ಪರಸ್ಪರ ರಕ್ಷಣೆಯ ರಕ್ಷಾ ಬಂಧನ

ಪರಸ್ಪರ ರಕ್ಷಣೆಯ ರಕ್ಷಾ ಬಂಧನ

ರಕ್ಷಾ ಬಂಧನವನ್ನು ಸಹೋದರ ಮತ್ತು ಸಹೋದರಿಯ ಬಾಂಧವ್ಯದ ಸಂಕೇತವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಭ್ರಾತೃತ್ವದ ನಡುವಿನ ಪ್ರೀತಿಯ ಸಂಕೇತ ಮತ್ತು ಪರಸ್ಪರರನ್ನು ರಕ್ಷಣೆ ಮಾಡುವ ಮತ್ತು ಪರಸ್ಪರ ಮನಸ್ತಾಪವನ್ನು ಮರೆಯುವ ಸಂಕಲ್ಪವನ್ನು ಮಾಡುವ ಉದ್ದೇಶದಿಂದ ಆಚರಿಸಲಾಗುತ್ತದೆ. ಇದು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬವಾಗಿದ್ದು, ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ.

ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಮೊದಲಿಗೆ ಉತ್ತರ ಭಾರತದಲ್ಲಷ್ಟೇ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನಾಗಿ ಆಚರಿಸುತ್ತಿದ್ದರೆ, ಈಗ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ತನ್ನನ್ನು ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿ ಕಟ್ಟಿ, ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಆಶೀರ್ವಾದ ಪಡೆದು ಸಹೋದರನಿಂದ ಉಡುಗೊರೆ ಪಡೆಯುತ್ತಾಳೆ. ಅದೇ ರೀತಿ ಸಹೋದರನು ತನ್ನ ಸಹೋದರಿಯನ್ನು ತನ್ನ ಉಸಿರು ಇರುವವರೆಗೂ ರಕ್ಷಣೆ ಮಾಡುತ್ತೇನೆ ಎನ್ನುವ ಸಂಕಲ್ಪವನ್ನು ಮಾಡುತ್ತಾನೆ.

ರಕ್ಷಾಬಂಧನದ ಪೌರಾಣಿಕ ಹಿನ್ನೆಲೆ

ಪಾತಾಳದ ಒಡೆಯ ಬಲಿರಾಜನನ್ನು ಪರೀಕ್ಷಿಸಲು ವಿಷ್ಣುವು ವಾಮನನ ಅವತಾರವನ್ನು ತಾಳಿ ಬಲಿಯ ಮುಂದೆ ಪ್ರತ್ಯಕ್ಷನಾಗಿ ಮೂರು ದಾನವನ್ನು ಕೇಳಿದನು. ಮೊದಲನೇ ದಾನವಾಗಿ ಆಕಾಶ, ಎರಡನೇ ದಾನವಾಗಿ ಭೂಮಿ ಮತ್ತು ಮೂರನೇ ದಾನವಾಗಿ ಬಲಿಯ ತಲೆಯ ಮೇಲೆ ಪಾದವನ್ನು ವಿಷ್ಣುವು ಇಟ್ಟಾಗ ನನ್ನ ಸರ್ವಸ್ವವನ್ನೂ ನಿನಗೆ ದಾನವಾಗಿ ನೀಡಿದ್ದೇನೆ, ಈಗ ನೀನೂ ನನ್ನೊಂದಿಗೆ ಪಾತಾಳಕ್ಕೆ ಬರಬೇಕು ಎಂದಾಗ ವಿಷ್ಣುವು ವೈಕುಂಠ ತೊರೆದು ಪಾತಾಳಕ್ಕೆ ಹೋದನು. ಇದರಿಂದ ಚಿಂತೆಗೀಡಾದ ವಿಷ್ಣುವಿನ ಪತ್ನಿ ಲಕ್ಷ್ಮಿಯು ಬಡಮಹಿಳೆಯ ರೂಪವನ್ನು ಧರಿಸಿ ಪಾತಾಳಕ್ಕೆ ಹೋಗಿ ಅಲ್ಲಿ ಬಲಿರಾಜನಿಗೆ ರಕ್ಷಾ ಬಂಧನವನ್ನು ಕಟ್ಟಿ ಬಲಿಯನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು. ಆಗ ಬಲಿ ಚಕ್ರವರ್ತಿಯು ನಿನಗೆ ಉಡುಗೊರೆಯಾಗಿ ನೀಡಲು ಈಗ ನನ್ನ ಬಳಿ ಏನೂ ಉಳಿದಿಲ್ಲ ಎಂದನು. ಆಗ ಲಕ್ಷ್ಮಿಯು ನನಗೆ ಯಾವುದೇ ಉಡುಗೊರೆ ಬೇಡ, ಆದರೆ ನನಗೆ ನನ್ನ ಪತಿಯನ್ನು ಹಿಂದಿರುಗಿಸು ಎಂದು ಕೇಳಿಕೊಂಡಳು. ಅದರಂತೆ ಬಲಿಯು ವಿಷ್ಣುವನ್ನು ಪಾತಾಳದಿಂದ ವೈಕುಂಠಕ್ಕೆ ಕಳುಹಿಸಿದನು ಎನ್ನುವ ರಕ್ಷಾ ಬಂಧನದ ಪ್ರತೀತಿ ಇದೆ. ಆ ವಿಶೇಷ ದಿನದಂದು ಶ್ರಾವಣ ಮಾಸದ ಹುಣ್ಣಿಮೆಯ ದಿನವಾಗಿತ್ತು. ಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನ ಪದ್ಧತಿಯು ಅಂದಿನಿಂದಲೇ ಪ್ರಾರಂಭವಾಯಿತು.

