ಪ್ರತ್ಯಗಾತ್ಮ ಚಿಂತನ (ನೇನಂಶಿ) – 42

ಕತ್ತೆ ಬಾಲವ ಹಿಡಿದು ಜಗ್ಗಿದನು ಬಡ ಹುಡುಗ
ಕತ್ತೆ ಒದೆಯಿತು ಎತ್ತಿ ಎರಡು ಕಾಲ್ಗಳನು
ಸತ್ತೇನೆನ್ನುತ ಹುಡುಗ ಅರೆ ಜೀವವಾಗಿರಲು
ಹೆತ್ತವರ ಗತಿಯೇನು ?- || ಪ್ರತ್ಯಗಾತ್ಮ ||

ಶೌಚಗೃಹ ಸ್ನಾನಗೃಹ ಕೊಳಚೆ ಗುಂಡಿಗಳೆಂದು
ಪಾಶ್ಚಾತ್ಯರೆಮ್ಮನ್ನು ನಿಂದಿಸುವುದುಂಟು
ಸ್ವಚ್ಛತೆ ಸುಸಂಸ್ಕೃತಿಯ ಕುರುಹು ಎಂಬುದನರಿತು
ಸ್ವಚ್ಛತೆಗೆ ಗಮನ ಕೊಡು- || ಪ್ರತ್ಯಗಾತ್ಮ ||

ಪಾಶ್ಚಾತ್ಯ ರಾಷ್ಟ್ರಗಳ ಪ್ರಾಮಾಣಿಕತೆ, ವಿನಯ,
ಸ್ವಚ್ಛತೆಯು, ರಾಷ್ಟ್ರಾಭಿಮಾನ, ನಿಸ್ಪೃಹತೆ
ಕೊಂಚವಾದರೂ ಸರಿಯೆ ನಮ್ಮವರು ಅನುಕರಿಸೆ
ಮೆಚ್ಚುಗೆಯ ಗಳಿಸುವರು- || ಪ್ರತ್ಯಗಾತ್ಮ ||

ಅಪ್ಪಿಕೋ ಚಳುವಳಿಯು ನಾಡಿನೆಲ್ಲೆಡೆ ಹಬ್ಬಿ
ತಪ್ಪಿದರೆ ಕಾಡುಗಳ ಕಡಿವ ಹಾವಳಿಯು
ತಪ್ಪದೆಯೆ ಮಳೆ ಬಂದು ಬರ ಹಿಂಗೆ ನಾಡು ಸಂತೃ
ಪ್ತಿಯನು ಪಡೆಯುವುದು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *