ಮಕ್ಕಳಿಗೆ ಬೇಕು ಜೀವನದ ಕೌಶಲಗಳು

ಮಕ್ಕಳಿಗೆ ಬೇಕು ಜೀವನದ ಕೌಶಲಗಳು

ಬದುಕೆನ್ನುವುದು ತುಂಬಾ ಸಂಕೀರ್ಣ ಮತ್ತು ಗೊಂದಲಮಯ ವಿಷಯವಾಗಿದ್ದು, ಹೆಚ್ಚು ಉತ್ಪಾದಕ ಮತ್ತು ಸಂತಸವನ್ನು ನೀಡುವ ಅಗತ್ಯ ಕೌಶಲ ಮತ್ತು ಸಾಮರ್ಥ್ಯಗಳಿಲ್ಲದೆ ಇಲ್ಲಿ ಒಂದು ದಿನವೂ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೂ ಆತ್ಮವಿಶ್ವಾಸದಿಂದ ಬದುಕಲು ಮತ್ತು ಬದುಕುಳಿಯುವ ಕೌಶಲಗಳು ಅತ್ಯಗತ್ಯ.

ಸುಷ್ಮಿತ್ ಎಂಟನೇ ತರಗತಿಯ ವಿದ್ಯಾರ್ಥಿ, ಓದಿನಲ್ಲಿ ತೀರಾ ಮುಂದಿದ್ದು, ತರಗತಿಯಲ್ಲಿ ಮೇಷ್ಟ್ರು ಹೇಳಿಕೊಡುವ ಎಲ್ಲಾ ಚಟುವಟಿಕೆಗಳನ್ನೂ ಸರಿಯಾಗಿ ಅಭ್ಯಸಿಸಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದನು. ವಿದ್ಯಾರ್ಜನೆಯ ನಂತರ ಒಳ್ಳೆಯ ಹೆಸರು ಮತ್ತು ವರಮಾನ ನೀಡುವ ಉದ್ಯೋಗ ಪಡೆಯುವ ಹಂಬಲದಲ್ಲಿದ್ದನು. ಇಷ್ಟೆಲ್ಲಾ ಅಭಿಲಾಷೆಗಳಿದ್ದರೂ ಆತನಲ್ಲಿ ಏನೋ ಹತಾಶ ಭಾವ ಮನೆ ಮಾಡಿದ್ದು, ಸ್ನೇಹಿತರೊಂದಿಗೂ ಬೆರೆಯದೇ ಮನೆಯಲ್ಲಿ ಮತ್ತು ಶಾಲೆಯಲ್ಲಿ ಪ್ರತಿ ವಿಷಯಕ್ಕೂ ಪಾಲಕರನ್ನೇ ಅವಲಂಬಿಸಿದ್ದನು. ವಿದ್ಯಾರ್ಜನೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಸುಷ್ಮಿತ್ ಬದುಕಿನ ಪರೀಕ್ಷೆಯಲ್ಲಿ ಆಗಾಗ ಸೋಲನ್ನು ಅನುಭವಿಸುತ್ತಿದ್ದ. ಶಿಕ್ಷಣೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದು, ಆತನಲ್ಲಿ ಕಿಳರಿಮೆ ಮನೆಮಾಡಿತ್ತು.

