ಪರಿಶುದ್ಧ
ಇರಲೆಮ್ಮ ಮನ
ಮಂದಾನಿಲದ ತೆರದಿ
ಸುಳಿಗಾಳಿ, ಬಿರುಗಾಳಿಯಾ
ಗೊಡವೆ ಬೇಕಿಲ್ಲ!
ಇರಲೆಮ್ಮ ಮನ
ನಂದಾದೀಪದಂದದಿ
ಹೊಟ್ಟೆಕಿಚ್ಚು ಹಚ್ಚದಿರಲಿ
ಕಾಳ್ಗಿಚ್ಚನೆಲ್ಲೆಡೆ!
ಇರಲೆಮ್ಮ ಮನ
ತಿಳಿನೀರಿನಂದದಿ,
ಬಗ್ಗಡವಾಗದಿರಲಿ
ಅಗ್ಗದ ನುಡಿಗೆ!
ಇರಲೆಮ್ಮ ಮನ
ಧರಣಿಯ ತಾಳ್ಮೆಯಲಿ,
ತುಳಿವವರಿಗೂ ನೀಡುತ
ಆಸರೆಯನು!
ಇರಲೆಮ್ಮ ಮನ
ಆಗಸದ ಅನಂತತೆಯಂತೆ,
ಮುಚ್ಚುಮರೆಯಿಲ್ಲದೆ
ಪರಿಶುದ್ಧವಾಗಿ!!
ಶ್ರೀವಲ್ಲಿ ಮಂಜುನಾಥ
ಬೆಂಗಳೂರು