ಬಂಡಿ

ಹೀಗೆ ಹೋಗುತ್ತಿತ್ತು
ಅಪ್ಪ ಕೊಳ್ಳು ಕಟ್ಟಿದ ಬಂಡಿ

ಮನೆಯಲ್ಲಿಯೇ ಹುಟ್ಟಿದ
ಅಳಿಯ ಮಾವ
ಕೆಂದ,ಮಾಸ ಹೋರಿ
ಮೂರನೇ ತಲೆಮಾರಿಗೆ ಸಾಕ್ಷಿಯಾಗಿ
ಸಂತಸದಲ್ಲಿದ್ದವು

ಅಪ್ಪ ಒಡೆಯರ ಕಾಲದಲಿಲ್ಲದಿದ್ದರು
ಒಡೆಯರಂತಿದ್ದು
ಒಕ್ಕಲುತನದಲ್ಲಿ ಜೋಡೆತ್ತಿನ ಬಂಡಿಯೇ
ಅಪ್ಪನ ಅಂಬಾರಿ

ಅಂಬಾರಿ ಹೊರುವ
ಕರ್ಣ ಅರ್ಜುನನಂತಿದ್ದ ಹೋರಿಗಳು
ದಸರಾ ಆನೆಯನ್ನು ಮೀರಿಸುತ್ತಿದ್ದವು
ಗಳೇ ಹೊಡೆದು ದಣಿದು
ಹೊಲದ ಓಣಿಯಲ್ಲಿ
ಗಿಲ್ ಗಿಲ್ ಸದ್ದು ಮಾಡಿ
ಓಡೋಡಿ ಬರುತ್ತಿದ್ದರೆ
ಊರಿಗೆ ಊರೇ ನೋಡುವಂತಿದ್ದವು

ನಗ ಕೂರಿಗೆ ಕುಂಟಿ
ಕುಡ ಕಳೆಬಾರ ಪಿಳಗುಂಟಿ
ಎಡೆ ಕುಂಟಿ
ಎಳಶೆಡ್ಡಿ,ಶೆಡ್ಡಿ ಬಟ್ಟಲು
ಮಿನಿ ಹಗ್ಗ ಬ್ಯಾಕೋಲು
ಮಡಿಕಿ ನೇಗಿಲು ಕಳೆ ಚತಿಗಿ
ತಾಳು
ಎಲ್ಲವೂ ಅಪ್ಪನ ಅಂಬಾರಿಯ
ಪ್ರಯಾಣಿಕರು
ಒಮ್ಮೊಮ್ಮೆ ಮನೆಮಂದಿ,ಹಾದಿಯಲ್ಲಿ ಕೈ ತೋರಿದವರು

ಕಾರಹುಣ್ಣಿವೆಗೆ
ಅಪ್ಪ ಎತ್ತು ಮೈತೊಳೆದು
ಕೋಡಿಗೆ ಬಣ್ಣ ಹಚ್ಚಿ
ಅಂಬಾರಿಗೂ ಎಣ್ಣೆ ಸ್ನಾನ
ತಪ್ಪುತ್ತಿರಲಿಲ್ಲ

ಇತ್ತಿತ್ತಲು
ಅಪ್ಪನ ಅಂಬಾರಿ ಹೊರುತ್ತಿದ್ದ ಹೋರಿಗಳು
ಮುತ್ಯಾ ಆದ ಮೇಲೆ
ಅಂಬಾರಿಯು ಆಕಾರ ಕೆಟ್ಟಿತು

ಕಾಲ ಕಳೆದಂತೆ
ಅಪ್ಪ ಕಾಲವಾದ ಮೇಲೆ
ತಂತ್ರಜ್ಞಾನ ಬೆಳೆದು
ಅಂಬಾರಿ ಪ್ರದರ್ಶನಕ್ಕಿಡುವ
ವಸ್ತುವಾಗಿ ಮನೆ ಮುಂದಿನ
ಒಗಿ ಕಲ್ಲಿನ ಪಕ್ಕ
ಓಂ ನಮಃ ಶಿವಾಯ ಎಂದು
ಒತ್ತಟ್ಟಿಗೆ ನಿಂತುಕೊಳ್ಳುವ ಮೊದಲು
ಕೊನೆಯ ಪ್ರಯಾಣ
ಮಾವನ ಸಾರಥ್ಯದಲ್ಲಿ
ಅಪ್ಪನ ಚಿತೆಗೆ ಕಟ್ಟಿಗೆ ತರಲು
ಗುರುಸ್ವಾಮಿ ಮನೆಯಿಂದ ಸ್ಮಶಾನದ ಜಾಗದವರೆಗೆ ಹೋಗಿ
ಮರಳಿ ಮನೆ ತಲುಪಿತು

