“ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ?”
ಅಂದಿಗೂ ಇಂದಿಗೂ ಈ ಹಾಡು ಜನಮಾನಸದಲ್ಲಿ ಬಹು ಜನಪ್ರಿಯ ಹಾಗೆ ವೀರಬಾಹು ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ ಶ್ರೀಯುತ ಎಂ.ಪಿ. ಶಂಕರ್ ಕೂಡ.
ನಮ್ಮ ಚಿತ್ರರಂಗದ ಕಪ್ಪು-ಬಿಳುಪಿನ ಕಾಲದ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದಂತಹ ಅಭಿಜಾತ ಕಲಾವಿದರಲ್ಲಿ ನಟ,ನಿರ್ಮಾಪಕ ಎಂ.ಪಿ ಶಂಕರವರು ಕೂಡ ಒಬ್ಬರು. ನಮ್ಮ ಚಿತ್ರರಂಗ ಕಂಡಂತಹ ಅದ್ಭುತ ಕಲಾವಿದರು. ಕುಸ್ತಿಗೆ ಹೇಳಿ ಮಾಡಿಸಿದಂತಹ ಎತ್ತರದ ಗರಡಿ ಮೈ, ಶಾರ್ದೂಲದಂತಹ ಕಠೋರ ಧ್ವನಿ, ಸಿಡಿಲಿನಂತಹ ಕಣ್ಣುಗಳು, ಹುಲಿಯಂತೆ ಅಭಿನಯದ ಮೂಲಕ ಆರ್ಭಟಿಸುವ ನಟರು. ಎಂ.ಪಿ ಶಂಕರ್ ಅವರು ಆಗಷ್ಟ್ 20,1935 ರಂದು ಮೈಸೂರಿನಲ್ಲಿ ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳಿಗೆ ಮೂರನೆಯ ಮಗನಾಗಿ ಜನಿಸಿದರು.
ರೈಲ್ವೆ ಇಲಾಖೆಯಲ್ಲಿ ಕಬ್ಬಿಣ ಬಡಿಯುವ ಕೆಲಸದಲ್ಲಿದ್ದ ಎಂ.ಪಿ ಶಂಕರವರು ತಮ್ಮ ಬಿಡುವಿನ ಸಮಯದಲ್ಲಿ ರಂಗಭೂಮಿ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಒಮ್ಮೆ ಇವರ ಬಲಾಢ್ಯ ದೇಹವನ್ನು ಕಂಡಂತಹ ಹುಣಸೂರು ಕೃಷ್ಣಮೂರ್ತಿಯವರು 1962 ರಲ್ಲಿ ತಮ್ಮ ʼರತ್ನ ಮಂಜರಿʼ ಚಿತ್ರಕ್ಕೆ ಮಾಂತ್ರಿಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು. ಅಲ್ಲಿಂದ ಶಂಕರ್ ರವರ ಕಲಾ ಬದುಕು ಬೆಳ್ಳಿಪರದೆಯಲ್ಲಿ ಶುರುವಾಯಿತು. ವ್ಯಾಘ್ರನ ಧ್ವನಿಯಂತಿದ್ದ ಅವರ ಡೈಲಾಗ್ ಶೈಲಿ ಎಲ್ಲರನ್ನೂ ಬೆಚ್ಚಿಬೀಳಿಸುವಂತಿತ್ತು. ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ರತ್ನ ಮಂಜರಿ ಚಿತ್ರದ ನಂತರ ʼವೀರ ಸಂಕಲ್ಪʼ ಚಿತ್ರದಲ್ಲಿ ನಟಿಸಿ ಎಲ್ಲರ ಪ್ರಶಂಸೆ ಪಡೆದರು. ನಂತರ ಡಾ. ರಾಜಕುಮಾರ್ ರವರ ʼಸತ್ಯ ಹರಿಶ್ಚಂದ್ರʼ ಚಿತ್ರದಲ್ಲಿ ವೀರಬಾಹು ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು. ನಂತರದ ದಿನಗಳಲ್ಲಿ ಒಂದರ ಮೇಲೊಂದರಂತೆ ಚಿತ್ರಗಳಲ್ಲಿ ಅವಕಾಶಗಳು ಹುಡುಕಿ ಬಂದವು.
