ಪ್ರೀತಿಯ ತೇಜಸ್ವಿ
ಸೆಪ್ಟೆಂಬರ್ 8 ನಮ್ಮೆಲ್ಲರ ಪ್ರೀತಿಯ ‘ಪೂಚಂತೇ’ ಅಂದರೆ ನಮ್ಮ ‘ಪೂರ್ಣ ಚಂದ್ರ ತೇಜಸ್ವಿ’ ಅವರ ಜನ್ಮದಿನ. ಅವರ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಹೆಸರು ನಿತ್ಯ ಸ್ಮರಣೆ. ಇನ್ನು ಅವರ ಬರಹಗಳು ನಿತ್ಯ ನೂತನ.
ಪ್ರತಿಯೊಬ್ಬರಿಗೂ ಅರ್ಥವಾಗುವ ಆಡು ಭಾಷೆಯಲ್ಲಿ ಅನೇಕ ವೈವಿಧ್ಯಮಯ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟವರು, ಪರಿಸರದ ಪರಿಚಯ ಮಾಡಿಕೊಟ್ಟವರು, ಪ್ರಕೃತಿಯ ಒಳಹೊಕ್ಕು ಅದರ ಭಾವನೆಗಳಿಗೆ ಸ್ಪಂದಿಸಿ, ಅಷ್ಟೊಂದು ಪ್ರೀತಿಸಿದವರು ಬಹುಶಃ ಇನ್ನೊಬ್ಬರು ಇರಲಾರರು. ಬದುಕಿದ್ದಾಗ ಅವರು ಎಂದೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲವಂತೆ ಆದರೆ ಅವರಿಲ್ಲದ ಈ ಸಮಯದಲ್ಲಿ, ಅನೇಕ ಕಾವ್ಯಾಸಕ್ತರು, ಕನ್ನಡಿಗರು ಪ್ರತಿವರ್ಷವೂ ಅವರ ಹುಟ್ಟುಹಬ್ಬದ ದಿನದಂದು ಪ್ರೀತಿ ಇಂದ ಅವರನ್ನು ನೆನಪಿಸಿಕೊಳ್ಳುವರು. ಅವರನ್ನು ಆರಾಧಿಸುವವರಿಗಂತೂ, ಅವರ ಒಂದೊಂದು ಪುಸ್ತಕ ಓದುವಾಗಲೂ ಹಬ್ಬವೇ ಸರಿ.
ತೇಜಸ್ವಿ ಅವರು ಹುಟ್ಟಿದ್ದು,1938 ರ ಸೆಪ್ಟೆಂಬರ್ 8 ರಂದು, ಶಿವಮೊಗ್ಗ ಜಿಲ್ಲೆಯ,ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ. ‘ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ‘ ಕುವೆಂಪು, ಹಾಗೂ ಹೇಮಾವತಿ ಅವರ ಮೊದಲನೇ ಮಗನಾಗಿ. ಆಗ ಕುವೆಂಪುರವರು ಸಹಜವಾಗಿಯೇ ಅಪಾರ ಸಂತಸ ವ್ಯಕ್ತ ಪಡಿಸಿ, ಪತ್ನಿ ಹೇಮಾವತಿ ಗರ್ಭಿಣಿಯಾಗಿದ್ದಾಗಲೇ “ಗರ್ಭಗುಡಿ” ಎಂಬ ಕವಿತೆ ಬರೆದಿದ್ದರಂತೆ. ಅದೇ ಕವಿತೆಯ ಕೊನೆಯ ಸಾಲಿನಲ್ಲಿ
‘ಪೂರ್ಣಾಂಗಿ ತೇಜಸ್ವಿ ಪೂರ್ಣ ಚಂದ್ರ ಶರೀರೆ,, ಶಿವಾಕೃತಿ ಕಲಾರಂಗಮೆನಗೆ,,ನೀನ್ ಓ ನೀರೇ”
