ಪ್ರತಿಭೆಯುಳ್ಳೊಡೆ ಕೆಲವು ಉದ್ಗ್ರಂಥಗಳ ರಚಿಸು
ಜತನದಿ ನಿರಕ್ಷರಿಗೆ ಅಕ್ಷರವ ಕಲಿಸು
ಶತ ಸಂಖ್ಯೆಯಲಿ ಅರ್ಧವಾದರೂ ಮರ ಬೆಳೆಸು
ಕೃತ ಕೃತ್ಯನೀನಪ್ಪೆ- || ಪ್ರತ್ಯಗಾತ್ಮ ||
ದೀಪವಿಡಿದಿರುಳಿನಲಿ ನಡೆವ ಕುರುಡನ ಕಂಡು
‘ದೀಪವೇತಕೊ ಕುರುಡ?’ ಎನಲೊಬ್ಬ ಕುಹಕಿ,
‘ಅಪ್ಪ! ಇದು ಕಣ್ಣುಳ್ಳ ಕುರುಡರಿಗೆ’ ಎಂದೆನಲು
ತೆಪ್ಪಗಾದನು ಕುಹಕಿ- || ಪ್ರತ್ಯಗಾತ್ಮ ||
ಮಾರಕಾಸ್ತ್ರಗಳೆಲ್ಲ ಮಾರಿಗೌತಣವಲ್ತೆ ?
ಯಾರ ಸಂತೋಷಕ್ಕೆ ಇನಿತು ಕಗ್ಗೊಲೆಯು ?
ಮಾರುವೋಗಿಹರೇಕೆ ತರವಲ್ಲದೀ ಚಟಕೆ
ಮಾರಾರಿಯೇ ಬಲ್ಲ- || ಪ್ರತ್ಯಗಾತ್ಮ ||
ವಿಜ್ಞಾನಿ ಎಂಬುವನು ಮನುಜ ಕುಲಕುಪಕಾರಿ
ಅಜ್ಞಾನಿ ಏಕಾದ ಅಸ್ತ್ರಗಳ ಸೃಜಿಸಿ?
ಆಜ್ಞೆಗಾಗಿಯೆ ಕಾದು ಸಜ್ಜಾಗಿ ನಿಂತಿಹವು
ಆಗ್ನೇಯ ಅಸ್ತ್ರಗಳು !- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)