ಕೃಷ್ಣ ಮತ್ತು ದ್ರೌಪದಿ ಸನ್ನಿವೇಶ

ಪುರಾಣದಲ್ಲಿ ಶ್ರೀಕೃಷ್ಣ ಮತ್ತು ದ್ರೌಪದಿ ಅತ್ಯಾಪ್ತ ಗೆಳೆಯರು ಮತ್ತು ಈಕೆ ಪಂಚ ಪಾಂಡವರ ಪತ್ನಿ. ಒಂದು ಸಂಕ್ರಾಂತಿಯ ದಿನ ಎಲ್ಲರೂ ಗಾಳಿಪಟವನ್ನು ಹಾರಿಸುತ್ತಾ ಇದ್ದಾಗ ಕೃಷ್ಣನ ಕೈಗೆ ಗಾಳಿಪಟದ ದಾರದ ಗಾಜಿನ ಚೂರು ಕಿರುಬೆರಳಿಗೆ ತಾಗಿ ಗಾಯವಾಯಿತು. ರುಕ್ಮಿಣಿ ತಕ್ಷಣವೇ ಅದಕ್ಕೆ ಔಷಧ ತರಲು ತನ್ನ ಸಹಾಯಕರನ್ನು ಕಳುಹಿಸಿದಳು. ಇದನ್ನೆಲ್ಲಾ ವೀಕ್ಷಿಸುತ್ತಿದ್ದ ದ್ರೌಪದಿ ರಕ್ತಸ್ರಾವವನ್ನು ತಡೆಯಲು ಅವಳ ಬೆಲೆಬಾಳುವ ಸೀರೆಯ ಅಂಚನ್ನು ಕತ್ತರಿಸಿ ಕೃಷ್ಣನ ಬೆರಳಿಗೆ ಕಟ್ಟಿದಳು. ಇದಕ್ಕೆ ಪ್ರತಿಯಾಗಿ, ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣನು ಭರವಸೆ ನೀಡಿದನು. ಇದರಂತೆ ರಾಜಸಭೆಯಲ್ಲಿ ದುಶ್ಶಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡಿದಾಗ ಕೃಷ್ಣನು ದ್ರೌಪದಿಗೆ ನೀಡಿದ್ದ ಮಾತಿನಂತೆ ಅವಳ ಸೀರೆಯನ್ನು ಅಕ್ಷಯ ಆಗುವಂತೆ ಮಾಡಿದನು. ಇದರಿಂದ ದ್ರೌಪದಿಯ ಕಠಿಣ ಸಂದರ್ಭದಲ್ಲಿ ಅವಳ ರಕ್ಷಣೆಯನ್ನು ಮಾಡುವ ಮೂಲಕ ಅವಳಿಗೆ ಆಗಬೇಕಿದ್ದ ಮುಜುಗರವನ್ನು ತಡೆದನು.

ಐತಿಹಾಸಿಕ ಹಿನ್ನೆಲೆ

ರಕ್ಷಾ ಬಂಧನದ ಅರ್ಥಪೂರ್ಣ ಕಥೆಯೆಂದರೆ ರಾಣಿ ಕರ್ಣಾವತಿ ಮತ್ತು ಚಕ್ರವರ್ತಿ ಹುಮಾಯೂನ್. ರಜಪೂತ ಹುಡುಗಿ ಕರ್ಣಾವತಿ ತನ್ನ ಸಹೋದರನಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ರಾಖಿಯ ದಾರವನ್ನು ಕಳುಹಿಸಿದಳು. ಕರ್ಣಾವತಿ ಚಿತ್ತೋರ್‌ನ ರಾಣಿಯಾಗಿದ್ದು, ರಾಜ ಬಹದ್ದೂರ್ ಷಾ ನಿಂದ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹುಮಾಯೂನ್‌ನಿಗೆ ರಾಖಿಯನ್ನು ಕಳುಹಿಸುವ ಮೂಲಕ ಸಹಾಯವನ್ನು ಕೋರಿದಳು. ಹುಮಾಯೂನ್ ಅವಳ ಗೌರವವನ್ನು ಉಳಿಸಲು ತನ್ನ ಸೈನ್ಯವನ್ನು ಕರ್ಣಾವತಿಯ ಸಂಸ್ಥಾನ ಚಿತ್ತೋರ್‌ಗೆ ಕಳುಹಿಸಿ ಅವಳ ರಾಜ್ಯವನ್ನು ರಾಜ ಬಹದ್ದೂರ್‌ನಿಂದ ರಕ್ಷಿಸಿ ಅವಳಿಗೆ ಸಹಾಯ ಮಾಡಿದನು. ಅಂದಿನಿಂದ ರಾಖಿ ಕಟ್ಟುವುದು ಸಂಪ್ರದಾಯವಾಗಿದೆ ಎಂದು ಹೇಳಲಾಗುತ್ತದೆ.

ಸಹೋದರಿಯು ಸಹೋದರನಿಗೆ ರಾಖಿ ಕಟ್ಟುವುದಕ್ಕಿಂತ ಒಬ್ಬ ತರುಣ ಅಥವಾ ಪುರುಷ ಒಬ್ಬ ತರುಣಿ ಅಥವಾ ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದಕ್ಕೆ ಹೆಚ್ಚು ಮಹತ್ವವಿದೆ. ಇದರಿಂದ ತರುಣಿ ಅಥವಾ ಸ್ತ್ರೀಯರ ಕಡೆಗೆ ಪುರುಷರು ನೋಡುವ ದೃಷ್ಟಿಕೋನ ಬದಲಾಗುತ್ತದೆ. ರಕ್ಷಾ ಬಂಧನ ಸಂದರ್ಭ ಹುಡುಗಿ ಅಥವಾ ಮಹಿಳೆ ತನ್ನ ಸಹೋದರನ ಹಣೆಯ ಮೇಲೆ ತಿಲಕವಿಟ್ಟು ಅವನ ಮಣಿಕಟ್ಟಿನ ಸುತ್ತ ರಾಖಿಯನ್ನು ಕಟ್ಟುತ್ತಾಳೆ. ಅದು ತನ್ನ ಸಹೋದರನಿಂದ ಬಾಂಧವ್ಯ ಮತ್ತು ಬೆಂಬಲವನ್ನು ಅಪೇಕ್ಷಿಸುತ್ತದೆ. ನಂತರ ಆಕೆ ತನ್ನ ಸಹೋದರನಿಂದ ಉಡುಗೊರೆ ಪಡೆದು, ಸಾಂಪ್ರದಾಯಿಕವಾಗಿ ತನ್ನನ್ನು ನೀನು ಮುಂದಕ್ಕೆ ರಕ್ಷಣೆಯನ್ನು ಮಾಡುವ ಜವಾಬ್ದಾರಿಯನ್ನು ನೀಡುತ್ತಾಳೆ. ಒಬ್ಬಳು ಹುಡುಗಿ / ಮಹಿಳೆ ತನ್ನ ಸಹೋದರನ ಮಣಿಕಟ್ಟಿನ ಸುತ್ತ ರಾಖಿಯನ್ನು ಕಟ್ಟಿದಾಗ, ಅವನು ಅವಳನ್ನು ಜೀವನದ ಎಲ್ಲಾ ಸಮಸ್ಯೆಗಳಿಂದ ರಕ್ಷಿಸುವ ಭರವಸೆ ನೀಡಿ ಅವಳಿಗೆ ಅವಳ ಆಶೀರ್ವಾದವನ್ನು ನೀಡುತ್ತಾನೆ.

