ಬೆಳಕಾದವಳು

ಬೆಳಕಾದವಳು

ಇವಳು,

ಬದುಕೆಲ್ಲ ಬವಣೆಯನೆ ಹೊದ್ದವಳು.
ನೋವಿಗೆ ತೈಲವಾದವಳು.
ನಲಿವಿಗೆ ಕಾದವಳು,
ಕಾದು ಹೈರಾಣಾದವಳು.

ಮನೆಯೋ, ಬಯಲೋ, ಅಂತರವ ಕಾಣದೆ ಅಂತರ್ಮುಖಿಯಾದವಳು.
ಮಮತೆ ವಾತ್ಸಲ್ಯದ ಸಾಕಾರಕೆ,
ಹಂಗು ಅಣಕಗಳಿಗೆ ಸಾಕ್ಷಿಯಾದವಳು.

ತನ್ನನೇ ಗಾಣದೆತ್ತಾಗಿಸಿಕೊಂಡವಳು,
ನೆನಪಲ್ಲೇ ಕೊಟ್ಟ ನೆಪಗಳನು ಎಣಿಸಿ ಕೊಂಡವಳು.

ಗೆಳೆಯನೋ, ಪ್ರೇಮಿಯೋ,
ಮಾತೋ ಮೌನವೋ ಅರಿಯದವಳು,
ಬೆಟ್ಟದಷ್ಟು ಭಾವಗಳ ಮನೆಯ ಅಟ್ಟದಲೆ ಅರಿತವಳು.
ನೋವ ಕತ್ತಲೆಗೆ ನಲಿವ ಬೆಳಕ ಹುಡುಕುತ್ತಾ ಹೊರಟವಳು.

ಆದರೆ,

ಬೆಳಕಿಗೆ ಮೊಗ ಮಾಡಿ ನಿಂದವಳ
ಬೆನ್ನ ಹಿಂದೆ ಬರೀ ಕತ್ತಲು.
ತಮವು ಆವರಿಸಿ ಕಾಣದಿಹ ಜಗದ ಬೆತ್ತಲು.
ನೀರವ ಮೌನ ಸುತ್ತಲೂ.

ಬರಲಿ ಬಿಡು , ಬೆಳಕು ನಮ್ಮನೆತ್ತಲು.

ತನಾಶಿ

Related post

Leave a Reply

Your email address will not be published. Required fields are marked *