ಭಾಷೆ-ಬಾಂಧವ್ಯ ಮತ್ತು ಭರವಸೆ
‘ಭಾಷೆ’ ಯಾವುದೇ ಇರಲಿ ಅದು ಸಮುದಾಯಕ್ಕೆ ಅದ್ಭುತವಾದ ಬೆಳಕು. ಅದರ ಬೆಳಕಿನಲ್ಲಿ ಕೇವಲ ಬಾಹ್ಯರೂಪವನ್ನಷ್ಟೆ ಅಲ್ಲಅಂತರಂಗವನ್ನೂ ಕಾಣಬಹುದು. ಮನುಷ್ಯ ಸೃಷ್ಟಿಸಿದ ಅತ್ಯದ್ಭುತ ವಸ್ತು ಅಥವಾ ಸಂಗತಿಯೊಂದಿದ್ದರೆ ಅದು ಭಾಷೆಯೇ. ಭಾಷೆಯಿಂದಾಗಿಯೇ ಮನುಷ್ಯ ಸಂಸ್ಕತಿವಂತ ನಾಗರಿಕನಾಗಲು ಸಾಧ್ಯವಾಗಿದೆ. ನಾಲ್ಕೇ ಮಂದಿ ಮಾತಾಡುತ್ತಿರಲಿ, ನಾಲ್ಕು ಕೋಟಿ ಜನ ಮಾತನಾಡುತ್ತಿರಲಿ ಅದು ಭಾಷೆಯ ಮೂಲಕವೇ. ಯಾವುದೇ ಭಾಷೆಯೂ ಮೇಲಲ್ಲ ಅಥವಾ ಕೀಳಲ್ಲ.
‘ಭಾರತೀಯ ಭಾಷೆಗಳೆಲ್ಲವೂ ಅತ್ಯಂತ ಸಂಪದ್ಭರಿತ ಮತ್ತು ಸತ್ವಪೂರ್ಣ ಭಾಷೆಗಳು’. ಭಾರತದಲ್ಲಿ ಒಟ್ಟು 723 ಭಾಷೆಗಳಿದ್ದು, ಇವುಗಳಲ್ಲಿ 179 ಮುಖ್ಯ ಭಾಷೆಗಳು, 544 ಉಪಭಾಷೆಗಳು ಇವೆ. ಈ 179 ಮುಖ್ಯ ಭಾಷೆಗಳ ಪೈಕಿ ಕನ್ನಡವೂ ಒಂದು. ಈ ಬಗೆಯ ಭಾಷಾ ವೈವಿಧ್ಯತೆ ಭಾರತದ ಪ್ರಮುಖ ಮತ್ತು ಬಹಳ ದೊಡ್ಡ ಸಂಪತ್ತು. ಒಂದು ಜನಾಂಗ, ಒಂದು ಭಾಷೆಯೆಂಬ ವೈವಿಧ್ಯತೆಯೇ ಇಲ್ಲದ ಏಕಾಕೃತಿಯ ದೇಶ ಇದಲ್ಲ. ಜೀವವೈವಿಧ್ಯ ಎಷ್ಟು ಮುಖ್ಯವೊ, ಭಾಷಾವೈವಿಧ್ಯತೆಯೂ ಅಷ್ಟೇ ಮುಖ್ಯವಾದದ್ದು. ಭಾಷೆ ಮಾಹಿತಿಯ ಸಂವಹನೆಗೆ ನಿರೂಪಿತವಾಗಿರುವ ಸಂಕೇತಗಳ ಪದ್ದತಿ. ಈ ಸಂಕೇತಗಳು ಉಚ್ಛರಿತ ಆಗಿರಬಹುದು, ಲಿಖಿತವಾಗಿರಬಹುದು ಅಥವಾ ಅಭಿನಿತವಾಗಿ ಇರಬಹುದು. ಭಾಷೆ ಮಾನವನ ಅನುಪಮ ಗುಣಗಳಲ್ಲಿ ಒಂದಾಗಿದೆ. ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಿರುವ ಕನ್ನಡ ಭಾಷೆಯಿಂದ ತೆಲುಗು ಭಾಷೆಯು ಅಭಿವೃದ್ಧಿ ಹೊಂದಿದ್ದರಿಂದ ಕನ್ನಡಕ್ಕೆ ತೆಲುಗು ಭಾಷೆಯು ಸಹೋದರಿ ಎನ್ನಬಹುದು. ಭಾಷಾ ಪರಿಜ್ಞಾನ ಇಲ್ಲದವರು ಕನ್ನಡ ಮತ್ತು ತೆಲುಗು ಭಾಷಾ ಬಾಂಧವ್ಯದ ಬಗ್ಗೆ ವಿವಾದ ಎಬ್ಬಿಸುತ್ತಾರೆ. ಭಾರತದಲ್ಲಿ ಮೊದಲನೇ ಭಾಷೆಯಾಗಿದ್ದ ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳು ಒಂದೇ ಕುಟುಂಬಕ್ಕೆ ಸೇರಿದವುಗಳಾಗಿವೆ. ಕನ್ನಡದಿಂದ ಅಭಿವೃದ್ಧಿಗೊಂಡ ತೆಲುಗು ಭಾಷೆ ಕನ್ನಡ ಭಾಷೆಗೆ ಸಹೋದರಿ ಭಾಷೆಯಾಗುವುದರಿಂದ ಸುಮಾರು 100 ವರ್ಷಗಳಿಂದ ಎರಡೂ ಭಾಷೆಗಳ ಸಂಶೋಧಕರು ಈ ಎರಡೂ ಭಾಷೆಗಳಿಗೆ ಒಂದೇ ಲಿಪಿಯನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ.
ಭಾರತದಲ್ಲಿ ಆರ್ಯ ಮೂಲದ ಭಾಷೆಯಾದ ‘ಸಂಸ್ಕೃತ’ ಭಾಷೆಯಿಂದ ಹುಟ್ಟಿಕೊಂಡಿರುವ ಅನೇಕ ಭಾಷೆಗಳಿದ್ದು, ಆದಿವಾಸಿ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಈಗಲೂ ಬದುಕುತ್ತಿವೆ. ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡ ಭಾಷೆಗಳು ದಕ್ಷಿಣ ಭಾರತದಲ್ಲಿ ಅಧಿಕೃತ ಭಾಷೆಗಳಾಗಿದ್ದು, ನಾವು ಎಲ್ಲಾ ಭಾಷೆಗಳ ಬಾಂಧವ್ಯವನ್ನು ಒಪ್ಪಿಕೊಂಡು ಎಲ್ಲಾ ಭಾಷೆಗಳನ್ನು ಗೌರವಿಸಿ ಬೆಳೆಸಬೇಕಿದೆ. ನಮ್ಮ ಭಾಷೆ ಕನ್ನಡದ ಜೊತೆಗೆ ಹಿಂದಿ, ಉರ್ದು, ಮರಾಠಿ ಮುಂತಾದ ಭಾಷೆಗಳ ಬಾಂಧವ್ಯಕ್ಕೂ ತೆಲುಗು ಭಾಷೆಯೊಂದಿಗೆ ಇರುವ ರಕ್ತ ಸಂಬಂಧಕ್ಕೂ ವ್ಯತ್ಯಾಸವಿದೆ. ಅದರಲ್ಲೂ ತಮಿಳು, ಮಲಯಾಳಂ, ತುಳು ಭಾಷೆಗಳು ನಮ್ಮ ಕೌಟುಂಬಿಕ ಭಾಷೆಗಳಾಗಿದ್ದು, ಕನ್ನಡಿಗರು ಎಲ್ಲಾ ಭಾಷೆಗಳೊಂದಿಗೆ ಸೌಹಾರ್ದ ಮತ್ತು ಬಾಂಧವ್ಯದಿಂದ ನಡೆದುಕೊಳ್ಳುತ್ತಿರುವುದು ಉತ್ತಮ ವಿಚಾರ. ಭಾಷೆ ಯಾವುದೇ ಇರಲಿ, ಆಯಾ ಭಾಷೆಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಇವುಗಳು ನಮ್ಮ ಬದುಕಿಗೆ ಪೂರಕವಾಗಿವೆ. ಭಾರತದಲ್ಲಿ ಭಾಷೆಗೆ ಸಂಬಂಧಿಸಿದಂತೆ ದ್ವೇಷಗಳು ಹುಟ್ಟಿಕೊಳ್ಳುತ್ತಿರುವುದು ಅಪಾಯ ಮತ್ತು ವಿಪರ್ಯಾಸವಾಗಿದೆ. ಒಂದು ಭಾಷೆಯ ಅಭಿಮಾನದ ಹೆಸರಿನಲ್ಲಿ ಅನ್ಯಭಾಷೆಗಳನ್ನು ದೂಷಿಸುವುದು ಸರಿಯಲ್ಲ. ಯಾವುದೇ ಭಾಷೆಗಳು ಮನುಷ್ಯನ ಬುದ್ದಿಶಕ್ತಿ ಮತ್ತು