ಅಂತರಂಗ ತಂಡ ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬಂದು ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯಲ್ಲಿ ಮೂಡಿಸಿದೆ. ಈ 40 ವರ್ಷಗಳ ರಂಗಭೂಮಿಯ ಅನುಭವದಲ್ಲಿ 42 ರಂಗ ನಾಟಕಗಳು ಹಾಗೂ 8 ಬೀದಿ ನಾಟಕಗಳು ಮೂಡಿಬಂದಿದೆ. ಯಾವುದೇ ಸಮಯದಲ್ಲಿ ನಿಷ್ಕ್ರಿಯತೆಯತ್ತ ವಾಲದೆ ಇಷ್ಟು ದೀರ್ಘಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿರುವುದು ಒಂದು ಸಾಧನೆಯೇ ಸರಿ. ಈ ತಂಡದ ಪ್ರತಿಯೊಬ್ಬ ಸದಸ್ಯರ ಸಹಕಾರ, ಈ ಸಾಧನೆಗೆ ಕಾರಣ. ಅಂತರಂಗ ತಂಡದ ನಾಟಕಗಳು ಕರ್ನಾಟಕವಲ್ಲದೇ, ದೇಶಾದ್ಯಂತ ಪ್ರದರ್ಶನಗೊಂಡು ಪ್ರೇಕ್ಷಕರ ಮತ್ತು ಪತ್ರಿಕೆಗಳ ಪ್ರಶಂಸೆ ಗಳಿಸಿವೆ. ನಮ್ಮ ತಂಡಕ್ಕೆ ಸ್ನೇಹ ಮತ್ತು ಸಹಕಾರ ಮನೋಭಾವವಿದೆ. ಪ್ರತಿವರ್ಷ ಅಂತರಂಗ ತಂಡ ’ರಂಗಸಂಭ್ರಮ’ ವನ್ನು ಆಚರಿಸುತ್ತಾ ಬಂದಿದೆ. ಖ್ಯಾತ ತಂಡಗಳು ಹಾಗೂ ಹೊಸ ತಂಡಗಳನ್ನು ಆಹ್ವಾನಿಸಿ, ನಮ್ಮ ತಂಡದ ಜೊತೆಯಲ್ಲಿ ರಂಗೋತ್ಸವವನ್ನು ದೊಡ್ಡಮಟ್ಟದಲ್ಲಿ ಏರ್ಪಡಿಸಿ ಸ್ನೇಹ ಸೌಹಾರ್ದತೆಯನ್ನು ಮೆರೆದಿದೆ. ಪ್ರತಿ ವರ್ಷ ಪ್ರಸಾಧನ ಕಲಾವಿದರಿಗೆ ಮೇಕಪ್ ನಾಣಿ ಪ್ರಶಸ್ತಿ ನೀಡುತ್ತಿದೆ. ಅಂತರಂಗ ತಂಡದಲ್ಲಿರುವ ಯುವ ಸದಸ್ಯರನ್ನು ಉತ್ತೇಜಿಸಿ, ನಾಟಕಗಳನ್ನು ನಿರ್ದೇಶಿಸುವುದಕ್ಕೆ ಸ್ಪೂರ್ತಿ ನೀಡಿದೆ.
ಅಂತರಂಗ ತನ್ನ ಹೊಚ್ಚ ಹೊಸ ನಾಟಕ – ಪ್ರಾಜೆಕ್ಟ್ ನಗ್ನ ವನ್ನು ಪ್ರದರ್ಶಿಸಲು ಸಜ್ಜಾಗಿದೆ. ಈ ನಾಟಕ ರಾಮ್ ಗಣೇಶ್ ಕಮತಮ್ ರವರು ಬರೆದಿರುವ ಮೂಲ ಇಂಗ್ಲೀಷ್ ನಾಟಕ – ಪ್ರಾಜೆಕ್ಟ್ ಸ್ಟ್ರಿಪ್ ನ ಕನ್ನಡ ಅವತರಣಿಕೆ. ಕನ್ನಡಕ್ಕೆ ಅನುವಾದ ಮಾಡಿಕೊಟ್ಟವರು ಖ್ಯಾತ ನಾಟಕಕಾರ, ನಟ, ನಿರ್ದೇಶಕ ಬಿ. ಸುರೇಶ ರವರು. ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಅರ್ಚನಾ ಶ್ಯಾಮ್ ರವರದ್ದು.
ಇದೇ ಮಾರ್ಚ್ 9 ,ಮಂಗಳವಾರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ನಾಟಕ ಬೆಂಗಳೂರು’ ನಾಟಕೋತ್ಸವದ ಅಂಗವಾಗಿ ಅಂತರಂಗ ತಂಡದಿಂದ ಪ್ರದರ್ಶನಗೊಳ್ಳಲು ಸಜ್ಜಾಗಿರುವ ‘ಪ್ರಾಜೆಕ್ಟ್ ನಗ್ನ’ ನಾಟಕಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ.
ನಾಟಕದ ಸಾರಾಂಶ
ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡೂ ಪರಸ್ಪರ ಎದುರಾಗಿ ಉಂಟು ಮಾಡುವ ತಲ್ಲಣ ಮತ್ತು ಉಂಟಾಗುವ ಸಮಸ್ಯೆಗಳು ಹೊಸದಲ್ಲ. ಯಾವುದೇ ಸಮಾಜವೂ ಎದುರಿಸಲೇಬೇಕಾದ ಬಿಕ್ಕಟ್ಟು ಇದು. ಅದರಿಂದಲೇ ಈ ವಿಷಯ ಸಾಮಾಜಿಕ,ಆರ್ಥಿಕ, ನೈತಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದಿದೆ. ಹಾಗೆಯೇ ಪ್ರತಿಭಾವಂತ ಲೇಖಕರು,ನಾಟಕಕಾರರು, ಕವಿಗಳು ಹಾಗೂ ಬುದ್ಧಿಜೀವಿಗಳನ್ನು ಸೆಳೆಯುತ್ತಲೇ ಇದೆ. ರಾಂ ಗಣೇಶ್ ಕಮತಮ್ ರವರ ‘ಪ್ರಾಜೆಕ್ಟ್ ಸ್ಟ್ರಿಪ್’ ಇಂಗ್ಲಿಷ್ ನಾಟಕ ಅಸಮತೋಲ ಅಭಿವೃದ್ಧಿ ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾದ ಮುಗ್ಧ ಅಸಹಾಯಕ ಜನ ಸಮುದಾಯದ ನಡುವಿನ ಸಂದಿಗ್ಧ ಸಂಕೀರ್ಣ ಸನ್ನಿವೇಶಗಳ ಸೂಕ್ಷ್ಮ ರೂಪಕವನ್ನು ಅತಿ ರಂಜಕತೆಯಿಲ್ಲದೆ ತೆಳು ಹಾಸ್ಯಲೇಪನದಿಂದ ನೋಡುಗರ ಮುಂದಿಟ್ಟಿದ್ದಾರೆ.
ಬಿ. ಸುರೇಶ್ ಅವರ ಬಿಗಿಯಾದ ಸಮರ್ಥ ಅನುವಾದವನ್ನು ಪ್ರತಿಭಾವಂತ ಯುವ ನಿರ್ದೇಶಕಿ ಅರ್ಚನಾ ಶ್ಯಾಂ ರಂಗ ವಿನ್ಯಾಸವನ್ನೂ ಮಾಡಿ ಪರಿಣಾಮಕಾರಿಯಾಗಿ ರಂಗದ ಮೇಲೆ ತಂದಿದ್ದಾರೆ. ಕಲಾವಿದರ ದಕ್ಷ ಅಭಿನಯ ಪ್ರಯೋಗದ ಸ್ವಾರಸ್ಯವನ್ನು ಹೆಚ್ಚಿಸಿದೆ.
ಪ್ರತಿಭಾನ್ವಿತ ಯುವ ನಿರ್ದೇಶಕಿ “ಅರ್ಚನಾ ಶ್ಯಾಮ್” ಅವರು ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಅಂತರಂಗ ತಂಡದ ಆಧಾರ ಸ್ಥಂಭದಂತಿರುವ “ಅಂಕಲ್ ಶ್ಯಾಮ್” ಅವರ ಪುತ್ರಿ ಎನ್ನುವುದು ಹೆಮ್ಮೆಯ ಸಂಗತಿ.
