ಪರಾವಲಂಬಿ ಪಕ್ಷಿಗಳು – Brood Parasitism

ಪರಾವಲಂಬಿ ಪಕ್ಷಿಗಳು – Brood Parasitism

ಮಕ್ಕಳು ಬೇಕು ಎಂದು ಯಾವ ದಂಪತಿಗಳಿಗೆ ಇಸ್ಟವಿರೋದಿಲ್ಲ ಹೇಳಿ! ಮಕ್ಕಳನ್ನು ಹೆರಬೇಕು, ಬೆಳೆಸಬೇಕು, ವಿದ್ಯೆ ಕಲಿಸಿ ಅವುಗಳನ್ನು ಸಮಾಜದಲ್ಲಿ ಉನ್ನತ ನಾಗರಿಕರನ್ನಾಗಿ ಮಾಡಬೇಕು ಎಂಬುದು ಎಲ್ಲ ಪೋಷಕರ ಮೊದಲ ಆದ್ಯತೆ. ಅದೇ ರೀತಿ ಪಕ್ಷಿಗಳಲ್ಲಿ ಕೂಡ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಗಳಿಗೆ ಗುಕ್ಕು ಉಣಿಸಿ ಅವು ಬೆಳೆದ ಮೇಲೆ ಸ್ವತಂತ್ರವಾಗಿ ಹಾರಲು ಕಲಿಸುವುದನ್ನು ಎಲ್ಲಾ ಪಕ್ಷಿಗಳು ಮನುಷ್ಯನ ರೀತಿ ಪಾಲಿಸುತ್ತವೆ ಆದರೆ ಕೆಲ ಜಾತಿಯ ಪಕ್ಷಿಗಳು  ಪರಾವಲಂಬಿಗಳಾಗಿ ತಮ್ಮ ಮರಿಗಳನ್ನು ಸಂಪೂರ್ಣವಾಗಿ ಇತರೆ ಪಕ್ಷಿ ಪೋಷಕರಿಗೆ ಒಪ್ಪಿಸಿಬಿಡುತ್ತವೆ, ಇದನ್ನೇ ಬ್ರೂಡ್ ಪ್ಯಾರಾಸಿಟಿಸಂ (Brood Parasitism) ಎನ್ನುತ್ತಾರೆ.

ಸುಮಾರು ಮುನ್ನೂರು ಜಾತಿಯ ಹಕ್ಕಿಗಳಲ್ಲಿ ಈ ಪರಾವಲಂಬಿ ಗುಣಗಳನ್ನು ಜೀವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಕೋಗಿಲೆ (ಕುಕೂ) ಜಾತಿಯ ಹಕ್ಕಿಗಳು, ದಕ್ಷಿಣ ಅಮೇರಿಕಾದಲ್ಲಿನ ಕಂದು ತಲೆಯ ಕೌ ಬರ್ಡ್ ಹಕ್ಕಿಗಳು ಹಾಗು ಕಪ್ಪು ಬಣ್ಣದ ಬಾತುಕೋಳಿ, ಆಫ್ರಿಕಾದ ಹನಿ ಗೈಡ್ (ಜೇನುಗೂಡಿನ ಮೇಣಗಳೆಂದರೆ ಇವುಗಳಿಗೆ ಇಷ್ಟ ಅದರಿಂದ ಸದಾ ಜೇನು ಗೂಡುಗಳ ಸುತ್ತ ಇವುಗಳ ಹಾರಾಟ) ಇನ್ನೂ ಸುಮಾರು ಪಕ್ಷಿ ಪ್ರಬೇಧಗಳಲ್ಲಿ ಈ ಪರಾವಲಂಬಿತನವು ಕಂಡುಬರುತ್ತದೆ. ಹಕ್ಕಿಗಳ ಈ ಪರಾವಲಂಬಿತನವನ್ನು ಕೋಗಿಲೆ ಜಾತಿಯಲ್ಲಿ ಪಕ್ಷಿತಜ್ಞರು ನಿಖರವಾಗಿ ಸಂಶೋಧಿಸಿದ್ದಾರೆ ಹಾಗು ಕೌ ಬರ್ಡ್, ಹನಿ ಗೈಡ್ ಮುಂತಾದ ಪಕ್ಷಿ ಸಂತತಿಗಳಲ್ಲಿ ತಮ್ಮ ಸಂಶೋಧನೆಗಳನ್ನು ಈಗಲೂ ಸಹ ಮಾಡುತ್ತಲೇ ಇದ್ದಾರೆ.