ಎಂದು ತಮ್ಮ ಮಡದಿಯನ್ನು ಅರ್ಧಾಂಗಿ,,ಅಲ್ಲ “ಪೂರ್ಣಾಂಗಿ” ಎಂದು ಕರೆದಿದ್ದರಂತೆ. ಅಂದೇ ಕುವೆಂಪು ಅವರ ಮನದಲ್ಲಿ ಗಂಡು ಮಗುವಾದರೆ, ಅವರ ಹೆಸರು, ಪೂರ್ಣ ಚಂದ್ರ ತೇಜಸ್ವಿ ಎಂದು ನಿರ್ಧರಿತವಾಗಿತ್ತು ಎನಿಸುತ್ತದೆ. ಮತ್ತೊಂದು ಕವಿತೆಯಲ್ಲಿ,,,,
‘ಕಳುಹಿಸು ಯೋಗ್ಯನನು ಓ ಗುರುವೇ
ಕಳುಹಿಸು ಭಾಗ್ಯನನು
ಕಳುಹು ಕಲಾ ಭಕ್ತನನು,,
ಕಾವ್ಯಾಸಕ್ತನನು, ಕಳುಹು ಕನ್ನಡ ಸೇವಾ
ಶಕ್ತನನು,,, ಎಂದು ಪ್ರಾರ್ಥಿಸಿದ್ದರಂತೆ
ಅಂದು ಆ ಮಹಾಕವಿಯ ಆಸೆ ಈಡೇರಿಸಿದ ದೇವರು ಕರುಣಿಸಿದ್ದು, ತನ್ನ ತಂದೆಯ ಮೌಲ್ಯಗಳನ್ನು ಮತ್ತಷ್ಟು ಎತ್ತರಕ್ಕೆ ತಂದ ಪೂರ್ಣವಷ್ಟೇ ಅಲ್ಲದೆ, ಪರಿಪೂರ್ಣರಾದ ತೇಜಸ್ವಿಯವರನ್ನು.
ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ ತೇಜಸ್ವಿ ಅವರಿಗೆ ಶಾಲೆಯೆಂದರೆ ಅಸಡ್ಡೆ ಇತ್ತಂತೆ. ಅದರಲ್ಲೂ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ, ಅಲ್ಲಿಂದ ಪರಾರಿಯಾಗಿದ್ದು, ಅವರ “ಅಣ್ಣನ ನೆನಪು” ನಲ್ಲಿ ಸ್ವಾರಸ್ಯಕರವಾಗಿ ಹಾಸ್ಯ ಬೆರೆಸಿ ಉಲ್ಲೇಖಿಸಿದ್ದಾರೆ. ಮೊದಮೊದಲು ಅವರನ್ನು ಶಾಲೆಗೆ ಕಳುಹಿಸಲು ಕುವೆಂಪು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ಪಾಠ ಹೇಳಲು ಮನೆಯಲ್ಲಿಯೇ ನಂಜುಂಡಯ್ಯ,, ಎಂಬ ಮೇಷ್ಟರನ್ನು ನೇಮಿಸಿದ್ದರಂತೆ. ಆನಂತರ ಅವರ ಮನೆಯ ಪಕ್ಕದಲ್ಲೇ ಇದ್ದ ಶಿಶುವಿಹಾರದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಅಲ್ಲೇ ಅವರ ನೆಚ್ಚಿನ ಕಡಿದಾಳ್ ಶಾಮಣ್ಣ, ಕೋಣಂದೂರು ಲಿಂಗಪ್ಪರಂತಹ ಗೆಳೆಯರು ಸಿಕ್ಕಿದ್ದು. ಇವರಿಬ್ಬರ ಅಪರೂಪದ ಗಾಢ ಸ್ನೇಹ ಅವರ ಪ್ರತೀ ಬರವಣಿಗೆಯಲ್ಲೂ ಕಾಣಸಿಗುವುದು.