ವಿವೇಕವನ್ನು ವಿಸ್ತರಿಸಬೇಕೆ ಹೊರತು ದ್ವೇಷಿಸಬಾರದು. ಪ್ರತಿಯೊಬ್ಬರೂ ತನ್ನ ಮಾತೃಭಾಷೆಯ ಜತೆಗೆ ಉಳಿದೆಲ್ಲಾ ಭಾಷೆಗಳಿಗೆ ಗೌರವ ಕೊಡಬೇಕು. ಸಾಧ್ಯವಾದರೆ ಅವುಗಳನ್ನು ಕಲಿಯಬೇಕು ಮತ್ತು ಕಲಿಸಬೇಕು. ಭಾರತದ ಉದ್ದಗಲಕ್ಕೂ ಇರುವ ಭಾಷೆಗಳು ಸಾಮರಸ್ಯ ಮತ್ತು ಸಂಪರ್ಕದ ಕೊಂಡಿಗಳಾಗಿವೆ. ಇದು ಐಕ್ಯತೆಯ ಸಂಕೇತ ಮತ್ತು ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ.
ಕನ್ನಡ ಪ್ರೇಮಿ ಮತ್ತು ಕನ್ನಡಿಗನಾದ ನಾನು ಹಿಂದಿ ಭಾಷೆಯ ಜನರಿರುವ ಸಮಾರಂಭದಲ್ಲಿ, ಹಿಂದಿ ಭಾಷೆಯ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಿದರೆ ಸಾಕಷ್ಟು ಜನರು ಅದನ್ನು ವಿರೋಧಿಸಬಹುದು. ಇದಕ್ಕೆ ಕನ್ನಡ ಭಾಷೆಯ ಮೇಲೆ ಅವರಿಗಿರುವ ಅಭಿಮಾನವೂ ಕಾರಣವಾಗಿರಬಹುದು. ಆದರೆ ನಮ್ಮ ಭಾಷಾಭಿಮಾನಕ್ಕಾಗಿ ಅನ್ಯಭಾಷೆಯನ್ನು ದೂಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇತ್ತೀಚೆಗೆ ರಾಷ್ಟ್ರೀಯ ಭಾಷೆ ಹಿಂದಿಯನ್ನು ವಾಪಾಸ್ ಪಡೆಯಬೇಕೆಂಬ ಚಳವಳಿಗಳು ನಡೆಯುತ್ತಿದ್ದು, ಇದು ವಿಷಾಧನೀಯ. ಯಾವುದೇ ಚಳವಳಿಗಳು ಮನುಷ್ಯನನ್ನು ಮನುಷ್ಯನನ್ನಾಗಿಸಲು ಇರುವ ವ್ಯವಸ್ಥೆಯಾಗಬೇಕೇ ವಿನಃ ದ್ವೇಷದ ಬೀಜವನ್ನು ಬಿತ್ತಬಾರದು. ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಕಾಲಿಟ್ಟಕೂಡಲೇ ಮರಾಠಿ ಭಾಷೆಯ ವಾಸನೆ ಘಮ್ಮೆನ್ನುತ್ತದೆ. ಅಲ್ಲಿನ ಸಿಬ್ಬಂದಿಗಳನ್ನು ಬಿಡಿ ಮೂಲತಃ ಅಲ್ಲಿಯವರೇ ಆಗಿರುವ ಅಲ್ಲಿನ ವ್ಯಾಪಾರಿಗಳೂ ನಾವೇನಾದರೂ ಕನ್ನಡದಲ್ಲಿ ಏನಾದರೂ ಕೇಳಿದರೆ ಅವರು ಮರಾಠಿಯಲ್ಲೇ ಉತ್ತರಿಸುತ್ತಾರೆ. ಇನ್ನು ಬೆಳಗಾವಿಯಿಂದ ಪೂನಾ ಹಾಗೂ ಕೊಲ್ಲಾಪುರ ಕಡೆಗೆ ಹೋಗುವ ಬಸ್ಸುಗಳ ಸಿಬ್ಬಂದಿಗಳೂ ಒಂದೇ ಒಂದು ಶಬ್ದ ಕನ್ನಡ ಮಾತನಾಡಲಾರರು. ಇಂತಹ ಒಂದು ಉದಾಹರಣೆಗೆ ವಿರುದ್ಧವಾದ ಮನಸ್ಥಿತಿ ಕನ್ನಡಿಗರದ್ದು. ಬೆಂಗಳೂರಿನ ಬಹುತೇಕ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಒಟ್ಟಾಗಿ ಮಾತನಾಡಲು ಸೇರಿದಾಗ ಆ ತಂಡದಲ್ಲಿ ಯಾರಾದರೂ ಒಬ್ಬರು ತೆಲುಗು, ತಮಿಳು ಮಳೆಯಾಳಂ ಅಥವಾ ಇನ್ಯಾವುದೇ ಭಾಷೆಯವರು ಇದ್ದರೆ ಆ ಇಡೀ ತಂಡ ಕನ್ನಡವನ್ನೇ ಮರೆತುಬಿಡುತ್ತದೆ. ಹೆಚ್ಚೇಕೆ ಸ್ಯಾಂಡಲ್’ವುಡ್’ನ ಕೇಂದ್ರ ಸ್ಥಾನ ಗಾಂಧಿನಗರದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.
ಪರಂಪರೆ ಎಂಬುದು ಏಕಕಾಲಕ್ಕೆ ಹಳೆಯದೂ, ಹೊಸತೂ ಹೌದು. ಕುವೆಂಪುರವರು ಪರಂಪರೆಯನ್ನು ‘ಅಜ್ಜಿಯ ಒಡವೆ’ಗೆ ಹೋಲಿಸುತ್ತಿದ್ದರು. ಅಜ್ಜಿಯ ಕಾಲಾನಂತರ ಅವರ ಆಭರಣವನ್ನು ಯಾರೂ ಎಸೆಯುವುದಿಲ್ಲ. ನಂತರ ಆ ಆಭರಣವನ್ನು ಬಳಸುವವರು ಅವರ ಅಭಿರುಚಿಗೆ ಅನುಗುಣವಾಗಿ ತನಗೆ ಬೇಕಾದಂತೆ ಅದನ್ನು ಕರಗಿಸಿ ಹೊಸ ವಿನ್ಯಾಸಕ್ಕೆ ಬದಲಾಯಿಸಿ ಧರಿಸುತ್ತಾರೆ. ಆ ಬಂಗಾರವು ಯಾವ ವಿನ್ಯಾಸದಲ್ಲಿಇದ್ದರೂ ಅದು ಬಂಗಾರವೇ ಆಗಿರುತ್ತದೆ. ‘ಭಾಷೆಯೂ’ ಬಂಗಾರದಷ್ಟೆ ಅಥವಾ ಅದಕ್ಕಿಂತ ಹೆಚ್ಚು ಅಮೂಲ್ಯವಾದದ್ದು. ಕಾಲಧರ್ಮಕ್ಕೆ ಅನುಗುಣವಾಗಿ ನಾವೆಲ್ಲರೂ ಅದನ್ನು ಕಟ್ಟಿಕೊಳ್ಳುತ್ತಾ ಬೆಳೆಸಬೇಕು. ಆಧುನಿಕತೆಯ ಹೊಸ ಪರಿಭಾಷೆಗೆ ಭಾಷೆಯನ್ನು ಒಗ್ಗಿಸಬೇಕು. ಆಧುನಿಕತೆಯೆಂಬುದು ಯಂತ್ರ ಜಗತ್ತಿನ ಜತೆ ಬೆಳೆದು ಬಂದ ಪರಿಕಲ್ಪನೆ ಆಗಿರುವುದರಿಂದ ಇಂದು ಭಾಷೆ ‘ತಂತ್ರಜ್ಞಾನ’ದ ಭಾಷೆಯಾಗಿಯೂ ಬೆಳೆಯಬೇಕಾದ ಅನಿವಾರ್ಯತೆ ಇದೆ. ಇಂದು ಯುವಪೀಳಿಗೆಯು ಯಂತ್ರಜಗತ್ತಿನ ಜೊತೆಗೆ ಸಂವಾದ ನಡೆಸುತ್ತಾ ಇರುವುದರಿಂದ ಅವರು ಸಹಜವಾಗಿ ಇಂಗ್ಲೀಷಿನತ್ತ ಒಲವು ತೋರುತ್ತಾ ತನ್ನ ಮಾತೃ ಭಾಷೆಗೆ ಪರಕೀಯರು ಆಗುತ್ತಿದ್ದಾರೆ. ಈ ತೊಡಕನ್ನು ನಿವಾರಣೆಗೆ ಪ್ರಾದೇಶಿಕ ಭಾಷೆಗಳು ‘ತಂತ್ರಜ್ಞಾನ’ದ ಭಾಷೆಗಳಾಗಿಯೂ ಬದಲಾಗಬೇಕು.
