ನಾಯಿಯೊಂದಕೆ ದಿನವೂ ಅನ್ನ ಹಾಕುತಲಿದ್ದೆ
ತಾಯಿ-ಮರಿ ಜೊತೆಯಾಗಿ ತಿನ್ನುತ್ತಲಿತ್ತು
ತಾಯಿ ತಿನ್ನದೆ ಕಡೆಗೆ ಮರಿಗಾಗಿ ಬಿಡುತಿತ್ತು,
ನಾಯಿಯಾದರೂ ತಾಯಿ- || ಪ್ರತ್ಯಗಾತ್ಮ ||
ಗೊರಕೆ ಎಂಬುದು ಸುಖದ ನಿದ್ದೆ ಇರಬಹುದೇನೊ!
ಗೊರಕೆ ಹೊಡೆಯುವರಿಂದ ಇತರರಿಗೆ ಕಷ್ಟ
ಎರಡು ಸಲ ಎಬ್ಬಿಸುತ ಹೊರಳಿ ಮಲಗಲು ಹೇಳು
ಹರಿದೋಡುವುದು ಗೊರಕೆ- || ಪ್ರತ್ಯಗಾತ್ಮ ||
ಆಗಲೇ ಸುಲಿದಿರುವ ಅವರೆ ಕಾಳಿನ ಸೊಗಡು
ಮಗಮಗಿಪ ವಾಸನೆಯ ಸಪ್ಪೆಸರ ಸಾರು
ಆಗ ತೊಳಸಿದ ಬಿಸಿಯ ರಾಗಿಮುದ್ದೆಯದಿರಲು
ಆಗ ನೋಡದರ ರುಚಿ ! || ಪ್ರತ್ಯಗಾತ್ಮ ||
ಎಮ್ಮೆ ಮೊಸರಿನ ಜೊತೆಗೆ ಕೇಸಕ್ಕಿ ಅನ್ನವನು
ಘಮ್ಮೆನುವ ಹೇರಿಳೆಯ ಉಪ್ಪಿನಕಾಯಿ
ಸುಮ್ಮಾನದಲಿ ಕುಳಿತು ಉಣ್ಣುವವಕಾಶವನು
ಒಮ್ಮೆಯಾದರೂ ಪಡೆಯೊ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