ನಮ್ಮ ಚಾರಣದಲ್ಲಿ ಹುಲ್ಲುಗಾವಲು ಪ್ರದೇಶ ಕಂಡಾಗ ಅಲ್ಲಲ್ಲಿ ಬಿದ್ದಿದ್ದ ಸೆಗಣಿಯನ್ನು ತೋರಿಸಿದ ನಮ್ಮ ಚಾರಣದ ಮಾರ್ಗದರ್ಶಿ ರಂಜಿತ್ ಈ ಸೆಗಣಿ “ಇಂಡಿಯನ್ ಬೈಸನ್” ದು ಎಂದು ಹೇಳಿ ಅದರ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿದ್ದ, ಹಾಗೆಯೇ ಅದು ನಾಚಿಕೆ ಸ್ವಭಾವದ ಪ್ರಾಣಿ ನಮ್ಮನ್ನು ಕಂಡರೆ ಓಡಿಹೋಗುತ್ತದೆ ಆದರೆ ಅಪಾಯ ಕಂಡುಬಂದರೆ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ. ಹಾಗೆಯೇ ಎದುರು ಬೆಟ್ಟದ ಕಡೆಗೆ ಬೆಟ್ಟುಮಾಡಿ ತೋರಿಸಿ ಸೂಕ್ಷ್ಮವಾಗಿ ಗಮನಿಸಲು ಹೇಳಿದಾಗ ನಾನು ಮತ್ತು ನನ್ನ ಗೆಳೆಯ ಇಮ್ತಿಯಾಜ್ ಪುಳಕಗೊಂಡೆವು. ಹೌದು,ನಮಗೆ ಕಾಡುಕೋಣ ಕಂಡಿತ್ತು. ವಾಪಸಾದ ಮೇಲೆ ಅಜ್ಜಂಪುರ ಕೃಷ್ಣಸ್ವಾಮಿ ಅವರ ಪುಸ್ತಕದಿಂದ ಕೆಲವು ಮಾಹಿತಿ ಕಲೆ ಹಾಕಿದೆ.
ಗೌರ್ – ಕಾಡುಕೋಣ – ಕಾಟಿ
ಇದಕ್ಕೆ ಕಾಡುಕೋಣ,ಕಾಟಿ, Indian Bison ಎಂದೂ ಕರೆಯುತ್ತಾರೆ.
ಭಾರತದಲ್ಲಿ ವಿಶೇಷವಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ.
ಇದು ಸುಮಾರು 750 ರಿಂದ 1,800 ಮೀಟರ್ ಎತ್ತರದ ಗುಡ್ಡ-ಗಾಡು ಪ್ರದೇಶಗಳಲ್ಲಿ, ಗುಡ್ಡಗಳ ಮೇಲೆ, ಹುಲ್ಲು ಗಾವಲುಗಳಿರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತದೆ. ಕಾಟಿ ಬಹಳ ದೊಡ್ಡ ಗಾತ್ರದ ಪ್ರಾಣಿ. ಹುಲ್ಲು, ಚಿಗುರು, ಬಿದಿರುಎಲೆ, ಗಿಡಗಳ ಎಲೆ, ತೊಗಟೆ, ಹಣ್ಣು ಕಾಯಿಗಳನ್ನು ತಿನ್ನುತ್ತದೆ.
ಇವು ನೋಡುವುದಕ್ಕೆ ಎಮ್ಮೆ ಕೋಣಗಳಂತೆ ಕಾಣುವುದರಿಂದ ಇವುಗಳಿಗೆ ಕಾಡುಕೋಣಗಳೆಂದು ಹೆಸರು ಬಂದಿದೆ. ಆದರೆ ಇವು ಆಕಳ ಜಾತಿಯವು. ಇವುಗಳಿಗೆ “ಇಂಡಿಯನ್ ಬೈಸನ್” ಗಳೆಂದು ಹೇಳುವುದುಂಟು. ಆದರೆ ಇವು ಬೈಸನ್‌ಗಳಲ್ಲ.
