ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ
ಪುಸ್ತಕ : ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ
ಲೇಖಕರು : ಶ್ರೀ ಜೆ ಎನ್ ಜಗನ್ನಾಥ್
ಪ್ರಕಟಣೆ :ಕದಂಬ ಪ್ರಕಾಶನ
ಹಣಕಾಸು, ಬ್ಯಾಂಕಿಂಗ್ ಮತ್ತು ಹಣಕಾಸಿನ ನಿರ್ವಹಣೆ ಎನ್ನುವುದು ಬಹಳ ವಿಸ್ತಾರವಾದ ಕ್ಷೇತ್ರ. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಾದ ವಿಚಾರವಲ್ಲ.
ಅರ್ಥಿಕತೆ, ಬ್ಯಾಂಕಿಂಗ್, ವಾಣಿಜ್ಯ ವಿಚಾರಗಳನ್ನು ಕುರಿತಾಗಿ ಸಾಕಷ್ಟು ಪುಸ್ತಕಗಳು ಬಂದಿದ್ದರೂ Treasury Management ವಿಷಯ ಮಾತ್ರ ಅಷ್ಟಾಗಿ ಯಾರನ್ನೂ ತಲುಪಿಲ್ಲವೆಂದೇ ಹೇಳಬೇಕು.
ಹಿರಿಯ ಸಾಹಿತಿ ದಿ.ಪ್ರೊ ಎಚ್ಚೆಸ್ಕೆ ಬ್ಯಾಂಕಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಗೆ ಸಂಬಂಧಪಟ್ಟಂತಹ ಪುಸ್ತಕಗಳು ಬಂದಿರಬಹುದಾದರೂ ಅವುಗಳ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬೇಕು.
ಲೇಖಕರಾದ ಶ್ರೀಯುತ ಜೆ ಎನ್ ಜಗನ್ನಾಥ್ ಅವರ ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ.
ಸಾಮಾನ್ಯರಿಗೂ ಅರ್ಥವಾಗುವಂತೆ ಬ್ಯಾಂಕಿಂಗ್, ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ನಮ್ಮ ಬದುಕಿಗೆ ಬಹಳ ಅಗತ್ಯವಾದ ಬ್ಯಾಂಕಿಂಗ್‌ನ ವಿಚಾರಗಳನ್ನು ತಿಳಿಸಿಕೊಟ್ಟಿರುವುದು ಈ ಕೃತಿಯ ವಿಶಿಷ್ಟತೆ.
ಜೆ ಎನ್ ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.
25 ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು.
ಸ್ವಯಂ ನಿವೃತ್ತಿ ಪಡೆದುಕೊಂಡ ನಂತರ ಭಾರತದ ಐಟಿ ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ ನಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50 ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.
ಬ್ಯಾಂಕ್ ಎಂದರೆ ಹಣದ ಠೇವಣಿಯನ್ನು ತೆಗೆದುಕೊಳ್ಳುವುದು ಮತ್ತು ಸಾಲ ನೀಡುವುದು ಎಂದಷ್ಟೇ ಜನಸಾಮಾನ್ಯರ ಭಾವನೆ. ಆದರೆ ಬ್ಯಾಂಕು ತನ್ನ ಲಾಭಾಂಶವನ್ನು ವಿಸ್ತರಿಸಿಕೊಳ್ಳಲು ಇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬೇಕಾಗುತ್ತದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ವಹಿವಾಟು, ಇಂತಹ ಚಟುವಟಿಕೆಗಳಲ್ಲಿ ಪ್ರಮುಖವಾಗಿದೆ.
“ಖಜಾನೆ ವ್ಯವಸ್ಥಾಪನ” ಎಂದರೆ ಏನು!? ಬ್ಯಾಂಕು ಸಂಪನ್ಮೂಲಗಳನ್ನು / ನಿಧಿಗಳನ್ನು, ಅಂತಾರಾಷ್ಟ್ರೀಯ ಅಥವಾ ದೇಶಿಯ ಮಾರುಕಟ್ಟೆಯಲ್ಲಿ ತೊಡಗಿಸಿ ಹೇಗೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು, ಇನ್ನಿತರ ಆದಾಯದ ಮೂಲಗಳಿಂದ ಹಣಕಾಸಿನ ಕ್ರೋಡೀಕರಣ ಹೇಗೆ!? ಮುಂತಾದ ವಿಷಯಗಳ ಕುರಿತಾದ ಮಾಹಿತಿ ಈ ಪುಸ್ತಕದ ಹೂರಣ.
ಲೇಖಕರಾದ ಶ್ರೀ ಜಗನ್ನಾಥರು ಹೇಳುವಂತೆ ಖಜಾನೆ ವ್ಯವಸ್ಥಾಪನವು ವಿಶಾಲವಾದ, ಅನೇಕ ಸವಾಲುಗಳನ್ನು ಒಡ್ಡುವ ಕ್ಷೇತ್ರ. ಇದರ ಬಗ್ಗೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಇರಬಹುದು. ಕನ್ನಡದಲ್ಲಿ ಇವರು ರಚಿಸಿರುವ ಈ ಕೃತಿ ಎಲ್ಲರಿಗೂ ಉಪಯೋಗವಾಗಬಹುದಾದ ಕೈಪಿಡಿ. ಖಜಾನೆ ವ್ಯವಸ್ಥಾಪನೆ ಬಗ್ಗೆ ತಿಳಿದುಕೊಳ್ಳಬಯಸುವವರಿಗಂತೂ ಇದು ದಾರಿದೀಪ .
ಯಾವುದಾದರೂ ವಿಶ್ವವಿದ್ಯಾಲಯದ ಪದವಿ ವಿಭಾಗದಲ್ಲಿ ಪಠ್ಯ ಪುಸ್ತಕವಾಗುವ ಎಲ್ಲ ಅರ್ಹತೆ ಈ ಪುಸ್ತಕಕ್ಕೆ ಇದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ಶ್ರೀಯುತ ಜಗನ್ನಾಥ್ ಅವರಿಂದ ಇಂತಹ ಪುಸ್ತಕಗಳು ಕನ್ನಡದಲ್ಲಿ ಮತ್ತಷ್ಟು ಬರಲಿ ಎಂಬುದು ನಮ್ಮ ಆಶಯ.
ಅವರಿಗೆ ಶುಭಾಶಯಗಳು.
ಈ ಪುಸ್ತಕದ ಪ್ರತಿಗಳು ಬೇಕಾದಲ್ಲಿ ಲೇಖಕರಾದ ಶ್ರೀ ಜಗನ್ನಾಥ್ ಅವರನ್ನು 8095863119 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಸುನೀಲ್ ಹಳೆಯೂರು