ಮುಂದೆ ಮೈಸೂರಿನಲ್ಲಿ, ಬಿ ಎ ಓದುವಾಗ ಬೆಂಗಳೂರು ಮೂಲದ ರಾಜೇಶ್ವರಿಯವರ ಪರಿಚಯವಾಗುವುದು. ತೇಜಸ್ವಿಯವರು ಕನ್ನಡದಲ್ಲಿ ಎಂ ಎ ಪದವಿ ಪಡೆದರೆ, ರಾಜೇಶ್ವರಿಯವರು ತತ್ವಶಾಸ್ತ್ರದಲ್ಲಿ ಎಂ ಎ ಪದವಿ ಪಡೆದವರು. ಇಬ್ಬರ ಪರಿಚಯ ಸ್ನೇಹವಾಗಿ, ಪ್ರೀತಿಯಾಗಿ, ಕೊನೆಗೆ ಮದುವೆಯಾಗುವುದೆಂದು ನಿರ್ಧಾರ ಮಾಡುತ್ತಾರೆ. ಕುವೆಂಪು ಅವರ ಆಸೆಯಂತೆ, ತೇಜಸ್ವಿಯೂ ಸೇರಿದಂತೆ ಅವರ ನಾಲಕ್ಕು ಮಕ್ಕಳೂ, ಮಂತ್ರ ಮಾಂಗಲ್ಯ ಮಾಡಿಕೊಂಡು ಸರಳ ವಿವಾಹವನ್ನು ಸಾಕಾರಗೊಳಿಸಿದರು. ಈ ಮೂಲಕ ಜನಜಾಗೃತಿ ಮೂಡಿಸಿದರು.
ಆರಂಭದಲ್ಲಿ ತೇಜಸ್ವಿಯವರಿಗೆ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಂತೆ ಬಹು ಕಷ್ಟವಿತ್ತಂತೆ, ನಂತರ ಶ್ರಮ ಪಟ್ಟು, ಕಲಿತು ಎಷ್ಟೋ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಸೈ ಎನಿಸಿಕೊಂಡಿದ್ದು ಮಾತ್ರ ನಮ್ಮೆಲ್ಲರಿಗೂ ಸ್ಫೂರ್ತಿಯೇ. ಅದರಲ್ಲಿ ಜಿಮ್ ಕಾರ್ಬೆಟ್ ಬರೆದ “Man eating leopard of Rudraprayag” ರುದ್ರ ಪ್ರಯಾಗದ ಭಯಾನಕ ನರಭಕ್ಷಕ, ” Henri charriere” ಅವರ “ಪ್ಯಾಪಿಲಾನ್” ಎಂಬ ಮಹತ್ತರ ಕೃತಿಗಳನ್ನು ಕನ್ನಡಕ್ಕೆ ತಂದರು. ಅವು ಬಹಳ ಪ್ರಸಿದ್ಧವಾಯಿತು.
ಬಾಲ್ಯದಲ್ಲೇ ಕ್ಯಾಮೆರಾ ಬಗ್ಗೆ ಗೀಳು ಅಂಟಿಸಿಕೊಂಡಿದ್ದ ತೇಜಸ್ವಿಗೆ, ಕ್ಯಾಮೆರಾ ಕೊಳ್ಳಲು ತಂದೆಯ ನಿರಾಕರಣೆ ಅಡ್ಡವಾಯಿತು. ಹೇಗಾದರೂ ಕ್ಯಾಮೆರಾ ಕೊಳ್ಳಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದಾಗ, ಒಮ್ಮೆ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನದ ಹಣದಿಂದ ‘ಕೋಡಾಕ್ ಕ್ಯಾಮೆರಾ’ ಖರೀದಿಸಿದ್ದರು. ಅಲ್ಲಿಂದ ಕ್ಯಾಮೆರಾ ಒಡನಾಟ ಶುರುವಾಗಿದ್ದು, ಪರಿಸರದ ಚಿತ್ರ ಸೆರೆ ಹಿಡಿಯುವುದಲ್ಲದೆ, ಜೊತೆ ಜೊತೆಗೆ ಅಲ್ಲಿನ ಒಡನಾಟದ ಅನುಭವವನ್ನು ಪುಸ್ತಕದ ರೂಪದಲ್ಲಿ ಹೊರತಂದರು. ಪ್ರಕೃತಿಯಲ್ಲಿನ ಸಣ್ಣ ಸಣ್ಣ ಜೀವಿಯೂ ಸೇರಿದಂತೆ ಅನೇಕ ಸೌಂದರ್ಯವನ್ನು ಆಸ್ವಾದಿಸುತ್ತಾ, ಜೇಡ, ಚಿಟ್ಟೆ,ಮಿಂಚು ಹುಳು, ಮಿಡತೆ, ಪ್ರಾಣಿಗಳು ಅದರಲ್ಲೂ ಹೆಚ್ಚಿನದಾಗಿ ತರತರದ ಪಕ್ಷಿಗಳನ್ನು ಸೆರೆ ಹಿಡಿದರು. ನೆಚ್ಚಿನ ಹವ್ಯಾಸವಾದ ಛಾಯಾಗ್ರಹಣದ ಅಪರೂಪದ ಹಲವು ಚಿತ್ರಣಗಳನ್ನು ಅವರ ಎಲ್ಲಾ ಪುಸ್ತಕದಲ್ಲಿಯೂ ಕಾಣಬಹುದು.
