ಬೇಡಿ ಕಳಚಿದಾಗ
ವರ್ಷಗಳ ಪ್ರೀತಿಯ ಬೇರು
ಆಳವಾಗಿ ಅಂತರಾಳದಿ ನೆಲೆಸಿದೆ!
ಅಗಲಿಕೆಯ ನೋವನು ಕ್ಷಣಿಕವೂ..
ಭರಿಸಲಾರದ ಮನವಿದು ಕಲಕಿದೆ!!
ಹೆತ್ತ ಕರುಳದು ಸದಾ ಜೊತೆಯಿರಲು
ಬಯಸಿ ತಪಿಸಿ ನೋವನುಂಡಿದೆ!
ನೆನಪುಗಳ ನಾವೆಯಲಿ ಮನ ತೇಲುತಿರಲು..
ಅಗಲುವ ಸಂಕಟ ಹೃದಯವ ಹಿಂಡಿದೆ!!
ಕಾಲಚಕ್ರವಿದು ಗರಗರನೆ ತಿರುಗಿ
ಯಾರನೂ ಕಾಯದೇ ಉರುಳುತಲಿದೆ!
ಪ್ರೀತಿಯ ಹಕ್ಕಿಯು ರೆಕ್ಕೆಬಲಿತು..
ಬಾನಂಗಳದಿ ಹಾರಲು ಅಣಿಯಾಗಿದೆ!!
ಮನವು ಭರವಸೆಗಳಲಿ ಬೆರೆತು ಅರಿತು
ಬಾಳ ಉಯ್ಯಾಲೆಯು ತೃಪ್ತಿಯಲಿ ಜೀಕುತಿದೆ!
ತನ್ನದೇ ನೆಲೆಯಲಿ ಅಸ್ತಿತ್ವ ಹುಡುಕಲು..
ತವಕಿಸುವ ಪಕ್ಷಿ ತನ್ನ ಗುರಿ ತಲುಪಿದೆ!!
ಸುಮನಾ ರಮಾನಂದ