ಪಾರು ನಮ್ಮ ಕಥಾನಾಯಕಿ ಅವಳ ಕಥೆಗಳು ‘ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ’ ಇದ್ದಂತೆ ಕನಸಿನ ಕಟ್ಟುಕಥೆಗಳ ರಾಣಿ. ಅವಳು ಹೇಳುವ ಕಥೆಗಳು ಸತ್ಯಕ್ಕೆ ದೂರವಾಗಿದ್ದರು ಮನಸ್ಸಿಗೆ ಸ್ವಲ್ಪ ಮುದ ಕೊಡುವುದಂತೂ ಸತ್ಯ. ಅವಳು ಕಥೆ ಹೇಳುವ ಪರಿಯೇ ಹೊಸದು ಸ್ವಲ್ಪವೂ ಅಂಜಿಕೆಯಿಲ್ಲದೆ ಅನಿಸಿದ್ದನ್ನು ನಿರಾಳವಾಗಿ ಹೇಳಿಬಿಡುತ್ತಾಳೆ ಹೀಗೆ ಅವಳು ಹೇಳಿದ ಹತ್ತು ಕಥೆಗಳು ಸರಣಿ ಇಲ್ಲಿವೆ…
ಕಥೆ-1
–ಅವಳಿ- ಜವಳಿ–
ಪಾರು ಆಗ ಇನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ತುಂಬಾ ಮಾತುಗಾತಿ ಓದುವುದಕ್ಕಿಂತ ಮಾತಿನಲ್ಲೇ ಹೆಚ್ಚು ಸಮಯ ಕಳೆಯಬಲ್ಲಳು. ಅವತ್ತು ಆಚೆ ಧೋ ಧೋ ಎಂದು ಮಳೆ ಸುರಿಯುತ್ತಿದೆ. ಸಾಯಂಕಾಲದ ಸಮಯ ಅವಳಿಗೆ ಆಚೆ ಹೋಗಿ ನೆನೆಯ ಬೇಕೆನಿಸಿದರೂ ಯಾಕೋ ಹೋಗಲಿಲ್ಲ, ಕಿಟಕಿ ಬಳಿ ಹೋಗಿ ನಿಂತಳು ಮಳೆ ಜೋರಾಗಿದ್ದರಿಂದ ಯಾರು ರಸ್ತೆಯಲ್ಲಿಲ್ಲ, ಖಾಲಿ ರಸ್ತೆ. ಅಮ್ಮ ಕೇಳದೆ ಬೊಂಡ ಮಾಡುತ್ತಿದ್ದಾಳೆ ಘಂ ಎಂಬ ಪರಿಮಳ ಅಡಿಗೆ ಮನೆಯಿಂದ ಒಂದು ಕಡೆ ಮಳೆಯಲ್ಲಿ ನೆನೆಯಬೇಕೆಂದು ಆಸೆ ಆದರೆ ಮತ್ತೊಂದು ಕಡೆ ಬೋಂಡದ ಸೆಳೆತ ಮಳೆಯಲ್ಲಿ ನೆನೆದರೆ ಬೋಂಡ ತಣ್ಣಗಾದರೆ…. ಎಂದು ಅಮ್ಮನ ಕರೆಗೆ ಕಾಯುತ್ತಿದ್ದಾಳೆ. ನೋಟ ಮಾತ್ರ ಕಿಟಕಿಯಲ್ಲೇ ಇತ್ತು.
