ಮಧುಮೇಹ ಪರಿಹರಿಸುವ ಕರುಂಬೇಶ್ವರ
ಭಾರತ ದೇಗಲಗಳ ದೇಶ. ಇಲ್ಲಿರುವ ಎಷ್ಟೋ ಪುರಾತನ ದೇಗುಲಗಳು ಅಲ್ಲಿನ ಕ್ಷೇತ್ರ ಮಹಿಮೆಯಿಂದ ವಿಶಿಷ್ಟವಾದ ಶಕ್ತಿಯಿಂದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಸಂತಾನ ಕರುಣಿಸುವ ದೇವಸ್ಥಾನವಿದೆ, ಆರೋಗ್ಯ ಕರುಣಿಸುವ ವೈಧ್ಯನಾಥೇಶ್ವರನ ದೇಗುಲವಿದೆ. ಚರ್ಮ ರೋಗ ವಾಸಿ ಮಾಡುವ ದೇಗುಲಗಳಿವೆ. ಮಕ್ಕಳಿಗೆ ವಿದ್ಯೆ ಕರುಣಿಸುವ ಅನೇಕ ದೇಗುಲಗಳಿದೆ. ಆದರೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ದೇಗುಲದ ಬಗ್ಗೆ ಕೇಳಿದ್ದಿರಾ.
ಹೌದು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿರುವ ಆರಾಧ್ಯ ಧೈವ ಕರುಂಬೇಶ್ವರನ ದರ್ಶನ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಭಕ್ತರಲ್ಲಿ ಬಲವಾದ ನಂಬಿಕೆಯಿದೆ. ಹಾಗಾಗಿಯೇ ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ದೇವಸ್ಥಾನವಿರುವುದು ತಮಿಳುನಾಡಿನ ತಿರುವಾರುರ್ ಜಿಲ್ಲೆಯ “ಕೊಯಲ್ ವೆನ್ನಿ” ಎಂಬ ಊರಿನಲ್ಲಿ. ತಂಜಾವೂರಿನಿಂದ ತಿರುವಾರುರ್ ಹೋಗುವ ಮಾರ್ಗದಲ್ಲಿ 26 ಕಿಲೋ ಮೀಟರ್ ಕ್ರಮಿಸಿದರೆ ಕೊಯಲ್ ವೆನ್ನಿ ಗ್ರಾಮ ಸಿಗುತ್ತದೆ. ಇಲ್ಲೇ ವೆನ್ನಿ ಕರುಂಬೇಶ್ವರ್ ಹೆಸರಿನಲ್ಲಿ ನೆಲೆ ನಿಂತಿದ್ದಾನೆ ಶಿವ.
ದೇಗುಲದ ಇತಿಹಾಸ: ಈ ವೆನ್ನಿ ಗ್ರಾಮದಲ್ಲೇ ಒಂದು ಪುರಾತನ ಶಿವನ ದೇವಸ್ಥಾನವಿದೆ. ಸುಮಾರು ಸಾವಿರ ವರ್ಷಗಳಷ್ಟು ಪುರಾತನವಾದ ದೇಗುಲದಲ್ಲಿರುವ ಶಿವ ದೇವರನ್ನು ವೆನ್ನಿ ಕರುಂಬೇಶ್ವರ್ ಎಂದು ಕರೆಯುತ್ತಾರೆ. ಈ ವೆನ್ನಿ ಕರುಂಬೇಶ್ವರ್ ಮಧುಮೇಹವನ್ನು ಗುಣಪಡಿಸುವ ದೇವರು ಎಂದೇ ಪ್ರಸಿದ್ಧಿ. ಇಲ್ಲಿರುವ ಶಿವನಿಗೆ ಕರುಂಬೇಶ್ವರ್ ಎಂಬ ಹೆಸರು ಬರಲು ಒಂದು ಕಾರಣವಿದೆ. ತಮಿಳಿನಲ್ಲಿ ಕರಂಬು ಎಂದರೆ ಕಬ್ಬು ಎಂದರ್ಥ.
