“ಪುಸ್ತಕ ಮಾರಾಟವು ಒಂದು ಕಲೆ”
ಪುಸ್ತಕಗಳನ್ನ ಇಟ್ಟು ಮಾರಾಟ ಮಾಡಿದ್ದನ್ನ ನೋಡಿ ಎಲ್ಲರಿಗೂ ಖುಷಿಯಾಗಿರುತ್ತೆ. ಇದೇ ರೀತಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಭಿನ್ನ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕಬ್ಬನ್ ರೀಡ್ಸ್ ಎನ್ನುವ ಒಂದು ತಂಡದ ಬಗ್ಗೆ ನಾವೆಲ್ಲರು ಕೇಳಿದ್ದೇವೆ. ಅವರು ಪ್ರತಿ ವಾರಂತ್ಯದಲ್ಲಿ ಕಬ್ಬನ್ ಪಾರ್ಕಿನ ಆವರಣದಲ್ಲಿ ಒಂದಷ್ಟು ಜನ ಸಾಹಿತ್ಯಾಸಕ್ತರು ಸೇರಿಕೊಂಡು ಸಾಹಿತ್ಯ ಓದಿ, ಚರ್ಚೆ ಮಾಡುತ್ತಾರೆ. ಆ ತಂಡದಲ್ಲಿ ಇರುವ ಬಹುತೇಕರು ಇಂಗ್ಲಿಷ್ ಸಾಹಿತ್ಯ ಓದುತ್ತಾರೆ.
ಇದನ್ನು ಗಮನಿಸಿರುವ ಬಹಳಷ್ಟು ಜನ ಕನ್ನಡ ಓದಗರು ನಾವು ಹೀಗೆ ಸೇರಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡಿರುತ್ತಾರೆ. ನಮಗೂ ಕೂಡ ಅದು ಗಾಢವಾಗಿ ಕಾಡಿದ್ದು ಇದೆ. ಹಾಗಾಗಿ ತಡ ಮಾಡುವುದು ಯಾಕೆ? ಕನ್ನಡ ಓದುಗರನ್ನ ಒಂದೆಡೆ ಸೇರಿಸೋಣ ಅಂತ ನಿರ್ಧರಿಸಿ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೇಜ್ ಓಪನ್ ಮಾಡಿದೆವು. ಅಪರಿಚಿತ ಓದುಗರ ಬಗ್ಗೆ ಪೋಸ್ಟ್ ಕ್ರಿಯೇಟ್ ಮಾಡಿ ಎಲ್ಲರಿಗೂ ಹಂಚಿದೆವು. ಬಹಳಷ್ಟು ಜನರಿಗೆ ತಲುಪಿತು. ವಾಟ್ಸಪ್ ಗ್ರೂಪ್ ಮಾಡಿ ಒಂದಷ್ಟು ಜನರನ್ನು ಸೇರಿಸಿ ಎಲ್ಲರೂ ಭೇಟಿಯಾಗುವ ಯೋಜನೆಯನ್ನು ಕುರಿತು ಮಾಹಿತಿ ನೀಡಿದೆವು. ನಮ್ಮ ನಿರೀಕ್ಷೆಯ ಮಟ್ಟವನ್ನು ಮೀರಿ ಸಾಹಿತ್ಯಾಸಕ್ತರು ಸ್ಪಂದಿಸಿದರು. ಒಟ್ಟು 14 ಜನ ಸಾಹಿತ್ಯಾಸಕ್ತರು ಸೇರಿಕೊಂಡು ಓದು, ಪರಿಚಯ, ಮಾತು, ಹರಟೆ ಎಲ್ಲವೂ ಸಾಂಗವಾಗಿ ನೆರವೇರಿತು. ಜೀವನದಲ್ಲಿ ಸಾರ್ಥಕತೆಯ ದಿನಗಳು ಅಂತ ಏನಾದರೂ ಇದ್ದರೆ ಈ ಮೊನ್ನೆಯ ದಿನವನ್ನು ನಮ್ಮ ಬದುಕಿನ ಪುಟಕ್ಕೆ ತಪ್ಪದೆ ಸೇರಿಸಬೇಕಾಗುತ್ತದೆ.