ಮೊದಮೊದಲು ಅವರು ಬರೆದ ಸಣ್ಣ ಸಣ್ಣ ಕಥೆಗಳನ್ನು ಓದಿದ ಹಲವರು ಇದು ಅವರು ಬರೆದದ್ದಲ್ಲ. ಅವರ ತಂದೆ ಕೈಲಿ ಬರೆಸಿದ್ದು, ಎಂದು ಅವಮಾನದ ಮಾತುಗಳು ಆಡಿದ್ದರಂತೆ. ಅದನ್ನೇ ಛಲವಾಗಿ ತೆಗೆದುಕೊಂಡಿದ್ದರು. ಮುಂದೆ ಅವರ ಲೇಖನಿಯಲ್ಲಿ ಮೂಡಿ ಬಂದ ಕೃತಿಗಳು ಇತಿಹಾಸ ಸೃಷ್ಟಿಸಿದವು. ಅವರ ಅಬಚೂರಿನ ಪೋಸ್ಟಾಫೀಸು (1973) ತಬರನ ಕಥೆ(1987) ಕುಬಿ ಮತ್ತು ಇಯಾಲ(1992) ಸಿನಿಮಾ ಆಗಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ‘ಕಿರಗೂರಿನ ಗಯ್ಯಾಳಿಗಳು’ ಸಹ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಿಸಿದ್ದಲ್ಲದೆ, ಹಿಂದಿ,ಇಂಗ್ಲಿಷ್, ಮಲಯಾಳಂ, ಕೊಡವ ಭಾಷೆಗೆ ಅನುವಾದಗೊಂಡಿತ್ತು. ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಗುರುತಿಸಿ 2001ರಲ್ಲಿ ಪ್ರತಿಷ್ಠಿತ “ಪಂಪ” ಪ್ರಶಸ್ತಿ ನೀಡಿ ಗೌರವಿಸಿತು. ಅವರ “ಡೇರ್ ಡೆವಿಲ್ ಮುಸ್ತಫಾ” ಕಥೆಯು 2022 ರಲ್ಲಿ ತೆರೆಗೆ ಬಂದು ಬಹಳಷ್ಟು ಈಗಿನ ಪೀಳಿಗೆಯ ನವಯುವಕರನ್ನು ಆಕರ್ಷಸಿತು.
ಅವರ “ಕರ್ವಾಲೋ” (1980) ಕಾದಂಬರಿ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ಅದೊಂದೇ ಪುಸ್ತಕವು 50 ಸಲ ಮರು ಮುದ್ರಣವಾಗಿತ್ತು. ಅಲ್ಲದೆ ತಮಿಳು, ಮರಾಠಿ, ಮಲಯಾಳಂ, ಜಪಾನಿ ಹಾಗೂ ಜರ್ಮನ್ ಭಾಷೆಗೂ ಅನುವಾದಗೊಂಡಿತ್ತು. ಹಾರುವ ಓತಿಯನ್ನೇ ಕಥಾ ನಾಯಕನನ್ನಾಗಿಸಿದ್ದರು. ಓದುಗರಿಗೆ ಕ್ಷಣ ಕ್ಷಣವೂ ರೋಚಕತೆ, ಕುತೂಹಲ ಉಳಿಸುವಲ್ಲಿ ಯಶಸ್ವಿಯಾದರು. ಹಾಗೆಯೇ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಸ್ವರೂಪ, ನಿಗೂಢ ಮನುಷ್ಯರು, ಪರಿಸರದ ಕಥೆ, ಸುಸ್ಮಿತಾ, ಕಾಡು ಮತ್ತು ಕ್ರೌರ್ಯ, ಹೀಗೆ ಹಲವಾರು ಪ್ರಕಾರಗಳಲ್ಲಿ ಕಥೆ, ಕಾದಂಬರಿ ಬರೆದರೂ ಎಲ್ಲ ಕಥೆಗಳಲ್ಲೂ ಅವರ ಮೊದಲನೇ ಆದ್ಯತೆ ಮಾತ್ರ ಸುತ್ತಮುತ್ತಲ ಕಾಡುಮೇಡಿನ ನಿಗೂಢ ಪರಿಸರಕ್ಕೆ,, ನಾಡಿಗಿಂತ ಕಾಡೇ ಇಷ್ಟವಾಗಿತ್ತು ಅವರಿಗೆ. ಅಷ್ಟರ ಮಟ್ಟಿಗೆ ಪ್ರಕೃತಿ ಜೊತೆ ಬೆರೆತು ಹೋಗಿದ್ದ ಜೀವ ಅವರದ್ದು.