ಹಿಂದಿ ಉತ್ತರ ಭಾರತದ ಭಾಷೆ ಆಗಿದ್ದರೂ ವಿಶ್ವಕ್ಕೆ ಹಿರಿಯಣ್ಣನಾದ ಇಂಗ್ಲಿಷನ್ನು ನಾವೆಲ್ಲ ಅಪ್ಪಿಕೊಂಡು ಮುದ್ದಾಡುವಾಗ ನಮಗೆ ನಮ್ಮದೇ ದೇಶದ ಹಿಂದಿ ಏಕೆ ಅಪಥ್ಯವಾಗುತ್ತದೆ? ರಾಜ್ಯದ ವಿವಿಧ ಭಾಗಗಳ ಪೈಕಿ ಕೊಡಗಿನ ಕೊಡವ ಭಾಷೆ, ದಕ್ಷಿಣ ಕನ್ನಡದ ಸುಳ್ಯದಲ್ಲಿ ಅರೆ ಭಾಷೆ, ಅಲ್ಲಿನ ಉಳಿದ ತಾಲೂಕುಗಳಲ್ಲಿ ಕನ್ನಡ-ತುಳು, ಉಡುಪಿಯಲ್ಲಿ ಮತ್ತೊಂದಿಷ್ಟು ಬದಲಾವಣೆಯೊಂದಿಗೆ ಕನ್ನಡ-ತುಳು, ಹವ್ಯಕ ಕನ್ನಡ, ಕುಂದಾಪುರ ಕನ್ನಡ, ಉತ್ತರ ಕನ್ನಡದಲ್ಲಿ ಕೊಂಕಣಿ ಇಷ್ಟೆಲ್ಲ ಇದ್ದರೂ ಕನ್ನಡಿಗರು ಪರಭಾಷೆಯನ್ನು ಎಂದೂ ದ್ವೇಷಿಸಿಲ್ಲ ಮತ್ತು ಅಸ್ಪೃಶ್ಯರಂತೆ ಕಂಡಿಲ್ಲ ಇಂದು ಪ್ರಪಂಚವು ಅವಕಾಶಗಳಲ್ಲಿ ವಿಶಾಲವಾಗಿದ್ದು ನಾವು ಇನ್ನಷ್ಟು ಹೆಚ್ಚಿನ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಲ್ಲಿ ಉದ್ಯೋಗ, ಉದ್ದಿಮೆ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಾ ಹೋಗುತ್ತದೆ. ಪರ ದೇಶಗಳಲ್ಲಿ ಮಿತ್ರರು, ಸಹೋದ್ಯೋಗಿಗಳು ಒಟ್ಟು ಸೇರಿದಾಗ ಅವರು ಭಾರತೀಯರೆಂದು ತಿಳಿದರೆ ಇಂಗ್ಲೀಷಿಗಿಂತ ಸಂವಹನಕ್ಕೆ ಬಳಸುವ ಭಾಷೆ ಹಿಂದಿ. ಅದೇ ರೀತಿ ದೇಶದ ಯಾವುದೋ ಮೂಲೆಯಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು ಒಟ್ಟು ಸೇರಿದಾಗ ಅಲ್ಲಿ ಮಾತನಾಡಲು ಬಳಸುವ ಭಾಷೆ ಕನ್ನಡ. ಇನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳು ಪರಸ್ಪರ ಸಂಧಿಸಿದಾಗ ಅವರು ಬಳಸುವ ಭಾಷೆ ಪ್ರಾದೇಶಿಕ ಭಾಷೆಯೇ ಆಗಿರುತ್ತದೆ.