ತೇಗಿನ ಉದ್ದಗಿ ಮೇಲೆ
ಕರೆ ಜಾಲಿ ಚಟ್ಟಿಗೆ
ಗಟ್ಟಿ ಗೂಟ ನೆಟ್ಟು ಬಿದರಿನ ಡಂಬರಿಗೆ
ನೋಡಬೇಕು ಚಿತ್ತಾರ
ಅಬ್ಬಾ ಬಡಿಗಜ್ಜನ ಕೈ ಕುಶಲತೆ ಅದ್ಭುತ

ತೆಗಿನ ಗಾಲಿಗೆ
ಕಂಬಾರ ಮನೆ ಕುಲುಮೆ ಬಯಲಲಿ
ದುಂಡು ಹಾಕಿದ ಕುಳ್ಳಿಗೆ
ನಿಗಿ ನಿಗಿ ಬೆಂಕಿ ಹಾಕಿ
ಕಬ್ಬಿಣದ ಹಳಿಗೆ ಬಿಗಿ ಹಾಕಿ
ತಣಿಸಲು ನೀರು ಹಾಕಿದ್ದು
ಎಷ್ಟು ಬದ್ರವೆಂದರೆ
ವೆಲ್ಡಿಂಗ್ ಗಿಂತಲೂ ಬಿಗಿ

ಎತ್ತದ ಉಕ್ಕಿನ ಇರಿಸಿಗೆ
ಗಾಲಿ ಜೋಡಿಸಿ
ಅತ್ತಿತ್ತ ಕೊಚ್ಚಿ ಎಳೆಯದಂತೆ
ಹೆರಿ ಎಣ್ಣೆ ಹಚ್ಚಿದ
ಎರಡು ಕೀಲು
ಗಾಲಿ ಸವೆಯದಂತೆ ಸರಿಯದಂತೆ
ನೋಡುವ ಜವಾಬ್ದಾರಿ ಹೊತ್ತಿದ್ದು
ಅಲಿಖಿತ ಆದೇಶ

ಸೇದು ಹಗ್ಗ ಟೈರ್ ನಿಂದ
ಭದ್ರವಾದ ನಗ ಕಟ್ಟಿ
ಜತಿಗಿ ಹಾಕಿ
ಕೊಳ್ಳು ಕಟ್ಟಿ ರೋಡಿಗಿಳಿದ ಅಂಬಾರಿಯ
ಗಡಗಡ ಸದ್ದು
ಅಪ್ಪನ ಬಂಡಿಯದು ಗಾಳಿಯಲಿ ಸಂಚಾರ

ಕುಣಿಯುವ ಜವಾರಿ ಮನೆಯೆತ್ತಿಗೆ
ಗುಮರಿ ಕೊಡನಸು ರಿಬ್ಬನ್ನು ಕಟ್ಟಿ
ಮಗಡ ಮುಗದಾನ ಬಿಗಿದು
ಹಣೆ ಪಟ್ಟಿ ಕಟ್ಟಿದ ಎತ್ತು ಹೊರುತ್ತಿದ್ದ
ಅಪ್ಪನ ನೆನಪಿನ ಅಂಬಾರಿ
ನಮಗೂ
ನೆನಪಾಗಿ ಮನೆಯ ಬಯಲು ಜಾಗೆಯಲಿ
ಇಂದಿಗೂ ಜರಿಯದಂತೆ ಜಾಗೃತವಾಗಿ
ನಿಂತಿದ್ದು…………………..
ಅಜ್ಜನಿಂದ ಬಳುವಳಿಯಾಗಿ ಬಂದ ಅಪ್ಪನ ಆಸ್ತಿ
ನಮಗೆ ಸ್ಥಿರಾಸ್ತಿ ನನ್ನ ಮಕ್ಕಳಿಗೂ…

ಹನಮಂತ ಸೋಮನಕಟ್ಟಿ

Related post