ಗಂಧದಗುಡಿ
ಎಂ.ಪಿ. ಶಂಕರ್ ರವರ ಚಿಕ್ಕಪ್ಪ ಅರಣ್ಯ ಇಲಾಖೆಯಲ್ಲಿ ಸಂರಕ್ಷಣಾಧಿಕಾರಿಯಾಗಿದ್ದರು. ಅವರಿಂದ ಪರಿಸರ ಸಂರಕ್ಷಣೆ, ವನ್ಯಜೀವಿ ಹಾಗು ಕಾಡಿನ ಬಗ್ಗೆ ತಿಳಿದಿಕೊಂಡು ಒಲವು ಬೆಳೆಸಿಕೊಂಡರು. ಅಂದಿನ ಕಾಲದಲ್ಲಿ ಇಂಟರ್ ಲೋಕೇಶನ್ [ಒಳಾಂಗಣ ಚಿತ್ರೀಕರಣ] ಚಿತ್ರಗಳೆ ಹೆಚ್ಚಾಗಿದ್ದವು. ಇಂತಹ ಸಮಯದಲ್ಲಿ ಹೊಸದಾಗಿ ನಮ್ ಚಿತ್ರರಂಗದಲ್ಲಿ ಕಾಡಿನ ಬಗ್ಗೆ, ಪರಿಸರ ರಕ್ಷಣೆ ಬಗ್ಗೆ ಚಿತ್ರಗಳನ್ನ ಮಾಡಬೇಕೆಂದು ನಿರ್ಧರಿಸಿದರು. ಆಗ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ತಮ್ಮ ಚಿಕ್ಕಪ್ಪನ ವೃತ್ತಿ ಜೀವನದಲ್ಲಿ ನಡೆದಂತಹ ಘಟನೆಗಳನ್ನೆ ಆಧರಿಸಿ ಒಂದು ಕಥೆಯನ್ನು ಸಿದ್ಧ ಮಾಡಿದರು. ಆದರೆ ಚಿತ್ರಕ್ಕೆ ಬಂಡವಾಳ ಹೂಡಲು ಯಾರು ಮುಂದೆ ಬಾರದಿದ್ದಾಗ ತಾವೆ “ಭರಣಿ ಚಿತ್ರ” (ಭರಣಿ ನಕ್ಷತ್ರದಲ್ಲಿ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ ಸ್ವತಃ ಸಾಲ ಮಾಡಿ ಬಂಡವಾಳ ಹೂಡಿ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆಗ ಚಿತ್ರಕ್ಕೆ ನಾಯಕರಾಗಿ ಡಾ. ರಾಜಕುಮಾರ್ ರವರನ್ನು ಆಯ್ಕೆ ಮಾಡಿಕೊಂಡರು. ಅಣ್ಣಾವ್ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂ. ಪಿ ಶಂಕರ್ ಅಣ್ಣಾವ್ರಿಗೆ ಕಥೆಯನ್ನು ಕೂಡ ಒಪ್ಪಿಸಿದರು. ಡಾ. ರಾಜ್ ಸಹ ತಮ್ಮ 150ನೇ ಚಿತ್ರದ ಸಂಭ್ರಮದಲ್ಲಿದ್ದರು. ಹೊಸತನದ ಕಥೆಗಾಗಿ ಕಾಯುತ್ತಿದ್ದ ಅವರಿಗೆ ಕಾಡಿನ ರಕ್ಷಣೆ ಬಗ್ಗೆ ಬರೆದಿರುವ ಎಂ.ಪಿ. ಶಂಕರವರ ಕಥೆ ಇಷ್ಟವಾಯಿತು. ಒಪ್ಪಿಗೆಯನ್ನೂ ಸೂಚಿಸಿದರು. ನಂತರ ಚಿತ್ರೀಕರಣವು ಪ್ರಾರಂಭವಾಗಿ ಚಿತ್ರಕ್ಕೆ ʼಗಂಧದ ಗುಡಿʼ ಎಂದು ನಾಮಕರಣವಾಯಿತು. ಡಾ. ರಾಜ್ ಹಾಗು ವಿಷ್ಣು ಒಟ್ಟಿಗೆ ಅಭಿನಯಿಸಿದ ಚಿತ್ರ ಅದೊಂದೇ. ಚಿತ್ರ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಠಿಸಿತು.
