ಭಾವದ ಬೆನ್ನತ್ತಿ

ಭಾವದ ಬೆನ್ನತ್ತಿ

ಅವೆಷ್ಟೋ ಭಾವಗಳು
ಮಾತಿಗೆ ನಿಲುಕದೇ
ಮೌನದಲೂ ಬೆರೆಯದೆ
ಒಳಗೊಳಗೆ ಹುದುಗಿ
ಹೈರಾಣಾಗುತಿದೆ

ಸಪ್ಪ್ರೆಸ್ಡ್,
ಡಿಪ್ರೈವ್,
ಡಿಪ್ರೆಶನ್,
ಗಿಲ್ಟ್ ಪ್ಲೆಶರ್,
ಇನ್ನೆಷ್ಟು ಹೆಸರುಗಳೋ ಇವಕ್ಕೆ?!

ಸೀಡ್ಲೆಸ್ ಹೈಬ್ರಿಡ್
ಬ್ರೀಡ್ ಆಗದ
ಹಾರ್ಮೋನು ಚುಚ್ಚಿದ
ಮರಿ ಹಾಕದ ಮೊಟ್ಟೆಗಳಂಥಾ
ಈ ಭಾವಗಳು
ಗೋಡೆ ಬಿರುಕು ಬಿಟ್ಟರೆ
ಹೊರಗೆ ಬರಬಹುದು ಅಷ್ಟೇ

ಪ್ಲಾಸ್ಟಿಕ್ ಬಿರಡೆಯನ್ನು
ಗಟ್ಟಿಯಾಗಿ ಮುಚ್ಚಿರುವಾಗ
ಹೊರಬರಲಾಗದ ಭಾವಗಳು
ಒಳಗೊಳಗೆ ಉಬ್ಬರಿಸಬೇಕು
ತಮ್ಮೊಳಗೆ ಬೊಬ್ಬಿರಿಯಬೇಕು
ಕರಪತ್ರಗಳ ಪ್ರಕಟಣೆಗೆ
ಖಾಲಿ ಸ್ಥಳವಿಲ್ಲ
ಜಾಹಿರಾತುಗಳಿಗಾಗಿ
ಜಾಗವನು ಈಗಾಗಲೇ
ಮಾರಿಕೊಂಡಾಗಿದೆ

ಭವಿಷ್ಯದ ದಾರಿಗೆ
ಕಣ್ಣು ಮುಚ್ಚಿಕೊಂಡಿರುವಾಗ
ಭೂತದ ಬೆನ್ನಿಗೇ
ನಾನೆಂಬ ಭಾವ
ನೇತು ಬಿದ್ದಿರುವಾಗ
ವಾಸ್ತವದ ಅರಿವು
ಮೂಡುವುದಾದರೂ ಹೇಗೆ?!

ಪ್ಲಾಸ್ಟಿಕ್ ಡಬ್ಬಿಯಲ್ಲಿ
ಅವೆಷ್ಟು ಭಾವಗಳನ್ನು
ತುಂಬಿ ಇಟ್ಟರೂ
ಏರ್ ಟೈಟ್ ಆಗಿರುವುದರಿಂದ
ಗೋಡೆಗಳ ನಡುವೆ
ಉಳಿದ ಗಾಳಿಯಷ್ಟೇ
ಉಸಿರಾಡಲು ಸಿಗುವುದು

ನಾವೇ ಮಾಡಿಕೊಂಡ
ವ್ಯವಸ್ಥೆ ಹೀಗಿರುವಾಗ
ಸ್ವಚ್ಛ ಗಾಳಿ ಸ್ವಸ್ಥ ಮನಸು
ಅರಳುವುದಾದರೂ ಹೇಗೆ?!

ಸೌಜನ್ಯ ದತ್ತರಾಜ

Related post