಕರ್ಮಗಳನ್ನು ಮರೆತು ಬಿಟ್ಟಿದ್ದೇವೆ. ಕೊನೆಗೆ ‘ಕಷ್ಟ ಬಂದಾಗ ವೆಂಕಟ ರಮಣ’ ಎಂದು ದೇವರ ಮೊರೆ ಹೋಗುತ್ತೇವೆ. ಆದರೆ, ಈ ಮದ್ಯೆ ಎಷ್ಟೊಂದು ನೋವು, ಪಾಪಗಳನ್ನು ಮಾಡಿರುತ್ತೇವೆ. ಅದರ ಫಲ ನಾವು ತಿನ್ನಲೇಬೇಕಲ್ಲವೇ?,
ಇದರಿಂದ ಸಮಸ್ಯೆ ತಲೆದೋರಿದಾಗ ಮಾನಸಿಕವಾಗಿ ಹಾಗು ದೈಹಿಕವಾಗಿ ಕುಗ್ಗಿ ಹೋಗಿ ಕೆಲವೊಮ್ಮೆ ದುರಂತದಲ್ಲಿ ಅಂತ್ಯ ಕಾಣುತ್ತೇವೆ.
ನಾವು ನಮ್ಮ ಜೀವನದಲ್ಲಿ ಚಿಂತೆಗಳ ಸರಮಾಲೆಗಳನ್ನು ಹಾರವಾಗಿ ಪೋಣಿಸಿಕೊಂಡು ದಿನನಿತ್ಯ ಜಂಜಾಟದಲ್ಲೇ ನಮ್ಮ ಇಡೀ ಬದುಕನ್ನು ದುರ್ಭರವಾಗಿಸಿಕೊಂಡಿದ್ದೇವೆ. ಇದಕ್ಕಾಗಿಯೇ ನಮ್ಮ ಪೂರ್ವ ದಾರ್ಶನಿಕರು ಎಷ್ಟೊ ವಚನಗಳ ಮೂಲಕ, ದಾಸ ಸಾಹಿತ್ಯದ ಮೂಲಕ ಜೀವನದ ಸುಲಭ ಸಾಧನೆಯನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ನನಗೊಂದು ದಾಸರ ವಚನ ನೆನಪಾಗುತ್ತದೆ.
“ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ|
ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ||
ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ|
ಅಡವಿಯೊಳ್ಮನೆಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ||
ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೊ ಹೊತ್ತಿಗೆ ನೀ ಕಾಯೊ ಹರಿಯೆ…
ಪುರಂದರದಾಸರು, ಈ ಮೂಲಕ ನಮ್ಮ ಜೀವನಕ್ಕೊಂದು ಅದ್ಭುತ ಅರ್ಥಬದ್ಧವಾದ ಸಂದೇಶವನ್ನು ನೀಡಿದ್ದಾರೆ. ನಮ್ಮದು ಕಲ್ಪನಾ ಬದುಕು. ಎಲ್ಲರೂ ಇದ್ದಾರೆ ಎಂಬ ಭ್ರಮೆಯೊಂದಿಗೆ ಬದುಕುತ್ತಿದ್ದೇವೆ. ಆದರೆ ಇವತ್ತು ಇದ್ದವರು ನಾಳೆ ಇಲ್ಲ ಎಂಬುದು ಕಟು ಸತ್ಯ. ಅದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ನಮಗಿಲ್ಲ. ನಮ್ಮವರು ಎಂಬ ಸಂಬಂಧವನ್ನು ಬಿಗಿಯಾಗಿಸಿಕೊಂಡು ನಮ್ಮ ಕುತ್ತಿಗೆಗೆ ನಾವೇ ಸುತ್ತಿಕೊಳ್ಳುತ್ತಿದ್ದೇವೆ. ಕೊನೆಗೆ ಉಸಿರಾಡಲು ಆಗದೆ ಪರಿತಪಿಸುತ್ತೇವೆ.