ಹಿಂಗಾಲು ಸ್ವಲ್ಪ ಗಿಡ್ಡ ಮತ್ತು ಮುಂಗಾಲು ಉದ್ದ. ಕೋಣನ ಬಾಯಿಯಂತೆ ತುಸು ಅಗಲವಾದ ಬಾಯಿ. ದೊಡ್ಡ ಮುಖ, ಬೂದುಬಣ್ಣದ ಉಬ್ಬಿದ ತಲೆ ಪಟ್ಟಿ ‘C’ ಆಕಾರದ ಮೊನಚಾದ ಕೊಂಬುಗಳು. ಬಿಳಿ ‘ಕಾಲು ಚೀಲದ’ ಕಾಲುಗಳು. ಒತ್ತಾದ ಗಿಡ್ಡ ಕೂದಲಿನ ದೇಹ. ಕೊಂಬುಗಳು ಟೊಳ್ಳು. ಗಂಡುಗಳ ಕೊಂಬುಗಳು ತುದಿಯಲ್ಲಿ ಮೊನಚಾಗಿವೆ. ಇವುಗಳ ಕಿವಿ ಮತ್ತು ಮೂಗು ಅತಿ ತೀಕ್ಷ್ಣ. ಕಣ್ಣು ಮಂದ 15 ಮೀಟರ್ ಗಳ ದೂರದಿಂದ ವಾಸನೆ ಹಿಡಿಯಬಲ್ಲವು.
ಕರು ಹುಟ್ಟಿದ ೧೦ ನಿಮಿಷಗಳಲ್ಲಿಯೇ ಎದ್ದು ಓಡಾಡುತ್ತದೆ. ಕರುವಿನ ಪಾಲನೆಯನ್ನು ತಾಯಿ 2 ವರ್ಷಗಳವರೆಗೆ ಮಾಡುತ್ತದೆ. ಹೆಣ್ಣು 2 ವರ್ಷಕ್ಕೆ ಪ್ರಾಯಕ್ಕೆ ಬಂದು ಮುಂದೆ ಪ್ರತಿ ವರ್ಷ ಈಯುತ್ತದೆ. ಬಂಧನದಲ್ಲಿ ಹೆಚ್ಚುದಿನ ಬದುಕುವುದಿಲ್ಲ. ಆದರೆ 24 ವರ್ಷ ಬದುಕಿದ ದಾಖಲೆ ಇದೆ.
ಗುಡ್ಡಗಾಡಿನ ಅರಣ್ಯ ವಾಸಿಗಳು. ಮಧ್ಯಾಹ್ನದ ಬಿಸಿಲಿನಲ್ಲಿ ದಟ್ಟವಾದ ಪೊದೆಗಳ ನೆರಳಿನಲ್ಲಿ ವಿಶ್ರಾಂತಿ ಪಡೆದು, ಮುಂಜಾನೆ ಮತ್ತು ಸಂಜೆ ಮೇಯುತ್ತವೆ. ಇವು ಮೆಲಕು ಹಾಕುತ್ತವೆ. ವಾಡಿಕೆಯಾಗಿ ರಾತ್ರಿ ಚಟುವಟಿಕೆ. ನಾಚಿಕೆ ಹಾಗೂ ಸಾಧು ಸ್ವಭಾವದವು. ನೋಡವುದಕ್ಕೆ ಉಗ್ರವಾಗಿ ಕಂಡರೂ ಪುಕ್ಕಲು ಪ್ರಾಣಿಗಳು. ತಾವಾಗಿ ಎಂದೂ ಮೈಮೇಲೆ ಬೀಳುವುದಿಲ್ಲ. ಗಾಯಗೊಂಡ ಒಂಟಿ ಗೂಳಿಯನ್ನು ಸಮೀಪಿಸುವುದು ಅಪಾಯಕರ. ಗಾಯಗೊಂಡಾಗ ಮತ್ತು ಶತ್ರುಗಳು ಆಕ್ರಮಿಸಿದಾಗ ಕ್ರೂರವಾಗಿ ಹೋರಾಡಬಲ್ಲದು. ಶತ್ರುವಿನ ಸುಳಿವು ಸಿಕ್ಕಾಗ ಸ್ಥೂಲ ಶರೀರಿಯಾದರೂ ಮರಗಿಡಗಳ ಮಳೆಗಳ ನಡುವೆ ವೇಗವಾಗಿ ಓಡಿ ಹೋಗಬಲ್ಲದು. ಸಾಮಾನ್ಯವಾಗಿ ಎಮ್ಮೆ-ಹಸುಗಳಂತೆ ಕೂಗುತ್ತಾ ಕೆಸರಿನಲ್ಲಿ ಹೊರಳಾಡುವುದಿಲ್ಲವಾದರೂ, ಅಪಾಯ ಸನ್ನಿಹಿತವಾದಾಗ ಸಿಳ್ಳೆಯಂತಹ ಗುಟುರು ಹಾಕುತ್ತವೆ.