ನಿರ್ದೇಶಕಿಯಾಗಿ ಅರ್ಚನಾ ಶ್ಯಾಮ್ ಪ್ರಾಜೆಕ್ಟ್ ನಗ್ನ ನಾಟಕವನ್ನೇ ಏಕೆ ತೆಗೆದುಕೊಂಡರು ಮತ್ತು ಅವರ ನಿರ್ದೇಶನದ ಅನುಭವ ಹೇಗಿತ್ತು? ಉತ್ತರ ಅವರ ಮಾತಿನಲ್ಲೇ ಹೇಳಬೇಕೆಂದರೆ
“ಮೊಟ್ಟಮೊದಲಿಗೆ ಈ ನಾಟಕದ ಮೂಲ ಆಂಗ್ಲ ನಾಟಕವನ್ನು ಓದಿದಾಗ ಮನಸ್ಸಿಗೆ ಒಂದು ಪ್ರಶ್ನೆ ಘಾಡವಾಗಿ ಕಾಡಿತು – ಈ ನಾಟಕ ವಸ್ತುವಿನ ನಾಯಕ ಹಾಗೂ ಖಳನಾಯಕರಾರು? ಮತ್ತೆ ಮತ್ತೆ ಈ ನಾಟಕವನ್ನು ಓದಿದಾಗ ನನಗೆ ಅನಿಸಿದ್ದು ಇದರಲ್ಲಿ ನಾಯಕ ಹಾಗೂ ಖಳನಾಯಕರೆಂಬುದೇ ಇಲ್ಲ! ಸಾಮಾನ್ಯವಾಗಿ ನಾಟಕಗಳಲ್ಲಿ ಕಥಾ ನಾಯಕ ಹಾಗೂ ಖಳನಾಯಕರುಗಳ ಪಾತ್ರಗಳು ನೋಡಸಿಗುತ್ತದೆ. ಆದರೆ ಇದರಲ್ಲಿ ನಿಜವಾದ ಕಥಾ ನಾಯಕರು ಬುಡಕಟ್ಟು ಜನಗಳು. ಒಂದು ಚಿಕ್ಕ ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ದೊಡ್ಡ ದೊಡ್ಡ ಬಂಡವಾಳಶಾಹಿ ಕಂಪನಿಗಳ ದರ್ಪ, ದುರಾಸೆಗಳ ತುಳಿತಕ್ಕೆ ಒಳಗಾಗುತ್ತಾರೆ ಆದರೆ ಆ ಮೂಲ ಖಳನಾಯಕರು ಇಲ್ಲಿ ರಂಗದ ಮೇಲೆ ಬರುವುದೇ ಇಲ್ಲ ಬದಲಿಗೆ ಅಲ್ಲಿ ಬರುವುದು ಕೇವಲ ಅವರು ಬಿಸಾಕುವ ದುಡ್ಡಿನ ಆಸೆಗೆ ಅವರ ಕೈಕೆಳಗೆ ಕೆಲಸ ಮಾಡುವ ಕೈಗೊಂಬೆಗಳು ಮಾತ್ರ. ಈ ನಾಟಕವು ನೋಡುಗರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಿಕಾಸ ಎಂದರೇನು, ಪ್ರಗತಿ ಎಂದರೇನು? ಒಂದು ಕಡೆ ಬಂಡವಾಳಶಾಹಿ ಕಂಪನಿಗಳು ಪ್ರಗತಿ, ವಿಕಾಸ ಮಾಡುತ್ತೇವೆ ಎಂಬ ಸುಳ್ಳುಗಳನ್ನು ಹೇಳಿಕೊಂಡು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಗೆಡವುತ್ತಾರೆ ಇವರದ್ದು ನಿಜವಾದ ವಿಕಸನವೋ ಅಥವಾ ಇನ್ನೊಂದೆಡೆ ಬುಡಕಟ್ಟು ಜನರು ಅಲ್ಲಿಯೇ ಸಿಗುವ ಮೀನು, ಕಪ್ಪೆಗಳನ್ನು ತಮ್ಮ ಆಹಾರವನ್ನಾಗಿ ಮಾಡಿಕೊಂಡು, ಅಲ್ಲಿ ಸಿಗುವ ಗಿಡ ಮರಗಳಿಂದ ಔಷಧಗಳನ್ನು ಕಂಡುಕೊಂಡು, ಕಾಡು, ಬೆಟ್ಟ, ಗುಡ್ಡಗಳನ್ನು ತಮ್ಮ ವಾಸಸ್ಥಾನಗಳನ್ನಾಗಿಸಿಕೊಂಡು ನಿಸರ್ಗದ ಜತೆ ಬೆರೆತು ಜೀವನ ಮಾಡುವವರು ನಿಜವಾದ ವಿಕಸನ ಹಾಗೂ ಪ್ರಗತಿ ಹೊಂದಿದವರೋ? ಇವರಿಬ್ಬರ ನಡುವೆ ಅಲ್ಲಿರುವ ಚಿಕ್ಕ ಪುಟ್ಟ ಮೀನುಗಾರರನ್ನು ಭಯೊತ್ಪಾದಕರಾಗಿ ಪರಿವರ್ತಿಸುವ ಹಿಂದಿನ ಕೈಗಳು ಯಾರು? ದ್ವೀಪದಲ್ಲಿ ಶಾಂತಿ, ನೆಮ್ಮದಿಯನ್ನು ಕದಡುವ ಇಂತಹಾ ವಿಕೃತ ಶಕ್ತಿಗಳು ಯಾವುವು? ಹೀಗೆ ಇಂತಹಾ ಪ್ರಶ್ನೆಗಳು ನನಗೆ ಈ ನಾಟಕವನ್ನು ಕನ್ನಡಕ್ಕೆ ತಂದು ನಿರ್ದೇಶಿಸಿ ಪ್ರಯೋಗ ಮಾಡಿಸಲು ಪ್ರೇರೇಪಿಸಿತು”.
