ಪರಾಭವ ಭಾವನಾ – 2 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ
ಅಪ್ರಮೇಯ (ಅಪ್ಪು) ತನ್ನ ಗುರುಗಳನ್ನು ಕಾಣಲು ಹೋದಾಗ ಅಪ್ಪುವನ್ನೇ ಕಾಯುತ್ತಾ ಮರಣಾವಸ್ಥೆಯಲ್ಲಿದ್ದ ಗುರುಗಳು ಬೀಗದ ಕೈ ರಹಸ್ಯವನ್ನು ಹೇಳಿ ಹರಿಪಾದವನ್ನು ಸೇರುತ್ತಾರೆ. ಗುಹೆಯಲ್ಲಿ ಸಿಕ್ಕ ಪತ್ರವನ್ನು ಓದಿ ಅಪ್ಪುವಿಗೆ ತನ್ನಿಬ್ಬರ ಶಿಷ್ಯರಲ್ಲಿ ಯಾರನ್ನು ನಂಬುವುದು ಎಂದು ಯೋಚಿಸಿ ಅವರುಗಳ ಜೊತೆ ರಾಮೇಶ್ವರದ ಕಡೆ ಹೆಜ್ಜೆ ಹಾಕುತ್ತಾನೆ.

ಅದ್ಯಾಯ – ೨

ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಅಪ್ರಮೇಯ ಬಹಳವೇ ಆಲೋಚನೆ ಮಾಡಿದ. ಗುರುಗಳ ದೇಹವನ್ನೊಮ್ಮೆ ನೆನೆದ. ಅದರ ಮೇಲೆ ಅನೇಕ ಸುಟ್ಟಗಾಯಗಳಿದ್ದವು. ಯಾಕೆ? ಯಾಕೆ? ಅವರೇನಾದರೂ ರಹಸ್ಯವನ್ನು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದರೇನು?

ಅವರನ್ನು ಹಿಂಸೆ ಮಾಡಿದ ಜನರಿಗೆ ಅವರಿಗೆ ಬೇಕಾದ್ದು ಸಿಕ್ಕಿದೆಯೇ?

ಅವರೈವರು ಕೂತಿದ್ದ ಜೀಪು ಹೋಗುತ್ತಲೇ ಇತ್ತು.

ರಾಮೇಶ್ವರದಿಂದ ದನುಷ್ಕೋಡಿಗೆ ಕೇವಲ ಜೀಪ್‌ನಲ್ಲಿ ಹೋಗಬೇಕಿತ್ತು. ಅಂದರೆ ಗುರುಗಳನ್ನು ಟಾರ್ಚರ್‌ ಮಾಡಲು ಬಂದವರೂ ಜೀಪಿನಲ್ಲಿಯೇ ಬಂದಿದ್ದರೇನು?

ಅವರು ಗುರುಗಳನ್ನು ಹಿಂಸೆ ಮಾಡುವಾಗ ಗುರುಗಳ ಶಿಷ್ಯರಾದ ಕಬೀರದಾಸ ಮತ್ತು ಪುರಂದರದಾಸ ಎಲ್ಲಿ ಹೋಗಿದ್ದರು?

ಅದನ್ನೇ ಕೇಳಿದ ಈಗ. “ಗುರುಗಳ ದೇಹವನ್ನು ನೋಡಿದಿರಲ್ವಾ?” ಎಂದು ಕೇಳಿದ ಇದ್ದಕ್ಕಿದ್ದಂತೆ.

ಅಪ್ಪುವನ್ನೇ ನೋಡಿದರು ನಾಲ್ವರೂ.

“ನಾನು ಕೇಳ್ತಿರೋದು ಗುರುಗಳ ಶಿಷ್ಯರನ್ನು” ಎಂದ ಅಪ್ಪು ಗಂಭೀರವಾಗಿ.

“ಆಂ…” ಎಂದರು ಇಬ್ಬರೂ.

“ನಾನು ಹೇಳಿದ್ದು ನಿಮಗೆ ಅರ್ಥವಾಗಿಲ್ಲ ಅಂದರೆ ಹೇಗೆ ನಂಬುವುದು? ನಿಮ್ಮಿಬ್ಬರಲ್ಲಿ ಒಬ್ಬರೂ ಇರಲಿಲ್ಲವೇನು ಗುರುಗಳಿಗೆ ಯಾರೋ ಬಂದು ಹಿಂಸೆ ಕೊಟ್ಟಾಗ?” ನೇರವಾಗಿ ಅವರಿಬ್ಬರ ಕಣ್ಣುಗಳಲ್ಲಿ ದೃಷ್ಟಿಯಿಟ್ಟು ಕೇಳಿದ ಅಪ್ಪು.