ಇಂತಹ ವಿಭಿನ್ನವಾದ ಸಮಸ್ಯೆಯು ಪ್ರತೀ ಹದಿನೈದು ವಿದ್ಯಾರ್ಥಿಗಳ ಪೈಕಿ ಒಬ್ಬರಲ್ಲಿ ಇರುತ್ತದೆ. ಇಲ್ಲಿ ವಿದ್ಯಾಭ್ಯಾಸದ ಗುರಿ ಕೇವಲ ಉದ್ಯೋಗ ಗಳಿಕೆಗಷ್ಟೇ ಸೀಮಿತವಾಗಿರದೇ ಶಿಕ್ಷಣವು ಮಕ್ಕಳಿಗೆ ಜೀವನದ ಮೌಲ್ಯ ಮತ್ತು ಪಾಠಗಳನ್ನು ಕಲಿಸಬೇಕು. ವಿದ್ಯಾಭ್ಯಾಸದ ಗುರಿ ವ್ಯಕ್ತಿತ್ವ ವಿಕಸನ, ಜೀವನ ನಿರ್ವಹಣೆಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲಗಳನ್ನು ಕಲಿಸುವುದಾಗಿರಬೇಕು. ಇದರಿಂದ ಮಕ್ಕಳಲ್ಲಿ ಬದುಕಿನ ಕಠಿಣತೆಗಳು, ಸೋಲು, ನಿರಾಸೆ, ಆಹ್ವಾನಗಳನ್ನು ಎದುರಿಸುವ ದೈರ್ಯ ಮೂಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯ ಪ್ರಕಾರ ಇಂತಹ ಹತಾಶೆಗಳಿಂದ ಮಕ್ಕಳನ್ನು ಹೊರತರಲು ಈ ಕೆಳಕಂಡ ಜೀವನ ಕೌಶಲಗಳನ್ನು ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಕಲಿಸಬೇಕು.

