ಮತ್ಸ್ಯತೀರ್ಥ – ಇಲ್ಲಿ ಮೀನೇ ದೇವರು
‘ಮತ್ಸ್ಯತೀರ್ಥ’ ಇದೇನಪ್ಪಾ ಹೊಸ ಹೆಸರು ಅನ್ನಿಸಬಹುದು ಅಲ್ಲವೇ? ಹೌದು ಆದರೆ ಇದು ಸತ್ಯ, ಮತ್ಸ್ಯವನ್ನೇ (ಮೀನು) ವಿಶೇಷವಾಗಿ ಪೂಜ್ಯನೀಯ ಭಕ್ತಿಭಾವದಿಂದ ಪೂಜಿಸಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಮತ್ಸ್ಯತೀರ್ಥವಿದೆ. ಇದು ಬೆಂಗಳೂರಿನಿಂದ ಸಕಲೇಶಪುರ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾಗುವಾಗ ಕೊಕ್ಕಡ ಎಂಬಲ್ಲಿಂದ ನೇರವಾಗಿ ಮುಂದಕ್ಕೆ 20 ಕಿ.ಮೀ ದೂರದ ಶಿಶಿಲ ಎಂಬಲ್ಲಿದೆ. ಶಿಶಿಲೇಶ್ವರ ಹೆಚ್ಚು ಆಕರ್ಷಣೀಯವಾಗಿರುವುದು ಅಲ್ಲಿರುವ ಅಪೂರ್ವವಾದ ಮತ್ಸ್ಯ ಸಂಕುಲದ ಕಾರಣದಿಂದ.
ಸಾಗರದಂತೆ ವಿಶಾಲವಾಗಿ ತುಂಬಿ ಹರಿಯುವ ಕಪಿಲಾ ನದಿಯೇ ಈ ಮೀನುಗಳ ಆಶ್ರಯ ತಾಣ. ಈ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ಮೇಲೆ ನಿಂತು ಈ ಮೀನುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಇಲ್ಲಿರುವ ಮೀನುಗಳಿಗೆ ಹರಕೆಯನ್ನು ಹೇಳಿಕೊಂಡರೆ ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ಭಾವನೆ ಭಕ್ತಬಾಂಧವರಲ್ಲಿದೆ. ಸದ್ಯಕ್ಕೆ ಶಿಶಿಲೇಶ್ವರ ದೇವಾಲಯದ ಆಸು ಪಾಸಿನ 40 ರಿಂದ 50 ಮೀಟರ್ ದೂರದ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಈ ಮತ್ಸ್ಯಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಮತ್ಸ್ಯತೀರ್ಥವು ಕರ್ನಾಟಕದ ರಾಜ್ಯದ ಪ್ರವಾಸೋಧ್ಯಮ ಇಲಾಖೆಯ ಪ್ರಸಿದ್ಧ ಪ್ರವಾಸಿ ತಾಣಗಳ ಪಟ್ಟಿಗೆ ಸೇರುವಲ್ಲಿಯೂ ಯಶಸ್ವಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಷ್ಟ್ರಗಳ ಮತ್ತು ರಾಜ್ಯಗಳ ಪ್ರಮುಖ ಆದಾಯ ಮೂಲವಾಗಿರುವ ಪ್ರವಾಸೋದ್ಯಮ ಕರ್ನಾಟಕದಲ್ಲಿ ಮಾತ್ರ ಇನ್ನೂ ಬಾಲ್ಯಾವಸ್ಥೆಯಲ್ಲಿದೆ ಎನ್ನುವುದು ನಿಜಕ್ಕೂ ಖೇದಕರ.