ಎಂ.ಪಿ. ಶಂಕರ್ ರವರ ಮೊದಲ ಪ್ರಯತ್ನ ಯಶಸ್ವಿಯಾಯಿತು. ನಂತರ ನಟನೆಯ ಜೊತೆಗೆ ಉತ್ತಮ ಪರಿಸರವಾದಿ ನಿರ್ಮಾಪಕರಾದರು. ಅವರ ಹೆಚ್ಚಿನ ಚಿತ್ರಗಳೆಲ್ಲಾ ಕಾಡಿನ ಸಂರಕ್ಷಣೆ, ಪ್ರಾಣಿಗಳ ರಕ್ಷಣೆ ಕುರಿತಾಗೆ ಇದ್ದವು. ಮೃಗಾಲಯ, ಕಾಡಿನ ರಾಜ, ರಾಮ-ಲಕ್ಷ್ಮಣ, ಬೆಟ್ಟದ ಹುಲಿ ಹೀಗೆ ಬಹಳಷ್ಟು ಚಿತ್ರಗಳಲ್ಲಿ ಕಾಡುಗಳನ್ನೂ ಹಾಗು ವನ್ಯಜೀವಿಗಳನ್ನು ಸೊಗಸಾಗಿ ತೋರಿಸಿದಂತಹ ಅದ್ಭುತ ನಿರ್ಮಾಪಕರು ಅಂತಾನೆ ಹೇಳಬಹುದು.
ನಟನ – ಪಯಣ
ಭರಣಿ ನಕ್ಷತ್ರದಲ್ಲಿ ಜನಿಸಿದ ಶಂಕರ್ ರವರು ತಮ್ಮ ಜನ್ಮ ನಕ್ಷತ್ರದ ಹೆಸರನ್ನೇ ತಮ್ಮ ನಿರ್ಮಾಣ ಸಂಸ್ಥೆಗೆ ಇಟ್ಟು ಜೊತೆಗೆ ಭರಣಿ ಕಲಾತಂಡವನ್ನು ಕಟ್ಟಿ ಗೌತಮ ಬುದ್ಧ, ಗದಾಯುದ್ಧ, ಕನಕದಾಸ, ನಾಟಕಗಳನ್ನು ಮಾಡಿ ತಾವೂ ಅಭಿನಯಿಸಿದ್ದರು. ಅಭಿನಯದ ಜೊತೆಗೆ ನಿರ್ದೇಶನದಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಟೈಗರ್ ಪ್ರಭಾಕರ್ ರವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಎಂ.ಪಿ. ಶಂಕರ್ ರವರಿಗೆ ಸಲ್ಲುತ್ತದೆ. ಅಂದಿನ ನಟರಾದಂತಹ ರೆಬೆಲ್ ಸ್ಟಾರ್ ಅಂಬರೀಶ್, ವಿಷ್ಣುವರ್ಧನ್, ಶಂಕರನಾಗ್, ಅನಂತನಾಗ್, ಲೋಕೇಶ್, ಬಾಲಣ್ಣನಂತಹ ಎಲ್ಲರೊಂದಿಗೂ ತೆರೆಹಂಚಿಕೊಂಡಿದ್ದಾರೆ. ಕೇವಲ ನಿರ್ಮಾಣ, ನಿರ್ದೇಶನ, ಗಂಭೀರ ನಟನೆಯಲ್ಲದೇ ಹಾಸ್ಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ಅವರ ಗಿಡ್ಡೂ ದಾದ, ನಾರದ ವಿಜಯ ಚಿತ್ರಗಳಲ್ಲಿನ ಹಾಸ್ಯಾಭಿನಯ ಎಲ್ಲರ ಮೆಚ್ಚುಗೆ ಗಳಿಸಿತ್ತು. ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ನಾಗರಹಾವು, ಶನಿ ಪ್ರಭಾವ ದಂತಹ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯವನ್ನು ಪ್ರದರ್ಶಿಸಿದ್ದಾರೆ.