  1. ಆತ್ಮವಿಶ್ವಾಸ : ಮಕ್ಕಳಿಗೆ ಮೊದಲು ಬೇಕಾಗಿರುವುದು ಪಾಲಕರಿಂದ ಆತ್ಮವಿಶ್ವಾಸದ ನುಡಿಗಳು. ಪಾಲಕರು ಅದನ್ನು ಮನೆಯಲ್ಲೇ ನೀಡಬೇಕು.
  2. ಸಮಸ್ಯೆ ಪರಿಹರಿಸುವ ಕೌಶಲ: ಜೀವನದಲ್ಲಿ ಬರುವ ಸಮಸ್ಯೆಗಳು ಚಿಕ್ಕದಿರಲಿ, ದೊಡ್ಡದಿರಲಿ, ಅದರ ಮೂಲ ಸ್ವರೂಪವನ್ನು ಅರಿತು ವಿಶ್ಲೇಷಿಸುವ ಜಾಣ್ಮೆಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಎದುರಾಗಿರುವ ಸಮಸ್ಯೆಗೆ ಯಾರು ಕಾರಣ, ಯಾವ ಸನ್ನಿವೇಶದಲ್ಲಿ ಸಮಸ್ಯೆ ಉದ್ಭವವಾಯಿತು ಎಂದು ಅರಿಯುವ ಸಾಮರ್ಥ್ತ್ಯವನ್ನು ಗಳಿಸುವಂತೆ ಮಾಡಬೇಕು. ಸಮಸ್ಯೆಗೆ ಮಕ್ಕಳು ಭಯಡುವುದು, ತಪ್ಪಿತಸ್ಥ ಭಾವನೆಯಲ್ಲಿರುವುದು, ಸಮಸ್ಯೆ ಬಂದಾಗ ಕೋಪ ಅಥವಾ ದುಃಖಪಡದೇ ಸಮಸ್ಯೆಗೆ ಲಭ್ಯ ಪರಿಹಾರಗಳೇನು ಎಂದು ಚಿಂತಿಸುವ ಧೈರ್ಯವನ್ನು ಮಕ್ಕಳಲ್ಲಿ ಮೂಡಿಸಬೇಕು. ಸೂಕ್ತ ಪರಿಹಾರಗಳು ಮಗುವಿಗೆ ಲಭಿಸದಿದ್ದಾಗ ಇತರರನ್ನು ಕೇಳುವ ಮನೋಭಾವ ಮೂಡಿಸಬೇಕು, ಪರಿಹಾರವೇ ಇಲ್ಲದ ಸಮಸ್ಯೆಗಳೇನಾದರೂ ಎದುರಾದರೆ ಅದರೊಂದಿಗೆ ಹೊಂದಿಕೊಂಡು ಬದುಕುವ ಕಲೆಯನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು.
  3. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ: ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಇದನ್ನು ಮಾಡಬೇಕೇ, ಬೇಡವೇ, ಯಾವುದನ್ನು ಆಯ್ಕೆ ಮಾಡಬೇಕು, ಯಾವ ದಾರಿ ಸೂಕ್ತ, ಮುಂದಿನ ನನ್ನ ಗುರಿ ಏನು ಇತ್ಯಾದಿ ಸಾಧಕ ಭಾದಕಗಳನ್ನು ಪಟ್ಟಿ ಮಾಡಿ, ಅವುಗಳ ಪೈಕಿ ಯಾವುದು ಹೆಚ್ಚು ಅನುಕೂಲಕಾರಿಯೋ, ಯಾವುದು ಕಡಿಮೆ ಹಾನಿಕಾರಕ ಎನ್ನುವ ನಿರ್ಧಾರವನ್ನು ಕೈಗೊಂಡು ಮುನ್ನಡೆಯಲು ಮಕ್ಕಳಿಗೆ ಹೇಳಿಕೊಡಬೇಕು.
  4. ವಿಶ್ಲೇಷಣಾ ಸಾಮರ್ಥ್ಯ: ಪ್ರತಿಯೊಂದು ವಿಚಾರಗಳು, ಸಂದರ್ಭ, ಸನ್ನಿವೇಶ, ಘಟನೆಗಳು ಮತ್ತು ಇತರರು ನೀಡುವ ಸಲಹೆ ಹಾಗೂ ಬುದ್ಧಿಮಾತನ್ನು ಆಳವಾಗಿ ವಿಶ್ಲೇಷಿಸಿ ಚಿಂತನೆ ಮಾಡುವ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳು ಇತರರು ಹೇಳಿದ್ದನ್ನೆಲ್ಲವನ್ನೂ ನೇರವಾಗಿ ನಂಬಬಾರದು. ಜಾಹಿರಾತುಗಳಿಗೆ ಮೋಸಹೋಗದೇ ಶೋಕಿ ಮತ್ತು ಆಡಂಬರದ ಬದುಕಿಗೆ ಮರುಳಾಗದಂತ ವಿವೇಚನೆಯನ್ನು ಮಕ್ಕಳಲ್ಲಿ ಮೂಡಿಸಬೇಕು.
  5. ಸೃಜನಾತ್ಮಕ ಯೋಚನಾ ಶಕ್ತಿ: ಮಕ್ಕಳು ತೀರಾ ಹಿಂದಿನ ರೀತಿಯಲ್ಲಿ, ಸೀಮಿತವಾದ ಪರಿಧಿಯೊಳಗೆ ಮತ್ತು ಪೂರ್ವಾಗ್ರಹ ಪೀಡಿತರಾಗಿ ಚಿಂತನೆ ಮಾಡುವ ಬದಲು, ವಿಭಿನ್ನ ಹಾಗೂ ಸೃಜನಾತ್ಮಕವಾಗಿ ಮುಕ್ತ ಮನಸ್ಸಿನಿಂದ ಮಕ್ಕಳು ಆಲೋಚಿಸುವಂತಹ ಕೌಶಲಗಳನ್ನು ಹೇಳಿಕೊಟ್ಟು, ಹೊಸ ಯೋಚನಾ ಲಹರಿಯನ್ನು ಆವಿಷ್ಕಾರಿಸುವಂತೆ ಮಾಡಬೇಕು.
  6. ಉತ್ತಮ ಮಾತುಗಾರಿಕಾ ಚಾತುರ್ಯ: ತನಗೆ ಸರಿಯೆನಿಸದಿರುವ ವಿಚಾರಗಳ ಕುರಿತು ಮಕ್ಕಳು ನೇರವಾಗಿ ಅಭಿಪ್ರಾಯ, ಅನಿಸಿಕೆಗಳನ್ನು ಮತ್ತು ಪ್ರತಿಭಟನೆಯನ್ನು ನೇರವಾಗಿ ನಿಖರವಾಗಿ, ಗೊಂದಲವಾಗದಂತೆ, ಕಸಿವಿಸಿಗೊಳ್ಳದಂತೆ, ಇತರರ ಮನಸ್ಸು ನೋಯದಂತೆ ವ್ಯಕ್ತಪಡಿಸುವ ಅಥವಾ ಬೆರೆಯುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡಬೇಕು.
  7. ಉತ್ತಮ ಅಂತರ್‌ವ್ಯಕ್ತಿ ಸಂಬಂಧ : ಮನೆಯ ಸದಸ್ಯರೊಂದಿಗೆ, ಬಂಧುಮಿತ್ರರೊಂದಿಗೆ, ಸಹೋದ್ಯೋಗಿಗಳೊಂದಿಗೆ, ನೆರೆಹೊರೆಯವರೊಂದಿಗೆ, ತಾತ್ಕಾಲಿಕವಾಗಿ ಅಥವಾ ದೀರ್ಘವಾಗಿ ವ್ಯವಹರಿಸುವ ಎಲ್ಲರೊಂದಿಗೆ ಆದಷ್ಟು ಸ್ನೇಹ ವಿಶ್ವಾಸ ಗೌರವಗಳನ್ನು ಮಕ್ಕಳು ಇಟ್ಟುಕೊಂಡು ಇತರರ ಕುರಿತು ವಿರಸ, ದ್ವೇಷ ಮತ್ತು ತಿರಸ್ಕಾರ ಭಾವನೆ ಹೊಂದದಿರುವಂತೆ ನೋಡಿಕೊಳ್ಳಬೇಕು.
  8. ಸ್ವ-ಅರಿವಿನ ಸಾಮರ್ಥ್ಯ: ಮಗು ತನ್ನ ಶಕ್ತಿ ದೌರ್ಬಲ್ಯಗಳನ್ನು ಹಾಗೂ ತನ್ನ ಮನೆಯವರ ಇತಿಮಿತಿ ಮತ್ತು ಸಾಮರ್ಥ್ಯಗಳನ್ನು ಯಥಾವತ್ತಾಗಿ ತಿಳಿಯುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಮತ್ತು ಅವುಗಳ ಚೌಕಟ್ಟಿನಲ್ಲಿಯೇ ವ್ಯವಹರಿಸುವ ಜಾಣ್ಮೆಯನ್ನು ಹೇಳಿಕೊಟ್ಟು, ಸೂಕ್ತ ಗುರಿಗಳನ್ನು ಆಯ್ಕೆಮಾಡುವ ಕೌಶಲವನ್ನು ಮಕ್ಕಳಿಗೆ ತಿಳಿಸಬೇಕು.
  9. ಇತರರನ್ನು ಅರಿಯುವ ಸಾಮರ್ಥ್ಯ: ಇತರರ ಮಿತಿಗಳು ಅವರ ಸಾಮರ್ಥ್ಯ, ಅವರ ನೋವು ಮತ್ತು ಭಾವನೆಗಳನ್ನು ಅವರಂತೆಯೇ ಅರ್ಥ ಮಾಡಿಕೊಳ್ಳುವ ರೀತಿಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಇತರರ ಸ್ಥಾನನದಲ್ಲಿ ತನ್ನನ್ನು ಕಲ್ಪಿಸಿಕೊಂಡು ಸೂಕ್ತ ಸಹಾನೂಭೂತಿ ತೋರುವ ಹಾಗೂ ಇತರರ ಕುರಿತು ದಯೆ, ಅನುಕಂಪ ಸಹಾನುಭೂತಿ ತೋರುವುದನ್ನು ಮಕ್ಕಳಿಗೆ ಹೇಳಿಕೊಡಬೇಕು.
  10. ಭಾವನೆಗಳ ನಿಯಂತ್ರಣ: ಪ್ರೀತಿ, ಪ್ರೇಮ, ದಯೆ, ಅನುಕಂಪ ಸ್ವಾಭಿಮಾನ, ಸಂತೋಷಗಳಂತಹ ಸಕಾರಾತ್ಮಕ ಭಾವನೆಗಳನ್ನು ಮಕ್ಕಳು ರೂಢಿಸಿಕೊಳ್ಳುವುದನ್ನು ತಿಳಿಸಬೇಕು. ಸುಖ, ದುಖಃ ಕೋಪ ಭಯ ಮತ್ಸರ, ಕೀಳರಿಮೆ, ಅತಿ ನಾಚಿಕೆ, ಆಕ್ರಮಣಕಾರಿ ಭಾವನೆಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕಲೆಯನ್ನು ಮಕ್ಕಳಿಗೆ ಕೊಡಬೇಕು. ತಮಗೆ ಮತ್ತು ಇತರರಿಗೆ ಸಹ್ಯವಾಗುವಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನೂ ಮಕ್ಕಳು ಕಲಿಯಬೇಕು.
  11. ಮಾನಸಿಕ ತುಮುಲಗಳ ನಿಭಾವಣೆಯ ಸಾಮರ್ಥ್ಯ: ಮಕ್ಕಳು ಸದಾ ಸಮಾಧಾನ, ಅರ್ಪಣಾ ಮನೋಭಾವ ಮತ್ತು ಸ್ಥಿತಪ್ರಜ್ಞತೆಯಿಂದ ಜೀವನದ ವಿವಿದ ಹಂತಗಳನ್ನು ನಿರ್ವಹಿಸುವ ಕಲೆಯನ್ನು ಹೇಳಿಕೊಡಬೇಕು. ಅಸಹಾಯಕ ಮನೋಭಾವ ಮತ್ತು ನಿರಾಶೆಗಳನ್ನು ಬದಿಗೊತ್ತಿ ಆಶಾವಾದದಿಂದ ಜೀವನದಲ್ಲಿ ಮುನ್ನುಗ್ಗುವ ಪ್ರವೃತ್ತಿಯನ್ನು ಮಕ್ಕಳಲ್ಲಿ ಮೂಡಿಸಬೇಕು. ಒತ್ತಡದ ಸಂದರ್ಭಗಳಲ್ಲೂ ಶಾಂತಚಿತ್ತವಾಗಿ ಇರುವ ಕಲೆಯನ್ನು ಮೂಡಿಸಬೇಕು.