ಶಿಶಿಲ ಎಂದಾಕ್ಷಣ ನೆನಪಾಗುವುದು ಪ್ರಕೃತಿ ರಮಣೀಯ ಬೆಟ್ಟಗುಡ್ಡಗಳ ತಪ್ಪಲಲ್ಲಿರುವ ವಿಶೇಷ ದೇವಾಲಯ ಎಂದು. ‘ಶಿಶಿಲೇಶ್ವರ’ ಎಂದರೆ ಈಶ್ವರನ ಇನ್ನೊಂದು ರೂಪ ಎಂದರ್ಥ. ಸುಮಾರು ಹತ್ತು ಶತಮಾನಕ್ಕೂ ಹಿಂದೆ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಆಹಾರಕ್ಕಾಗಿ ಉದಯ ಪರ್ವತದ ಬುಡದಲ್ಲಿ ಕುಮಾರಗುಡ್ಡ ಎಂಬಲ್ಲಿ ‘ನರೆ’ ಎಂಬ ಗಡ್ಡೆ-ಗೆಣಸನ್ನು ಆಹಾರಕ್ಕಾಗಿ ಅರಸುತ್ತಾ ಹೋಗುತ್ತಿದ್ದ ‘ದೆಸಿಲ್’ ಎಂಬ ಮಹಿಳೆಗೆ ಶಿವನು ಪ್ರತ್ಯಕ್ಷನಾಗಿ ಗೆಡ್ಡೆಗೆಣಸುಗಳಿರುವ ಪ್ರದೇಶವನ್ನು ತೋರಿಸಿ ಆಕೆಯ ಹಸಿವನ್ನು ಇಂಗಿಸಿದನೆಂಬ ಪ್ರತೀತಿ ಇದ್ದು, ಮುಂದಕ್ಕೆ ಈ ಪ್ರದೇಶ ಶಿಶಿಲವೆಂಬ ಹೆಸರಿನಿಂದ ಜನಜನಿತವಾಯಿತೆಂದು ಹೇಳಲಾಗುತ್ತಿದೆ. ಇದೇ ಪ್ರದೇಶದಲ್ಲಿ ಶ್ರೀ ಶಿಶಿಲೇಶ್ವರ ನೆಲೆ ನಿಂತನೆಂದು ಹೇಳಲಾಗಿದೆ. ಇಲ್ಲಿ ಶಾಂತವಾಗಿ ಹರಿಯುತ್ತಿರುವ ಕಪಿಲಾ ನದಿಯ ನೀರನ್ನೇ ಒಯ್ದು ಕುಮಾರ ಗಿರಿಯಲ್ಲಿದ್ದ ಶ್ರೀ ಶಿಶಿಲೇಶ್ವರ ಸ್ವಾಮಿಗೆ ವಿಶೇಷ ದಿನಗಳಂದು ಅರ್ಚಕರು ಅಭಿಷೇಕವನ್ನು ಮಾಡಿ ಪೂಜೆಯನ್ನು ಮಾಡುತ್ತಿದ್ದರು. ಹೀಗೆ ಒಮ್ಮೆ ನೀರನ್ನು ಒಯ್ಯುವಾಗ ಅರ್ಚಕರು ಕಾಲು ಜಾರಿ ಬಿದ್ದು, “ಶಿವನೇ ನೀನು ಕಪಿಲಾ ನದಿಯ ದಂಡೆಯಲ್ಲಿ ಉದ್ಭವಿಸಿದರೆ ನಿತ್ಯ ನಿನ್ನನ್ನು ಪೂಜಿಸಿ ಆರಾಧಿಸುವೆ” ಎಂದು ಅರ್ಚಕರು ಮನದಲ್ಲೇ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಇದರಂತೆ ಶಿಶಿಲೇಶ್ವರನು ಕಪಿಲಾ ನದಿ ದಂಡೆಯಲ್ಲಿ ಪುನರ್ ಉದ್ಭವಿಸಿದನೆಂಬ ಪ್ರತೀತಿಯೂ ಇದೆ. ಬಳಿಕ ಇಲ್ಲೇ ಕಲ್ಲಿನಿಂದ ಶ್ರೀ ಶಿಶಿಲೇಶ್ವರನ ದೇವಾಲಯವನ್ನು ನಿರ್ಮಿಸಲಾಯಿತು.