ತಡಬಡಿಕೆ ಕಂಡಿತ್ತು ಅವರಿಬ್ಬರ ನಡೆವಳಿಕೆಯಲ್ಲಿ. ದೃಷ್ಟಿ ತಪ್ಪಿಸಿದರು ಇಬ್ಬರೂ.

“ನನಗೆ ಉತ್ತರ ಬೇಕು” ಎಂದ ಅಪ್ಪು.

“ಅಪ್ಪು ಗುರುಗಳೇ, ನಾನು ಗುರುಗಳಿಗೆ ಸ್ಟ್ರೈಟ್‌ ತರಕ್ಕೆ ಹೋಗಿದ್ದೆ. ಅವರು ಹೊಟ್ಟೆನೋವು ಅಂತ ಒದ್ದಾಡ್ತಿದ್ರು” ಎಂದ ಕಬೀರ್.‌

“ನನಗೆ ಒಂದಿಷ್ಟು ಕೆಲಸವಿತ್ತು. ಕಬೀರ್‌ ಇದ್ದಾನೇನ್ನೋ ಧೈರ್ಯದ ಮೇಲೆ ನಾನು ರಾಮೇಶ್ವರಂಗೆ ಹೋಗಿದ್ದೆ” ಎಂದ ಪುರಂದರ.

ಇವರಲ್ಲಿ ಯಾರನ್ನು ನಂಬುವುದು? ಗುರುಗಳೂ ಯಾರೋ ಒಬ್ಬನನ್ನು ನಂಬಬೇಡ ಎಂದಿದ್ದಾರೆ. ಅವರೇಕೆ ಯಾರೆಂದು ಬರೆದಿರಲಿಲ್ಲ? ಅಂದರೆ ಅವರಿಗೂ ಕೇವಲ ಅನುಮಾನವಿತ್ತೇನು? ಅವರಿಗೂ ತಿಳಿಯದೇನು ಯಾವ ಶಿಷ್ಯ ದುಷ್ಟನೆಂದು?

ಹಾಗೆ ನೋಡಿದರೆ ತನ್ನ ಶಿಷ್ಯರಲ್ಲೂ ಈ ಸಮಸ್ಯೆ ಇದೆ. ತನಗೆ ಇವರನ್ನು ಕಳಿಸಿಕೊಟ್ಟವರು ಸ್ವಯಂಪ್ರಕಾಶರು. ಅವರು ಬಹಳವೇ ನಂಬಿಕಸ್ಥ ಮನುಷ್ಯ (ಅಥವಾ ಇವರನ್ನೂ ತಾನು ನಂಬಕೂಡದೇ?)

ತಲೆ ಕೆಟ್ಟು ಹೋದಂತಾಗಿತ್ತು ಅಪ್ರಮೇಯನಿಗೆ.

ಗುರುಗಳು ತನಗೇನು ಒಪ್ಪಿಸಲಿದ್ದಾರೆ? ಅದೇ ಇನ್ನೂ ತಿಳಿದಿಲ್ಲ.

ನೋಡೋಣ! ಆ ನಿವೃತ್ತ ಪುರೋಹಿತರಿಂದ ಏನಾದರೂ ಸುಳಿವು ಸಿಕ್ಕೀತು!

ರಾಮೇಶ್ವರಂ ಹತ್ತಿರವಾಗುತ್ತಿದ್ದಂತೆ ಸಮುದ್ರವು ಕಣ್ಣಿಗೆ ರಾಚಿತು. ದೇವಸ್ಥಾನಕ್ಕೆ ಅನತಿ ದೂರದಲ್ಲಿಯೇ ಸಮುದ್ರ. ಬಹಳ ಜನ ಅಲ್ಲಿ ಮುಳುಗು ಹಾಕುತ್ತಿದ್ದರು.

ದೇವಸ್ಥಾನದ ಬಾಗಿಲು ಇನ್ನೂ ತೆರೆದಿರಲಿಲ್ಲ. ಸಂಜೆ ನಾಲ್ಕರ ನಂತರ ತೆರೆಯಬಹುದೆಂದು ಕಾದರು ಐವರೂ.

ಅಪ್ರಮೇಯನ ಮನಸ್ಸು ಗೊಂದಲಗಳ ಗೂಡಾಗಿತ್ತು.

