ಬದುಕೇ ನೀನೇಕೆ ಹೀಗೆ!
ಬದುಕೆಂದರೆ ಎನು?ಬದುಕಿನ ಅರ್ಥವಾದರೂ ಎನು
ಜೀವನದ ಮಹತ್ವ ವಾದರೂ ಏನೂ?ಎಂದೋ ಹುಟ್ಟಿ ಎಂದೋ ಸಾಯುವುದೇ ಬದುಕೇ
ಇಷ್ಟ ಬಂದ ಹಾಗೆ ಇರುವುದು ಬದುಕೇ,
ಸರಿ ತಪ್ಪುಗಳ ತಿಳಿಯುವುದೇ? ತಪ್ಪುಗಳ ತಿದ್ದಿ ಮುಂದೆ ಹೋಗುವುದೇ?
ಜೀವನದ ಹಾದಿಯಲ್ಲಿ ಬರುವ ಆಗು ಹೋಗುಗಳ ಅರಿತು ಬದುಕುವುದೇ,
ಬದುಕೆಂದರೆ ಏನೆಲ್ಲಾ ಪ್ರಶ್ನೆಗಳು.
ಎಡವಿ ಬಿದ್ದಾಗ ಎದ್ದು ಮುಂದೆ ನಡಿ ಎಂದಿತು ಬದುಕು ,ಸಿಟ್ಟು ಬಂದಾಗ ಕೋಪ ಮಾಡಿ ಕೊಳ್ಳದೆ ತಾಳ್ಮೆಯಿಂದ ಇರು ಎಂದು ಕಲಿಸಿತು ಬದುಕು .ಕೋಪದಲ್ಲಿ ಮೆದುಳಿಗೆ ಕೆಲಸ ಕೊಟ್ಟು ಅವಸರದ ನಿರ್ಧಾರ ತೆಗೆದುಕೊಳ್ಳಬೇಡ “ತಲ್ಲಣಿಸದಿರು ಕಂಡ್ಯ ತಾಳು ಮನವೆ “ಎಂದು ಬುದ್ಧಿ ಹೇಳಿ ಜೀವನದ ದಾರಿ ತೋರಿಸಿತು ಬದುಕು. ತಪ್ಪು ಮಾಡಿದಾಗ ಮಾಡಿದ ತಪ್ಪು ಅರಿವಾಗಿ ಆದದ್ದು ಆಗಿ ಹೋಯಿತು ಮುಂದೆ ಈ ತಪ್ಪನ್ನು ತಿದ್ದಿಕೊಂಡು ಈ ತಪ್ಪಿನಿಂದ ಪಾಠ ಕಲಿತು ಮುಂದುವರಿ ಎಂದು ಜೀವನದ ಪಾಠ ಕಲಿಸಿತು ಬದುಕು.
ಬಂದ ಕಷ್ಟಗಳ ಎದುರಿಸಿ ಸರಿಯಾದ ಹಾದಿಯಲ್ಲಿ ಹೋಗು ,ಜನರ ನಿಂಧನೆ ಅವಮಾನವ ಎದುರಿಸಿ ನಿನ್ನ ಗುರಿ ತಲುಪು ಎಂದು ಹೇಳಿ ಕೊಟ್ಟಿತು ಬದುಕು.ಸ್ನೇಹಿತರು ಪೋಷಕರು ಬಂಧು ಬಳಗ ಎಲ್ಲಾ ಸಮಯದಲ್ಲೂ ನಿನ್ನ ಜೊತೆಗಿರುವುದಿಲ್ಲ , ಸ್ವಂತ್ರಂತ್ರವಾಗಿ ಇರಲು ಕಲಿಸಿತು ಬದುಕು.
ಬೇರೆಯವರನ್ನು ತಿಳಿಯುವ ಮೊದಲು ನಿನ್ನನು ನೀನು ಅರಿ ಎಂದು ಹೇಳಿತು ಬದುಕು.ಈ ಸಮಾಜದಲ್ಲಿ ಆತ್ಮ ವಿಶ್ವಾಸ,ದೈರ್ಯ ಮುಖ್ಯ ಎಂದಿತು ಬದುಕು. ಒಮ್ಮೆ ಸೋತರೆ ಏನಾಯಿತು ಪುನಹ ಪ್ರಯತ್ನಿಸು, ಸೋಲೇ ಗೆಲುವಿನ ಸೋಪಾನ ನಿನ್ನ ಸತತ ಪ್ರಯತ್ನ ನಿನ್ನ ಗೆಲುವಿನ ಪಯಣಕ್ಕೆ ಮುನ್ನುಡಿ ಎಂದಿತು ಬದುಕು. ನಿರೀಕ್ಷೆ ಇರಬೇಕು ಆದರೆ ನೀ ನಿರೀಕ್ಷೆ ಮಾಡಿದಂತಿಲ್ಲ ಬದುಕು, ನಿರೀಕ್ಷೆಗೂ ಮೀರಿ ವಿಧಿ ಎಂಬುದಿದೆ ನಾವು ಯೋಚಿಸಿದ ಹಾಗೆ ಇಲ್ಲ ಬದುಕು. ಜೀವನ ಎನ್ನುವುದು ಮರಳಿನ ಗಡಿಯಾರದ ಹಾಗೆ,ಮರಳು ಕೆಳಗೆ ಜಾರಿ ಹೇಗೆ ಸಮಯ ಕಳೆಯುವುದು ಎಂದು ತಿಳಿಯುವುದಿಲ್ಲ. ನಮಗೆ ಬೇಕಾದಾಗ ಸಮಯ ಸಿಗುವುದಿಲ್ಲ ಸಮಯ ಸಿಕ್ಕಾಗ ಆ ಅವಕಾಶ ನಮ್ಮ ಕೈ ಮೀರಿ ಹೋಗಿರುತ್ತದೆ.
