ಪಶ್ಚಿಮ ಘಟ್ಟದಲ್ಲೊಂದು ಇಣುಕು -6

ಮಲಬಾರ್ ಟ್ರೋಗನ್‍ಕಾಡುಕುರಿ

ಪಶ್ಚಿಮ ಘಟ್ಟ ಅಳಿನಂಚಿನಲ್ಲಿರುವ ಹಲವಾರು ಜೀವ ಸಂಕುಲಗಳ ಆವಾಸಸ್ಥಾನವಾಗಿದೆ.
ಭಗವತಿ ಪ್ರಕೃತಿಯ ಮಡಿಲಲ್ಲಿ ನಾ ಕಂಡ ಈ ಪಕ್ಷಿ ಗಮನ ಸೆಳೆದಿತ್ತು.

ಪಶ್ಚಿಮ ಘಟ್ಟಗಳಲ್ಲಿ, ಮಧ್ಯ ಭಾರತದ ಬೆಟ್ಟ-ಗುಡ್ಡಗಳಲ್ಲಿ, ಪೂರ್ವ ಘಟ್ಟದ ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಸುಂದರ ಪಕ್ಷಿ ಮಲಬಾರ್‍ ಟ್ರೋಗನ್‍’ ಗಾಢ ಬಣ್ಣದ ರೆಕ್ಕೆ ಹೊಂದಿರುವ ಎತ್ತರದ ಕಾಡುಗಳಲ್ಲಿ, ಮರ-ಗಿಡಗಳಲ್ಲಿ ಗೂಡು ಕಟ್ಟಿಕೊಂಡು ಜೀವಿಸುವ ವಲಸೆ ಜೀವಿ ಮಲಬಾರ್‍ ಟ್ರೋಗನ್.
ಇದರ ವೈಜ್ಞಾನಿಕ ಹೆಸರು harpactes fasciatus.

ನಮ್ಮ ದೇಶದ ಪಶ್ಚಿಮಘಟ್ಟ, ಪೂರ್ವಘಟ್ಟದ ಕಾಡುಗಳು, ಪರ್ವತ ಪ್ರದೇಶದ ಕಾಡುಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ವಾಸಿಸುವ ಸುಂದರ ಪಕ್ಷಿ ಇದು. ಗಂಡು ಹಕ್ಕಿಯು ಕಪ್ಪುತಲೆ, ಕುತ್ತಿಗೆ ಬಳಿ ಬಿಳಿಯ ಪಟ್ಟಿ, ಗಾಢ ಕೆಂಪು ಬಣ್ಣದ ಹೊಟ್ಟೆ, ತಿಳಿಕಂದು ಬಣ್ಣದ ಮೇಲ್ಭಾಗದಿಂದ ಕಂಗೊಳಿಸುತ್ತದೆ. ಬಾಲದ ಬಳಿ 12 ಗರಿಗಳಿವೆ. ಹೆಣ್ಣು ಹಕ್ಕಿಯಲ್ಲಿ ಹೆಚ್ಚಾಗಿ ಕಾಣುವುದು ಕಂದು ಬಣ್ಣವೊಂದೇ. ಎರಡಕ್ಕೂ ಕೊಕ್ಕು ಮತ್ತು ಕಣ್ಣಿನ ಸುತ್ತಲೂ ನೀಲಿ ಬಣ್ಣವಿದೆ. ಹೆಚ್ಚಾಗಿ ಮರಗಳ ಮರೆಯಲ್ಲೇ ವಾಸಿಸಬಯಸುವ ಹಕ್ಕಿಗಳಿವು. ಮರಗಿಡ, ಎಲೆ, ಕಸಕಡ್ಡಿಗಳಲ್ಲಿರುವ ಕೀಟಗಳನ್ನು ಕೆದಕಿ ತಿನ್ನುತ್ತದೆ. ಗಂಡು-ಹೆಣ್ಣು ಹಕ್ಕಿಗಳೆರಡೂ ಕೂಡಿ ಒಣಗಿರುವ ಮರಗಳ ಕಾಂಡವನ್ನು ಕೊರೆದು ಗೂಡು ನಿರ್ಮಿಸುತ್ತವೆ. 2-3 ಮೊಟ್ಟೆಗಳನ್ನಿಡುತ್ತವೆ. ಕಾವು ಕೊಡುವುದು, ಆಹಾರ ತರುವುದು ಮೊದಲಾದ ಕೆಲಸವನ್ನು ಗಂಡು ಹೆಣ್ಣು ಹಕ್ಕಿಗಳೆರಡೂ ಮಾಡುತ್ತವೆ. ಕಾಡು ನಾಶ, ಅತಿಕ್ರಮ ಪ್ರವೇಶ, ಬೇಟೆ ಮೊದಲಾದ ಕಾರಣಗಳಿಂದಾಗಿ ಇಂದು ಈ ಸುಂದರ ಟ್ರೋಗನ್ ಹಕ್ಕಿಗಳ ಸಂಖ್ಯೆ ವಿರಳವಾಗಿದೆ.