ಈ ಪ್ರಭೇದದ ಪಕ್ಷಿಗಳು ತಮ್ಮ ಮೊಟ್ಟೆಗಳನ್ನು ಇತರೆ ಹಕ್ಕಿಗಳ ಗೂಡುಗಳಲ್ಲಿ ಸೇರಿಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಂಡುಬಿಡುತ್ತವೆ, ಮೊಟ್ಟೆ ಹಾಗು ಹೊರಬರುವ ಮರಿಗಳ ನಂತರದ ಜವಾಬ್ದಾರಿ ಸಂಪೂರ್ಣವಾಗಿ ಆ ಪೋಷಕ ಪಕ್ಷಿಗಳೇ ಹೊರುತ್ತವೆ. ಗೂಡು ಕಟ್ಟುವುದು ಮರಿಗಳನ್ನು ಪೋಷಿಸುವುದು ಇವ್ಯಾವೂ ಮಾಡದೆ ಈ ಪರಾವಲಂಬಿ ಪಕ್ಷಿಗಳು ತಮ್ಮ ವಂಶವಾಹಿನಿಯನ್ನು ಮುಂದುವರೆಸಿಕೊಂಡು ಬರುತ್ತಿವೆ. ವಿಚಿತ್ರವೆಂಬಂತೆ ಕೆಲ ಪೋಷಕ ಜಾತಿಯ ಪಕ್ಷಿಗಳು ಗೂಡಿನಲ್ಲಿ ಇರುವುದು ತಮ್ಮ ಮೊಟ್ಟೆಯಲ್ಲವೆಂದು ಗೊತ್ತಿದ್ದರೂ ಸಹ ಮಾತೃವಾತ್ಸಲ್ಯದಿಂದ ತಮ್ಮ ಇತರೆ ಮೊಟ್ಟೆಗಳ ಜೊತೆ ಅದಕ್ಕೂ ಕಾವು ಕೊಡುತ್ತವೆ ಆದರೆ ಕೆಲ ಜಾತಿಯ ಪಕ್ಷಿಗಳು ಪರಾವಲಂಬಿ ಮೊಟ್ಟೆಗಳನ್ನು ಗುರುತಿಸಿ ಬೆಳೆಯಲು ಬಿಡದೆ ಗೂಡಿನಿಂದ ಹೊರತಳ್ಳಿಬಿಡುತ್ತವೆ.

ಪರಾವಲಂಬಿ ಪಕ್ಷಿಗಳು ಮೊಟ್ಟೆಯನ್ನು ಬೇರೆ ಹಕ್ಕಿಗಳ ಗೂಡಿನಲ್ಲಿ ಇಡುವುದು ಅಷ್ಟು ಸುಲಭವಲ್ಲ. ಮೊದಲು ಪೋಷಕ ಪಕ್ಷಿಗಳ ಗೂಡನ್ನು ಪತ್ತೆ ಹಚ್ಚಬೇಕು, ಅವುಗಳು ಗೂಡಿನಲ್ಲಿಲ್ಲದ ಸಮಯ ನೋಡಿಕೊಂಡು ಗೂಡು ಹೊಕ್ಕು ತಮ್ಮ ಮೊಟ್ಟೆಗಳನ್ನು ಇಟ್ಟು ಬರಬೇಕು, ಗೂಡಿನಲ್ಲಿದ್ದಾಗ ಪೋಷಕ ಪಕ್ಷಿಗಳು ಬಂದು ಬಿಟ್ಟರೆ ರಣಘೋರ ಯುದ್ಧಕ್ಕೆ ಹಣಿಯಾಗಬೇಕು ಒಂದೇ ಎರಡೇ???.

ಗಾತ್ರದಲ್ಲಿ ಹದ್ದಿನಂತೆ ಕಾಣುವ ಕೆಲ ಜಾತಿಯ ಕೋಗಿಲೆಗಳು ಪೋಷಕ ಗೂಡುಗಳಿಗೆ ಆಕ್ರಮಣಕಾರಿಯಾಗಿ ಲಗ್ಗೆ ಇಟ್ಟು ಅವುಗಳನ್ನು ಬೆದರಿಸಿ ಓಡಿಸಿ ಸಲೀಸಾಗಿ ಮೊಟ್ಟೆ ಇಟ್ಟು ಬಂದುಬಿಡುತ್ತವೆ ಆದರೆ ಕೆಲ ಜಾತಿಯ ಪೋಷಕ ಪಕ್ಷಿಗಳು ಪರಾವಲಂಬಿ ಪಕ್ಷಿಗಳನ್ನು ಕನಿಕರದಿಂದ ನೋಡಿ ಅವುಗಳು ಗೂಡಿನ ಸನಿಹ ಬಂದನಂತರ ಕೆಲ ಸಮಯ ತಾವಾಗೇ ಗೂಡನ್ನು ಬಿಟ್ಟು ಮೊಟ್ಟೆ ಇಡಲು ಸಹಾಯ ಮಾಡುತ್ತವೆ. ಆದರೆ ಕೋಗಿಲೆ ಜಾತಿಗಳಲ್ಲಿ ಕೆಲ ಪಕ್ಷಿಗಳು ತಮ್ಮ ಮೊಟ್ಟೆ ಇಟ್ಟನಂತರ ಪೋಷಕ ಹಕ್ಕಿಗಳಿಗೆ ಗೊತ್ತಾಗದಿರಲಿ ಎಂದೋ ಏನೋ ಇತರೆ ಮೊಟ್ಟೆಗಳಲ್ಲಿ ಒಂದನ್ನು ಗೂಡಿನಿಂದ ಹೊರತಳ್ಳಿಬಿಡುತ್ತವೆ. ಎಷ್ಟೋ ಬಾರಿ ಪೋಷಕ ಪಕ್ಷಿಗಳ ಮೊಟ್ಟೆಗಳಿಗಿಂತ ಮೊದಲೇ ಈ ಪರಾವಲಂಬಿ ಮೊಟ್ಟೆಗಳು ಒಡೆದು ಮರಿಗಳು ಹೊರಬಂದು ಬಿಡುತ್ತವೆ ಆಗಲು ಸಹ ಪೋಷಕ ಹಕ್ಕಿಗಳಿಗೆ ಅದು ತಮ್ಮದೇ ಮರಿ ಎಂದು ತಿಳಿಯದೆ ಅವುಗಳಿಗೆ ಆಹಾರವನ್ನು ನೀಡುತ್ತವೆ. ಇವೆಲ್ಲ ಪಕ್ಷಿಲೋಕದಲ್ಲಿ ಸೋಜಿಗ.