ಈ ಮೂಲ ನಾಟಕವನ್ನು ಅನೇಕ ಬಾರಿ ಓದಿದ ನಂತರ, ವಿಶ್ಲೇಷಣೆ ಯನ್ನು ಮಾಡಿದ ಮೇಲೆ ನಾನು ಬಿ.ಸುರೇಶ ಸರ್ ರವರನ್ನು ಈ ನಾಟಕವನ್ನು ಭಾಷಾಂತರ ಮಾಡಿಕೊಡಲು ಕೇಳಿಕೊಂಡೆ ಅವರು ಖುಷಿಯಿಂದ ಒಪ್ಪಿಕೊಂಡು ಅಧ್ಬುತವಾಗಿ ತರ್ಜುಮೆ ಮಾಡಿಕೊಟ್ಟರು.
“ಈ ನಾಟಕವನ್ನು ವಿನ್ಯಾಸ ಮಾಡುವ ಹಂತ ಬಂದಾಗ ಜನರಿಗೆ ಈ ನಾಟಕವನ್ನು ಸರಾಗವಾಗಿ ಅರ್ಥೈಸಿಕೊಳ್ಳಲು ಸಹಾಯವಾಗುವಂತೆ ಮಾಡಬೇಕೆಂದುಕೊಂಡಾಗ ನನ್ನ ಮನಸ್ಸಿಗೆ ಹೊಳೆದಿದ್ದು ಎಲ್ಲರಿಗೂ ಅರ್ಥವಾಗುವ ಹಾಗೆ ಬಣ್ಣಗಳ ಉಪಯೋಗ ಮಾಡುವುದು. ಕಂಪನಿಯ ಮ್ಯಾನೇಜ್ಮೆಂಟ್ ಅನ್ನು ನಿಯಾನ್ ಬಣ್ಣದಿಂದ ಸೂಚಿಸುವುದು ಏಕೆಂದರೆ ಬಹುರಾಷ್ಟ್ರೀಯ ಕಂಪನಿಗಳು ತುಂಬಾ ಕೃತಕವಾಗಿ ವರ್ತಿಸುತ್ತವೆ ತಮ್ಮ ಆಫೀಸ್ ಗಳಲ್ಲಿ ಕೃತಕ ಹುಲ್ಲು ಹಾಸು ಹಾಕುವುದು, ಕೃತಕ ಗಿಡಗಳನ್ನು ಇಡುವುದು, ಇತ್ಯಾದಿ ಹಾಗಾಗಿ ನಿಯಾನ್ ಬಣ್ಣದಿಂದ ಅವರನ್ನು ಸೂಚಿಸಿದೆ. ಹಾಗೆಯೇ ದ್ವೀಪದ ಜನರನ್ನು ಹಾಗೂ ಅವರ ಜೀವನವನ್ನು ಸೂಚಿಸಲು ಕಂದು ಬಣ್ಣ ವನ್ನು ಉಪಯೋಗಿಸಿದೆ ಅಂದರೆ ಅವರು ಭೂಮಿಗೆ, ನಿಸರ್ಗಕ್ಕೆ ಹತ್ತಿರದವರು ಎಂಬುದನ್ನು ಅದು ಸೂಚಿಸುತ್ತದೆ. ಇಲ್ಲಿ ಗೋಂದಾ ಕಲಾ ಪ್ರಾಕಾರವನ್ನು ಉಪಯೋಗಿಸಿದ್ದೇವೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರದ ಮೇಲೂ ತುಂಬಾ ಸಂಶೋಧನೆ ಮಾಡಿ, ಪ್ರತೀ ಪಾತ್ರವನ್ನೂ ಒಂದೊಂದು ಬಣ್ಣದಿಂದ ಸಂಕೇತಿಸಿದ್ದೇವೆ. ಅಲ್ಲದೇ ನಾಟಕದ ಕಡೆಯ ಹಂತದಲ್ಲಿ ಇಡೀ ದ್ವೀಪ ಹೇಗೆ ನಾಶವಾಗಿದೆ ಎಂದು ತೋರಿಸುವುದು ನನ್ನ ಉದ್ದೇಶ. ಶಶಿಧರ್ ಅಡಪ ಸರ್ ನನ್ನ ಎಲ್ಲಾ ಬೇಕು ಬೇಡಗಳನ್ನು ಅತ್ಯಂತ ಕರಾರುವಕ್ಕಾಗಿ ಅರ್ಥೈಸಿಕೊಂಡು ತಮ್ಮ ತಂಡದವರಿಂದ ನಾಟಕದ ರಂಗಸಜ್ಜಿಕೆಗೆ ಬೇಕಾದ ಎಲ್ಲಾ ಪರಿಕರಗಳನ್ನು ತಯಾರಿಸಿಕೊಟ್ಟಿದ್ದಾರೆ”.
