ಹರಿವ ನೀರಿಗೆ ಎದುರು ಈಜದಿರು ಎಂದೆಂದು
ನೀರಿನೊಳಗಿಳಿಯದಿರು ಸುಳಿಗಳಿದ್ದಾವು,
ಬಿರುಗಾಳಿಯೊಡನೆ ಮಳೆ-ಗುಡುಗು-ಸಿಡಿಲುಗಳಿರಲು
ಹೊರ ಹೊರಡದಿರು ಜೋಕೆ- || ಪ್ರತ್ಯಗಾತ್ಮ ||
ಅಧಿಕಾರವಿದ್ದಾಗ ಅಧಿಕ ಗೌರವವುಂಟು,
ಅಧಿಕಾರವಿಲ್ಲದಿರೆ ಕಡೆಗಣಿಪರಯ್ಯ
ಅದಕಾಗಿ ಕೊರಗದೆಯೆ ತಾಳ್ಮೆ ವಹಿಸಲು ಬೇಕು
ಅದುವೆ ಲೋಕದ ರೂಢಿ- || ಪ್ರತ್ಯಗಾತ್ಮ ||
ಹಳೆಯ ಗೆಳೆಯರು ಇಲ್ಲ; ಒಂಟಿಯಾದೆನು ಎಂದು
ಕಳವಳಿಸಬೇಡಯ್ಯ ಹೇ ವಯೋವೃದ್ಧ !
ಹಳೆಯದೆಲ್ಲವು ಹೋಗಿ ಹೊಸತು ಬರಲೇ ಬೇಕು
ಇಳೆಯ ಧರ್ಮವೆ ಹಾಗೆ- || ಪ್ರತ್ಯಗಾತ್ಮ ||
ಕಳೆದುಕೊಂಡಿದ್ದ ಫೋರ್ಡ್ ಒಂದು ಪೆನ್ನಿ ಹಣವ
ಕಳವಳಿಸಿ ಕೊನೆಗದನು ಹುಡುಕಿ ಹೊರತೆಗೆದ
ಕಳೆದುದಲ್ಪವೊ ಹಿರಿದೊ ಬಾಳಿನೊಳಗೆಂದೆಂದು
ಸುಳಿಯಬಾರದುಪೇಕ್ಷೆ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’