ಮನುಷ್ಯನ ಜೀವನವೇ ಹಾಗೆ, ಒಂದಿನ ಕಷ್ಟ ಒಂದಿನ ಸುಖ ಎರಡು ನಾಣ್ಯಗಳ ಮುಖಗಳಂತೆ. ಸುಖ ಬಂದರೆ ಯಾಕೆ ಬಂತೆಂದು ಕೇಳದ ನಾವು ಕಷ್ಟ ಬಂದರೆ ಸಾಕು ಅಯ್ಯೋ ಯಾಕಪ್ಪ ನನಗೆ ಕಷ್ಟ ಬಂತು ನಾನು ಯಾರಿಗೆ ಅನ್ಯಾಯ ಮಾಡಿದೆ ಎಂದು ಇರೋ ಬರೋ ದೇವರುಗಳ ಮೊರೆ ಹೋಗುತ್ತೇವೆ. ನಮಗೆ ಕಷ್ಟಗಳನ್ನು ಎದುರಿಸಲು ಭಯ. ಕಷ್ಟ ಬಂದಾಗ ಹಿಗ್ಗದೆ ಸುಖ ಬಂದಾಗ ಕುಗ್ಗದೆ ಮುನ್ನುಗ್ಗುತ್ತ ಸಾಗಬೇಕು ಇದು ಜೀವನ. “ಮಾಡಿದ್ದುಣ್ಣೋ ಮಹರಾಯ” ಎನ್ನುವ ಹಾಗೆ ನಾವು ಸಮಾಜಕ್ಕೆ ಏನು ಕೊಡುತ್ತೇವೆಯೋ ಅದೇ ನಮಗೆ ವಾಪಸು ಸಿಗುತ್ತದೆ. ಒಳ್ಳೆಯದು ಕೊಟ್ಟರೆ ವಾಪಸು ಒಳ್ಳೆಯದು ಸಿಗುತ್ತದೆ. ಕೆಟ್ಟದು ಕೊಟ್ಟರೆ ವಾಪಸು ಕೆಟ್ಟದು ಸಿಗುತ್ತದೆ. ಬೇರೆಯವರಿಗೆ ಕೆಟ್ಟದು ಬಯಸುವಾಗ ಯೋಚನೆ ಮಾಡದ ನಾವು ಒಳ್ಳೆಯದು ಮಾಡಬೇಕೆಂದರೆ ಯೋಚನೆ ಮಾಡುತ್ತೇವೆ. ಆಲೋಚನೆ ಆಚರಣೆ ಇವೆರಡು ಸಕಾರಾತ್ಮವಾಗಿ ಇದ್ದಾಗ ನಮ್ಮ ಜೀವನವು ಸುಖಮಯವಾಗಿ ಇರುತ್ತದೆ.
ಕ್ಷಣಿಕವಾದ ಜೀವನದಲ್ಲಿ ಕೋಪ, ಜಗಳ, ದ್ವೇಷ, ಅಸೂಯೆ ಇದೆಲ್ಲವನ್ನು ಗೆದ್ದು ಬದುಕಿದಾಗ ಆಹಾ! ಜೀವನ ಎಷ್ಟೊಂದು ಸುಂದರ ಎಂದೆನಿಸದೆ ಇರಲಾರದು. ನಮ್ಮ ಮುಂದೆ ನಾಳೆಯ ಬಗ್ಗೆ ಯೋಚನೆ ಮಾಡಲು ಯಾವ ಕಾರಣವು ಇಲ್ಲ. ಆದರೆ ಇಂದಿನ ಖುಷಿಯೊಂದಿಗೆ ಬದುಕಲು ಸಾವಿರ ಕಾರಣಗಳಿವೆ. ಜೀವನ ನಮಗೆ ದೇವರು ಕೊಟ್ಟ ಅದ್ಭುತವಾದ ಬಹುಮಾನ ಹಾಗು ಬದುಕಲು ಕೊಟ್ಟಂತಹ ಅವಕಾಶ. ಇಂದು ನನ್ನದು ನನ್ನದು ಎಂಬ ಅಹಂನಿಂದ ಬದುಕುತ್ತೇವೆ. ಉಸಿರು ನಿಂತಾಗ ನನ್ನದೆಂಬುದು ಏನೂ ಇಲ್ಲ, ಅಹಂ ಇಲ್ಲ ಬರೀ ಜೀವವಿಲ್ಲದ ಒಂದು ದೇಹ ಅಷ್ಟೆ ಎಂಬುದು ತಿಳಿಯುತ್ತದೆ.
ಕ್ಷಣಿಕವಾದ ಈ ಬದುಕನ್ನು ಆಸ್ವಾದಿಸುತ್ತ ಬದುಕಬೇಕು.
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ?
ಸೇರಿ ಒಂದಾಗಿ, ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ ಬದುಕು ನಮ್ಮದಾಗಲಿ.
ಸೌಮ್ಯ ನಾರಾಯಣ್
4 Comments
Superb sis
Tumba chennagide sister
100 % correct
ಸೌಮ್ಯ ಮೇಡಂ, ನೀವು ನಿಮ್ಮ ಅನುಭವಗಳನ್ನು ಆಧುನಿಕ ದಾಸರಂತೆ ಅರಿವುಮೂಡಿಸಿದ್ದೀರಿ… ನಿಮ್ಮಲ್ಲೊಬ್ಬ ಸಂತ ಅಡಗಿ ಕುಳಿತಿದ್ದಾನೆ…❤️😍