ಕಿಟಕಿಗೆ ಎದುರಾಗಿ ಒಂದು ಚಿಕ್ಕ ಮನೆ ಆ ಮನೆಗೆ ಯಾರೋ ಹೊಸದಾಗಿ ಬಂದಿದ್ದಾರೆಂದು ಅಮ್ಮ ಹೇಳುತ್ತಿದ್ದಳು ಆದರೆ ಪಾರು ಗಮನಿಸಿರಲಿಲ್ಲ ಆ ಮನೆ ಬಾಗಿಲು ತೆರೆಯಿತು ಐದು ವರ್ಷದ ಎರಡು ಪುಟಾಣಿಗಳು ಅವಳಿ ಜವಳಿ ಇರಬೇಕು ಒಂದೇ ತರಇವೆ ನೋಡಲು ಮುದ್ದು ಮುದ್ದಾಗಿವೆ. ಒಂದು ಹುಡುಗಿ ಮತ್ತೊಂದು ಹುಡುಗ. ಇಬ್ಬರೂ, ಅಮ್ಮನ ಕೂಗಿಗೆ ಓ ಗೊಡದೆ ಆ ಜೋರು ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ರಸ್ತೆಗಿಳಿದಿವೆ. ಅಷ್ಟೊತ್ತು ತಡೆದು ನಿಂತಿದ್ದ ಪಾರು ರಸ್ತೆಗೆ ಇಳಿದಳು ಮಕ್ಕಳನ್ನು ಕರೆದಳು ಅವು ಇವಳ ಕರೆಗೆ ಓಗೊಡಲಿಲ್ಲ, ಮಳೆಯಲ್ಲಿ ಆಡತೊಡಗಿದರು. ಅವರ ಬಾಲಭಾಷೆ ಇವಳಿಗೆ ತುಂಬಾ ಇಷ್ಟ ಆಯ್ತು. ಅಂತೂ ಚಾಕಲೇಟಿನ ಆಸೆ ತೋರಿಸಿ ಕರೆದು ಮಾತಾಡಿಸಿದಳು. ಒಂದು ಆದಿತ್ಯ ಮತ್ತೊಂದು ಅದಿತಿ. ಎಷ್ಟು ಸುಂದರ ಹೆಸರು. ಎಷ್ಟು ಮುದ್ದಾದ ಮಕ್ಕಳು, ಅಂದಿನಿಂದ ಪಾರುವಿನ ಆಸೆ ಗರಿಕೆದರಿತು. ಮುಂದೆ ನನಗೂ ಅವಳಿ ಮಕ್ಕಳಾಗಬೇಕೆಂಬ ಆಸೆ ಪ್ರಾರಂಭವಾಯಿತು! ಅಷ್ಟಕ್ಕೆ ಸುಮ್ಮನಿರುವವಳಲ್ಲ ನಮ್ಮ ಪಾರು. ಅವಳ ಕನಸಿನ ಲೋಕದಲ್ಲಿ ಎರಡು ಅವಳಿ ಮಕ್ಕಳು ಅವಳಿಗೆ ಆಗೇ ಆಗುತ್ತವೆ. ಅವುಗಳನ್ನು ಹೇಗೆ ಸಾಕುವುದು ಎಂದೆಲ್ಲಾ ಲೆಕ್ಕಾಚಾರಗಳನ್ನು ಹಾಕತೊಡಗಿದಳು. ದಿನಕಳೆದಂತೆ ಮನಸ್ಸಿನ ಮಕ್ಕಳ ಜೊತೆ ಇವಳ ಸಂಭಾಷಣೆ ಕೂಡ ಪ್ರಾರಂಭವಾಯಿತು.
ಯಾರೀ? ಪಾರು…
ಕೋಲಾರ ಬಳಿಯ ಒಂದು ಸಣ್ಣ ಹಳ್ಳಿ ಪಾರುವಿನ ಜನ್ಮಸ್ಥಳ . ಒಣಹವೆ, ಸಣ್ಣ ಗುಡ್ಡಬೆಟ್ಟಗಳು, ಬೆಟ್ಟಗಳಲ್ಲಿ ಅಲ್ಲಲ್ಲಿ ಜಿನುಗುವ ನೀರಿನ ತೇವಾಂಶ, ಗಿಡ ಮರಗಳಿದ್ದರೂ ಬೇಸಿಗೆಯಲ್ಲಿ ಬೇಗೆ, ಒಣಗಿದಂತೆ ಕಾಣುವ ವಾತಾವರಣ. ಅಲ್ಲಲ್ಲಿ ಬಾವಿ ಇದ್ದರೂ ಆಳದಲ್ಲಿ ತಳದಲ್ಲಿ ನೀರು ಒಂದೊಂದು ಕಾಲಕ್ಕೂ ಬದಲಾಗುವ ವಾತಾವರಣವಿರುವ ಹಳ್ಳಿ ಅವಳದು. ಆದರೂ ಅವಳ ಹಳ್ಳಿಯ ಸುತ್ತ ಮಾವಿನ ತೋಟ ಬೇಸಿಗೆಯಲ್ಲಿ ಹಣ್ಣಿನಿಂದ ತುಂಬಿ ತುಳುಕುವ ಮರಗಳು. ಈ ವಾತಾವರಣದಲ್ಲಿ ಹುಟ್ಟಿದ ನಮ್ಮ ಪಾರು ಅಲ್ಲಿಯೇ ಅವಳ ಶೌರ್ಯ ಸಾಹಸ ತೋರುತ್ತಿದ್ದ ಹುಡುಗಿ. ಸಮಯ ಸಿಕ್ಕರೆ ಸಾಕು ಹುಡುಗರನ್ನು ಕಟ್ಟಿಕೊಂಡು ಕಲ್ಲಿನ ಬೆಟ್ಟಗಳನ್ನು ಹತ್ತುವುದು, ಗುಹೆಗಳಲ್ಲಿ ಅಡಗಿ ಕೂರುವುದು, ಗೋಲಿ ಆಡುವುದು, ಮಾವಿನ ಮರ ಹತ್ತಿ ಮಾವಿನ ಪೀಚುಗಳನ್ನು ಕಿತ್ತು ತೋಟದ ಮಾಲಿಯ ಕೈಗೆ ಸಿಕ್ಕಿ ಬೈಸಿಕೊಳ್ಳುವುದು… ಇವೆಲ್ಲಾ ಇವಳಿಗೆ ಮಾಮೂಲಿ.