ಇಲ್ಲಿನ ನಿವೃತ್ತ ಪುರೋಹಿತರನ್ನು ಭೇಟಿ ಮಾಡಿ ಅವರಿಂದ ಏನು ಸಂದೇಶ ಸಿಗುವುದೋ ಅದನ್ನು ಸಂಗ್ರಹಿಸಿ, ನಾಲ್ವರು ಶಿಷ್ಯರೊಂದಿಗೆ ಹಿಮಾಲಯಕ್ಕೆ ಹಿಂದಿರುಗಬೇಕು.

ರಾತ್ರಿ ರೈಲುಗಾಡಿಯಲ್ಲಿ ಹೋಗಲು ಟಿಕೆಟ್‌ ಖರೀದಿಸಿದ್ದರೆ ಚೆನ್ನಾಗಿತ್ತೇನೋ ಎಂದುಕೊಂಡ ಅಪ್ರಮೇಯ.

ಅವನಿಗಿನ್ನೂ ಗೊತ್ತಿಲ್ಲದ ವಿಷಯ ಆ ನಿವೃತ್ತ ಅರ್ಚಕರ ಬಳಿ ಸಿಗಲಿತ್ತು. ಅವನ ಪ್ರಯಾಣ ಹೆಚ್ಚು ಕಡಿಮೆ ಆಗಲಿತ್ತು. ಅವನು ಅನೇಕ ಅಪಾಯಗಳನ್ನು ಎದುರಿಸಲಿಕ್ಕಿತ್ತು. ಆಂತರಿಕ ಆಪತ್ತು, ಬಾಹ್ಯದ ಪ್ರಮಾದ… ಆದರೆ ಈ ಕ್ಷಣದಲ್ಲಿ ಅವನು ರಾಮೇಶ್ವರದ ಗುಡಿಯ ಬಳಿಯ ಸಮುದ್ರ ತೀರದಲ್ಲಿ ಕುಳಿತು ಸಮುದ್ರವನ್ನೇ ದಿಟ್ಟಿಸುತ್ತಿದ್ದ.

ಹನುಮಂತ, ಜಾಂಬವಂತ, ಅಂಗದ ಎಲ್ಲರೂ ಇಲ್ಲಿಗೆ ಬಂದಿದ್ದರಾ? ಅಥವಾ ದನುಷ್ಕೋಟಿಯ ಬಳಿಯಾ? ಅಥವಾ ಕನ್ಯಾಕುಮಾರಿಯಾ?

ಶ್ರೀರಾಮನಂತೂ ಇಲ್ಲಿಗೇ ಬಂದಿದ್ದು ನಿಜ. ಏಕೆಂದರೆ ಇಲ್ಲಿಯೇ ಅವನು ಸಮುದ್ರರಾಜನ ಮೇಲೆ ಕೋಪಿಸಿಕೊಂಡಿದ್ದು, ನಂತರ ಶಿವಲಿಂಗವನ್ನು ನಿರ್ಮಿಸಿ ಅದಕ್ಕೆ ಪೂಜೆ ಮಾಡಿದ್ದು, ನಂತರ ಸೇತು ನಿರ್ಮಾಣ, ಕಪಿಸೇನೆಯೊಂದಿಗೆ ಲಂಕೆಗೆ ಗಮನ.

“ಗುರುಗಳೇ ಬಾಗಿಲು ತೆರೆಯಿತು” ಎಂದ ತುಲಸೀದಾಸ.

ಅಪ್ರಮೇಯ ತನ್ನ ಲಹರಿಯಿಂದ ಹೊರಬಂದು ದೇವಸ್ಥಾನದತ್ತ ನಡೆದ.

ಮುಖ್ಯ ಪೂಜಾರಿಗಳನ್ನು ನೋಡಲು ಗರ್ಭಗುಡಿಗೆ ಹೋಗಬೇಕಿತ್ತು. ದೇವಸ್ಥಾನದ ಕಂಬಗಳನ್ನು ನೋಡಿ ಮೆಚ್ಚದಿರದಾದ ಅಪ್ಪು. ದೇವಸ್ಥಾನದ ಮೊಗಸಾಲೆಯ ಎರಡೂ ಕಡೆ ಇದ್ದ ದೊಡ್ಡ ಕಂಬಗಳು ಅವನನ್ನೇ ಬಾಗಿ ನೋಡುತ್ತಿರುವಂತೆ ತೋರಿತು. ಒಂದು ಅದ್ಭುತ ಶಿಲ್ಪಕಲೆಯ ಪ್ರತೀಕ ಈ ರಾಮೇಶ್ವರದ ಕಂಬಗಳು ಎಂದುಕೊಂಡ.

