ಒಬ್ಬ ಹರೆಯದ ಹುಡುಗ ಹಾದಿ ಕಲ್ಲನು ಒದೆದು
ಉಬ್ಬಿ ಕುಣಿದಾಡಿದನು `ಕಲ್ಲೊಳಗೆ ರಕುತ !’
ಅಬ್ಬೆ ಮನೆಯಲಿ ಕೇಳೆ ಆಗ ಗಾಯದ ಅರಿವು !
ಅಬ್ಬ! ಪ್ರಾಯದ ಮದವೆ – || ಪ್ರತ್ಯಗಾತ್ಮ ||
ಮೀಸೆ ಮೊಲೆ ಬಂದವರು ದೇಶ ನೆಲ ಕಾಣರಲ !
ಆಸೆ ಮಹಲಲಿ ವಾಸ; ಹಗಲಿನಲಿ ಕನಸು !
ದೇಶವೆಲ್ಲವು ರಂಗುರಂಗಾಗಿ ಕಾಣುವುದು
ಲೇಸು ಬೆದೆಗಾಲವದು- || ಪ್ರತ್ಯಗಾತ್ಮ ||
ಜರೆಯುವರು ಗರ್ವದಲಿ ದೇವರನು ಕಲ್ಲೆಂದು
ಹಿರಿಯರನು ಮುದಿಗೊರಡು ಎಂದು ನೂಕುವರು
ಪರಿಪರಿಯ ಹಿತನುಡಿಗೆ ಎಳ್ಳಿನಿತು ಕಿವಿಗೊಡರು
ಹರೆಯದಲ್ಲದು ಸಹಜ_ || ಪ್ರತ್ಯಗಾತ್ಮ ||
ಸೋಲು ಕಾಣದ ಗಂಡು ಶತ ಒರಟನಾಗಿರಲಿ
ಬಾಳ ಗೆಳತಿಯು ಬರಲು ಸೋಲಿನಾರಂಭ
ಕಾಲ ಕಳೆದಂತೆಲ್ಲ ಜೀವ ಹಣ್ಣಾಗುವುದು
ಕಾಲವೆಲ್ಲರ ಗುರುವು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ
1 Comment
Pratyagatma jeevanaanubhavavannu chatushpadi padyaroopadalli moodi oodugarige daarideepavagide. Nenamshi
avarige nanna haardhika abhinandanegalu.