ನೀಲಿ “ರಾಜ” ನೊಣಹಿಡುಕ (Monarch Blue Flycatcher)

ಚಳಿಗಾಲದ ಸುಖಗಳಲ್ಲಿ ವಲಸೆ ಬರುವ ಇಂತಹ ಹಕ್ಕಿಗಳನ್ನು ನೋಡುವುದೂ ಒಂದು. ಕರಾರುವಾಕ್ಕಾಗಿ ಅದೇ ಪ್ರದೇಶಕ್ಕೆ ಬರುವ ಇವು ಸಂತೋಷ ತರುವುದಲ್ಲದೆ ಇವು ಬರುವುದು ನಿಲ್ಲುವಷ್ಟು ವಾತಾವರಣ ಕೆಟ್ಟಿಲ್ಲ ಎಂಬ ಭರವಸೆಯನ್ನೂ ಮೂಡಿಸುತ್ತವೆ.

ಚಿತ್ರ : ಜಿ ಎಸ್ ಶ್ರೀನಾಥ

ಮೊನಾರ್ಚ್ ಬ್ಲೂ (Black-naped Monarch Hypothymis azurea) ಎಂದು ಇಂಗ್ಲಿಷಿನಲ್ಲಿ ಕರೆಯಲಾಗುವ ಇದು ನಮ್ಮ ಸುಂದರ ನೊಣ ಹಿಡುಕಗಳಲ್ಲಿ ಒಂದು (ಹಕ್ಕಿಗಳಲ್ಲಿ ಎಲ್ಲವೂ ಸುಂದರವೇ!). ಜೀವಿಗಳನ್ನು ಸುಂದರ/ಇಲ್ಲ ಎಂದು ಎಣಿಸುವುದು ಮನುಷ್ಯನ ದೌರ್ಬಲ್ಯ. ಇರಲಿ. ಈ ನೀಲಿ ಬಣ್ಣದ ಹಕ್ಕಿಗೆ ಕಪ್ಪು ನೆತ್ತಿ ಒಂದು ಮೆರುಗನ್ನು ತಂದಿದೆ. ಕೊಕ್ಕಿನ ಬುಡ ಹಾಗೂ ಗಂಟಲ ಮೇಲೂ ಕಪ್ಪು ಬಣ್ಣವಿರುತ್ತದೆ. ಹೆಣ್ಣು ಹಕ್ಕಿ ಮಾಸಲುನೀಲಿಯಿದ್ದು ಕಪ್ಪು ಇರುವುದಿಲ್ಲ. ಉತ್ತರ ಹಾಗೂ ದಕ್ಷಿಣ ಭಾರತಗಳಲ್ಲಿ ಕಂಡುಬರುವ ನೀಲಿನೊಣಹಿಡುಕಗಳಲ್ಲಿ ವ್ಯತ್ಯಾಸಗಳಿವೆ.

ಚಿತ್ರ : ಅಮೃತ್ ಧನ್ವಾತಾಯ್

ಪ್ರಧಾನವಾಗಿ ಕೀಟಾಹಾರಿಯಾದ ಈ ಹಕ್ಕಿಯನ್ನು ಕೀಟಹಿಡುಕ ಎನ್ನುವ ಬದಲು ನೊಣಹಿಡುಕ ಎನ್ನುವುದರಲ್ಲಿ ಒಂದು ವಿಶೇಷವಿದೆ! ಕೀಟಹಿಡುಕ ಎಂದರೆ ಎಲ್ಲ ಬಗೆಯ ಕೀಟಗಳನ್ನು ತಿನ್ನುವ ಎಂದಾಗಿ ಬಿಡುತ್ತದೆಯಲ್ಲವೆ? ಆದರೆ, ವಸ್ತುಸ್ಥಿತಿ ಅದಲ್ಲ. ಇದು ಕೇವಲ ಎರಡು ರೆಕ್ಕೆಗಳಿರುವ ಕೀಟಗಳನ್ನು ಹಿಡಿದು ತಿನ್ನುತ್ತದೆ. ಅದಕ್ಕೆ ಇದನ್ನು ನೊಣಹಿಡುಕ ಎಂದರೆ ಸರಿಯಾಗುತ್ತದೆಯೇ ಹೊರತಾಗಿ ಕೀಟಹಿಡುಕ ಎನ್ನಲಾಗದು!

ದಕ್ಷಿಣ ಏಷ್ಯಾದಲ್ಲಿ ಸುಮಾರು 35 ಬಗೆಯ ನೊಣಹಿಡುಕಗಳಿವೆ. ಓಲ್ಡ್ ವರ್ಡ್ಲ್ ಎನ್ನಲಾಗುವ ಪ್ರದೇಶದಲ್ಲಿಯೂ (ಅಮೇರಿಕಾ ಹೊರತುಪಡಿಸಿದ ಪ್ರದೇಶ) ಕೆಲವು ಕಂಡುಬರುತ್ತವೆ. ಎರಡು ರೆಕ್ಕೆಯ ಹುಳುಗಳು ಮಾನವನಿಗೆ ಅಪಕಾರಿ ಹಾಗೂ ಉಪಕಾರಿ ಸಹ. ಇವುಗಳ ಸಂಖ್ಯಾ ನಿಯಂತ್ರಣದಲ್ಲಿ ನೊಣಹಿಡುಕ ಹಕ್ಕಿಗಳ ಪಾತ್ರ ಬಹುದೊಡ್ಡದು. ಹಾಗಾಗಿಯೇ ನೊಣಹಿಡುಕಗಳು ಸಹ ಆಹಾರಜಾಲದಲ್ಲಿ ಬಹುಮುಖ್ಯ ಕೊಂಡಿ (ಹಾಗೂ ನೊಣಗಳದ್ದು, ಸಹ!).

ಇಂತಹ ಹಕ್ಕಿ ನಿಮಗೆ ಕಂಡಾಗ ksn.bird@gmail.com ಮೇಲ್ ಐಡಿ ಗೆ ಬರೆದು ತಿಳಿಸಿ ಅಥವಾ ಕಾಮೆಂಟ್ ಮಾಡಿ.

ಕಲ್ಗುಂಡಿ ನವೀನ್

ಚಿತ್ರಗಳು : ಜಿ. ಎಸ್. ಶ್ರೀನಾಥ, ಅಮೃತ್ ಧನ್ವಾತಾಯ್, ಹಾಗು ಸೇವಿಯೋ ಪಿಂಟೋ

Related post

2 Comments

  • Very good Article

  • ನಮಸ್ಕಾರ ನನಗೆ ಹಕ್ಕಿ ಗಳನ್ನು ಕಂಡರೆ ಬಹಳ ಇಷ್ಟ. ನೀವು ಕೊಡುವ ವಿಶಿಷ್ಟ ಪರಿಚಯ ಸೊಗಸಾಗಿದೆ.

Leave a Reply

Your email address will not be published. Required fields are marked *