ಈ ನದಿಯ ಎರಡು ಮೂರು ಕೀ.ಮೀ ವ್ಯಾಪ್ತಿಯಲ್ಲಿ ಅತ್ಯಂತ ಅಪರೂಪದಲ್ಲಿ ಅಪರೂಪವಾದ “ಮಹರ್ಷಿರ್” ಅಥವಾ “ಪೆರುವೋಳ್” ಪ್ರಬೇಧದ ಬೃಹತ್ ಗಾತ್ರದ ಮೀನುಗಳು ವಾಸಿಸುತ್ತಿವೆ ಹಾಗೂ ಈ ಮೀನುಗಳು ತಿನ್ನಲು ಯೋಗ್ಯವೂ ಅಲ್ಲವಾಗಿದ್ದು ಈ ಮೀನುಗಳು ದೇವರ ಮೀನುಗಳೆಂಬ ಭಾವನೆಯೂ ಭಕ್ತಾದಿಗಳಲ್ಲಿ ಇರುವುದರಿಂದ ಪವಿತ್ರತೆಯ ಭಾವನೆಯ ಕಾರಣದಿಂದ ಇವುಗಳನ್ನು ಯಾರೂ ತಿನ್ನುವುದಿಲ್ಲ ಹಾಗೂ ಪೂಜ್ಯನೀಯ ಭಾವನೆಯಿಂದ ಸರ್ವಧರ್ಮೀಯರೂ ಪೂಜಿಸುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಇಲ್ಲಿನ ಎರಡು ಮೂರು ಕೀ.ಮೀ ಪ್ರದೇಶವನ್ನು ಗಣಿಗಾರಿಕೆ ನಿಷೇಧಿತ ವಲಯವೆಂದು ಬ್ರಿಟಿಷರ ಆಡಳಿತದ ಕಾಲದಲ್ಲೇ ಶಾಸನವನ್ನು ಹೊರಡಿಸಲಾಗಿತ್ತೆಂದು ಇಲ್ಲಿನ ದಾಖಲೆಗಳು ತಿಳಿಸುತ್ತವೆ. ಇದರ ಪಕ್ಕದಲ್ಲಿ ಮತ್ಸ್ಯಗಳ ಉಗಮ ಸ್ಥಾನ “ಮೀನುಗುಂಡಿ” ಎಂಬ ಪ್ರದೇಶವೂ ಇದೆ ಎನ್ನಲಾಗಿದೆ.
ಕಪಿಲಾ ನದಿಯು ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದ ದೇವರ ಮನೆ ಎಂಬ ಊರಿನ ಹುಳ್ಳುಮಲೆ ಎಂಬಲ್ಲಿ ಹುಟ್ಟಿ ಗೋಮುಖದ ಶಿಲಾ ರಚನೆಯೊಳಗಿನಿಂದ ಈ ನದಿಯು ಹರಿಯುವುದರಿಂದ ಈ ನದಿಗೆ ಕಪಿಲಾ ಎಂದು ಕರೆಯಲಾಗಿದೆ. ಇಲ್ಲಿನ ಬೃಹದಾಕಾರದ ಮತ್ಸ್ಯ ಸಂಕುಲವು ಈ ಭಾಗದ ನದಿಯ ನೀರನ್ನು ಶುದ್ಧಗೊಳಿಸುವ ವಿಶೇಷ ಕಾರಣದಿಂದಲೇ ಇಲ್ಲಿಗೆ ‘ಮತ್ಸ್ಯತೀರ್ಥ’ ವೆಂಬ ಹೆಸರು ಬಂದಿದೆ. ಎಲ್ಲಾ ದೇವಾಲಯಗಳಿಗೂ ಒಂದೊಂದು ಬಾವಿಗಳನ್ನು ಪೂಜಾ ಕಾರ್ಯದ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿನ ದೇವಾಲಯದಲ್ಲಿ ಬಾವಿಯೇ ಇಲ್ಲ ಬದಲಿಗೆ ಇಲ್ಲಿ ನದಿಯ ನೀರನ್ನೇ (ಮತ್ಸ್ಯತೀರ್ಥದ) ದೇವರ ಅಭಿಷೇಕಕ್ಕೆ ಬಳಸಲಾಗುತ್ತಿರುವುದು ಇಲ್ಲಿನ ವಿಶೇಷತೆ ಹಾಗೂ ಈ ಮತ್ಸ್ಯತೀರ್ಥವು ದೇಶದ ಪ್ರಮುಖ ಮತ್ಸ್ಯಧಾಮವಾಗಿಯೂ ಗುರುತಿಸಿಕೊಂಡಿದೆ.
