I’m your hope, you’re my hope, I’m J-Hope
ಹೋಬಿ ಹುಟ್ಟಿದ್ದು ಫೆಬ್ರವರಿ 18, 1994ರಂದು. ಜಂಗ್-ಹೊಸಾಕ್, BTSನ ಆಧಾರ ಸ್ತಂಭ. ಅವನನ್ನು ಪ್ರೀತಿಯಿಂದ ಹೋಬಿ ಎಂದು ಕರೆಯುತ್ತಾರೆ. ಹೋಬಿಯ ಸ್ಟೇಜ್ ಹೆಸರು ಜೆ-ಹೋಪ್. ಹೋಪ್ ಎಂದರೆ ಭರವಸೆ…. BTSನ ಭರವಸೆ…. ಯುವಜನರ ಭರವಸೆ. BTSನ ಭರವಸೆ…. ಯುವಜನರ ಭರವಸೆ. ಏನೇ ಕಷ್ಟವಿದ್ದರೂ ನಗುನಗುತ್ತಿರಬೇಕು ಎಂಬುದು ಜೆ-ಹೋಪ್ ಪಾಲಿಸಿ.
ಜೆ ಹೋಪ್, ಹೈಸ್ಕೂಲಿನಲ್ಲಿ ಓದುವಾಗಲೇ ನೃತ್ಯ ಮಾಡಲು ಆರಂಭಿಸಿದನು. ಹೈಸ್ಕೂಲಿನಲ್ಲಿ ಓದುವಾಗ ಇಂಗ್ಲಿಷ್ ಬ್ಯಾಂಡುಗಳ ನೃತ್ಯವನ್ನು ನೋಡಿ ಬಹುವಾಗಿ ಆಕರ್ಷಿತನಾಗಿದ್ದ. ಆಗಲೆ ಅವನು ಸ್ಟ್ರೀಟ್ ಡ್ಯಾನ್ಸಿಂಗ್ ಗುಂಪುಗಳಲ್ಲಿ ಒಂದಾದ ‘ನ್ಯೂರಾನ್ ಸ್ಟ್ರೀಟ್ ಡ್ಯಾನ್ಸ್’ ಗುಂಪಿಗೆ ಸೇರಿದನು. ನಮ್ಮಲ್ಲಿ ಬೀದಿ ನಾಟಕಗಳ ರಂಗ ಗುಂಪುಗಳು ಹೇಗೋ ಹಾಗೆಯೇ ಅಲ್ಲಿ ಬಹುಷಃ ಸ್ಟ್ರೀಟ್ ಡ್ಯಾನ್ಸ್ ಗುಂಪುಗಳಿರಬೇಕು. ಅಲ್ಲಿ ಹೋಬಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವುಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದನು. ಸೋಲುವುದು, ಕೈಚೆಲ್ಲುವುದು ಅವನ ಡಿಕ್ಷನರಿಯಲ್ಲಿಯೇ ಇಲ್ಲ!!
ಇಷ್ಟೆಲ್ಲಾ ಸಾಧ್ಯವಾಗುತ್ತಿದ್ದುದು ಅವನು ಕುಟುಂಬದ ಸಹಕಾರದಿಂದ. ಅವನ ತಾಯಿ ತನ್ನ ಕೆಲಸಕ್ಕಾಗಿ ವಿದೇಶಕ್ಕೆ ಹೋದಾಗಲೂ ಹೋಬಿಯ ಕುಟುಂಬ ಸದಸ್ಯರೆಲ್ಲರು ಕೂಡಿ ಅವನ ಡ್ಯಾನ್ಸ್ ಕ್ಲಾಸಿನ ಫೀಸನ್ನು ಭರಿಸುತ್ತಿದ್ದರು. ಅವರುಗಳ ತ್ಯಾಗ ಸಾಫಲ್ಯತೆಯನ್ನು ಹೊಂದಿ, ಇಂದು ಹೋಪ್ ಯುವ ಜನಾಂಗಕ್ಕೆ ಭರವಸೆಯ ಪ್ರತೀಕವಾಗಿದ್ದಾನೆ.
ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಎಷ್ಟು ಜನ ತಂದೆತಾಯಿಯರು ಅವರ ಬೆನ್ನಿಗೆ ನಿಂತಾರು? ಹೋಬಿಯ ಕನಸುಗಳು ಅರಳಲು ಅವನ ಅಮ್ಮ ಅವನ ಉದ್ದಕ್ಕೂ ದುಡ್ಡುಸುರಿದು, ಅವನು ಕೇಳಿದ ಅಕಾಡೆಮಿಗೆ ಸೇರಿಸಿದ್ದಳು. ಹಾಡು ಕುಣಿತದಿಂದ ಬದುಕು ಸಾಗುವುದಿಲ್ಲ ಎಂದು ನಂಬಿದ್ದ ಅವನ ಅಪ್ಪ ಮೊದಮೊದಲು ಮಗನ ಕನಸುಗಳಿಗೆ ನೀರೆರೆಯಲಿಲ್ಲ. ಆದರೆ ತಾಯಿದೈವ ಕೈಬಿಡಲಿಲ್ಲ. 2016ರಲ್ಲಿ ತನ್ನ ತಾಯಿಗಾಗಿ ‘ಹೇ ಮಮ್ಮಾ’ ಎಂಬ ಹಾಡನ್ನು ಲೈವ್ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ, ತಾಯಿಗೆ ಗೌರವ ಸೂಚಿಸಿದ.
ಎಲ್ಲ ಮಕ್ಕಳು ತಾವು ದೊಡ್ಡವರಾದಾಗ ಏನಾಗಬೇಕೆಂಬ ಕನಸುಗಳಿರುತ್ತವೆ. ಅಂತೆಯೇ ಜೆ-ಹೋಪ್ ಗೆ ತಾನೊಬ್ಬ ಟೆನ್ನಿಸ್ ಆಟಗಾರನಾಗಬೇಕೆಂಬ ಆಸೆಯೂ ಇತ್ತಂತೆ. ಕಾಲಕ್ರಮೇಣ ತನ್ನ ಗುರಿ ಟೆನ್ನಿಸ್ ಅಲ್ಲ, ನೃತ್ಯ ಎಂಬುದನ್ನು ಮನಗಂಡು ನೃತ್ಯಕ್ಕೆ ತನ್ನನ್ನು ಸಮರ್ಪಿಸಿಕೊಂಡನು.
ಆತ ಶ್ರೇಷ್ಠ ಹಾಡುಗಳನ್ನು ಸಹ ಬರೆಯಬಲ್ಲ ಎಂದು ಗೊತ್ತಾಗಿದ್ದು ಆತ BTSಗೆ ಬಂದಾಗಲೇ. RM ನಂತೆಯೇ ಹೋಬಿಯೂ ಸಹ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದಾನೆ. ಇಡೀ BTS ತಂಡದ ನೃತ್ಯ ಸಂಯೋಜನೆಯ ಜವಾಬ್ದಾರಿ ಹೋಬಿಯದ್ದು.
ಪ್ರತಿಯೊಂದು ಇಂಟರ್ ವ್ಯೂ ಗಳಲ್ಲಿ ಕಿಂ ನಂಜೂನ್ ಮಾತ್ರವೇ ಇಂಗ್ಲೀಷಿನಲ್ಲಿ ಉತ್ತರಿಸಬೇಕಿತ್ತು. ಆ ಕಾರಣಕ್ಕಾಗಿಯೇ ತಮ್ಮ ನಾಯಕ ನಂಜೂನನಿಗೆ ಸ್ವಲ್ಪವಾದರೂ ಒತ್ತಡ ಕಡಿಮೆ ಮಾಡಲೆಂದು ಜೆ-ಹೋಪ್ ಬಹುಬೇಗ ಇಂಗ್ಲಿಷ್ ಕಲಿತನು. ಕೊರಿಯನ್, ಚೈನೀ, ಜಪಾನಿ ಭಾಷೆಗಳನ್ನು ಅತ್ಯಂತ ಸರಾಗವಾಗಿ ಮಾತನಾಡುವ ಹೋಬಿಗೆ ಇಂಗ್ಲಿಷ್ ಕಲಿಕೆ ಕಬ್ಬಿಣದ ಕಡಲೆಯಾಗಿದ್ದಿತು. ಆದರೂ ಛಲದಿಂದ ಇಂಗ್ಲೀಷ್ ಭಾಷೆಯನ್ನು ಕಲಿತನು. ಆಗಲೇ ಹೇಳಿದ ಹಾಗೆ ಯಾವುದೇ ಕಷ್ಟದ ಕೆಲಸಗಳನ್ನು ಕೈಚೆಲ್ಲುವ ಅಭ್ಯಾಸ ಹೋಬಿಗೆ ಇಲ್ಲವೇ ಇಲ್ಲ!