ಮೊದಮೊದಲು ಇದರ ವಿನ್ಯಾಸ ಮಾಡಲು ತುಂಬಾ ಕ್ಲಿಷ್ಟ ಎನ್ನಿಸಿತ್ತು. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಯ ವಾತಾವರಣ ಇನ್ನೊಂದೆಡೆ ಚಿಕ್ಕ ದ್ವೀಪ, ಬುಡಕಟ್ಟು ಜನ ಹಾಗೂ ಅಲ್ಲಿಯ ವಾತಾವರಣ ಎರಡನ್ನೂ ರಂಗದ ಮೇಲೆ ತರಬೇಕು ಅದು ದೊಡ್ಡ ಸವಾಲಾಗಿತ್ತು. ಈ ಎರಡು ವಿರುದ್ಧ ವಾತಾವರಣಗಳನ್ನು ರಂಗದ ಮೇಲೆ ತಂದು, ದೃಶ್ಯ ಬದಲಾದಂತೆ ಅವೂ ಬದಲಾಗಬೇಕು ಹಾಗಾಗಿ ಇದರ ಬಗ್ಗೆ ತುಂಬಾ ಸಮಯ, ಕಸರತ್ತು, ಶ್ರಮ ಹಾಕಿ ಸುಲಭವಾಗಿ ದೃಶ್ಯಗಳು ಬದಲಾಗುವ ಹಾಗೆ ವಿನ್ಯಾಸ ಮಾಡಿದೆ.
ಇದೆಲ್ಲದಕ್ಕಿಂತ ಅತ್ಯಂತ ಕ್ಲಿಷ್ಟಕರವಾದ ಸವಾಲು ಜನರಿಗೆ ಅರ್ಥವಾಗಿವ ಹಾಗೆ ಈ ನಾಟಕವನ್ನು ತಲುಪಿಸುವುದಾಗಿತ್ತು. ಈ ನಾಟಕದಲ್ಲಿ ಅಮೂರ್ತ ಹಾಗೂ ವಿಡಂಬನೆ ಎರಡೂ ಅಂಶಗಳು ಇವೆ. ನಾಟಕದ ವಸ್ತು ಅರ್ಥವಾಗಲು ಸಭಿಕರು ಸ್ವಲ್ಪ ಆಸಕ್ತಿ, ಏಕಾಗ್ರತೆಯಿಂದ ನಾಟಕ ನೋಡಬೇಕಾಗುವುದರಿಂದ, ಅದನ್ನು ಸರಳೀಕರಿಸುವತ್ತ ಶ್ರಮ ಹಾಕಿದ್ದೇನೆ. ನಾಟಕಕಾರ ಹಾಗೂ ನಟರ ಜತೆ ಅನೇಕ ಚರ್ಚೆಗಳನ್ನು ಮಾಡಿ, ಅವರೆಲ್ಲರ ಅನುಭವ ಹಾಗೂ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿಯೊಂದು ಅಂಶಗಳನ್ನೂ ಅಳೆದು, ತೂಗಿ ಒಂದು ಹದಕ್ಕೆ ತಂದಿದ್ದೇನೆ. ನನ್ನ ನಟವರ್ಗ ತುಂಬಾ ಕಷ್ಟಪಟ್ಟು. ಇಷ್ಟಪಟ್ಟು ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಅನೇಕ ತಿಂಗಳುಗಳ ಪೂರ್ವಾಭ್ಯಾಸಗಳ ನಂತರ ಈ ನಾಟಕ ಒಂದು ಗುಣಮಟ್ಟ ತಲುಪಿದೆ. ಬೆಳಕು ವಿನ್ಯಾಸ ಹಾಗೂ ಸಂಗೀತ ಸಂಯೋಜನೆ ನಾಟಕಕ್ಕೆ ಒಳ್ಳೆಯ ಮೆರುಗು ತಂದಿದೆ.