ಇಲ್ಲಿನ ಮೀನಿಗೆ ಅರಳು, ಮಂಡಕ್ಕಿ ಹಾಗೂ ಅಕ್ಕಿಯನ್ನು ಭಕ್ತಾದಿಗಳು ಆಹಾರವಾಗಿ ನೀಡಬಹುದಾಗಿದ್ದು, ದೊಡ್ಡ ದೊಡ್ಡ ಗಾತ್ರದ ಮೀನುಗಳು ಆಹಾರನ್ನು ತಿನ್ನಲು ಸುಮಾರು 2-3 ಅಡಿ ಎತ್ತರದವರೆಗೂ ಹಾರುವುದನ್ನು ಹಾಗೂ ಆಹಾರವನ್ನು ತಿನ್ನಲು ಮೀನುಗಳು ಒಂದಕ್ಕೊಂದು ಪೈಪೋಟಿ ನಡೆಸುವುದನ್ನು ನೋಡುತ್ತಾ ಕುಳಿತರೆ ಹೊಸ ಮತ್ಸ್ಯಲೋಕವೇ ಕಣ್ಣ ಮುಂದೆ ಹಾದು ಹೋಗುತ್ತದೆ. ಇಲ್ಲಿನ ಮೀನುಗಳು ಬೃಹತ್ ಗಾತ್ರವನ್ನು ಹೊಂದಿದ್ದು ಸರಾಸರಿ ಐದರಿಂದ ಆರು ಕೆ.ಜಿ ಯಷ್ಟು ತೂಗುವ ಹಾಗೂ ಸುಮಾರು 20 ಕೆ.ಜಿ ಯನ್ನೂ ಮೀರುವ ದೊಡ್ಡ ಗಾತ್ರದ ಮೀನುಗಳೂ ಇವೆ. ಇವುಗಳ ಪೈಕಿ ಬೃಹತ್ ಗಾತ್ರದ ಮೀನೊಂದಿದ್ದು ಇದು ದೇವರ ಸೇವಕನೆಂದು ಹೇಳಲಾಗುತ್ತಿತ್ತು. ಇದರ ಕಿವಿಗೆ ಬಂಗಾರದ ಮೂಗುತಿಯನ್ನು (ನತ್ತು, ಅಥವಾ ಪ್ರಾದೇಶಿಕ ಭಾಷೆಯಲ್ಲಿ ‘ಕೊಡಂಗೆ’ ಎನ್ನುತ್ತಾರೆ) ಚುಚ್ಚಲಾಗಿದ್ದು ಮಧ್ಯಾಹ್ನದ ಶಿಶಿಲೇಶ್ವರ ದೇವರ ಪೂಜಾ ಸಂದರ್ಭದಲ್ಲಿ ನೀರಿನ ಮೇಲ್ಭಾಗಕ್ಕೆ ಬಂದು ದೇವರ ನೈವೇದ್ಯವನ್ನು ಸ್ವೀಕರಿಸಿ ಮತ್ತೆ ನೀರಿನಾಳಕ್ಕೆ ಮತ್ತೆ ತೆರಳುತ್ತಿತ್ತು, ದೇವರ ಪೂಜಾ ಸಂದರ್ಭದಲ್ಲಿ ಮಾತ್ರ ಈ ಮೀನು ಕಾಣಿಸಿಕೊಳ್ಳುತ್ತಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಮತ್ಸ್ಯಗಳ ಮಾರಣ ಹೋಮ
1996 ರಲ್ಲಿ ಈ ಪ್ರಸಿದ್ಧ ಮೀನು ಗುಂಡಿಗೆ ಕೆಲ ಕಿಡಿಗೇಡಿಗಳು ವಿಷದ ಡಬ್ಬಗಳನ್ನು ತೂತು ಮಾಡಿ ನೀರಿನಡಿಯಲ್ಲಿಟ್ಟಿದ್ದ ಪರಿಣಾಮವಾಗಿ ಇಲ್ಲಿನ ಲಕ್ಷಗಟ್ಟಲೆ ದೈವೀ ರೂಪೀ ಮೀನುಗಳು ಸಾಮೂಹಿಕವಾಗಿ ಮೃತಪಟ್ಟಿರುವುದು ಇಲ್ಲಿನ ಇತಿಹಾಸ ಕಂಡ ಘನಘೋರ ದುರಂತವಾಗಿದ್ದು, ಇದೇ ದುರ್ಘಟನೆಯಲ್ಲಿ ದೇವರ ಮೀನೂ ಸಹಾ ಮೃತಪಟ್ಟಿದ್ದನ್ನು ಇಲ್ಲಿನ ಗ್ರಾಮಸ್ಥರು ಭಾವುಕರಾಗಿ ವಿವರಿಸುತ್ತಾರೆ. ಇಲ್ಲಿ ಸತ್ತ ಮೀನುಗಳ ರಾಶಿಯನ್ನು ಕಂಡ ಇಡೀ ಜಿಲ್ಲೆಯ ಜನತೆ ಶೋಕದಿಂದ ಮಮ್ಮುಲ ಮರುಗಿದ್ದರು. ಇಲ್ಲಿ ಸತ್ತು ಬಿದ್ದಿದ್ದ ಮೀನಿನ ರಾಶಿಯೇ ಸುಮಾರು 4-5 ಟ್ರಕ್ಗಳಲ್ಲಿ ತುಂಬಬಹುದಾದಷ್ಟು ಅಗಾಧವಾಗಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಹಲವಾರು ತಲೆಮಾರುಗಳಿಂದ ದೇವಾಲಯದೊಂದಿಗೆ ಅವಿನಾಭಾವ ಸಂಭಂದ ಹೊಂದಿದ್ದ ಮತ್ಸ್ಯ ಕುಲವೇ ಸಂಪೂರ್ಣ ವಿನಾಶದ ಹಾದಿಯನ್ನು ಹಿಡಿಯುವ ಅಪಾಯವೂ ಇಲ್ಲಿನ ಸ್ಥಳೀಯರಿಗೆ ಮತ್ತು ದೇವಾಲಯದ ಆಡಳಿತ ಮಂಡಳಿಗೆ ಕಾಡಿದ್ದು ಸುಳ್ಳಲ್ಲ. ಆದರೆ ಶ್ರೀ ಶಿಶಿಲೇಶ್ವರನ ಕೃಪೆಯಿಂದ ಮತ್ತೆ ಈ ಮತ್ಸ್ಯ ಸಂಕುಲ ಬೆಳೆಯುತ್ತಿದೆ. ವಿಷಪ್ರಾಶಾನದಿಂದ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಮೀನುಗಳ ಆಕ್ರಂದನ ಆಕಳ ಕರುಗಳ ಆಕ್ರಂದನದಂತೆ ಕೇಳುತ್ತಿತ್ತು ಎಂದು ಸ್ಥಳೀಯರು ಕಣ್ಣೀರಿಡುತ್ತಾ ವಿವರಿಸುತ್ತಾರೆ. ಮೀನುಗಳ ಸಾಮೂಹಿಕ ಹತ್ಯೆಯ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ದಿನವೂ 50 ಮಂದಿಯಂತೆ ಸ್ವಯಂ ಸೇವಕರಾಗಿ ಈ ಮೀನುಗಳನ್ನು ನದಿಯಿಂದ ಮೇಲೆತ್ತಿ ಅವುಗಳನ್ನು ಅಲ್ಲೇ ದಡದಲ್ಲಿ ದಫನ್ ಮಾಡಿ ಮೀನಿನ ಸ್ಮಾರಕವನ್ನು ನಿರ್ಮಿಸಿದ್ದರು. ಆದರೆ ಇಂದು ಈ ಸ್ಮಾರಕ ಮಣ್ಣಿನಡಿಯಲ್ಲಿ ಸಿಲುಕಿ ಹೂತು ಹೋಗುವ ಪರಿಸ್ಥಿತಿಯಲ್ಲಿದೆ. ಇಲ್ಲಿನ ಮೀನುಗಳ ರಕ್ಷಣೆ ಮತ್ತು ಪೋಷಣೆಯ ಕುರಿತಾಗಿ ಮೀನುಗಾರಿಕಾ ಇಲಾಖೆಯ ಆದೇಶವಿದ್ದರೂ ದುರಂತ ನಡೆದಿರುವುದು ವಿಶಾದನೀಯ ಹಾಗೂ ಇದು ಇಲಾಖೆಯ ನಿರ್ಲಕ್ಷತನವನ್ನೂ ಸಾರಿ ಹೇಳುತ್ತದೆ.