ಇಲ್ಲಿರುವ ಶಿವಲಿಂಗವು ಉದ್ಭವ ಶಿವಲಿಂಗವಾಗಿದ್ದು ಇಲ್ಲಿ ಅಪಾರವಾಗಿ ಬೆಳೆದಿದ್ದ ಕಬ್ಬಿನ ಗದ್ದೆ ಹಾಗೂ ನಂಜುಬಟ್ಟಲು (ತಮಿಳಿನಲ್ಲಿ ವೆನ್ನಿ ಎನ್ನುತ್ತಾರೆ) ಹೂವಿನ ಗಿಡಗಳ ಮಧ್ಯದಲ್ಲಿ ಶಿವಲಿಂಗವು ಹುದುಗಿ ಹೋಗಿತ್ತು. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಇಬ್ಬರು ಶಿವಭಕ್ತರು ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ಯಥೇಚ್ಚವಾಗಿ ಬೆಳೆದ ಕಬ್ಬು ಹಾಗೂ ನಂಜುಬಟ್ಟಲು ಹೂವಿನ ಗಿಡಗಳ ಮಧ್ಯೆ ಶಿವಲಿಂಗ ಇದೆಯೆಂದು ಇವರಿಗೆ ಭಾಸವಾಯಿತು. ಹುಡುಕಲಾಗಿ ಇವರಿಗೆ ಸ್ವಯಂಭು ಶಿವಲಿಂಗವೊಂದು ಗೋಚರವಾಯಿತು. ಈ ಶಿವಲಿಂಗಕ್ಕೆ ಏನು ಹೆಸರಿಡಬೇಕೆಂದು ಇಬ್ಬರಲ್ಲೂ ವಾಗ್ವಾಧವಾಗುತ್ತದೆ. ಕೊನೆಗೆ ನಂಜುಬಟ್ಟಲು (ವೆನ್ನಿ) ಹಾಗೂ ಕಬ್ಬಿನ (ಕರಂಬು) ಗದ್ದೆಯ ಮಧ್ಯದಲ್ಲಿ ಸಿಕ್ಕ ಶಿವಲಿಂಗಕ್ಕೆ “ವೆನ್ನಿ ಕರುಂಬೇಶ್ವರ” ಎಂದು ನಾಮಕಾರಣ ಮಾಡಿದ್ದರೆಂದು ಸ್ಥಳ ಪುರಾಣ ಹೇಳುತ್ತದೆ.
ಇಲ್ಲಿರುವ ಶಿವಲಿಂಗದ ಮೂರ್ತಿ ಹತ್ತಾರು ಕಬ್ಬಿನ ಜಲ್ಲೆಯನ್ನು ಕಟ್ಟಿದರೆ ಹಗ್ಗದಿಂದ ಕಟ್ಟಿದರೆ ಯಾವ ರೀತಿ ಕಾಣುತ್ತದೋ ಹಾಗೆ ಇದೆ. ಕಬ್ಬಿನ ರಸ ಸಿಹಿಯಾಗಿರುವುದರಿಂದ ಇಲ್ಲಿರುವ ಶಿವನಿಗೆ “ರಸಪೂರೇಶ್ವರ” ಎಂಬ ಇನ್ನೊಂದು ಹೆಸರು ಕೂಡ ಇದೆ. ಇಲ್ಲಿರುವ ಶಿವಲಿಂಗಕ್ಕೆ ಮೊದಲು “ಕರಿಕಾಳ ಚೋಳ” ದೇವಸ್ಥಾನವನ್ನು ನಿರ್ಮಿಸಿದ್ದನೆಂದು ಶಾಸನಗಲ ಪ್ರಕಾರ ತಿಳಿದು ಬರುತ್ತದೆ. ಕಾಲಾಂತರದಲ್ಲಿ ಮುಚುಕುಂದ ಚಕ್ರವರ್ತಿ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾನೆಂದು ತಿಳಿಯುತ್ತದೆ.
