ನೇಸರನ ಇಣುಕುನೋಟ
ಗಗನದಿಂದ ಬುವಿಯೆಡೆಗೆ
ತಾ ಇಣುಕುನೋಟ ಬೀರಿಹನು!
ತನ್ನಾಸರೆಯಲಿ ಜಗವು ಬೆಳಕಿನೆಡೆಗೆ..
ಸಾಗುವುದನು ಅವ ನೋಡಬಯಸಿಹನು!!
ಕೆಂಪಿನೋಕುಳಿಯ ಹೊಸ ರಂಗು
ಅಂಬರದಲಿ ನಿತ್ಯ ತುಂಬಿರಲು!
ಅಹಸ್ಕರನಿಗೂ ಅವನಿಯದೇ ಗುಂಗು..
ಅವಳ ನಗುವಲಿ ಮನವಿರಲು!!
ಬೆಟ್ಟಗುಡ್ಡಗಳ ಮರೆಯಲಿದೆ
ಭಾಸ್ಕರನ ಕಿರಣದ ಸೊಬಗು!
ಲೋಕವು ದಿನವೂ ಬೆಳಗಲಿದೆ..
ಕೇಳುತಾ ಇಳೆಯ ಹೃದಯದ ಕೂಗು!!
ಅನಂತತೆಯ ಸಾರವಿರಲು
ಅಲ್ಲಿಯೇ ಲೀನವಾಗಿದೆ ಕ್ಷಿತಿಜ!
ಅಗೋಚರ ಸೃಷ್ಟಿಯೇ ಪ್ರಕೃತಿಯಲಿರಲು…
ಬುವಿಗಿದು ಆ ದೈವನಿತ್ತ ಖನಿಜ!!
ಸುಮನಾ ರಮಾನಂದ