ತಮ್ಮ ಚಿತ್ರಗಳಿಂದ ಹೆಸರು ಮಾಡಿದಂತಹ ಎಂ.ಪಿ. ಶಂಕರ್ ರವರಿಗೆ, ನಟ ಶಾರ್ದೂಲ, ಕಲಾ ಶಾರ್ದೂಲ, ಕನ್ನಡಭೂಷಣ, ಸಾಹಸೀಚಿತ್ರರತ್ನ, ಕರುಣಾರತ್ನ ಬಿರುದಗಳನ್ನು ಕೊಟ್ಟು ಗೌರವಿಸಲಾಗಿದೆ.
ಕೊನೆಯ ದಿನಗಳು
ಮೈಸೂರು ಹುಲಿಯೆಂಬಂತಿದ್ದ ಎಂ.ಪಿ. ಶಂಕರ್ ರವರು ತಮ್ಮ ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನುತ್ತಾರೆ ಬಲ್ಲವರು. ಬಹುಶಃ ತಾವೆ ನಿರ್ಮಾಣ ಮಾಡಿದಂತಹ ಕೆಲವು ಚಿತ್ರಗಳ ಸೋಲಿನಿಂದ ಸಾಲವು ಹೆಚ್ಚಾಯಿತೇನೋ ?. ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದರು. ಅವರ ಬೆಳ್ಳಿಪರದೆಯ ಕೊನೆಯ ಚಿತ್ರ ʼಕಲ್ಲರಳಿ ಹೂವಾಗಿʼ ಎಂ.ಪಿ.ಶಂಕರವರು ಜುಲೈ 17, 2008 ರಲ್ಲಿ ತಮ್ಮ 73ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಮ್ಮನ್ನೆಲ್ಲಾ ಅಗಲಿ ನೆನಪಾಗಿ ಉಳಿದರು. ಆದರೆ, ಅವರು ಮಾಡಿದಂತಹ ಚಿತ್ರಗಳು, ಅಭಿನಯ ಮಾತ್ರ ಇಂದಿನ ಎಷ್ಟೊ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾಗುವುದಂತು ನಿಜ. ಅವರು ಅರಣ್ಯ ಸಂರಕ್ಷಣೆ ಬಗ್ಗೆ ಮಾಡಿದಂತಹ ಚಿತ್ರಗಳು ಇಂದು ನಮ್ಮಲ್ಲಿ ಅಲ್ಪ ಅಂತಾನೆ ಹೇಳಬಹುದು. ಅವರ ಕೆಲವು ಚಿತ್ರಗಳೂ ಇಂದಿನ ಕಾಲಮಾನಕ್ಕೂ ನಡೆಯುವಂತಹುದೇ ಆಗಿದೆ. ನಮ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ಮರೆಯಲಾಗದಂತಹ ಚಿತ್ರಗಳನ್ನ ಕೊಟ್ಟಂತಹ ಎಂ.ಪಿ ಶಂಕರವರಿಗೆ ನಮ್ಮ ಸಾಹಿತ್ಯ ಮೈತ್ರಿ ಬಳಗದಿಂದ ಒಂದು ಸವಿನೆನಪಿನ ಬರಹ.
ಲೇಖನ್ ನಾಗರಾಜ್
ಹರಡಸೆ,ಹೊನ್ನಾವರ
ಚಿತ್ರಗಳು: ಅಂತರ್ಜಾಲ