‘ಅಣ್ಣನ ನೆನಪು’ ಮಾತ್ರ ಈಗಲೂ ಬಹಳಷ್ಟು ಜನಕ್ಕೆ ಅತ್ಯಂತ ಪ್ರಿಯವಾದದ್ದು. ಅಲ್ಲಿ ಅವರ ತಂದೆಯವರ ವ್ಯಕ್ತಿತ್ವ ಪರಿಚಯಿಸುತ್ತಲೇ,, ಸ್ವಯಂ ಅವರ ವ್ಯಕ್ತಿತ್ವ ಕೂಡ ಅನಾವರಣಗೊಂಡಿತ್ತು. ಪ್ರತಿಭೆ ಜೊತೆಗೇ ವಿನಮ್ರತೆ ಕೂಡ ತಂದೆಯವರಿಂದ ಬಳುವಳಿಯಾಗಿ ಬಂದಿತ್ತು. ಕನ್ನಡಿಗರು ತಮ್ಮ ಕೃತಿಗೂ ತಮಗೂ ಯೋಗ್ಯತೆ ಮೀರಿದ ಮನ್ನಣೆ ಕೊಡುತ್ತಿದ್ದಾರೆಂದು ಪದೇ ಪದೇ ಹೇಳುತ್ತಿದ್ದರಂತೆ. ಇದು ಅವರ ಸೌಜನ್ಯಕ್ಕೆ ಮತ್ತೊಂದು ಹೆಸರು. ತಂದೆಯಂತೆ ಬಸವಣ್ಣನ ತತ್ವಗಳನ್ನು ಬಹಳವಾಗಿ ಅನುಸರಿಸುತ್ತಿದ್ದರಿಂದ ಜಾತಿ ಪದ್ಧತಿ ವಿರುದ್ಧ ದನಿಯನ್ನ ಕೂಡ ಎತ್ತಿದ್ದರು.
ಪ್ರಶಸ್ತಿಗಳನ್ನು ಸದಾ ನಯವಾಗಿ ತಿರಸ್ಕರಿಸುತ್ತಲೇ ಬಂದರು. ಅವರಿಗೆ ಅದರಲ್ಲೆಲ್ಲ ನಂಬಿಕೆ ಇರಲಿಲ್ಲ. ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ,,ಕೇವಲ ಆತ್ಮ ತೃಪ್ತಿಗಾಗಿ ಮಾಡಿದ ಅಪರೂಪದ ವ್ಯಕ್ತಿತ್ವ. ಇನ್ನು ಕೆಲವು ಸಂದರ್ಶನಗಳಿಗೆ ಕರೆದರೆ, ಮಾರು ದೂರ ಹೋಗುತ್ತಿದ್ದರಂತೆ. ಅವರನ್ನು ಒಪ್ಪಿಸುವುದು ಬಹಳ ಕಷ್ಟವಿತ್ತು,,, ಒಂದೊಮ್ಮೆ ಒಪ್ಪಿದರೂ ನನಗೆ ಲಿಪ್ಸ್ ಟಿಕ್ ಬೇಡ, ಮೇಕ್ ಅಪ್ ಬೇಡ ಅಂತ ಮಗುವಿನಂತೆ ಹಟ ಮಾಡುತ್ತಿದ್ದರಂತೆ. ಯಾವುದೇ ಮುಖವಾಡವಿಲ್ಲದ ತೇಜಸ್ವಿ,, ಅರ್ಥ ಮಾಡಿಕೊಂಡಷ್ಟೂ ಆಳವಾದ ಮನೋಭಾವ ಹೊಂದಿದ್ದವರು.