ಪೂಜೆ ಇನ್ನೂ ಆರಂಭವಾಗಿರಲಿಲ್ಲ. ಈಗ ಅಪ್ಪು ಬಿಳಿಯ ಧೋತಿಯುಟ್ಟು, ಬಿಳಿಯ ಶಲ್ಯವನ್ನು ಧರಿಸಿ ಹಣೆಯ ಮೇಲೆ ತ್ರಿಪುಂಡ್ರ ಧರಿಸಿದ್ದ. ಅವನ ತೇಜಸ್ವೀ ಮೊಗವನ್ನು ಕಂಡ ಮುಖ್ಯ ಪುರೋಹಿತ ತಕ್ಷಣವೇ ಅಪ್ಪುವನ್ನು ಮಾತಾಡಿಸಿದ.

“ನಮಸ್ಕಾರ. ನಾನು ಕುಮಾರಾನಂದರ ಶಿಷ್ಯ” ಎಂದ ದನುಷ್ಕೋಡಿಯಲ್ಲಿ ಶವವಾಗಿ, ಸಂಸ್ಕಾರಗೊಂಡ ತನ್ನ ಗುರುಗಳ ಹೆಸರು ನೆನೆದು.

“ಓ ಹೌದಾ? ಮಹಾ ಶ್ರೇಷ್ಠ ವ್ಯಕ್ತಿ!” ಎಂದು ನಮಸ್ಕರಿಸಿದ ಪುರೋಹಿತ.

“ನನಗೊಂದು ಸಹಾಯ ಬೇಕಿತ್ತು” ಎಂದ ಅಪ್ಪು.

ಆ ಪ್ರಕಾಶಮಾನವಾದ ಮುಖದ ಅಪ್ಪುವಿಗೆ ಏನನ್ನೂ ಇಲ್ಲವೆನ್ನದಾದ ಪುರೋಹಿತ.

“ಹೇಳಿ” ಎಂದಾಗ “ಎರಡು ನಿಮಿಷ ನಿಮ್ಮ ಬಳಿ ಮಾತಾಡಬೇಕು, ಖಾಸಗಿಯಾಗಿ” ಎಂದ ಅಪ್ಪು.

“ಸರಿ ಬನ್ನಿ, ಇನ್ನೂ ಸಾರ್ವಜನಿಕರಿಗೆ ದೇವಸ್ಥಾನ ತೆಗೆದಿಲ್ಲ” ಎಂದ ಪುರೋಹಿತ ಅಪ್ಪುವನ್ನ ಒಂದು ಪಕ್ಕವಾಗಿ ಕರೆದೊಯ್ದ.

ಅಪ್ಪು ತನ್ನ ಶಿಷ್ಯರನ್ನು ಕಡೆಗಣ್ಣಲ್ಲಿ ಗಮನಿಸಿದ. ನಾಲ್ವರಲ್ಲಿ ಇಬ್ಬರಿಗೆ ಮಹಾ ಆಸಕ್ತಿ ಇದ್ದಂತೆಯೂ, ಇನ್ನಿಬ್ಬರು ನಿರ್ಲಕ್ಷ್ಯದಿಂದಲೂ ಇದ್ದರು. ಆದರೂ ಯಾವ ಹುತ್ತದಲ್ಲಿ ಯಾವ ಹಾವೋ…!

“ಒಂದು ನಿಮಿಷ!” ಎಂದು ಶಿಷ್ಯರನ್ನು ಕರೆದು, “ಇಲ್ಲಿ ಇಪ್ಪತ್ತೆರಡು ಬಾವಿಗಳಿವೆ. ಇಡೀ ದೇಶದ ಪುಣ್ಯಕ್ಷೇತ್ರಗಳ ತೀರ್ಥಗಳು ಅವೆನ್ನುತ್ತಾರೆ. ನಾಲ್ವರೂ ಹೋಗಿ ಮಿಂದು ಬನ್ನಿ” ಎಂದ.

“ನೀವು?” ಎಂದ ಒಬ್ಬ ಶಿಷ್ಯ.

“ನನ್ನದು ಹಿಂದೆ ಆಗಿದೆ” ಎಂದ ಅಪ್ರಮೇಯ, ಅದು ಸುಳ್ಳೆಂದು ತನಗೆ ಗೊತ್ತಿದ್ದರೂ, ದೇವನ ಸನ್ನಿಧಿಯಲ್ಲಿ ಸುಳ್ಳು ಹೇಳುವಂತಾಯಿತೇ? ಎಂದುಕೊಂಡ.

ಅವರು ನಾಲ್ವರೂ ಹೊರಟರು. ಕಬೀರ ಮತ್ತು ಪುರಂದರರಿಗೆ ಇದು ಹೊಸದಲ್ಲವಲ್ಲ!