ರಾಖಿ ಹೇಗಿದ್ದರೆ ಉತ್ತಮ

ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಇಬ್ಬರಿಗೂ ಲಾಭದಾಯಕ. ಆದ್ದರಿಂದ ಚಿತ್ರ-ವಿಚಿತ್ರ ರಾಖಿ ಬಳಸುವುದಕ್ಕಿಂತ ಕೇಸರಿ ಬಣ್ಣದ ರಾಖಿಗಳನ್ನು ಬಳಸಬೇಕು, ಇಲ್ಲವಾದರೆ ಆ ರಾಖಿಯ ತ್ರಿಗುಣಗಳು (ಸ, ರಜ, ತಮ) ಧರಿಸಿದವರ ಜೀವದ ಮೇಲೆ ಪರಿಣಾಮ ಬೀರುತ್ತವೆ. ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿ ಬಿಡಿಸಬೇಕು, ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣದ ಸಾತ್ವಿಕವಾಗುತ್ತದೆ.

ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿ ಬೆಳಗಿಸುತ್ತಾರೆ. ತುಪ್ಪದ ದೀಪ ಶಾಂತ ರೀತಿಯಲ್ಲಿ ಉರಿಯುತ್ತದೆ, ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ದಿಯು ವೃದ್ಧಿಸುತ್ತದೆ. ಆರತಿ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿರುವ ‘ತಮ’ ಸಂಸ್ಕಾರ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮ ಕಡಿದು ಆಗಿ ಸಹೋದರನ ಜೊತೆ ಕಲಹ ಆಗುವ ಸಾಧ್ಯತೆ ಇರುತ್ತದೆ.

ಈ ಆಚರಣೆಯ ಇಂದು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಬದಲಾಗಬಹುದು. ಕೆಲವೊಮ್ಮೆ ಅಣ್ಣ ಇಲ್ಲದಿದ್ದರೆ ರಾಖಿಯನ್ನು ಹಿರಿಯ ಸಹೋದರಿಯರಿಗೆ, ಕೆಲವೊಮ್ಮೆ ರಾಖಿಗಳನ್ನು ಸ್ನೇಹಿತರು ತಮ್ಮ ಸ್ನೇಹಿತರಿಗೆ ಮತ್ತು ದೂರದ ಸಂಬಂಧಿಕರಿಗೆ ವಿಶೇಷವಾಗಿ ಒಂಟಿ ಮಕ್ಕಳಿಗೆ ಕಟ್ಟಲಾಗುತ್ತದೆ. ಇದನ್ನು ಯಾರು ಯಾರಿಗೆ ಕಟ್ಟಿದರೂ ಅದರ ಸಾರವು ಒಂದೇ ಆಗಿದ್ದು, ಪರಸ್ಪರರ ರಕ್ಷಣೆಯನ್ನು ಮಾಡುವುದು. ನಮ್ಮ ಬಗ್ಗೆ ಕಾಳಜಿ ಹೊಂದಿ, ನಮ್ಮ ಪೋಷಣೆ ಮಾಡುತ್ತಿರುವ ಮತ್ತು ಲಿಂಗ ಮತ್ತು ಸಂಬಂಧಗಳು ಗೌಣವಾಗಿರುವಾಗ ಯಾರಿಗಾದರೂ ರಾಖಿಯನ್ನು ಕಟ್ಟಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ“, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

Leave a Reply

Your email address will not be published. Required fields are marked *