ಅವರ ಕೊನೆಯ ಕಾದಂಬರಿ “ಮಾಯಾಲೋಕ” 2006 ರಲ್ಲಿ ಪ್ರಕಟವಾಯಿತು. ಅದಕ್ಕೆ ಮತ್ತಷ್ಟು ಪುಟಗಳನ್ನು ಸೇರಿಸುವ ಇರಾದೆ ಇತ್ತಂತೆ ಅವರಿಗೆ. ಆದರೆ ಅದು ಸಾಧ್ಯವಾಗಲೇ ಇಲ್ಲ. 2007 ಏಪ್ರಿಲ್ 5 ರ ಮಧ್ಯಾಹ್ನ ತಮ್ಮ ಮೂಡಿಗೆರೆಯ ನಿವಾಸ ನಿರುತ್ತರದಲ್ಲಿ ಹೃದಯಾಘಾತಕ್ಕೆ ಒಳಗಾದರು. ಅಂದು ಅಕ್ಷರಶಃ ಇದ್ದಕ್ಕಿದ್ದ ಹಾಗೆ ಮೌನಕ್ಕೆ ಜಾರಿ, ನಮ್ಮೆಲ್ಲರ ಅಗಲಿ ನಿರುತ್ತರವೇ ಆದರು. ಸಾಹಿತ್ಯ ಲೋಕ ಅಂದು ಒಮ್ಮೆಗೇ ಸ್ತಬ್ಧಗೊಂಡಿತ್ತು. ಅವರನ್ನು ಆರಾಧಿಸುವವರಿಗೆ ಆಘಾತವಾಗಿತ್ತು.
ಇಷ್ಟಕ್ಕೂ ತೇಜಸ್ವಿ ಬರಹಗಾರ, ಛಾಯಾಗ್ರಾಹಕ ಅಷ್ಟೇ ಆಗಿರಲಿಲ್ಲ. ಅವರು ಬಹುಮುಖ ಪ್ರತಿಭೆ ಆಗಿದ್ದರು. ಸದಾ ಸಾಮಾಜಿಕ ಕಳಕಳಿ ಇದ್ದಂಥ ವ್ಯಕ್ತಿ. ಚಿತ್ರಕಾರ, ಪರಿಸರ ವಿಜ್ಞಾನಿ, ಜೀವನೋತ್ಸಾಹಿ, ಅವರ ಚಿಂತನೆಗಳೇ ವಿಶೇಷವಾಗಿದ್ದವು. ಜೊತೆಗೆ ಅವರ ಬದುಕಿಗೂ ಬರಹಕ್ಕೂ ವ್ಯತ್ಯಾಸವಿರಲಿಲ್ಲ. ಅಂಧಾನುಕರಣೆಗೆ ಯಾವಾಗಲೂ ವಿರುದ್ಧವಾಗಿಯೇ ಇದ್ದವರು. ದೇವರನ್ನು ಅಷ್ಟಾಗಿ ನಂಬದವರು ತೇಜಸ್ವಿ ಇಡೀ ಜೀವ ಸಂಕುಲಕ್ಕಾಗಿ ಮಿಡಿಯುತ್ತಿದ್ದರು. ಸೂಕ್ಷ್ಮ ಗ್ರಹಿಕೆ ಉಳ್ಳವರಾಗಿದ್ದರು. ಎಂದೂ ಒಂದೇ ವಿಷಯಕ್ಕೆ ಅಂಟಿಕೊಂಡವರಲ್ಲ,,ಸದಾ ಹೊಸತನ್ನು ಹುಡುಕುವ ಹಂಬಲವಿತ್ತು. ಅದಕ್ಕೇ ಇಂದಿನ ಯುವಕ, ಯುವತಿಯರೂ ಅವರನ್ನು ಅನುಸರಿಸುತ್ತಿರುವುದು. ಹಾಗೇ ಮುಂದೆಯೂ ಸಹ ಅವರ ಬರಹಗಳು, ಚಿಂತನೆಗಳು ಹಲವಾರು ವರ್ಷ ಕಳೆದರೂ ತಾಜಾ ಆಗಿಯೇ ಇರುವುದು. ಆ ಮೂಲಕ ತೇಜಸ್ವಿ ಪೂರ್ಣ ಚಂದ್ರನಂತೆ ಬೆಳಗುವರು.
ಶೈಲಾ
ಬೆಂಗಳೂರು