“ನನಗೆ ನಿಮ್ಮ ನಿವೃತ್ತ ಪುರೋಹಿತರ ಮನೆ ತೋರಿಸಬಲ್ಲಿರಾ ದಯವಿಟ್ಟು?” ಎಂದ.

“ಓ ಸೋಮಯಾಜಿಗಳು!” ಎಂದು ಉದ್ಗರಿಸಿ, ಅವರ ಮನೆಗೆ ದಾರಿ ಹೇಳಿದರು.

ಪುರೋಹಿತರಿಗೆ “ನಾನು ಈ ವಿಷಯ ಕೇಳಿದೆನೆಂದು ಯಾರಿಗೂ ದಯವಿಟ್ಟು ಹೇಳಬೇಡಿ” ಎಂದ ಅಪ್ಪು.

ಪುರೋಹಿತರು ತಲೆದೂಗಿ ಗರ್ಭಗುಡಿಯೊಳಗೆ ಹೋದರು.

ದೇವಸ್ಥಾನದ ಎದುರೇ ಎರಡು ಸಾಲು ಮನೆಗಳಿದ್ದವು. ಬಲಗಡೆಯ ಸಾಲಿನಲ್ಲಿ ಹೂಗಳನ್ನು ಮಾರುತ್ತಿದ್ದ ಅಂಗಡಿಯ ಮೇಲೆ ನೀಲವರ್ಣ ಪೂಸಿದ್ದ ಮನೆಯೊಂದು ಕಂಡಿತು. ಅದರ ಪಕ್ಕವಾಗಿದ್ದ ಮೆಟ್ಟಿಲು ಹತ್ತಿ ಆ ನೀಲವರ್ಣದ ಮನೆಯ ಮೇಲಿದ್ದ ಹೆಂಚಿನ ಮನೆಗೆ ಹೋದ ಅಪ್ಪು. ಬಾಗಿಲು ಬಡಿದಾಗ ವೃದ್ಧರೊಬ್ಬರು ಬಾಗಿಲು ತೆರೆದರು.

ಹಣೆಯಲ್ಲಿ ತ್ರಿಪುಂಡ್ರ, ಕಿವಿಯಲ್ಲಿ ಬಿಳಿಯ ಕಲ್ಲಿನ ಹತ್ತಕಡಕಗಳು, ಓಲೆಯ ಭಾರಕ್ಕೆ ಜಗ್ಗಾಡುತ್ತಿದ್ದ ಕಿವಿಯ ಕೆಳಭಾಗ, ಬಿಳಿಯ ಕಚ್ಚೆ ಪಂಚೆ, ಮೇಲೆ ಖಾಲಿ. ಎರಡೆಳೆ ಜನಿವಾರ ಎದೆಯ ಮೇಲಿತ್ತು.

ಎರಡೂ ಕೈ ಮುಗಿದು “ಸೋಮಯಾಜಿಗಳಲ್ಲವೇ?” ಎಂದಾಗ ಅವರು ತಲೆದೂಗಿದ್ದು ಕಂಡು, “ನಾನು ಕುಮಾರಾನಂದರ ಶಿಷ್ಯ ಅಪ್ರಮೇಯ” ಎಂದ.

ಸುಮ್ಮನೆ ನಿಂತಿದ್ದರು. ಕಿವಿ ಕೇಳಿಸುವುದಿಲ್ಲವೇನೋ ಎಂದುಕೊಂಡ ಅಪ್ಪು.

ಆದರೂ ಗುರುಗಳು ಹೇಳಿದ್ದು ನೆನಪಾಗಿ ಸುಮ್ಮನೆ ನಿಂತ. ಆಗ ಕೇಳಿಸಿತ್ತು ಅವರ ಗಂಭೀರ ಧ್ವನಿ.

“ಆರ್ತಾಃ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ” ಎಂದು ಹೇಳಿ ನಿಲ್ಲಿಸಿಬಿಟ್ಟರು.

ತನಗೂ, ಗುರುಗಳಿಗೂ ಇದ್ದ ಗೂಢ ಶ್ಲೋಕದ ಅರ್ಧಗಳನ್ನು ನೆನಪಿಟ್ಟುಕೊಂಡಿದ್ದ ಅಪ್ಪು.

“ಕಿಮೌಷಧೈಃ ಕ್ಲಿಷ್ಯಸಿ ಮೂಢ ದುರ್ಮತೇ ನಿರಾಮಯಂ ಕೃಷ್ಣ ರಸಾಯನಂ ಪಿಬ” ಎಂದ ಅಪ್ರಮೇಯ ತಕ್ಷಣ.

ಸೋಮಯಾಜಿಗಳು ನಕ್ಕರು. ಒಳಗೆ ಕರೆದರು.