ಮಧುಮೇಹ ನಿವಾರಿಸುತ್ತಾನೆ ಇಲ್ಲಿಯ ಶಿವ: ಇಲ್ಲಿರುವ ದೇವಸ್ಥಾನಕ್ಕೆ ಬಂದು ಸ್ವಯಂಭು ಶಿವಲಿಂಗದ ದರ್ಶನ ಪಡೆದರೆ ಮಧುಮೇಹ ಖಾಯಿಲೆ ನಿಯಂತ್ರಣದಲ್ಲಿರುತ್ತದೆ ಹಾಗೂ ಗುಣವಾಗುತ್ತದೆ ಎಂದು ಪ್ರತೀತಿ ಇದ್ದು ದಿನವೂ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸುತಾರೆ. ಶಿವನಿಗೆ ಇಲ್ಲಿ ಸಕ್ಕರೆ ಪೊಂಗಲ್ ನೈವೇದ್ಯವನ್ನು ಮಾಡಿಸಿ ದೇವಸ್ಥಾನದ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿದ ರವೆ ಹಾಗೂ ಸಕ್ಕರೆಯನ್ನು ಮೊದಲು ಶಿವನಿಗೆ ಅರ್ಪಿಸಿ ಈ ಮಿಶ್ರಣವನ್ನು ದೇವಸ್ಥಾನದ ಹೊರ ಆವರಣದ ಪ್ರಾಕಾರದ ಸುತ್ತ ಇರುವೆಗಳಿಗೆ ಹಾಕುತ್ತಾರೆ. ಇರುವೆಗಳು ಈ ಮಿಶ್ರಣದಿಂದ ರವೆಯನ್ನು ಬಿಟ್ಟು ಸಕ್ಕರೆಯನ್ನು ಮಾತ್ರ ಬೇರ್ಪಡಿಸಿ ತಿನ್ನುತ್ತದೆ. ಹೀಗೆ ಇರುವೆಗಳೂ ಸಕ್ಕರೆ ಬೇರ್ಪಡಿಸಿ ತಿನ್ನುವುದರಿಂದ ದೇಹದ ಸಕ್ಕರೆ ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ಇಲ್ಲಿ ಇರುವೆಗಳಿಗೆ ಸಕ್ಕರೆ ಹಾಕಿ ಸಕ್ಕರೆ ಖಾಯಿಲೆಯಿಂದ ಗುಣಮುಖರಾದ ಭಕ್ತಾದಿಗಳ ದಂಡೇ ಇದೆ. ಶುಕ್ರದೋಷವಿದ್ದವರು ಸಹ ಈ ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗದ ಮುಂದೆ ದೀಪವನ್ನು ಬೆಳಗಿದರೆ ಜಾತಕದಲ್ಲಿರುವ ಶುಕ್ರ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಫಾಲ್ಗುಣಮಾಶದ 2,3 ಹಾಗೂ ನಾಲ್ಕನೇ ದಿನ ಸೂರ್ಯಕಿರಣಗಳು ನೇರವಾಗಿ ಶಿವಲಿಂಗವನು ಸ್ಪರ್ಶಿಸುತ್ತವೆ. ಸೌಂದರ್ಯನಾಯಕಿಯ ರೂಪದಲ್ಲಿ ಇಲ್ಲಿ ಪಾರ್ವತಿ ಶಿವನೊಂದಿಗೆ ನೆಲೆ ನಿಂತಿದ್ದಾಳೆ.
ಚೋಳರ ಕಾಲದಲ್ಲಿ ನಿರ್ಮಾಣವಾದರೂ ಹೊರ ಆವರಣ, ಗರ್ಭಗುಡಿ, ಇಲ್ಲಿರುವ ಕಂಬಗಳಲ್ಲಿ ಅಷ್ಟೇನೂ ವಿಶೇಷ ಕೆತ್ತನೆಗಳು ಇರದಿದ್ದರೂ ಈ ದೇವಸ್ಥಾನ ತನ್ನ ಸರಳತೆಯಿಂದಲೇ ಭಕ್ತರನ್ನು ಆಕರ್ಷಿಸುತ್ತದೆ. ಇಲ್ಲಿರುವ ಹಲವಾರು ಮೂರ್ತಿ ಹಾಗೂ ಗೋಪುರಗಳು ನಂತರದ ದಿನಗಳಲ್ಲಿ ಕೆತ್ತಲ್ಪಟ್ಟವು. ಎಲ್ಲಾ ಶಿವನ ದೇವಸ್ಥಾನಗಳಲ್ಲೂ ಶಿವನ ಮುಂದಿರುವ ನಂದಿ ಕಲ್ಲಿನಲ್ಲಿ ಕೆತ್ತಿರುತ್ತಾರೆ. ಆದರೆ ಇಲ್ಲಿರುವ ನಂದಿ ಕಂಚಿನಿಂದ ಮಾಡಿದ್ದು ವಿಶೇಷವಾಗಿದೆ.
ದೇಗುಲಕ್ಕೆ ದಾರಿ: ತಂಜಾವೂರಿನಿಂದ ತಿರುವಾರುರ್ ಹೋಗುವ ಮಾರ್ಗದಲ್ಲಿ 26 ಕಿಲೋ ಮೀಟರ್ ಕ್ರಮಿಸಿದರೆ ಕೊಯಲ್ ವೆನ್ನಿ ಎಂಬ ಗ್ರಾಮದಲ್ಲಿ ಈ ಶಿವನ ದೇವಸ್ಥಾನವಿದೆ.
ಡಾ.ಪ್ರಕಾಶ್.ಕೆ.ನಾಡಿಗ್