ವ್ಯಕ್ತಿಯೊಬ್ಬ ಯಶಸ್ವಿಯಾಗಲು ಶಿಕ್ಷಣದ ಜೊತೆಗೆ ವೈವಿಧ್ಯಮಯ ಜೀವನ ಕೌಶಲಗಳು ಅತ್ಯಗತ್ಯ. ಶಿಕ್ಷಣವು ವ್ಯಕ್ತಿಯೊಬ್ಬನಿಗೆ ಬದುಕಿನ ಹಲವು ಮಜಲುಗಳನ್ನು ಮತ್ತು ದಾರಿಗಳನ್ನು ತೋರಿಸಿದರೆ, ಜೀವನ ಕೌಶಲಗಳು ಕಲಿತಿರುವ ಆ ಹಾದಿಯಲ್ಲಿ ಯಾವ ರೀತಿ ದೃಢವಾಗಿ ಸಾಗಬೇಕು ಎನ್ನುವುದನ್ನು ಕಲಿಉತ್ತವೆ. ಮಕ್ಕಳು ಬದುಕಿನಲ್ಲಿ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು ಮತ್ತು ಕೌಶಲಗಳನ್ನು ಗಳಿಸಿಕೊಂಡರೆ ಅಂತಹ ಮಕ್ಕಳಿಗೆ ಯಶಸ್ಸು ಸದಾ ಕಟ್ಟಿಟ್ಟಬುತ್ತಿ.

ಸಂತೋಷ್ ರಾವ್ ಪೆರ್ಮುಡ
ಉಪನ್ಯಾಸಕರು,
ದೂ: 9742884160

Related post

Leave a Reply

Your email address will not be published. Required fields are marked *