ಇವು ಸಂಘ ಜೀವಿಗಳು. ಒಂದೊಂದು ಹಿಂಡಿನಲ್ಲಿ ಆಕಳು, ಕರು, ಗೂಳಿ ಸೇರಿ 30 ರಿಂದ 40 ಪ್ರಾಣಿಗಳಿರಬಹುದು. ಆಕಳುಗಳು ಸಾಮಾನ್ಯವಾಗಿ ಒಂಟಿಯಾಗಿರುವುದಿಲ್ಲ. ಹಿಂಡಿಗೆ ಬಲಿಷ್ಠ ಗೂಳಿಯೇ ಯಜಮಾನ. ಆಕಳುಗಳು ಬೆದೆಗೆ ಬಂದಾಗ ಮುಖಂಡ ಗೂಳಿಯು ಉಳಿದ ಗುಂಪಿನ ಗೂಳಿ (ಹೋರಿ) ಗಳನ್ನು ಸಮೀಪ ಸುಳಿಯಗೊಡುವುದಿಲ್ಲ. ಹೆಣ್ಣನ್ನು ಒಲಿಸಿಕೊಳ್ಳಲು ಘೋರ ಕಾದಾಟ ಆಗುವುದುಂಟು. ಹರೆಯದ ಗೂಳಿಗಳು ಪ್ರಭುವಾದಾಗ ಯಜಮಾನನನ್ನು ಹಿಂದೆ ಸರಿಸಿ ತಮ್ಮ ಪ್ರಭುತ್ವವನ್ನು ಚಲಾಯಿಸುತ್ತವೆ. ಆಗ ಮುಪ್ಪಾಗಿ ನಿರ್ಭಲವಾದ ಯಜಮಾನ ಗೂಳಿ ಗುಂಪಿನಿಂದ ಹಿಂದೆ ಸರಿದು ಒಂಟಿಯಾಗಿ ಉಳಿಯುತ್ತದೆ. ಬೆದೆಯ ಸಮಯದಲ್ಲಿ ಒಂದು ಗುಂಪಿನ ಯಜಮಾನ ಗೂಳಿ ಇನ್ನೊಂದು ಗುಂಪಿನ ಆಕಳುಗಳ ಮೇಲೆ ಬಲಾತ್ಕಾರ ಮಾಡಬಹುದು.
ಹುಲಿ, ಚಿರತೆ, ಕಾಡು ನಾಯಿಗಳ ಆಕ್ರಮಣ ನಡೆದಾಗ ಹಿಂಡಿನಲ್ಲಿಯ ಇತರ ಆಕಳು ಮತ್ತು ಕರುಗಳನ್ನು ನಡುವೆ ಸೇರಿಸಿ ಸುತ್ತುವರಿದು ರಕ್ಷಿಸುತ್ತವೆ. ಆದರೆ ಒಮ್ಮೊಮ್ಮೆ ಹಿಂಡಿನಿಂದ ಹಿಂದುಳಿದ ಕರುಗಳು ಮತ್ತು ರೋಗದಿಂದ ಬಳಲುತ್ತಿರುವ ಅಸಹಾಯಕ ಕಾಟಿಗಳು ಮಾಂಸಾಹಾರಿಗಳಿಗೆ ಬೇಟೆಯಾಗುತ್ತವೆ. ಸಾಮಾನ್ಯವಾಗಿ ಒಂದೇ ಹುಲಿ ಬೆಳೆದ ಕಾಟಿಯ ಮೇಲೆ ಬೀಳುವುದಿಲ್ಲ. ಆದರೆ ಎರಡು ಹುಲಿಗಳು ಕೂಡಿ ಕಾಟಿಯನ್ನು ಬೇಟೆಯಾಡಬಹುದು.
ಮುಂದುವರೆಯುವುದು….
ಸುನೀಲ್ ಹಳೆಯೂರು