–ಸಾಹಸಿ–
ಕತ್ತಲು ತುಂಬಿದ ರಸ್ತೆ ಬೆಂಗಳೂರು ಮಹಾನಗರವಾದರೂ, ಒಳಗಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲೊಂದು ಇಲ್ಲೊಂದು ಬೀದಿ ದೀಪಗಳಿವೆ.
ತಡವಾಗಿದೆ ಎಂದು ಪಾರು ತನ್ನ ದ್ವಿಚಕ್ರ ವಾಹನದಲ್ಲಿ ವೇಗವಾಗೇ, ಬರುತ್ತಿದ್ದಾಳೆ.
ಇದ್ದಕ್ಕಿದ್ದಂತೆ ಅವಳ ಮುಂದೆ ಹೋದ ಒಂದು ಕಾರು ರಸ್ತೆಯ ಬದಿಯಲ್ಲಿ ,ಸಾಲಾಗಿ ನಿಲ್ಲಿಸಿದ ಒಂದು ಕಾರಿಗೆ ತಗುಲಿಸಿ ಅದೇ ವೇಗದಲ್ಲಿ ಸಾಲು ಕಾರುಗಳಿಗೂ ತಗುಲಿಸಿಕೊಂಡು ಹೋಯಿತು. ಪಾರುವಿಗೆ ಎಲ್ಲಿತ್ತೋ ಧೈರ್ಯ, ತಕ್ಷಣವೇ ಆ ಕಾರನ್ನು ಅಡ್ಡಗಟ್ಟಿ, ಜೋರಾಗಿ ಹಾರನ್ ಮಾಡಿದಳು. ಕಾರಿನ ಚಾಲಕ ಗಲಿಬಿಲಿಗೊಂಡ ತಬ್ಬಿಬ್ಬಾದ ವಿಧಿಯಿಲ್ಲದೆ ಬ್ರೇಕ್ ಹಾಕಿ ನಿಲ್ಲಿಸಿದ. ಪಾರು ಹೋಗಿ ಜೋರಾಗಿ ಕೂಗಾಡಿ ಕಾರಿನ ಚಾಲಕನನ್ನು ಕೆಳಗೆ ಇಳಿಸಿದಳು. ಇವಳ ಗಲಾಟೆಗೆ ಅಕ್ಕಪಕ್ಕದ ಮನೆಯವರೆಲ್ಲರೂ ಬಂದರು. ಕಾರಿನ ಮಾಲೀಕರುಗಳು ಬಂದರು. ಆ ವ್ಯಕ್ತಿ ಜೋರಾಗಿ ನಿಮಗ್ಯಾಕ್ರೀ ಎಂದು ಕೂಗಾಡಿದ ಆದರೂ ನಮ್ಮ ಪಾರು ಬಿಡಲಿಲ್ಲ. ಜನ ಸೇರಿದ ಮೇಲೆ ಅವನಿಗೂ ಏನು ಮಾಡಲಾಗಲಿಲ್ಲ, ಎಲ್ಲರೂ ಸೇರಿ ಅವನಿಂದ ಕಾರನ್ನು ಹಾಳುಮಾಡಿದ ಹಣ ವಸೂಲಿ ಮಾಡಿ ಅಪಾಲಜಿ ಕೇಳಿಸಿಕೊಂಡು ಕಳುಹಿಸಿದರು. ಪಾರುವಿಗೆ ಧನ್ಯವಾದ ಹೇಳಿದರು.
ಪಾರು ಈಗ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ ಮುಗಿಸಿ ಬಿ.ಪಿ.ಎಡ್ ಸಹ ಮಾಡಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾಳೆ. ಮನೆಗೆ ಬಂದ ಪಾರುವಿಕೆ ಆ ದಿನವೆಲ್ಲಾ, ಏನೋ, ಮಹಾಸಾಧನೆ ಮಾಡಿದ ಖುಷಿ. ಪಾರುವಿಗೆ ಹಳೆಯ ಘಟನೆಯೊಂದು ನೆನಪಾಯಿತು.