ಈ ವ್ಯವಸ್ಥೆಯಲ್ಲಿ ಪೋಷಕ ಪಕ್ಷಿಗಳ ಮರಿಗಳಿಗೆ ಅನಾನುಕೂಲವೇ ಹೆಚ್ಚು, ಪರಾವಲಂಬಿ ಮರಿಗಳು ಬೆಳೆದೆಂತೆಲ್ಲ ಗೂಡಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತವೆ, ಎಷ್ಟೋ ಮರಿಗಳು ಪೋಷಕ ಹಕ್ಕಿಗಳ ಮರಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುವುದರಿಂದ  ಇತರೆ ಮರಿಗಳನ್ನು ಒತ್ತರಿಸಿ ಒತ್ತರಿಸಿ ಗೂಡಿನಿಂದ ಹೊರಗೆ ತಳ್ಳಿಬಿಡುತ್ತವೆ ಇದರಲ್ಲಿ ಹನಿ ಗೈಡ್ ಹಕ್ಕಿಗಳ ಮರಿಗಳು ಇನ್ನೂ ಕ್ರೂರ, ಈ ಮರಿಗಳಿಗೆ ಹುಟ್ಟುವಾಗಲೇ ಚೂಪಾದ ಕೊಕ್ಕು ಇರುವುದರಿಂದ ಇತರೆ ಮರಿಗಳನ್ನು ಅವು ಕಣ್ಣು ಬಿಡುವ ಮೊದಲೇ ಕುಕ್ಕಿ ಕುಕ್ಕಿ ಸಾಯಿಸಿಬಿಡುತ್ತವೆ.

ಪರಾವಲಂಬಿ ಮರಿಗಳು ಸಾಮಾನ್ಯವಾಗಿ ಪೋಷಕ ಮರಿಗಳಿಗಿಂತ ಹೆಚ್ಚು ಆಹಾರ ಬೇಡುವುದರಿಂದ ಪೋಷಕ ಹಕ್ಕಿಗಳು ಇವಕ್ಕೆ ಮೊದಲು ಆಹಾರ ಉಣಿಸುವುದರಿಂದ ಇತರೆ ಮರಿಗಳಲ್ಲಿ ಅಪೌಷ್ಟಿಕತೆ ಉಂಟಾಗಿ ಸಾವನ್ನಪ್ಪುತ್ತವೆ ಆದರೆ ಏಶಿಯನ್ ಜಾತಿಯ ಕೋಗಿಲೆಗಳ ತರಹದ ಕೆಲ ಮರಿಗಳು ತಮ್ಮ ದೊಡ್ಡ ಗಾತ್ರದಿಂದ ಇತರೆ ಮರಿಗಳಿಗೆ ತೊಂದರೆ ಕೊಡದೆ ಅರಿತು ಗೂಡಿನಿಂದ ಹೊರಗೆ ಕೆಲ ಕಾಲ ಇರುತ್ತವೆ ಆಗಲೂ ಸಹ ಪೋಷಕ ಹಕ್ಕಿಗಳು ಅವುಗಳಿಗೆ ನಿರ್ವಂಚನೆಯಿಂದ ಆಹಾರವನ್ನು ಉಣಿಸುವುದು ಪಕ್ಷಿಲೋಕದಲ್ಲಿನ ಸಹಜ ಮಾತೃವಾತ್ಸಲ್ಯವನ್ನು ಹಾಗು ಪರಾವಲಂಬಿ ಪಕ್ಷಿಗಳಲ್ಲಿ ಇಲ್ಲದ ಮಮತೆ ಮಮಕಾರಗಳನ್ನು ಎತ್ತಿ ತೋರಿಸುತ್ತದೆ.

ಚಂದ್ರಶೇಖರ್ ಕುಲಗಾಣ

Related post