ನಾಳೆಯ ಭೇಟಿಯ ಬಗ್ಗೆ ಗ್ರೂಪಿನಲ್ಲಿ ಮೆಸೇಜ್ ಹಾಕಿ ಮಲಗೋಣ ಎಂದು ಹೊರಟರೆ ನಿದ್ರೆಯೇ ಬರುತ್ತಿಲ್ಲ. ನನಗೆ ಯಾವಾಗಲೂ ಹೀಗೆ! ನಾಳೆ ಏನಾದರೂ ಒಂದು ಕಾರ್ಯಕ್ರಮ ಹಮ್ಮಿಕೊಂಡುಬಿಟ್ಟರೆ ಹಿಂದಿನ ದಿನ ರಾತ್ರಿ ನನ್ನ ಯೋಚನೆಗಳು ನನ್ನನ್ನು ನಿದ್ದೆಗೆ ದೂಡಲು ಬಿಡುವುದಿಲ್ಲ. ನಾಳೆಯ ಅಪರಿಚಿತ ಓದುಗರ ಭೇಟಿಯ ಜೊತೆಗೆ ಪುಸ್ತಕಗಳನ್ನು ಮಾರಾಟ ಮಾಡಿದರೆ ಹೇಗೆ ಎಂದು ಅನಂತ್ ಅವರಿಗೆ ಮೆಸೇಜ್ ಹಾಕಿದೆ.
ಅವರು ಮೊದಲಿಗೆ ಒಪ್ಪದಿದ್ದರೂ ನಂತರ ಟ್ರೈ ಮಾಡೋಣ ಎಂದರು. ಬೆಳಿಗ್ಗೆ ಬೇಗ ಎದ್ದು ಪುಸ್ತಕಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡು ಕಬ್ಬನ್ ಪಾರ್ಕ್ ಕಡೆಗೆ ಹೊರಟೆವು. ಪಾರ್ಕ್ ಆವರಣದ ತುಂಬಾ ಜನಜಂಗುಳಿ. ಸೆಂಟ್ರಲ್ ಲೈಬ್ರರಿ ಅಕ್ಕಪಕ್ಕ ಎಲ್ಲಾದರೂ ಪುಸ್ತಕಗಳನ್ನು ಇಡಲು ಯಾರಾದರೂ ಪರ್ಮಿಷನ್ ಕೊಟ್ಟಿದ್ದರೆ ಸಾಕಿತ್ತು. ಬಹಳಷ್ಟು ಪುಸ್ತಕಗಳನ್ನ ಮಾರಾಟ ಮಾಡುವಂತಹ ಆಸೆ ಕನಸುಗಳು ಚಿಗುರತೊಡಗಿದವು. ಆದರೆ ಅದು ಸಾರ್ವಜನಿಕ ಸ್ಥಳವಾದ್ದರಿಂದ ಪಾರ್ಕ್ ಒಳಗೆ ಹೊರಗಿನ ಯಾರೂ ಕೂಡ ಈ ರೀತಿಯ ಮಾರಾಟ ಮಾಡುವ ವಸ್ತುಗಳನ್ನ ಒಳಗೆ ತರುವ ಹಾಗಿರಲಿಲ್ಲ. ಹಾಗಾಗಿ ಕಬ್ಬನ್ ಪಾರ್ಕಿನ ನಾಲ್ಕು ದ್ವಾರಗಳನ್ನು ಚೆಕ್ ಮಾಡಿ, ಕೊನೆಗೆ ವಿಧಾನಸೌಧದ ಕಡೆಯಿಂದ ಕಬ್ಬನ್ ಪಾರ್ಕ್ ಆವರಣಕ್ಕೆ ಎಂಟ್ರಿ ಇರುವ ಗೇಟ್ ಆರಿಸಿಕೊಂಡು ಅಲ್ಲಿ ಪುಸ್ತಕಗಳನ್ನು ಇಟ್ಟೆವು. ನಾನು ಫುಸ್ತಕಗಳನ್ನು ಕಾಯುತ್ತ ಹೋರಗೆ ಕೂತಿದ್ದೆ. ಅನಂತ್ ಅವರು ಭೇಟಿಗಾಗಿ ಬರುವ ಅಪರಿಚಿತ ಓದುಗರನ್ನು ಕಾಯುತ್ತ ಒಳಗೆ ಕೂತಿದ್ದರು. 