ಗುರು ಕುಮಾರಾನಂದರು ಪರಮವನ್ನೈದಿದರೆಂದು ತಿಳಿದು ಒಮ್ಮೆ ಕೈಗಳನ್ನೆತ್ತಿ ನಮಸ್ಕರಿಸಿದರು.

ಒಳಗೆ ನಡೆದು ಒಂದು ಪುಟ್ಟ ಪೆಟ್ಟಿಗೆ ತೆಗೆದುಕೊಂಡು ಬಂದರು. ಸುಮಾರು ಮೂರಿಂಚು, ನಾಲ್ಕಿಂಚು ಮತ್ತು ಐದಿಂಚುಗಳ ಅಗಲ, ಉದ್ದ ಮತ್ತು ಎತ್ತರದ  ಮರದ ಪೆಟ್ಟಿಗೆ. ಅದರ ಮೇಲೆ ಗಂಧ ಮತ್ತು ದಂತದಲ್ಲಿ ಕುಸುರಿ ಕೆಲಸ ಮಾಡಿದ್ದರು. ಮೂಗಿಗೆ ಗಂಧದ ಪರಿಮಳ ಆವರಿಸಿತು.

ಅದನ್ನು ತೆರೆಯೆಂದು ಅಪ್ಪುವಿಗೇ ಹೇಳಿದರು ಸೋಮಯಾಜಿಗಳು.

ಅದನ್ನು ತೆರೆದೊಡನೆ ಕಣ್ಣು ಕೋರೈಸಿತು ಅಪ್ರಮೇಯನಿಗೆ.

ಕಂಪಿಸುವ ಕರಗಳನ್ನು ಬಳಸಿ ಅವನು ಅದರಿಂದ ಮೂರು ಪುಟ್ಟ ವಿಗ್ರಹಗಳನ್ನು ಹೊರತೆಗೆದ.

ಎಲ್ಲವೂ ಹೆಬ್ಬೆಟ್ಟು ಗಾತ್ರದವು. ಚಿನ್ನದಲ್ಲಿ ಮಾಡಿದ್ದ ಶ್ರೀರಾಮ ಬಿಲ್ಲನ್ನು ತನ್ನ ಹೆಗಲಿಗೇರಿಸಿ, ಬಲಗೈಯಲ್ಲಿ ಬಾಣ ಹಿಡಿದ ವಿಗ್ರಹ. ಸ್ಫಟಿಕ ಕಲ್ಲಿನ ಕೃಷ್ಣನ ವಿಗ್ರಹ. ಸೊಂಟದ ಮೇಲೆ ಕೈಯಿಟ್ಟು ಮುಗುಳ್ನಗುತ್ತಿರುವ ವಿಗ್ರಹ. ಮಡಿಲಲ್ಲಿ ಲಕ್ಷ್ಮಿಯನ್ನು ಕುಳ್ಳಿರಿಸಿಕೊಂಡಿರುವ ನರಸಿಂಹನ ವಿಗ್ರಹ. ಇದು ಬಹುಶಃ ಬೆಳ್ಳಿಯದಿರಬೇಕು.

“ಇವನ್ನು ನಾನು ನಿನಗೆ ಕೊಡಲೆಂದು ಇಷ್ಟು ದಿನ ಕಾದಿದ್ದೆ. ಇನ್ನು ನನಗೆ ಸಾವು ಬಂದರೂ ನಾನು ಚಿಂತಿಸುವುದಿಲ್ಲ. ಇದನ್ನು ನೀನು ಹಿಮಾಲಯದ ಜೋಷಿ ಮಠದ ಪುಂಡರೀಕಸ್ವಾಮಿಗಳಿಗೆ ಒಪ್ಪಿಸಿದರೆ ನಿನ್ನ ಕೆಲಸ ಮುಗಿಯಿತು” ಎಂದರು ಸೋಮಯಾಜಿ.

ಅವರಿಗೆ ಕೈ ಮುಗಿದು ವಿಗ್ರಹಗಳನ್ನು ಪೆಟ್ಟಿಗೆಯೊಳಗೆ ಹಾಕಿ, ಪೆಟ್ಟಿಗೆ ಮುಚ್ಚಿ, ಅದನ್ನು ತನ್ನ ಬಳಿ ಇದ್ದ ಕೃಷ್ಣಾಜಿನದಲ್ಲಿ ಸುತ್ತಿ, ತನ್ನ ಜೋಳಿಗೆಯಲ್ಲಿ ಹಾಕಿಕೊಂಡ.