ಮನುಷ್ಯನ ಜೀವನ ಎಷ್ಟು ವಿಚಿತ್ರ ಅಲ್ವಾಬಾಲ್ಯದಲ್ಲಿ ಆಟ ಆಡುವ ಮಗುವಿಗೆ ಶಾಲೆಗೆ ಹೋಗುವ ಆಸೆ ,ಶಾಲೆ ಹೋಗುವ ಮಗುವಿಗೆ ಯಾವಗ ಕಾಲೇಜಿಗೆ ಹೋಗುತ್ತಿನೋ ಎಂಬ ತವಕ, ಕಾಲೇಜು ಹೋಗಿ ಪದವಿ ಓದುವವರಿಗೆ ಯಾವಗ ಪದವಿ ಮುಗಿದು ಕೆಲಸ ಸಿಗುತ್ತದೋ ಎಂಬ ನಿರೀಕ್ಷೆ, ಕೆಲಸ ಸಿಕ್ಕು ಜೀವನದಲ್ಲಿ ನಮ್ಮ ಜೊತೆ ನಮಗೆ ಸಮಯ ಕಳೆಯಲು ಸಿಗದಾಗ, ಏನಕ್ಕೆ ನಾವು ಇಷ್ಟು ಬೇಗ ದೊಡ್ಡವರಾದೆವು.ಸಮಯ ಹಿಂದೆ ಹೋಗ ಬಾರದೆ ಅಯ್ಯೋ ಕಾಲೇಜು ದಿನಗಳು ,ಶಾಲಾ ದಿನಗಳು ಕೊನೆಗೆ ಬಾಲ್ಯದ ದಿನಗಳೆ ಚಂದ ಎಂದು ಹೇಳುವ ಬದುಕು.
ಅಳುವ ದ್ವನಿಯೊಂದಿಗೆ ಜನನ
ತುಂಟಾಟ,ಯಾವುದೇ ಚಿಂತೆಯಿಲ್ಲದೆ ಕಳೆಯುವ ಬಾಲ್ಯ
ಮೋಜು ಮಸ್ತಿಯ ಜೊತೆ ಜವಾಬ್ದಾರಿ ಹೊತ್ತ ಯೌವ್ವನ
ಹಿಂದೆ ಕಳೆದ ಸವಿ ನೆನಪುಗಳ ದಿನಗಳ ಮೆಲುಕು ಹಾಕುತ್ತಾ ಕಳೆಯುವ ಮುಪ್ಪು
ಕೊನೆಗೆ ಜೀವನದ ಬದುಕೆಂದರೆ ಎನು ಎಂಬ ಗೊಂದಲದ ಪ್ರಶ್ನೆಗೆ ಉತ್ತರ ತಿಳಿಯದೆ ದ್ವಂದ್ವ ಮನಸಿನಲ್ಲಿ ಕಣ್ಣು ಮುಚ್ಚಿ ದೇಹಕ್ಕೆ ಅಗ್ನಿ ಸ್ಪರ್ಶವಾಗಿ ಗಾಳಿಯಲ್ಲಿ ಲೀನವಾಗುವ ಮರಣ.
ಬದುಕೆಂದರೆ ಎನು ಎಂದು ಯೋಚಿಸಿದಾಗ ಇಷ್ಟೆಲ್ಲಾ ತಿಳಿಯಿತು .
ಬಲ್ಲವರು ಹೇಳಿದರು ,ಕಷ್ಟ ಸುಖ, ನೋವು ನಲಿವು ,ಅಳು ನಗು ಇದೆಲ್ಲವ ಸೇರಿ ಇರುವ ಮಿಶಿತ್ರ ಭಾವನೆಗಳ ಜೊತೆ ಜೀವಿಸುವುದೇ ಬದುಕು, ಹುಟ್ಟು ಸಹಜ ಸಾವು ಖಚಿತ ಇದೆ ಜಗದ ನಿಯಮ ಎನ್ನುವ ಬದುಕು
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವ ಬದುಕೇ ನೀನೇಕೆ ಹೀಗೆ?
ಶರಣ್ಯ . ಪಿ. ಹೆಬ್ಬಾರ್
ಸ್ಥಳ – ಹೆಬ್ರಿ