ಒಮ್ಮೆ ಬಹುಷಃ 2013ರಲ್ಲಿ ಇರಬೇಕು… ಜೆ-ಹೋಪ್ BTS ತಂಡವನ್ನು ಬಿಟ್ಟು ಹೊರಹೋಗಲು ನಿರ್ಧರಿಸಿದನು. ಆದರೆ ನಾಯಕ RM ಮತ್ತು ತಂಡದವರ ಒತ್ತಾಯದಿಂದ ಮತ್ತೆ ತಂಡಕ್ಕೆ ವಾಪಸು ಬಂದನು. BTS ತಂಡದಿಂದ ದೂರಾಗಿ ಬದುಕಲು ಸಾಧ್ಯವಿಲ್ಲವೆನಿಸಿ ಮತ್ತೆ ವಾಪಸ್ಸು ಬಂದನಂತೆ.
ಹೋಬಿ ಕರೋನ ಪೀಡಿತರ ಸಹಾಯಕ್ಕಾಗಿ 10 ಕೋಟಿ ಹಣವನ್ನು ದಾನವಾಗಿ ನೀಡಿದ್ದಾನೆ. ಎಲ್ಲಿಯೂ ಪಬ್ಲಿಸಿಟಿ ಬಯಸದೆ ನಿಸ್ವಾರ್ಥ ಸೇವೆಯ ಸಲುವಾಗಿ ಇಂತಹ ಅನೇಕಾನೇಕ ದಾನ ಧರ್ಮಗಳಬ್ನು ಮಾಡುವ ಅಭ್ಯಾಸ BTS ಎಲ್ಲ ಹುಡುಗರಿಗಿದೆ.
ಜೆ-ಹೋಪ್ ನ ಒಂದೆರೆಡು ಮನದ ಮಾತುಗಳು ನಿಮಗಾಗಿ-
ಕನಸುಗಳನ್ನು ಬೆನ್ನಟ್ಟಿ, ಯಾವುದೂ ನಿಮ್ಮ ಕನಸುಗಳಿಂದ ನಿಮ್ಮನ್ನು ದೂರಮಾಡದಿರಲಿ.
- ಮಳೆನಿಂತು ಮೋಡಗಳು ಚದುರಿದರೂ ನಾನು ನಾನಾಗೆ ನಿಲ್ಲುವೆನು. ಈಗ ಭೋರ್ಗರೆದು ಬಿರುಮಳೆ ಹುಯ್ಯಬಹುದು. ಆದರೆ ಮಳೆ ನಿಲ್ಲಲೇ ಬೇಕು. ನಿಮ್ಮ ಭರವಸೆಗಳು ನಿಮ್ಮ ವೇದನೆಯಾಗದಿಲಿ, ನಿಮ್ಮ ಭವಿಷ್ಯದ ಶಿಲ್ಪಿಯಾಗಲಿ.
- ಭರವಸೆಯೇ ಬದುಕು. ಬಹುಷಃ ನಿಮ್ಮ ಕ್ಷಣ ನಾಳೆಗಳಲ್ಲಿ ಹುದುಗಿರಬಹುದು. ಭರವಸೆಗಳು ಬೇಕು ಬದುಕಿಗೆ ನಮ್ಮ ಕ್ಷಣಗಳನ್ನು ಹೆಕ್ಕಲು. ನೋವು ನಿಂದನೆಗಳು ಬೇಕು ಬದುಕಿನಲಿ ಮಳೆ, ಸೂರ್ಯ ಹೂ ಅರಳಲು ಅನಿವಾರ್ಯವಿದ್ದಂತೆ. ಒಳ್ಳೆಯ ಕಾಲ ಬಂದಾಗ ಹಿಂದಿರುಗಿ ನೋಡಲು ನಿಮ್ಮ ಬಗ್ಗೆ ನೀವೇ ಹೆಮ್ಮೆ ಪಡುವಿರಿ. ನಾನು ಕಷ್ಟದಲ್ಲಿ ಕೈ ಚೆಲ್ಲದೆ ಸ್ಥಿರತೆ ಕಾಯ್ದೆಯೆಂದು.