ಮತ್ಸ್ಯ ಸಂರಕ್ಷಣಾ ವೇದಿಕೆ
ಸುಮಾರು 500 ರಿಂದ 700 ವರ್ಷಗಳ ಇತಿಹಾಸವಿರುವ ಈ ಶಿಶಿಲೇಶ್ವರ ಇಲ್ಲಿನ ಮತ್ಸ್ಯ ಸಂಕುಲವನ್ನು ಸುಮಾರು 100 ವರ್ಷಕ್ಕೂ ಹಿಂದಿನಿಂದ ರಕ್ಷಿಸಿಕೊಂಡು ಬಂದಿದ್ದಾನೆ ಎಂಬ ನಂಬಿಕೆಯಿದೆ. ಈ ಘೋರ ದುರಂತದ ನಂತರ ಇಲ್ಲಿನ ಸ್ಥಳೀಯರೇ ಆದ ಶ್ರೀ ಜಯರಾಮ ನೆಲ್ಲಿತ್ತಾಯ ಇವರ ನೇತೃತ್ವದಲ್ಲಿ ಸುಮಾರು 40-50 ಮಂದಿ ಸ್ಥಳೀಯ ಸ್ವಯಂ ಸೇವಕರ ತಂಡ ‘ಮತ್ಸ್ಯ ಸಂರಕ್ಷಣಾ ವೇದಿಕೆ’ ಯನ್ನು ರಚಿಸಿಕೊಂಡು ಇಲ್ಲಿನ ಪವಿತ್ರವಾದ ಮೀನುಗಳ ಸಂರಕ್ಷಣೆೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಮಳೆಗಾಲ ಆರಂಭವಾಯಿತೆಂದರೆ ಈ ಸ್ವಯಂ ಸೇವಕರ ತಂಡ ನಿಟ್ಟುಸಿರು ಬಿಡುತ್ತದೆ, ಈ ಸಮಯದಲ್ಲಿ ಇಲ್ಲಿ ಧಾರಾಕಾರ ಮಳೆಯಾಗುವುದರಿಂದ ನದಿಯಲ್ಲಿ ಅಥವಾ ಮೀನುಗಳ ಸಂಕುಲದಲ್ಲಿ ಮಾನವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಷ್ಟೂ ನದಿ ತುಂಬಿ ಹರಿಯುತ್ತದೆ. ಆದರೆ ಬೇಸಿಗೆಯಲ್ಲಿ ಇವುಗಳ ರಕ್ಷಣೆಯ ಜವಾಬ್ದಾರಿ ಹೆಚ್ಚಿರುತ್ತದೆ. ಏಕೆಂದರೆ ಹೆಚ್ಚಾಗಿ ತೀರಾ ಚಟುವಟಿಕೆಗಳಿಂದ ಕೂಡಿರುವ ಈ ಮಹರ್ಷಿರ್ ಮೀನುಗಳು ಹೆಚ್ಚಾಗಿ ತನ್ನನ್ನು ತಾನು ಪ್ರದರ್ಶಿಸಿಕೊಳ್ಳುವಷ್ಟು ಚೂಟಿ ಸ್ವಭಾವದವುಗಳಾಗಿದ್ದು ಪ್ರವಾಸಿಗರನ್ನು ಕೂಡಲೇ ಆಕರ್ಷಿಸುತ್ತವೆ ಹಾಗೂ ಪ್ರವಾಸಿಗರು ಎಸೆಯುವ ಆಹಾರವನ್ನು ಕೊಡುವ ನೆಪದಲ್ಲಿ ಅವುಗಳಿಗೆ ಮಾರಕವಾಗುವ ಆಹಾರಗಳನ್ನು ನೀಡುವ ಹಾಗೂ ಇವುಗಳನ್ನು ಪ್ರವಾಸಿಗರು ಮುಟ್ಟಲು ಪ್ರಯತ್ನಿಸುವ ಸಂದರ್ಭ ಮತ್ತು ಗಾತ್ರದಲ್ಲೂ ದೊಡ್ಡದಾಗಿರುವ ಮೀನುಗಳು ಆಹಾರ ತಿನ್ನುವ ಪೈಪೋಟಿಯಲ್ಲಿ ಒಂದರ ಮೇಲೊಂದು ಬಿದ್ದು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ.