ಪಾರು ಆಗಿನ್ನು ಚಿಕ್ಕವಳು. ಕಿಟಕಿಯ ಪಕ್ಕ ಮಲಗಿದ್ದಳು ಇದ್ದಕ್ಕಿದ್ದಂತೆ ಕಿಟಕಿಯ ಬಳಿ ಯಾರೋ ಸರಿದಾಡಿದಂತಾಯಿತು. ಹೊರಗೆ ಬಂದು ನೋಡಿದಳು ಒಂದು ನೆರಳಿನ ಆಕೃತಿ ಮಹಡಿಯ ಮೇಲೆ ಹೋದಂತಾಯಿತು. ತಾನು ಹಿಂಬಾಲಿಸಿದಳು ಅಲ್ಲಿ ಒಂದೆರಡು ಕೋಣೆಗಳಿವೆ. ವಿದ್ಯಾರ್ಥಿಗಳು ಆ ಕೋಣೆಯಲ್ಲಿ ವಾಸಿಸುತ್ತಾರೆ. ಆ ನೆರಳಿನಂತಹ ವ್ಯಕ್ತಿ ಆ ಕೋಣೆಗೆ ಹೋದ ಪಾರು ಹೊರಗಿನಿಂದ ಬಾಗಿಲು ಹಾಕಿ ಚಿಲಕ ಹಾಕಿದಳು. ಆ ಕೋಣೆಯಲ್ಲಿದ್ದ ವಿದ್ಯಾರ್ಥಿಗಳು ಬರುವವರೆಗೂ ಅಲ್ಲೇ ಕಾದಳು.
ಆ ಕೋಣೆಯಲ್ಲಿದ್ದ ವಿದ್ಯಾರ್ಥಿಗಳು ಊರಿನಲ್ಲಿ ಜಾತ್ರೆ ನಡೆಯುತ್ತಿದ್ದರಿಂದ ಜಾತ್ರೆಗೆ ಹೋಗಿದ್ದರು. ಬೆಳಗಿನ ಜಾವ ಬಂದು ನೋಡಿದರು.ಪಾರು ಕಳ್ಳನನ್ನು ಕೂಡಿಹಾಕಿದ್ದಾಳೆ.ಸರಿ ಕೇಳಬೇಕೆ, ಬಿಸಿರಕ್ತದ ಹುಡುಗರು, ಕಳ್ಳನನ್ನು ಹಿಡಿದು ಕಟ್ಟಿ ಹಾಕಿದರು. ಚೆನ್ನಾಗಿ ಹೊಡೆದರು ಕ್ಷಣದಲ್ಲಿ ಹುಡುಗರ ದೊಡ್ಡ ಗುಂಪೇ ಸೇರಿತು. ಆ ಕಳ್ಳನನ್ನು ಮೆರವಣಿಗೆ ಮಾಡಿ ಕರೆದುಕೊಂಡು ಹೋದರು. ವೀಣಾ, ಪಾರು ಸಹ ಜೋರಾಗಿ ಕೂಗಿಕೊಂಡು ಅವರ ಹಿಂದೆ ಹೋದರು. ಮತ್ತೆ ಮಾವಿನ ತೋಪಿನಲ್ಲಿ ಕಟ್ಟಿಹಾಕಿ ಹೊಡೆದರು. ಆಗ ಪಾರು ಕಳ್ಳನ ಮುಖ ನೋಡಿದಳು.
ಶಕ್ತಿಹೀನವಾಗಿತ್ತು ಸೊರಗಿದ್ದ. ಮುಖ ಕೆಳಗೆ ಮಾಡಿ ಅಳುತ್ತಿದ್ದ. ಇವಳಿಗೇಕೋ ಅಯ್ಯೋ ಅನಿಸಿ ಅಲ್ಲಿಂದ ಮನೆಗೆ ಬಂದು ಬಿಟ್ಟಳು.
ಮನೆಯಲ್ಲಿ ಅವಳ ಚಿಕ್ಕಪ್ಪ” ಅಯ್ಯೋ ! ಪಾಪ, ಯಾರೋ ಹೊಸ ಕಳ್ಳ ಅನ್ಸುತ್ತೆ. ಹಸಿವು ತಾಳಲಾರದೆ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾನೆ ಊಟ ತಿಂದು ಮಲಗಿದ್ದಾನೆ. ಆ ವಿದ್ಯಾರ್ಥಿಗಳ ಕೈಗೆ ಸಿಕ್ಕಿ ಹಣ್ಣುಗಾಯಿ ,ನೀರುಗಾಯಿ ಆದ ಪಾಪ, ಪೊಲೀಸರಿಗೆ ಬೇರೆ ಒಪ್ಪಿಸಿದ್ದಾರೆ. ಪೊಲೀಸರೇ ಪಾಪ ಎಂದು ಬಿಟ್ಟು ಬಿಟ್ಟರಂತೆ. ಎಂದಾಗ ,ಅಷ್ಟೊತ್ತು ಸಾಹಸಿ ಯಂತೆ ಮೆರೆದ ಪಾರು, ಸೂಜಿ ಚುಚ್ಚಿದ ಬೆಲೂನಿನಂತಾದಳು . ಅವಳ ಕಣ್ಣ ಮುಂದೆ ಕಳ್ಳನ ಮುಖ ತೇಲಿಬಂತು ಅಯ್ಯೋ ಪಾಪ !.
ದಿವ್ಯಾ.ಎಲ್. ಎನ್. ಸ್ವಾಮಿ
1 Comment
Tumbha sogasagi mudi bandidey mam.