ಸೋಮಯಾಜಿ ಅವನನ್ನೇ ನೋಡುತ್ತಿದ್ದವರು, “ಅಪ್ರಮೇಯಾ, ಇದಕ್ಕಾಗಿ ಹಿಂದೆ ಕೊಲೆಗಳಾಗಿವೆ. ಕುಮಾರಾನಂದ ಸ್ವಾಮಿಗಳ ಸಾವು ಸಹಜವೇ ತಾನೇ?” ಎಂದರು.

ಮ್ಲಾನವದನದೊಂದಿಗೆ ಇಲ್ಲವೆಂಬಂತೆ ತಲೆಯಾಡಿಸಿದ.

“ಅಂದರೆ ಈ ವಿಗ್ರಹಗಳಿಗೆ ಮೊದಲ ಬಲಿಯೇ ಕುಮಾರಾನಂದರೇ?” ಎಂದು ಕ್ಷಣಕಾಲ ಕಂಬನಿಗರೆದರು ಸೋಮಯಾಜಿ. ಅದನ್ನು ನೋಡಿದಾಗ ಗುರುಗಳ ಹಿಂಸೆಗೊಳಪಟ್ಟ ಶವದ ನೆನಪಾಗಿ ಅಪ್ರಮೇಯನ ಕಂಗಳೂ ತುಂಬಿಬಂದವು.

ನಂತರ ತಮಗೆ ತಾನೇ ಸಮಾಧಾನ ಮಾಡಿಕೊಳ್ಳುವಂತೆ “ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ| ತಸ್ಮಾದಪರಿಹಾರ್ಯೇಽರ್ಥೇ ನ ತ್ವಂ ಶೋಚಿತುಮರ್ಹಸಿ|| ಹುಟ್ಟಿದವನಿಗೆ ಮರಣ ಖಂಡಿತ ಮತ್ತು ಮರಣ ಹೊಂದಿದವನಿಗೆ ಹುಟ್ಟು ಖಚಿತ. ಆದ್ದರಿಂದ ಅನಿವಾರ್ಯವಾದ ಇವುಗಳಿಗೆ ನೀನು ಶೋಕಿಸಬಾರದು” ಎಂದರು.

“ಸರಿ ನಡಿ. ನಿನಗೆ ಜೊತೆ ಇದೆಯಾ?” ಎಂದು ಕೇಳಿದರು.

“ಇದ್ದಾರೆ” ಎಂದು ಅಪ್ಪು ಹೇಳಿದಾಗ, “ಯಾರನ್ನೂ ನಂಬಲಾಗದು. ಹೇಗೆ ಹೋಗಬೇಕೆಂದಿರುವೆ?” ಎಂದರು ಸೋಮಯಾಜಿಗಳು.

“ರೈಲಿನಲ್ಲಿ ಹೋಗುವುದು ಕ್ಷೇಮ ಎನಿಸುತ್ತಿದೆ” ಎಂದ ಅಪ್ಪು.

“ಒಂದು ಕೆಲಸ ಮಾಡು” ಎಂದು ಅವನ ಗಮನ ಸೆಳೆದು, “ರಿಸರ್ವೇಷನ್‌ ಇಲ್ಲದ ಗಾಡಿಗಳಲ್ಲಿ ಪ್ರಯಾಣ ಮಾಡು. ಅಲ್ಲಲ್ಲಿ ಇಳಿದುಬಿಡು. ನಿನ್ನನ್ನು ಬೆನ್ನಟ್ಟಿ ಬಂದವರಿಗೆ ನೀನೇನು ಮಾಡುವೆ ಎಂದ ಸುಳಿವೂ ಸಿಕ್ಕಕೂಡದು” ಎಂದರು ಸೋಮಯಾಜಿ.

ನಂತರ ಏನೋ ನೆನಪಾದವರಂತೆ, “ಛೇ ವಯಸ್ಸಾದರೆ ಪರವಾಗಿಲ್ಲ. ನೆನಪಿನ ಶಕ್ತಿ ಕುಂದಿದರೆ ಬಹಳ ಬೇಸರ” ಎಂದು ಹೇಳಿ ಒಳಗೆ ಹೋಗಿ ಮತ್ತೆ ಅಪ್ಪುವಿನ ಬಳಿಗೆ ಬಂದರು. ಅವರ ಕೈಯಲ್ಲಿ ಒಂದು ಚಿಕ್ಕ ಚರ್ಮದ ಚೀಲವಿತ್ತು.