ಎತ್ತಿನ ಹೊಳೆ ಯೋಜನೆಯು ಮತ್ಸ್ಯತೀರ್ಥಕ್ಕೆ ಮಾರಕವಾಗಲಿದೆಯೇ? ಹೌದು ಎನ್ನುತ್ತಾರೆ ಸ್ಥಳೀಯರು, ಈಗಾಗಲೇ ರಾಜ್ಯ ಸರಕಾರವು ಸುಮಾರು 1,500 ಕೋಟಿ ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಘೋಷಿಸಿದ್ದು, ಇದು ಈ ಮತ್ಸ್ಯಧಾಮ ವಿರುವ ಪ್ರದೇಶದಿಂದ ಕೇವಲ 15 ಕೀ.ಮೀ ದೂರದಲ್ಲಿದ್ದು ಈ ಯೋಜನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ ಇಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಿ ನದಿಯೇ ಬತ್ತಿ ಹೋಗಿ ಅಪೂರ್ವವಾದ ಮತ್ಸ್ಯ ಸಂಕುಲ ನಾಶವಾಗುವ ಭೀತಿಯೂ ಇದೆ.
ಪ್ರಕೃತಿಯ ಮಡಿಲಲ್ಲಿ ಈ ದೇವಾಲಯವಿರುವುದರಿಂದ ಇಲ್ಲಿನ ದೇವಾಲಯಕ್ಕೆ ಸಾಗಲು ನದಿಗೆ ಅಡ್ಡಲಾಗಿ ಸುಳ್ಯದ ತೂಗುಸೇತುವೆ ಬ್ರಹ್ಮನೆಂದೇ ಹೆಸರು ಪಡೆದ ಶ್ರೀಯುತ ಗಿರೀಶ್ ಭಾರಧ್ವಜ್ರ ನೇತೃತ್ವದಲ್ಲಿ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಇದರಲ್ಲಿ ನಿಂತುಕೊಂಡು ‘ಉದಯಪರ್ವತ’, ‘ಎತ್ತಿನಭುಜ’ ಮತ್ತು ‘ಅಮೆದಿಕಲ್’ ಪರ್ವತಗಳ ದೂರದ ನೋಟ ಮತ್ತು ದೇವಾಲಯದ ಸೊಬಗನ್ನು ವೀಕ್ಷಿಸುತ್ತಾ ವಿವಿಧ ಕೋನಗಳಿಂದ ಫೋಟೋಗಳನ್ನು ತೆಗೆದುಕೊಳ್ಳಬಹುದು ಹಾಗೂ ಈ ಪ್ರದೇಶದ ಮೂಲಕವೂ ಚಾರಣ ಗೈಡ್ಗಳ ಸಹಾಯದೊಂದಿಗೆ ಸುತ್ತಮುತ್ತಲಿನ ಅಮೆದಿಕಲ್, ಎತ್ತಿನ ಭುಜ, ಚುಂಗ್ರಾಣಿಗುಡ್ಡ, ಕುಮಾರಗುಡ್ಡ ಮತ್ತು ಉದಯ ಪರ್ವತ ಮುಂತಾದ ಪರ್ವತಗಳ ಚಾರಣವನ್ನೂ ಸಹ ಕೈಗೊಳ್ಳಬಹುದಾಗಿದೆ.
