ಬತ್ತದ ಸ್ಪೂರ್ತಿಯ ಚಿಲುಮೆ – ಅರುಂಧತಿ ನಾಗ್
ಅರುಂಧತಿ ನಾಗ್ ಇವರ ಜೀವನ ಅನೇಕ ಹೆಣ್ಣುಮಕ್ಕಳಿಗೆ ಸ್ಪೂರ್ತಿ. ಅರುಂಧತಿ ನಾಗ್ ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರ ಪೈಕಿ ಒಬ್ಬರು. ಕನ್ನಡ ಚಿತ್ರರಂಗದ ದ್ರುವತಾರೆ ಶಂಕರನಾಗ್ ಅವರ ಧರ್ಮ ಪತ್ನಿ.
1990ರಲ್ಲಿನ ನೆಡೆದ ಕಾರು ಅಪಘಾತದಲ್ಲಿ ಅರುಂಧತಿನಾಗ್ ಅವರು ತನ್ನ ಪತಿ ಶಂಕರನಾಗ್ ಅವರನ್ನು ಕಳೆದುಕೊಂಡರು ಮತ್ತು ಅದೇ ಕಾರಿನಲ್ಲಿದ್ದ ಅರುಂದತಿಯವರು ಪವಾಡ ಸದೃಶ್ಯವಾಗಿ ತಾವು ಬದುಕುಳಿದರು. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟನಾಗಿ ಬೆಳಗುತ್ತಿದ್ದ ಶಂಕರನಾಗ್ ಅವರ ಪತ್ನಿಯಾಗಿ ನೆಮ್ಮದಿಯಾಗಿದ್ದ ಅರುಂಧತಿ ಅವರ ಬದುಕಿನಲ್ಲಿ ಬಲು ದೊಡ್ಡ ಬಿರುಗಾಳಿಯೇ ಎದ್ದಿತ್ತು. ಒಂದೆಡೆ ತನ್ನ ಜೀವಕ್ಕೆ ಜೀವವಾಗಿದ್ದ ಸಂಗಾತಿಯನ್ನು ಆಕಸ್ಮಿಕವಾಗಿ ಕಳೆದುಕೊಂಡ ನೋವು, ಮತ್ತೊಂದು ಕಡೆ ಪತಿಯ ಚಿತ್ರರಂಗದಲ್ಲಿನ ಬಲು ದೊಡ್ಡ ಕನಸನ್ನು ನನಸು ಮಾಡಬೇಕೆನ್ನುವ ಛಲ, ಮನದಾಳದಲ್ಲಿದ್ದ ಅಗಾಧ ನೋವು, ಆರ್ಥಿಕ ಸಂಕಟ ಇವೆಲ್ಲವನ್ನೂ ಎದುರಿಸಿ ತನ್ನ ಕನಸ್ಸಿನ ಕೂಸು ರಂಗಶಂಕರವನ್ನು ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ ಅರುಂಧತಿನಾಗ್. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡರೂ ಧೃತಿಗೆಡದೆ ಬೆಳೆದ ಸಾಧಕಿ ಇವರು. ಇವರ ಸಾಧನೆಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ, ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಇವರ ಮಗಳ ಹೆಸರು ಕಾವ್ಯ.
ಅರುಂಧತಿ ಅವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿದ್ದಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ಕಲಾವಿದೆಯಾಗಿದ್ದರು. ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ. ಇವರು ಹಲವು ಬಾರಿ ತಿಂಗಳಲ್ಲಿ 42 ಪ್ರದರ್ಶನಗಳನ್ನು ನೀಡಿದ್ದೂ ಇದೆ. ಈ ದಿನಗಳಲ್ಲೇ ಸಹ ರಂಗನಟ ಶಂಕರನಾಗ್ ಅವರ ಪರಿಚಯವಾಯಿತು. ಪರಿಚಯ ಪ್ರೇಮವಾಗಿ ವಿವಾಹವಾದರು. ಅನಂತರ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ ಎರಡೂ ಕ್ಷೇತ್ರಗಳಲ್ಲಿ ಇಬ್ಬರೂ ಕೆಲಸ ಮಾಡಲಾರಂಭಿಸಿದರು. ಈ ಎಲ್ಲ ಸಂದರ್ಭಗಳಲ್ಲಿ ಅರುಂಧತಿ ತನ್ನ ಪತಿ ಶಂಕರನಾಗ್ ಗೆ ನೆರವಾದರು. ಕೆಲವು ಸಂದರ್ಭಗಳಲ್ಲಿ ಶಂಕರನಾಗ್ ಅವರಿಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದರು. ಶಂಕರನಾಗ್ ಹಿಂದಿಯ ಕಿರುತೆರೆಗಾಗಿ ಸಿದ್ಧಪಡಿಸಿದ ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಇವರಿಬ್ಬರಿಗೂ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು.