ಈ ನಾಟಕ ನಾನು ಇಲ್ಲಿಯ ತನಕ ನಿರ್ದೇಶಿಸಿರುವ ಎಲ್ಲಾ ನಾಟಕಗಳಿಗಿಂತ ವಿಭಿನ್ನವಾಗಿದೆ,. ಎಲ್ಲಾಅ ನಾಟಕಗಳಿಗಿಂತ ಹೆಚ್ಚು ಶ್ರಮ ತೆಗೆದುಕೊಂಡಿದೆ. ಪ್ರತಿಯೊಂದು ದೃಶ್ಯದ ಮೂಲ ಉದ್ದೇಶ, ಅಲ್ಲಿ ಬರುವ ಪಾತ್ರದ ಉದ್ದೇಶ, ಆ ದೃಶ್ಯದಿಂದ ಆ ಪಾತ್ರ ಗಳಿಸುವುದೇನು, ಕಳೆದುಕೊಳ್ಳುವುದೇನು, ಹಾಗೂ ಪಾತ್ರಗಳು ತಮ್ಮ ಉದ್ದೇಶ ಈಡೇರಿಕೆಗೆ ಉಪಯೋಗಿಸುವ ತಂತ್ರಗಳೇನು ಎಂಬುವ ಚಿಕ್ಕ ಚಿಕ್ಕ ವಿವರಗಳನ್ನೂ ಆಳವಾಗಿ ಅಧ್ಯಯನ ಮಾಡಿ ಆ ದೃಶ್ಯಗಳನ್ನು ಕಟ್ಟಿದ್ದೇನೆ. ನಾಟಕದ ಸಾಮಾನ್ಯವಾಗಿ ಉಪಯೋಗಿಸುವ ತಂತ್ರಗಳನ್ನು ಮೀರಿ ಹೊಸದೊಂದು ಅಂಶವನ್ನು ಕಟ್ಟಿಕೊಡುವ ಪ್ರಯತ್ನ ಮಾದಿದ್ದೇನೆ. ಈ ಪ್ರಯತ್ನಗಳು ಸಫಲವಾಗಬೇಕಾದರೆ ಈ ನಾಟಕ ಸಾಮಾನ್ಯ ಜನರನ್ನು ತಲುಪಬೇಕು. ನಮ್ಮ ನಾಳಿನ (ಭಾನುವಾರದ) ರಂಗಶಂಕರದಲ್ಲಿ ಏರ್ಪಡಿಸಿರುವ ಮಧ್ಯಹ್ನ ೩:೩೦ರ ಪ್ರದರ್ಶನಕ್ಕೆ ಹೆಚ್ಚು ಹೆಚ್ಚು ಜನರು ಬಂದು ನಾಟಕ ನೋಡಿ ಅದರ ಬಗ್ಗೆ ಪ್ರತಿಕ್ರಿಯೆಗಳನ್ನು ಕೊಟ್ಟರೆ ಅರದಿಂದ ನಮ್ಮ ನಾಟಕವನ್ನು ಇನ್ನೂ ಒಪ್ಪ ಗೊಳಿಸಲು ಹಾಗೂ ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪಲು ಅನುಕೂಲವಾಗುತ್ತದೆ.
ಈ ನಾಟಕವು ಜನರನ್ನು ಆಕರ್ಷಿಸಿ ರಂಗಭೂಮಿಯಲ್ಲಿ ಒಳ್ಳೆ ಹೆಸರು ಗಳಿಸಲೆಂದು ಸಾಹಿತ್ಯಮೈತ್ರಿ ತಂಡದಿಂದ ಹಾರೈಸುತ್ತೇವೆ.
ಸಾಹಿತ್ಯಮೈತ್ರಿ ತಂಡ