ಪ್ರತೀ ಸೋಮವಾರ ದೇವಳದ ವತಿಯಿಂದ ಭಕ್ತಾಧಿಗಳಿಗೆ ಅನ್ನದಾನ ನಡೆಯುತ್ತದೆ. ಇಲ್ಲಿ ಯಾವುದೇ ಉತ್ತಮವಾದ ಫಲಾಹಾರ ಮಂದಿರಗಳು ಇಲ್ಲದಿರುವ ಕಾರಣದಿಂದ ಇಲ್ಲಿಗೆ ಭೇಟಿ ನೀಡುವ ಪೂರ್ವದಲ್ಲಿ ಕೊಕ್ಕಡದಿಂದ ಆಹಾರ ವಸ್ತುಗಳನ್ನು ಒಯ್ಯುವುದು ಲೇಸು ಅದೇ ರೀತಿ ಆಹಾರದ ಪೊಟ್ಟಣಗಳನ್ನು ನದಿಗೆ ಎಸೆಯದೆ ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಮನಸ್ಥಿಯನ್ನು ಪ್ರವಾಸಿಗರು ತೋರಬೇಕಾದ ಅನಿರ್ವಾಯತೆ ಇದೆ. ಪ್ರವಾಸಕ್ಕೆ ಸೂಕ್ತ ಅವಧಿ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ.
ಅವಶ್ಯಕತೆ: ಮತ್ಸ್ಯತಿರ್ಥಕ್ಕೆ ಇರುವ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸುಮಾರು 44 ಲಕ್ಷ ಮೊತ್ತದ ಕಾಮಗಾರಿಗೆ ರೂಪುರೇಷೆ ನಿರ್ಮಾಣವಾಗಿದೆ. ಅಪರೂಪದ ಜಾತಿಯ ಮೀನುಗಳನ್ನು ನೋಡಲು ಪ್ರವಾಸಿಗರಿಗೆ ನೀರಿನಿಂದ ಮೆಲ್ಬಾಗದಲ್ಲಿ ವೀಕ್ಷಣಾ ಗ್ಯಾಲರಿ ಮತ್ತು ವೀಕ್ಷಣಾ ತಾಣದ ಅವಶ್ಯಕತೆಯಿದ್ದು ರಥಬೀದಿಗೆ ಡಾಂಬರೀಕರಣವಾಗಬೇಕಾಗಿದೆ. ಪ್ರವಾಸಿಗರಿಗೆ ಅತ್ಯವಶ್ಯವಾಗಿ ಬೇಕಾಗುವ ಸಾರ್ವಜನಿಕ ಶೌಚಾಲಯ, ಸಭಾಭವನ, ಅಥಿತಿಗಳು ಉಳಿದುಕೊಳ್ಳಲು ವಸತಿಗೃಹ, ಉದ್ಯಾನವನ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇನ್ನಷ್ಟೇ ಆಗಬೇಕಾಗಿದೆ. ಅಗಾಧವಾಗಿರುವ ಇಲ್ಲಿನ ಮತ್ಸ್ಯ ಸಂಪತ್ತಿನ ರಕ್ಷಣೆ ಹಾಗೂ ಮೇಲುಸ್ತುವಾರಿಗೆ ದೇವಳದ ಅಥವಾ ಇಲಾಖೆಯ ವತಿಯಿಂದ ಒಬ್ಬ ಗೈಡ್ನ ನೇಮಕವು ಅವಶ್ಯವಾಗಿ ಆಗಬೇಕಿದೆ.
ಹತ್ತಿರದ ಪ್ರವಾಸಿ ತಾಣಗಳು:
ಧರ್ಮಸ್ಥಳ-25 ಕೀ.ಮೀ
ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಾಲಯ ಶಿಬಾಜೆ-15 ಕೀ.ಮೀ
ಸೌತಡ್ಕ ಬಯಲು ಗಣಪತಿ-20 ಕೀ.ಮೀ
ಕುಕ್ಕೆ ಸುಬ್ರಹ್ಮಣ್ಯ-55 ಕೀ.ಮೀ
ಸಂತೋಷ್ ರಾವ್, ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160
ಫೋಟೋ ಕೃಪೆ:
ಸಂದೇಶ್ ರಾವ್.ಪಿ ಆಶ್ಲೇಷಾ ಸ್ಟುಡಿಯೋ, ನಿಡ್ಲೆ