ಪಶ್ಚಿಮ ಘಟ್ಟದಲ್ಲೊಂದು ಇಣುಕು – 2
ಕುದುರೆಮುಖ ಇನ್ನಷ್ಟು….
ಕುದುರೆಯ ಮುಖದ ಹಾಗೆ ಪರ್ವತ ಶ್ರೇಣಿಯು ಕಾಣಿಸುವುದರಿಂದ ‘ಕುದುರೆ ಮುಖ’ ಎಂಬ ಹೆಸರು ಬಂದಿದೆ.
ವಿಶಾಲವಾದ ಹಾಗೂ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳಗಳು ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿರುವುದು ಕುದುರೆಮುಖದ ವೈಶಿಷ್ಟ್ಯ.
ಕಿರಿದಾದ ಬೆಟ್ಟಗಳ ಕವಲು ದಾರಿಯಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು ಮತ್ತು ಚಿಲಿಪಿಲಿಗುಟ್ಟುವ ಪಕ್ಷಿ ಸಂಕುಲಗಳು ಇಲ್ಲಿ ಹೇರಳವಾಗಿವೆ. ಹೆಸರು ಗೊತ್ತಿಲ್ಲದಿರುವ ಅದೆಷ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು ಕಂಡು ಬರುತ್ತವೆ.ಅಲ್ಲಲ್ಲಿ ಕಾಣುವ ಬಣ್ಣ ಬಣ್ಣದ ನೆಲದ ಮಣ್ಣುಗಳು ವಿಸ್ಮಯ ಉಂಟುಮಾಡುತ್ತವೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವು ಹಲವಾರು ನಶಿಸಿಹೋಗುತ್ತಿರುವ ಜೀವ ಸಂಕುಲಗಳಿಗೆ ಆಶ್ರಯತಾಣವಾಗಿದೆ.
ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿರುವ ಕುದುರೆಮುಖದಲ್ಲಿರುವ ವರಾಹ ಪರ್ವತ ಸಮುದ್ರ ಮಟ್ಟದಿಂದ 1458 ಮೀಟರ್ ಎತ್ತರದಲ್ಲಿದ್ದು ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳ ಮೂಲ ಇಲ್ಲಿದೆ. ಇದನ್ನು ಗಂಗಾಮೂಲವೆಂದೂ ಕರೆಯಲಾಗುತ್ತದೆ.
ಇಲ್ಲಿನ ಪ್ರಮುಖ ಆಕರ್ಷಣೆಗಳು ಎಂದರೆ ಭಗವತಿ ದೇವಸ್ಥಾನ ಮತ್ತು ವರಾಹದ 6 ಅಡಿ ಎತ್ತರವಿರುವ ಒಂದು ಗುಹೆ. ಇದು ಮ್ಯಾಗ್ನಟೈಟ್-ಕ್ವಾರ್ಟ್ಜೈಟ್ ನಿಕ್ಷೇಪಗಳೊಂದಿಗೆ ಸಮೃದ್ಧವಾಗಿದ್ದು 100 ಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳಿಂದ ಕೂಡಿದ ಸುಂದರ ತಾಣವೂ ಇದಾಗಿದೆ.
ಇಲ್ಲಿ ಹುಟ್ಟುವ ಕನ್ನಡ ನಾಡಿನ ಮೂರು ನದಿಗಳು ಲಕ್ಷಾಂತರ ಜೀವಿಗಳ ಜೀವನಾಡಿಯಾಗಿವೆ.
ತುಂಗಾ
ಗಂಗಾಮೂಲದಲ್ಲಿ ಜನ್ಮ ತಳೆದು ಈಶಾನ್ಯ ದಿಕ್ಕಿನಲ್ಲಿ ಹರಿಯುವ ತುಂಗೆ ಶೃಂಗೇರಿ, ತೀರ್ಥಹಳ್ಳಿ ಮತ್ತು ಶಿವಮೊಗ್ಗದ ಮೂಲಕ ಸುಮಾರು 147 ಕಿಮೀ ಹರಿದು ಕೂಡಲಿಯಲ್ಲಿ ಭದ್ರೆಯ ಜೊತೆಗೆ ಕೂಡಿಕೊಂಡು ತುಂಗಭದ್ರೆಯಾಗುತ್ತಾಳೆ.
ಗಾಜನೂರಿನಲ್ಲಿ ತುಂಗಾ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
ಭದ್ರಾ
ಮೊದಲು ಪೂರ್ವಕ್ಕೆ ಹರಿದು ನಂತರ ಈಶಾನ್ಯ ದಿಕ್ಕಿನೆಡೆ ಮುಖಮಾಡುವ ಭದ್ರೆಯು 178 ಕಿ ಮೀ ಕ್ರಮಿಸಿ ಭದ್ರಾವತಿಯ ಮೂಲಕ ಹರಿದು ಕೂಡಲಿಯಲ್ಲಿ ತುಂಗೆಯನ್ನು ಕೂಡಿಕೊಳ್ಳುತ್ತಾಳೆ.
ನೇತ್ರಾವತಿ
ಗಂಗಾಮೂಲದಿಂದ ಪಶ್ಚಿಮಕ್ಕೆ ಹರಿದು ಧರ್ಮಸ್ಥಳ, ಮಂಗಳೂರಿನ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತಾಳೆ.
ಪಶ್ಚಿಮ ಘಟ್ಟಗಳು ಮಳೆಯುಂಟುಮಾಡುವ ಪಶ್ಚಿಮದ ಮಾರುತಗಳನ್ನು ತಡೆಯುವುದರಿಂದಾಗಿ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಭಾಗವಾಗಿದೆ. ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತದೆ. ಈ ಪ್ರಕ್ರಿಯೆಗೆ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣದ ಕಾಡು ಸಹ ಸಹಕಾರಿಯಾಗಿದೆ.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಮುಖ್ಯ ಶಿಖರಗಳು
ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ,ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದುರೆಮುಖ ಮುಂತಾದವು.
ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಾಣಿಗಳ ಪೈಕಿ ಹಲವಾರು ತಳಿಗಳು ವಿಶಾಲ ವ್ಯಾಪ್ತಿಯನ್ನು ಹೊಂದಿವೆ. ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. ಇವುಗಳ ಪೈಕಿ ಅಳಿವಿನ ಅಂಚಿನಲ್ಲಿರುವ ಮಲಬಾರ್ ದೊಡ್ಡ ಚುಕ್ಕೆಯ ಪುನುಗು ಬೆಕ್ಕು ಮತ್ತು ಸಿಂಗಳೀಕಗಳು ಸೇರಿವೆ. ಸಿಂಗಳೀಕಗಳು ಇಂದು ಮೌನಕಣಿವೆ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾತ್ರ ಕಾಣಬರುತ್ತವೆ.
ಮುಂದುವರೆಯುತ್ತದೆ…
ಸುನೀಲ್ ಹಳೆಯೂರು