ಅವಳ ಮನೆಯ ತುಂಬಾ ಜನ. ಕೂಡು ಕುಟುಂಬ ಅವಳದು. ತಂದೆ-ತಾಯಿ ಅತ್ತೆ, ಚಿಕ್ಕಪ್ಪ, ದೊಡ್ಡಪ್ಪ, ತಾತ, ಅಜ್ಜಿ ಎಲ್ಲರಿಗೂ, ಪಾರು ಎಂದರೆ ಇಷ್ಟ. ಅಷ್ಟೇ ಅಲ್ಲದೆ ಇವಳ ಕಟ್ಟು ಕತೆಗಳಿಗೆ ಕಿವಿ ಕೊಡಲು ಯಾರಾದರೊಬ್ಬರು ಹಾಜರು. ಹೀಗಿರುವಾಗಲೇ ಪಾರುವಿನ ಅಪ್ಪನಿಗೆ, ವಿದ್ಯುತ್ ಇಲಾಖೆಯಲ್ಲಿ ಲೈನ್ ಮನ್ ಕೆಲಸ ಸಿಕ್ಕಿದಾಗ, ಅವಳ ಅಪ್ಪ ಕಲೆಕ್ಟರ್ ಆದಂತೆ ಪಾರು ಸಂಭ್ರಮಿಸಿದ್ದಳು.
ನಮ್ಮ ಪಾರುವಿನ ಜನ್ಮ ನಾಮದೇಯ ಪಾರ್ವತಿ. ಹೀಗೆ ಕನಸಿನ ರಾಣಿಯಾದ ನಮ್ಮ ಪಾರುವಿಗೆ (ಮದುವೆ ಎಂದರೆ ಏನು ಎಂದು ಇನ್ನೂ ಅರಿವಿಗೆ ಬರುವ ಮುನ್ನವೇ) ಅವಳ ಮಾವನ (ಸೋದರತ್ತೆಯ ಮಗ) ಜೊತೆ ಮದುವೆಯಾಯಿತು. ವರ್ಷಕ್ಕೇ ಮಕ್ಕಳೂ ಆಯಿತು. ಕಾಕತಾಳಿಯವೆಂಬಂತೆ ಪಾರು ಕಂಡ ಕನಸು ನನಸಾಯಿತು. ಅವಳ ಕಲ್ಪನೆಯ ಕೂಸುಗಳು ನಿಜಕ್ಕು ಅವಳ ಮಡಿಲು ತುಂಬಿದವು. ಒಂದು ಗಂಡು, ಮತ್ತೊಂದು ಹೆಣ್ಣು, ಮುದ್ದಾದ ಅವಳಿ ಮಕ್ಕಳು ನಿಖಿತಾ, ನಿಖಿಲ್ ಎಂದು ಹಿರಿಯರ ಸಮ್ಮುಖದಲ್ಲಿ ನಾಮಕರಣ ಮಾಡಿದರು. ಮಕ್ಕಳನ್ನು ನೋಡುತ್ತಾ ನಮ್ಮ ಪಾರುವಿನ ಕನಸುಗಳಿಗೆ ಕೋಡು ಮೂಡಿತು.
ದಿವ್ಯಾ.ಎಲ್.ಎನ್.ಸ್ವಾಮಿ
ಚಿತ್ರ ಕೃಪೆ : ಎಸ್ ಇಳೆಯರಾಜ
2 Comments
ಚಂದದ ಕಥನ
Excellent wordings mam