ಅರುಂಧತಿಯವರು ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಎಂಬ ನಾಟಕ ಇವರ ಅಭಿನಯದ ಅತ್ಯಂತ ಜನಪ್ರಿಯ ನಾಟಕ. ಇದು ಚಲನಚಿತ್ರವಾಗಿಯೂ ಆಪಾರ ಯಶಸ್ಸನ್ನು ಕಂಡಿದೆ. ಆಕ್ಸಿಡೆಂಟ್, ಗೋಲಿಬಾರ್, ಪರಮೇಶಿಯ ಪ್ರೇಮ ಪ್ರಸಂಗ ಇವರ ಅಭಿನಯದ ಇತರ ಚಿತ್ರಗಳು. ಮಣಿರತ್ನಂ ಅವರ ‘ದಿಲ್‌ಸೇ’ ಎಂಬ ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅನಂತರ `ಪಾ’ ಎಂಬ ಹಿಂದಿ ಚಿತ್ರದಲ್ಲಿಅಭಿನಯಿಸಿ ಅಪಾರ ಮನ್ನಣೆಯನ್ನು ಗಳಿಸಿದರು. ಶಂಕರನಾಗ್ ನಿರ್ದೇಶನದ ‘ಒಂದು ಮುತ್ತಿನಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ದುಡಿದಿದ್ದಾರೆ.
ಪತಿಯನ್ನು ಕಳೆದುಕೊಂಡು ಕೆಲಕಾಲ ಎಲ್ಲ ಚಟುವಟಿಕೆಗಳಿಂದ ದೂರವಿದ್ದ ಇವರು ಅನಂತರ ಶಂಕರನಾಗ್ ಅವರ ಕನಸಿನ ಕಲ್ಪನೆಯ ‘ರಂಗಶಂಕರ’ ಎಂಬ ಸಮಗ್ರ ನಾಟಕ ಚಟುವಟಿಕೆಯ ಕೇಂದ್ರವೊಂದರ ನಿರ್ಮಾಣದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದ ಈ ರಂಗಭೂಮಿ ಸಂಕೀರ್ಣ ಯೋಜನೆ ಪೂರ್ಣಗೊಂಡಿದ್ದು 2004 ರಲ್ಲಿ. ಸಂಕೇತ್ ಟ್ರಸ್ಟ್ ‘ರಂಗಶಂಕರ’ದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದು, ಗಿರೀಶ್ ಕಾರ್ನಾಡ್ ಇದರ ಪ್ರಥಮ ಅಧ್ಯಕ್ಷರಾಗಿದ್ದರು, ಅರುಂಧತಿ ಅದರ ಕಾರ್ಯನಿರ್ವಾಹಕ ಸದಸ್ಯರು. ಅರುಂಧತಿನಾಗ್ ಅವರು ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ, ಪರಮೇಶಿ ಪ್ರೇಮ ಪ್ರಸಂಗ, ಆಕ್ಸಿಡೆಂಟ್, ಗೋಲಿಬಾರ್, ಶಿವಸೈನ್ಯ, ಜೋಗಿ ಮುಂತಾದ ಕನ್ನಡ ಮತ್ತು ಪಾ, ದಿಲ್ ಸೇ ಮುಂತಾದ ಹಿಂದಿ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
ರಂಗಶಂಕರ
ರಂಗಶಂಕರ ಕನ್ನಡ ರಂಗಭೂಮಿಗೆ ಶಂಕರನಾಗ್ ಕಂಡ ಬಲುದೊಡ್ಡ ಕನಸೆನ್ನಬಹುದು. ನಾಟಕರಂಗದಲ್ಲೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿ ಇರುವಂತೆ ನಾಟಕ ಮಂದಿರವೊಂದನ್ನು ನಿರ್ಮಿಸಬೇಕು ಎನ್ನುವ ಕನಸನ್ನು ಕಂಡಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದು, ಇದೀಗ ರಂಗಶಂಕರ, ಬೆಂಗಳೂರಿನ ಜೆ.ಪಿ.ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂದ ಪ್ರಶಸ್ತಿಗಳು:
2010 ರಲ್ಲಿ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ದೇಶಕ ಆರ್.ಬಾಲಕೃಷ್ಣನ್ ಅವರ ‘ಪಾ’ ಎನ್ನುವ ಹಿಂದಿ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅರುಂಧತಿನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ. ಜೀವನದ ಅತ್ಯಂತ ಕಠಿಣ ಸಂದರ್ಭವನ್ನು ಎದುರಿಸಿ ಅದರಿಂದ ಹೊರಬಂದು ತನ್ನ ಪತಿಯ ಕನಸನ್ನೇ ನನಸಾಗಿಸುವುದೇ ತನ್ನ ಬದುಕಿನ ಬಲುದೊಡ್ಡ ಗುರಿಯೆಂದು ಭಾವಿಸಿ ಅದರಲ್ಲಿ ಯಶಸ್ವಿಯಾಗಿರುವ ಅರುಂಧತಿ ನಾಗ್ ನಮಗೆಲ್ಲರಿಗೂ ಜೀವನದ ಸ್ಪೂರ್ತಿ ಮತ್ತು ಮಾದರಿ ಎನ್ನಬಹುದು. ಇವರ ಸ್ಥಿತಪ್ರಜ್ಞತೆ ಮತ್ತು ಹೋರಾಡುವ ಛಲವೇ ಬದುಕಿನಲ್ಲಿ ಇಂದು ಅವರನ್ನು ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ:9742884160