- ಸದಾ ಮುನ್ನಡೆಯಿರಿ ಸದಾ ಬೆಳೆಯುತ್ತಿರಿ. ಬದುಕಿನ ಕಚ್ಚಾರಸ್ತೆಗಳು ಸದೃಢ ಬದುಕನ್ನು ರೂಪಿಸುತ್ತವಂತೆ. ಅಂತೆಯೇ ನೀವು ಸದಾ ನಿಮ್ಮ ಹೃದಯದ ಒಳದನಿಯನ್ನು ಆಲಿಸಿರಿ. ಲೋಕದ ಕೊಂಕುಗಳಿಗೆ ಕಿವಿಯಾಗದಿರಿ. ನಿಮ್ಮ ಹೃದಯದ ದನಿಗೆ ಕಿವಿಯಾಗಿರಿ. ನಿಮ್ಮ ಆತ್ಮವಿಶ್ವಾಸ ಮಾತ್ರ ನಿಮ್ಮನ್ನು ಕಾಯುವುದು. ಇತರರ ಆಣತಿಗಳಿಗೆ ಕಿವುಡಾಗಿರಿ. ಭರವಸೆ ನಿಮ್ಮದಾಗಿರಲಿ.
- ನನ್ನ ತಾಯಿಗಾಗಿ ಅರ್ಪಿಸಿದ ‘ಹೇ ಮಮ್ಮಾ’ ಲೈವ್ ಕಾನ್ಸರ್ಟ್ ಹಾಗೂ ವಿಶ್ವಸಂಸ್ಥೆಯಲ್ಲಿ RM ಮಾತನಾಡಿದ ಕ್ಷಣಗಳು ನನ್ನ ಜೀವನದ ಅಮೂಲ್ಯ ಕ್ಷಣಗಳು.”
HOPE – Hold On Pain Ends – Love you ARMY… Love you BTS -ಜೆ-ಹೋಪ್
“ನಾನು BTSನ ನಾಯಕನಾದರೂ ನನ್ನ ನಾಯಕ ಜೆ- ಹೋಪ್. ಅವನು ನಮ್ಮೆಲ್ಲರ ಮಾನಸಿಕ ಆರೋಗ್ಯವನ್ನು ಗಮನಿಸುತ್ತಾನೆ. ಕಷ್ಟಗಳು ಎಲ್ಲರಿಗೂ ಬರುತ್ತವೆ. ಅಂತೆಯೇ ನಮ್ಮ ಗುಂಪಿನಲ್ಲಿ ಯಾರಿಗಾದರೂ ಏನಾದರು ತೊಂದರೆ ತಲೆದೋರಿದಾಗ ಹೋಬಿ ನಮ್ಮಲ್ಲಿ ಭರವಸೆ ತುಂಬುತ್ತಾನೆ. ನಗುವನ್ನು ಮರೆತಾಗಲೆಲ್ಲ ನಮ್ಮಲ್ಲಿ ನಗುವನ್ನು ತುಂಬುತ್ತಾನೆ. ನನ್ನ ನೈತಿಕ ಬೆಂಬಲವೇ ಜೆ-ಹೋಪ್. ಸದಾ ನನ್ನೊಂದಿಗಿರು ಹೋಬಿ” – ಕಿಂ ನಂಜೂನ್, BTS ನಾಯಕ
ಜೆ-ಹೋಪ್ ನ ಕೆಲವು ಹಾಡುಗಳ ತಂತುಗಳು ನಿಮಗಾಗಿ…
ಮುಂದಿನ ವಾರ BTSನ ಇನ್ನೊಬ್ಬ ಸದಸ್ಯನ ಕತೆಯನ್ನು ನಿಮ್ಮ ಮುಂದೆ ಇಡುವೆ. ಅಲ್ಲಿಯವರೆಗೆ ಬೈ ಬೈ Borahae!!Saranghae
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್ಬುಕ್ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
ನಿಖಿತಾ ಅಡವೀಶಯ್ಯ