“ಇದರಲ್ಲಿ ಕುಮಾರಾನಂದರು ನಿನಗೆ ಕೊಡಬೇಕೆಂದಿದ್ದ ಹಣವಿದೆ. ಇದನ್ನೇ ವಿನಿಯೋಗಿಸಿ, ನೀನು ಜೋಷಿ ಮಠ ಸೇರು. ಅವನಿದ್ದಾನೆ” ಎಂದು ಮೇಲಕ್ಕೆ ಕೈ ತೋರಿ, “ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ|  ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ” ಎಂದರು.

ಅವರಿಗೆ ನಮಸ್ಕರಿಸಿ ಮೆಟ್ಟಿಲಿಳಿದು ಬಂದುಬಿಟ್ಟ.

ನಂತರ ದೇವಸ್ಥಾನದ ಬಾಗಿಲಿಗೆ ಹೋಗಿ ಕಾಯುತ್ತಿದ್ದ. ನಾಲ್ವರು ಶಿಷ್ಯರೂ ಹೊರಗೆ ಬಂದರು.

ಅಪ್ರಮೇಯನ ಬಳಿಗೆ ಬಂದ ಒಬ್ಬ ಶಿಷ್ಯ.

“ರಾಮೇಶ್ವರದ ನಿವೃತ್ತ ಪುರೋಹಿತರು ಏನೆಂದರು?” ಎಂದು ಕೇಳಿದ.

ಅಪ್ರಮೇಯ ಅಚ್ಚರಿಯ ಬಾವಿಯಲ್ಲಿ ಬಿದ್ದ.

“ನಿನಗೆ ಹೇಗೆ ಗೊತ್ತು?” ಎಂದೆನ್ನಲು ಹೋದವನು, ಹಾಗೆಂದೊಡನೆ ನಾನಲ್ಲಿಗೆ ಹೋಗಿದ್ದೆ ಎಂದು ತಿಳಿದುಬಿಡುತ್ತದೆ ಎಂದುಕೊಂಡು, “ಪುರೋಹಿತರಾ? ಆಂ?” ಎಂದ ಪ್ರಶ್ನೆಯನ್ನು ಹಾರಿಸಿ.

ಆ ಶಿಷ್ಯ ಸಾಲೋಚನಾಭರಿತನಾಗಿ ತನ್ನೊಂದಿಗೆ ಬರುತ್ತಿದ್ದ ಇನ್ನೊಬ್ಬ ಶಿಷ್ಯನಿಗೆ ಏನೋ ಸನ್ನೆ ಮಾಡಿದ. ಪಾಪ! ಅಪ್ರಮೇಯನಿಗೆ ತನ್ನ ಶತ್ರುಗಳಾರು, ಮಿತ್ರರಾರು ಎಂಬುದು ತಿಳಿಯದಂತಹ ಅಗೋಚರ ಪರಿಸ್ಥಿತಿ.

ಐವರೂ ರಾಮೇಶ್ವರಂ ರೈಲ್ವೇ ಸ್ಟೇಷನ್ನಿಗೆ ಬಂದರು.

ಶಿಷ್ಯನೊಬ್ಬ ಬಾತ್‌ರೂಮಿಗೆಂದು ಹೋದ. ಅಲ್ಲಿಯೇ ಅವನು ತನ್ನ ಮೊಬೈಲ್‌ ತೆಗೆದು ಯಾರಿಗೋ ಫೋನ್‌ ಮಾಡಿದ.

ಆ ಕಡೆಯಿಂದ ಕೇಳಿದ ವಿಷಯವನ್ನು ಕೇಳಿ ಏನು ಮಾಡಬೇಕೆಂದು ಸೂಚನೆಗಳನ್ನು ಪಡೆದು ಉಳಿದ ನಾಲ್ವರ ಬಳಿಗೆ ಬಂದ.

ಅಪ್ರಮೇಯ ಯಾವುದನ್ನು ಗುಟ್ಟಾಗಿಡಬೇಕೆಂದು ನೋಡಿದ್ದನೋ ಆ ವಿಷಯ ಆ ನಾಲ್ವರಲ್ಲಿ ಒಬ್ಬನಿಗೆ ಆ ಫೋನ್‌ ಕರೆಯ ಮೂಲಕ ತಿಳಿದುಹೋಗಿತ್ತು!

ಅವನು ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ.

ದುಷ್ಟರ ಗುಂಪಿಗೆ ಅಪ್ರಮೇಯನ ಬಳಿ ಇರುವ ಮೂರು ವಿಶಿಷ್ಟ ಅಪರೂಪದ ವಿಗ್ರಹಗಳ ಬಗ್ಗೆ ತಿಳಿದುಹೋಗಿತ್ತು!

(ಸಶೇಷ)

ಯತಿರಾಜ್‌ ವೀರಾಂಬುಧಿ

Related post

Leave a Reply

Your email address will not be published. Required fields are marked *