ಪಶ್ಚಿಮ ಘಟ್ಟದಲ್ಲೊಂದು ಇಣುಕು
ಗಂಗೆ ಹುಳು
ಕುರಿಂಜಾಲು ಬೆಟ್ಟದ ಚಾರಣ ಹೋಗುವಾಗ ಅಲ್ಲಲ್ಲಿ ಬಿದ್ದಿದ್ದ ಉಂಡೆ ರೂಪದ ಹುಳು ಗಮನಿಸಿದ್ದೆ.ಚಾರಣ ಮುಗಿಸಿ ಇಳಿಯುತ್ತಾ ಇದ್ದಾಗ ಅದೇ ಹುಳು ಚಲಿಸುತ್ತಿತ್ತು. ಹಿಂದಿನ ಅನೇಕ ಚಾರಣಗಳಲ್ಲಿ ವಿವಿಧ ಬಣ್ಣಗಳ ಈ ಹುಳುಗಳನ್ನು ಗಮನಿಸಿದ್ದೆ.
ಸುಮಾರು ನಾಲ್ಕು ಇಂಚು ಉದ್ದದ ಹುಳ. ಎರಡು ಆಂಟೆನಾಗಳನ್ನು ಬಳಸಿಕೊಂಡು ದಾರಿ ಮಾಡಿಕೊಂಡು ಹೆಜ್ಜೆ ಹಾಕುತ್ತಿತ್ತು. ಅದನ್ನು ಮುಟ್ಟಿದ್ದೇ ತಡ ಚೆಂಡಿನಾಕಾರ ತಾಳಿ ತಟಸ್ಥವಾಯಿತು.
ಈ ಹುಳುವಿಗೆ ಗಂಗೆ ಹುಳು. ಉಂಡೆ ಹುಳ, ಗೋಲಿ ಹುಳ ಎಂದೆಲ್ಲಾ ಕರೆಯುತ್ತಾರೆ.
ಪಿಲ್ ಮಿಲ್ಲಿಪೇಡ್ ಎನ್ನುವುದು ಇಂಗ್ಲಿಷ್ ಹೆಸರು. ವೈಜ್ಞಾನಿಕವಾಗಿ ಇದನ್ನು ಗ್ಲೋಮೆರಿಸ್ ಮಾರ್ಜಿನೇಟ್ ಎಂದು ಕರೆಯುತ್ತಾರೆ.
ಗಂಗೆ ಹುಳ ವಾಸಿಸುವುದು ದಟ್ಟ ಕಾಡುಗಳಲ್ಲಿ. ಸಾಮಾನ್ಯವಾಗಿ ಮಳೆಗಾಲದಲ್ಲಿ, ಜೌಗು ಪ್ರದೇಶದಲ್ಲಿ ಹೆಚ್ಚಿನ ಕಾಲದಲ್ಲಿ ಸಿಗುವ ಇದು ಕೊಳೆತ ಎಲೆ ಮತ್ತು ಒಣಗಿದ ಮರಗಳ ಜತೆಯಲ್ಲಿ ಹೆಚ್ಚಾಗಿರುತ್ತದೆ. ತೋಟಗಳಲ್ಲೂ ಕಾಣಿಸಿಕೊಳ್ಳುತ್ತದೆ.
ಗಂಗೆ ಹುಳುವಿನ ದೇಹರಚನೆ ತುಂಬ ಇಂಟರೆಸ್ಟಿಂಗ್. ಮುಂದೆ ಬರೋದು ಎರಡು ಆಂಟೆನಾ. ಮುಖದ ಮುಂದೆ ಪುಟ್ಟ ಕಣ್ಣುಗಳು. ಮುಖವನ್ನು ಬಿಟ್ಟ ದೇಹದಲ್ಲಿ 12-13 ಸೆಗ್ಮೆಂಟ್‌ಗಳಿರುತ್ತವೆ. ಅವು ಸಾಮಾನ್ಯವಾಗಿ ಕಂದು ಇಲ್ಲವೇ ಕಪ್ಪು. ವಯಸ್ಕ ಗಂಗೆ ಹುಳು ಸುಮಾರು 17ರಿಂದ 18 ಜೋಡಿ ಕಾಲುಗಳನ್ನು ಹೊಂದಿರುತ್ತದೆ. ತಲೆಯಿಂದ ಕೆಲವು ಸೆಗ್ಮೆಂಟ್ ದಾಟಿದ ಕೂಡಲೇ ಹೊಟ್ಟೆ ಭಾಗ, ಕೊನೆಗೆ ಗುದದ್ವಾರ. ದೇಹದ ಮೇಲ್ಪದರ ತುಂಬ ಗಟ್ಟಿ.
ನಿಧಾನವಾಗಿ ತನ್ನ ಪಾಡಿಗೆ ತಾನು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಸಾಗುವ ಈ ಜೀವಿ ಅಪಾಯವನ್ನು ಗ್ರಹಿಸಿದೊಡನೆ ಠಕ್ಕನೆ ಮುದುರಿಕೊಳ್ಳುತ್ತದೆ. ನಂತರ ಅದನ್ನು ತೆರೆಯುವುದು ಅಷ್ಟು ಸುಲಭವಲ್ಲ
ಕೊಳೆತು ಹೋಗಿರುವ ವಸ್ತುಗಳನ್ನು ಹದಗೊಳಿಸಿ ಮರಳಿ ಜೈವಿಕ ಗೊಬ್ಬರವಾಗಿ ವಿಭಜಿಸುವ ದೊಡ್ಡ ಕೆಲಸವನ್ನು ಗಂಗೆ ಹುಳಗಳು ಮಾಡುತ್ತವೆ. ಮರ ಮತ್ತು ಎಲೆಗಳೇ ಇದರ ಪ್ರಮುಖ ಆಹಾರ.
ಇವುಗಳಿಗೆ ವಿಷವಿಲ್ಲ. ಕಚ್ಚಿದರೂ ಏನೂ ಆಗೊಲ್ಲ. ಪಕ್ಕಾ ಸಸ್ಯಾಹಾರಿಗಳು.
ಮುಂದುವರೆಯುವುದು….
ಸುನೀಲ್ ಹಳೆಯೂರು