ತನ್ನ ಮಗ ತನಗಿಂತ ಮೇಲೇರಲೆಂಬುದಕೆ
ತನ್ನ ಒಳಗಿನ ಸ್ವಾರ್ಥ ತಂದೆಗಿರಬಹುದು
ತನ್ನ ಶಿಷ್ಯರ ಏಳ್ಗೆ ಚಿಂತಿಸುವ ಗುರುವಿನಲಿ
ಇನ್ನಾವ ಸ್ವಾರ್ಥವಿದೆ?- || ಪ್ರತ್ಯಗಾತ್ಮ ||
ಕಲ್ಲು ಬಂಡೆಯ ಬಿಡಿಸಿ ಪಾಳಿಪನು ಕಲ್ಕುಟಿಕ
ಕಲ್ಲಿನಲಿ ಶಿಲ್ಪವನು ಬಿಡಿಸುವುದು ಶಿಲ್ಪಿ
ಕಲ್ಲು ಕುಟ್ಟುವುದಲ್ಲ; ಬಿಡಿಸುವುದು ಕಡುಕಷ್ಟ
ಎಲ್ಲ ಕೈ ಚಳಕವೋ!- || ಪ್ರತ್ಯಗಾತ್ಮ ||
ಸತಿ ಪತಿಯ ಎದುರಿನಲಿ, ಪತಿ ಸತಿಯ ಎದುರಿನಲಿ
ಅತಿ ಉಪಾಯದಿ ಗೆಲುವ ನಿರ್ಧಾರ ತಾಳಿ
ಗತಿ ಕಾಣದೆಯೆ ಸೋತು ಗೆಲುವ ಪಡೆವನು ಕಡೆಗೆ
ಅತಿ ವಿಚಿತ್ರದ ಗೆಲುವು- || ಪ್ರತ್ಯಗಾತ್ಮ ||
ಮೂಕ ಪಶುಗಳಿಗಿಂತ ನರನ ಶಕ್ತಿಯು ಕಿರಿದು.
ಸಾಗುವುದೆ ಇವನಾಟ ಪಶುಶಕ್ತಿ ಎದುರು?
ಮೂಕ ಪಶುಗಳ ದೈತ್ಯ ಶಕ್ತಿಯನು ನಿಗ್ರಹಿಸೆ
ಮೂಗುದಾರವೆ ಮದ್ದು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ – ನೇನಂಶಿ
ವಾಚನ: ಗೌರಿದತ್ತ
1 Comment
ತುಂಬಾ ಅರ್ಥಗರ್ಭಿತವಾಗಿ ಮೂಡಿಬಂದಿದೆ.