ಒಮ್ಮೆ ನಾನು ಮಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲು ಕೇರಳದ ಕೊಚ್ಚುವೇಲಿಯಿಂದ ಬರುತ್ತಿತ್ತು. ರೈಲಿನ ಬಹುತೇಕ ಸೀಟುಗಳಲ್ಲಿ ಕೇರಳಿಗರೇ ತುಂಬಿದ್ದರು. ಎಲ್ಲೆಡೆ ಮಲಯಾಳಂ ಭಾಷೆಯದ್ದೇ ಕಾರುಬಾರು. ನಾನು ನನ್ನ ಗೆಳೆಯ ದಕ್ಷಿಣ ಕನ್ನಡದವರು ಆದ್ದರಿಂದ ನಮ್ಮಿಬ್ಬರ ಮಾತೃ ಭಾಷೆ ತುಳುವಿಗೆ ಅಲ್ಲಿ ಯಾವುದೇ ಕಿಮ್ಮತ್ತೂ ಇರಲಿಲ್ಲ. ನಮ್ಮದು ಸೀಟ್ ಮೊದಲೇ ಬುಕ್ ಆಗಿದ್ದರಿಂದ ನಮ್ಮ ಅಕ್ಕಪಕ್ಕದ 2-3 ಬೋಗಿಗಳಲ್ಲಿ ಯಾರೊಬ್ಬರೂ ಕನ್ನಡದವರಾಗಲೀ, ತುಳುವರಾಗಲೀ ಇರಲಿಲ್ಲ. ಮೂರು ದಿನದ ರೈಲು ಪ್ರಯಾಣದ ಪೈಕಿ ಒಂದೂವರೆ ದಿನಗಳನ್ನು ನಾವಿಬ್ಬರೇ ಪರಸ್ಪರ ಮಾತನಾಡಿಕೊಳ್ಳುತ್ತಾ ಕಳೆದಿದ್ದೆವು. ಎರಡನೇ ದಿನ ಸಂಜೆಯ ವೇಳೆಗೆ ನಮ್ಮ ಭೋಗಿಯಲ್ಲಿ ಮೊಬೈಲಿನಲ್ಲಿ ಯಾರೋ ಒಬ್ಬರು ತುಳುವಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಅವರನ್ನು ವಿಚಾರಿಸಿದಾಗ ಅವರ ಬೋಗಿಯು ನಮ್ಮ ಬೋಗಿಗಿಂತ 10-12 ಬೋಗಿ ದೂರದಲ್ಲಿತ್ತು. ನಮ್ಮ ಬೋಗಿಯಿಂದ ಅವರು ಅಷ್ಟು ದೂರದಲ್ಲಿ ಇದ್ದರೂ ಮುಂದಿನ ಉಳಿದ ಪ್ರಯಾಣದ ಅವಧಿಯಲ್ಲಿ ಕನಿಷ್ಟವೆಂದರೂ 10-20 ಬಾರಿ ಅವರಿದ್ದ ಬೋಗಿಗೆ ಹೋಗಿ ಅಲ್ಲಿ ಅವರೊಂದಿಗೆ ಕುಳಿತು ಹರಟಿ ಬರುತ್ತಿದ್ದೆವು. ಇದು ಭಾಷಾಭಿಮಾನದ ಒಂದು ರೂಪವಷ್ಟೇ. ಇಂತಹ ಭಾಷಾಭಿಮಾನವು ಪ್ರತಿ ಹಳ್ಳಿಹಳ್ಳಿಗಳ ಪ್ರತಿಯೊಬ್ಬರಲ್ಲೂ ಮೂಡಬೇಕಾಗಿರುವುದು ಅನಿವಾರ್ಯವಾಗಿದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160