10 ಗಂಟೆಯಾಯಿತು ಒಬ್ಬರು ಕೂಡ ಸುಳಿದಿರಲಿಲ್ಲ. ಇವತ್ತು ಯಾರೂ ಬರುವುದಿಲ್ಲವೇನೋ ಎಂಬ ಚಿಂತೆ ಅವರನ್ನು ಮತ್ತು ಒಂದು ಪುಸ್ತಕವೂ ಸೇಲ್ ಆಗುವುದಿಲ್ಲವೇನೋ ಎಂಬ ಚಿಂತೆ ನನ್ನನ್ನು ಬಹಳ ಕಾಡಿದ್ದಿದೆ. ಅವರಿಗಿಲ್ಲದ ನಿರೀಕ್ಷೆ ನನಗಿತ್ತು. ಪುಸ್ತಕಗಳನ್ನ ಯಾರಾದರೂ ಕೊಂಡುಕೊಳ್ಳುತ್ತಾರೆ ಅಂತ. ಪುಸ್ತಕಗಳ ಮುಂದೆ ಹಸಿದ ಬೆಕ್ಕಿನಂತೆ ನಾನು ಓಡಾಡುವುದನ್ನು ಅನಂತ್ ಅವರು ದೂರದಿಂದಲೇ ಗಮನಿಸುತ್ತಿದ್ದರು. ನನಗೆ ಫೋನ್ ಮಾಡಿ “ಏನು ತಲೆ ಕೆಡಿಸ್ಕೋಬೇಡ, ಈಥರದ ದಿನಗಳನ್ನು ನಾನು ಬಹಳಷ್ಟು ನೋಡಿದ್ದೇನೆ. ನೀನು ಆರಾಮಾಗಿ ಕೂತ್ಕೋ.. ಇಂಟ್ರೆಸ್ಟ್ ಇರುವವರು ಪುಸ್ತಕವನ್ನು ಕೊಂಡುಕೊಳ್ಳುತ್ತಾರೆ, ಕೊಂಡುಕೊಳ್ಳದಿದ್ದರೂ ಚಿಂತೆ ಬೇಡ.. ಇದು ನಮ್ಮ ಮೊದಲ ಪ್ರಯತ್ನ ಅಲ್ಲ ಮತ್ತು ಕೊನೆಯ ಪ್ರಯತ್ನವೂ ಆಗಬಾರದು..” ಅಂತ ಹೇಳಿದರು. ನಾನು ಸಮಾಧಾನದಿಂದ ಇರುವಂತೆ ಕಂಡರೂ ನನ್ನೊಳಗಿನ ದುಗುಡ ನನಗೆ ಮಾತ್ರವೇ ಅರ್ಥವಾಗುತ್ತಿತ್ತು.
ಸಮಯ ಓಡುತ್ತಿತ್ತು. ನಮ್ಮಿಬ್ಬರಲ್ಲೂ ಚಿಂತೆ ಕಾಡುತ್ತಿತ್ತು. ಸಾಹಿತ್ಯಾಸಕ್ತರ ಭೇಟಿಗಾಗಿ ಒಬ್ಬರ ನಂತರ ಒಬ್ಬರಂತೆ ಒಟ್ಟು 13 ಜನ ಸಾಹಿತ್ಯಾಸಕ್ತರು ಸೇರಿಕೊಂಡೆವು. ನನಗೆ ಎಲ್ಲಿಲ್ಲದ ಖುಷಿ. ಅನಂತ್ ಅವರು ಎಲ್ಲರನ್ನು ಕೂತು ಓದಲು ಹೇಳಿ, ಫೋಟೋ ವೀಡಿಯೋ ಮಾಡುತ್ತ ಅತ್ತಿಂದಿತ್ತ ಅಡ್ಡಾಡತೊಡಗಿದರು. ಹೊರಗಡೆ ಗೆಳೆಯ ವಿಕ್ರಂ ತನ್ನ ಕುಟುಂಬದ ಜೊತೆ ಕಬ್ಬನ್ ಪಾರ್ಕ್ ಸುತ್ತಾಡಲು ಬಂದಿದ್ದ, ಅವರ ಪತ್ನಿಯು ಕೂಡ ನನಗೆ ಪರಿಚಯದವರೇ. ಪುಸ್ತಕಗಳನ್ನು ಇಟ್ಟಿರುವುದನ್ನು ನೋಡಿ ಆತ ಆಶ್ಚರ್ಯಗೊಂಡ.
ಯಾಕೆಂದರೆ ನಾವು ಕಬ್ಬನ್ ಪಾರ್ಕ್ ನಲ್ಲಿ ಪುಸ್ತಕ ಇಟ್ಟು ಮಾರುತ್ತೇವೆ ಎಂದು ಯಾರಿಗೂ ಮುಂಚಿತವಾಗಿ ಹೇಳಿರಲಿಲ್ಲ. ಎಲ್ಲಿಯೂ ಕೂಡ ಅದರ ಬಗ್ಗೆ ಪೋಸ್ಟ್ ಹಾಕಿರಲಿಲ್ಲ. ಆತ ಬಂದವನೇ ಅನಂತ್ ಅವು ಬರೆದ ಬದುಕು ಜಟಕಾಬಂಡಿ ಕಥಾಸಂಕಲನ ತೆಗೆದುಕೊಂಡ. ಅವರ ಪತ್ನಿ ನನ್ನ ಗೆಳೆಯ ಶಿವಾಗ್ ಪ್ರಕಟಿಸಿದ ಪಿಂಕಿವೇ ಪುಸ್ತಕ ಕೊಂಡುಕೊಂಡರು. ನಮ್ಮಯ ಕಾರ್ಯಕ್ಕೆ ಬೋಣಿ ಮಾಡಿ ಶುಭ ಕೋರಿದ ಗೆಳೆಯನನ್ನು ತಬ್ಬಿದೆ. ನಂತರ ಲೇಖಕಿ ಮತ್ತು ಕವಯಿತ್ರಿ ಮಂಜುಳಾ ಭಾರ್ಗವಿ ಅವರು ಬಂದರು. ಅವರಿಗೆ ಪಿಂಕಿವೇ ಪುಸ್ತಕವನ್ನು ಕೊಟ್ಟು, ಇದನ್ನು ನೀವು ಓದಲೇಬೇಕು ಅಂತ ಅನಂತ ಅವರು ಪಟ್ಟುಹಿಡಿದರು. ಭಾರ್ಗವಿಯವರು ಬೇಡವೆಂದರೂ ಹಣಕೊಟ್ಟು ಪುಸ್ತಕ ಸ್ವೀಕರಿಸಿದರು. ಕಬ್ಬನ್ ಪಾರ್ಕಿಗೆ ಬಂದುಹೋಗುವವರಲ್ಲಿ ಯಾರೂ ಕೂಡ ಪುಸ್ತಕ ಕೊಳ್ಳಲಿಲ್ಲ. ಸಾಹಿತ್ಯಾಸಕ್ತರ ಮುಖಾಮುಖಿಗೆ ಸಮಯವೂ ಆಗಿದ್ದರಿಂದ ಪುಸ್ತಕಗಳನ್ನು ಬ್ಯಾಗಿಗೆ ಹಾಕಿಕೊಂಡು ಹರಟೆಗೆ ಕೂತೆವು. ಸ್ವಲ್ಪ ಹೊತ್ತಿನ ಹರಟೆಯ ನಂತರ ಅಲ್ಲಿ ಸೇರಿದವರಿಗೆ ನನ್ನ ಪುಸ್ತಕಗಳಿವೆ ಯಾರಾದರೂ ನೋಡುವ ಇಚ್ಛೆ ಇದ್ದರೆ ಒಮ್ಮೆ ನೋಡಿ ಎಂದು ಅನಂತ್ ಅವರು ಮನವಿ ಮಾಡಿದರು. ಅಲ್ಲಿದ್ದವರು ಒಟ್ಟು 10 ಪ್ರತಿಗಳನ್ನು ಕೊಂಡುಕೊಂಡರು. ನನ್ನ ಮುಖದಲ್ಲಿನ ನಗುವನ್ನು ಅನಂತ್ ಅವರೂ, ಅವರ ಮುಖದ ಮೇಲಿನ ನಗುವನ್ನು ನಾನು ಪರಸ್ಪರ ಗಮನಿಸಿದೆವು. ಒಂದು ಸಾರ್ಥಕತೆಯ ಭಾವ ನಮ್ಮಿಬ್ಬರಲ್ಲೂ ಹಾದುಹೋಯಿತು. ಇದೊಂದು ಚೆಂದದ ಅನುಭವ. ಸಾಹಿತ್ಯಕ್ಕಾಗಿ ಇಂಥ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲರಾಗಿ ಸಂವೇದನಾಶೀಲರಾಗಿ ಇರುವುದು ಕೂಡ ಒಂದು ಕಾಯಿಲೆ ಅಂತ ನನಗೆ ಆಗ ಅನ್ನಿಸಿತು. ಅಂತಹ ಕಾಯಿಲೆಗಳಿಗೆ ನಾವು ಯಾವಾಗಲೂ ಒಡ್ಡಿಕೊಳ್ಳುತ್ತೇನೆ. ಈ ಹಾದಿಯಲ್ಲಿ ಸಿಕ್ಕು ಬೆನ್ನು ತಟ್ಟುವ, ಜೊತೆಗೆ ಬರುವ ಎಲ್ಲರಿಗೂ ಋಣಿಯಾಗಿರುತ್ತೇವೆ.
ಕೆಳಗಿನ ಇನ್ಸ್ಟಾಗ್ರಾಮ್ ಲಿಂಕ್ ಗೆ ಭೇಟಿ ನೀಡಿ ಉಚಿತ ಸಬ್ಸ್ಕ್ರೈಬ್ ಆಗಿ ನಮ್ಮನ್ನು ಬೆಂಬಲಿಸಿ ಓದುಗರೇ.
Instagram link : https://www.instagram.com/reel/CuOZRxIuKOo/?igshid=ZDU2YzJkNzEyMw==
ಚೇತನ್ ಗವಿಗೌಡ