ಬಂಧನದ ಪರಿ

ಬಂಧನದ ಪರಿ

ಶರಧಿಯ ಸೇರಲು ಹೊರಟಿದೆ ಹೊಳೆಯು
ಕಡಲ ತೆರೆಯೂ ಆರ್ಭಟವ ಮಾಡುತಿದೆ !
ಸಡಗರದ ಸಮ್ಮಿಲನಕೆ ಹಾತೊರೆದು..
ಸವಿಬಂಧನದ ಭಾವದಲಿ ಒಂದಾಗಿದೆ!!

ಮಲ್ಲಿಗೆಯ ಮೊಗ್ಗರಳಿ ಪರಿಮಳವ ಬೀರುತಾ
ದುಂಬಿಗಳ ಹಿಂಡನು ತನ್ನತ್ತ ಸೆಳೆದಿದೆ!
ಧರೆಯ ಹಸಿರ ತೆನೆಯು ಆಗಸದತ್ತ ನೋಡಿ..
ಬಂಧನದ ಈ ಪರಿಗೆ ತಾ ಮುಗುಳ್ನಕ್ಕಿದೆ!!

ಗೂಡನು ತೊರೆದು ಬಾನಲಿ ಹಾರಾಡಿಹ
ಹಕ್ಕಿಯು ಮುಸ್ಸಂಜೆಗೆ ಮನೆಯತ್ತ ಮರಳಿದೆ!
ಬದುಕಿನ ಬಂಧನದಿ ಕ್ಷಣದ ಸಂತಸ ಮಿಗಿಲೆಂಬ..
ಸತ್ಯವನರಿತು ಬಾಳ ಪಥವ ನಡೆಸಿದೆ!!

ಆ ಬಾನು ಬುವಿಯು ಕ್ಷಿತಿಜದಲಿ
ಒಲವಿನ ಸವಿ ಬಂಧನಕೆ ಬೆಸೆದಿದೆ!
ದೈವಕೃಪೆಯಲಿ ಅರಳಿದ ಈ ಬಾಳಪುಟದಿ..
ಹೊಸತೊಂದು ಭಾಷ್ಯವ ತಾ ಬರೆದಿದೆ!!

ಸುಮನಾ ರಮಾನಂದ
ಮುಂಬೈ

Related post