ಕಾಡುಕುರಿ

ನಮ್ಮ ಚಾರಣದ ಹಾದಿಯ ಮತ್ತೊಂದು ಬದಿಯಲ್ಲಿನ ದಿಬ್ಬಗಳಲ್ಲಿ ದಟ್ಟವಾದ ಹುಲ್ಲುಗಾವಲು ಪ್ರದೇಶ ಕಂಡಾಗ ನಮ್ಮ ಚಾರಣದ ಮಾರ್ಗದರ್ಶಿ ರಂಜಿತ್ ದೂರದಲ್ಲಿ ಕೈ ತೋರಿಸಿ ಮತ್ತೊಂದು ಪ್ರಾಣಿಯ ಪರಿಚಯ ಮಾಡಿಸಿದ, ಅದು ಬಾರ್ಕಿಂಗ್ ಡೀರ್. ಇದಕ್ಕೆ ಪ್ರಾದೇಶಿಕವಾಗಿ ಕಾಡುಕುರಿ ಎನ್ನುತ್ತಾರೆ.
ನಾನು ಇಮ್ತಿಯಾಜ್ ಹಾಗೂ ಸೂರಿ ದೂರದಿಂದಲೇ ನೋಡಿದೆವು ಆದರೆ ಅದು ಕೆಮೆರಾ ಕಣ್ಣಿಗೆ ಸಿಗಲಿಲ್ಲ..ಒಂದಷ್ಟು ನಿಮಿಷ ದೂರದಿಂದಲೇ ನಮ್ಮನ್ನು ಗಮನಿಸುತ್ತಾ ಚೆಂಗನೆ ಹಾರಿ ಮರೆಯಾಯಿತು.

ಕಾಡು ಕುರಿ (Indian Muntjac/Barking Deer) ಭಾರತದ ಸುಮಾರು ಕಾಡುಗಳಲ್ಲಿ ಕಂಡುಬರುವ ಒಂದು ಸಸ್ತನಿ ಪ್ರಾಣಿ. ಸಸ್ಯಾಹಾರಿ ಪ್ರಭೇದಕ್ಕೆ ಸೇರಿದ ಈ ಪ್ರಾಣಿಯ ಮುಖ್ಯ ಆಹಾರವೆಂದರೆ- ಹುಲ್ಲು, ಎಲೆ, ಸೊಪ್ಪು ಮತ್ತು ಮರದಿಂದ ಉದುರಿದ ಹಣ್ಣು ಹಾಗೂ ಬೀಜಗಳು. ಕಾಡು ಕುರಿಯು ಸುಮಾರು ೧.೩ ಅಡಿಗಳಷ್ಟು ಎತ್ತರ ಮತ್ತು ೩ ಅಡಿಗಳಷ್ಟು ಉದ್ದವಿರುತ್ತದೆ. ಮತ್ತು ಇದರ ತೂಕ ಸುಮಾರು ೧೨ ರಿಂದ ೧೬ ಕೆಜಿ.

ಕಾಡು ಕುರಿಗಳನ್ನು ಅದರ ಪುಟ್ಟ ಗಾತ್ರ, ತಲೆಯ ಮೇಲಿನ ಕೊಂಬು ಮತ್ತು ಆನೆ ದಂತದಂತಿರುವ ಪುಟ್ಟ ಕೋರೆ ಹಲ್ಲುಗಳಿಂದ ಗುರುತಿಸಬಹುದು. ಇವುಗಳು ಸಾಧಾರಣವಾಗಿ ಸಂಜೆ ಮತ್ತು ರಾತ್ರಿಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುವುದರಿಂದ ಹಗಲಿನಲ್ಲಿ ಇವನ್ನು ಕಾಣುವುದು ಕೊಂಚ ಕಠಿಣ. ಸ್ವಭಾವತ ಸಂಕೋಚದ ಪ್ರಾಣಿಯಾದ ಕಾರಣ ಮಾನವರನ್ನು ಕಂಡ ತಕ್ಷಣ ಇವು ಓಡಿ ಮರೆಯಾಗುವವು. ಗಂಡು ಕುರಿಯು ತಲೆಯ ಮೇಲೆ ಕೊಂಬು ಮತ್ತು ಪುಟ್ಟ ಕೋರೆ ಹಲ್ಲನ್ನು ಹೊಂದಿರುತ್ತದೆ.

ಕಾಡು ಕುರಿಯ ಒಂದು ಪ್ರಮುಖವಾದ ಗುಣವೆಂದರೆ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ ಇವುಗಳ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಕಾಡಿನ ಇತರೆ ಪ್ರಾಣಿಗಳಿಗೆ ತಿಳಿಸುವುದು. ಈ ಮಾಂಸಾಹಾರಿ ಪ್ರಾಣಿಗಳನ್ನು ಕಂಡ ಕೂಡಲೆ ಕಾಡು ಕುರಿಯು ಜೋರಾಗಿ ಬೊಗಳಿಕೆಯಂತಹ ಧ್ವನಿಯಲ್ಲಿ ಕೂಗುತ್ತವೆ, ಹಾಗು ಇತರೆ ಪ್ರಾಣಿಗಳಿಗೆ ಎಚ್ಚರಿಕೆಯನ್ನು ನೀಡುತ್ತದೆ. ಕಾಡು ಕುರಿಯ ಬೊಗಳಿಕೆಯು ಕಾಡಿನಲ್ಲಿ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಅತ್ಯಂತ ನಿಖರವಾದ ಮಾಹಿತಿ ನೀಡುತ್ತದೆ.

ಮುಂದುವರೆಯುವುದು….

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *