ಮನದೊಳಮಿಡಿತ

ಮನದೊಳಮಿಡಿತ

ಪುಸ್ತಕದ ಶೀರ್ಷಿಕೆಯೇ ಅತ್ಯಂತ ಆಕರ್ಷಕ ಹಾಗೂ ಕುತೂಹಲವನ್ನು ಉಂಟುಮಾಡುವಂತಿದೆ!!

ಮನದ ಒಳ ಮಿಡಿತ…ಮನಸಿನ ಒಳಗೆ ನಡೆಯುವ,ಉದ್ಭವಿಸುವ, ನೆಲೆ ನಿಲ್ಲುವ ಭಾವನೆಗಳೇ ಈ ಮನದ ಒಳಗಿನ ಮಿಡಿತ ಎಂದರೆ ತಪ್ಪಲ್ಲ ಎಂದು ಭಾವಿಸುವೆ.

ಮಿಡಿತಗಳ ಭಾವಗಳು ಹತ್ತು ಹಲವು! ಅದರಲ್ಲಿ ಕೆಲವು ಮಿಡಿದು ಸದ್ದುಮಾಡುತ್ತವೆ!
ಕೆಲವು ಮಿಡಿದು ರೋಮಾಂಚನ ಗೊಳಿಸುತ್ತವೆ!
ಕೆಲವು ಅಂತರಂಗದ ಜೊತೆ ಘರ್ಷಣೆಗೂ ನಿಲ್ಲುತ್ತವೆ!!
ಮತ್ತಷ್ಟು ಮನಸಿಗೆ ಮುದ ನೀಡುತ್ತವೆ!!

ಈ ಎಲ್ಲಾ ಬಗೆಯ ಭಾವನೆಯ ಮಿಡಿತದ ಅನಾವರಣ ಈ ಸಂಕಲನದಲ್ಲಿ ಅಡಗಿ ಕುಳಿತಿವೆ!

ಮಿಡಿತದ ಪರಿಣಾಮ ಆಯಾ ಓದುಗನ ಮನಸಿನ
ಭಾವನೆಗೆ ಬಿಟ್ಟದ್ದು!!

ಸುಮ್ಮನೇ ಓದಿಕೊಂಡು ಹೋದಾಗ ಆಗುವ ಅನುಭಾವ…ಅಷ್ಟಾಗಿ ಓದುಗನ ಮನಸನ್ನು ಮಿಡಿಯುವುದಿಲ್ಲ!

ಪದ ಸಾಲುಗಳ ಮಿಡಿತದ ಭಾವಗಳನ್ನು ಅಂತರಂಗದೊಳಗೆ ಇಳಿಸಿ ಮಥಿಸಿದಾಗ ಮಾತ್ರ ..ಮಿಡಿತದ ಶಬ್ದ ಕೇಳಿಸುತ್ತದೆ.

ಇದೊಂದು ಅಪರೂಪದ ಛಂದಸ್ಸಿನ ಕವನ ಸಂಕಲನ.

ನಾಲ್ಕು ಸಾಲಿನ ತನಗ ಗಳ ಪದ್ಯಗಳನ್ನು ಎರಡನ್ನು ಜೋಡಿಸಿ ಯುಗಳ ಅಥವಾ ಯಮಳ ತನಗ ಗಳ ಸಂಕಲನವನ್ನು ಬಹಳ ಅದ್ಭುತವಾಗಿ ಅಷ್ಟೇ ಅರ್ಥಪೂರ್ಣವಾಗಿ ರಚಿಸಿ ಅವುಗಳ ಮಿಡಿತದ ಭಾವಗಳನ್ನು ಪ್ರತಿ ಸಾಲುಗಳಲ್ಲಿ ತುಂಬಿಸಿ ಸಾಹಿತ್ಯಾಭಿಮಾನಿಗಳು ಅವುಗಳ ಶಬ್ದವನ್ನು ಆಲಿಸುವಂತೆ ಮಾಡುವಲ್ಲಿ ಕರ್ತೃ ಶ್ರೀಯುತ ಸುನಿಲ್ ಹಳೆಯೂರ್ ಯಶಸ್ವಿಯಾಗಿದ್ದಾರೆ ಎಂದು ನಿರ್ಭಯವಾಗಿ ಹೇಳಬಹುದು.

ಸುನಿಲ್ ರವರು ಒಳ್ಳೆಯ ಅಧ್ಯಯನ ಶೀಲ ವ್ಯಕ್ತಿ!

ಕವಿ, ವಿಮರ್ಶಕ, ಸಮಾಜ ಸೇವಕ, ಸಂಘಟಕ..ಎಲ್ಲಕಿಂತ ಹೆಚ್ಚಾಗಿ ಮತ್ತೊಬ್ಬರ ಕಷ್ಟಗಳಿಗೆ ಮಿಡಿಯುವ ಸಹೃದಯಿ!

ಈಗಾಗಲೇ ಅವರ ಎರಡು ಕೃತಿಗಳು ಲೋಕಾರ್ಪಣೆ ಗೊಂಡು ಸಾಹಿತ್ಯ ಪ್ರೇಮಿಗಳ ಮನಸನ್ನು ಗೆದ್ದಿವೆ.

ಈ ಸಂಕಲನದ ಪ್ರತಿಯೊಂದು ತನಗ ಪದ್ಯಗಳೂ ಒಂದೊಂದು ಚಿಂತನೆಯನ್ನು ಓದುಗರಲ್ಲಿ ಹುಟ್ಟುಹಾಕುತ್ತವೆ.

ಡಿ ವಿ ಜಿ ಅವರ ಕಗ್ಗಗಳಲ್ಲಿ, ಸರ್ವಜ್ಞರ ವಚನಗಳಲ್ಲಿ ಅಡಗಿರುವ ದಿವ್ಯ ಸಂದೇಶಗಳಂತೆಯೇ
ಸಮಾಜವನ್ನು ಎಚ್ಚರಿಸುವ, ಬದುಕನ್ನು ಹಸನಾಗಿಸಿಕೊಳ್ಳುವ, ಅಧ್ಯಾತ್ಮದ ತಾದಾತ್ಮತೆಯನ್ನು ಹೊಂದುವ ಬೆಳಕನ್ನು ಈ ತನಗಗಳಲ್ಲಿ ಕರ್ತೃ ತುಂಬಿಕೊಟ್ಟಿದ್ದಾರೆ.

ಒಮ್ಮೆಲೇ ಸಂಕಲನದ ಎಲ್ಲಾ ಪದ್ಯಗಳನ್ನು ಓದಿಕೊಂಡು ಹೋದರೆ ನಮಗೆ ಅಲ್ಲಿನ ಬೆಳಕು ಅಷ್ಟು ಸ್ಪಷ್ಟವಾಗಿ ಕಾಣಲಾರದು ಎಂದು ನನ್ನ ಭಾವನೆ!!

ಹತ್ತತ್ತು ತನಗ ಗಳನ್ನು ಓದಿಕೊಂಡು…ಅವುಗಳ ಶಬ್ದ ತರಂಗಗಳ ಜೊತೆ ಮಿಳಿತಗೊಂಡರೆ ಅಲ್ಲಿನ ಮಿಡಿತದ ಭಾವ ಸಂದೇಶ ನಮ್ಮ ಮನಸಿಗೆ ಮುಟ್ಟುತ್ತದೆ ಎಂದು ನನ್ನ ಅನಿಸಿಕೆ.

ಒಟ್ಟು ೩೨೦ ಯುಗಳ ತನಗಗಳ ಗುಚ್ಛ ಈ ಸಂಕಲನದಲ್ಲಿದೆ,

ಒಂದೊಂದರ ಮಿಡಿತವೂ ವಿಭಿನ್ನವಾಗಿವೆ…ಹಾಗೂ ಭಾವಪೂರ್ಣವಾಗಿವೆ.

ಕೆಲವು ಯುಗಳ ತನಗ ಗಳ
ಅವಲೋಕನ ಮಾಡೋಣ.

ಅಗ್ರಜನ ಮಾತಿಗೆ ಶಿರಬಾಗಿ ನಮಿಸಿ
ಕರ್ತವ್ಯದ ಭಾರವ ಹೊತ್ತವನು ಭರತ!

ಬಾಳ ಸೂಕ್ಷ್ಮಗಳನು
ಅರಿತು ಬಾಳಿದರೆ
ಸುಖವು ಸಖನಂತೆ
ಜೀವನ ಧರ್ಮಯೋಗ!!

ರಾಮಾಯಣದಲ್ಲಿ ಕಾಣುವ ಭ್ರಾತೃಪ್ರೇಮ,ಕರ್ತವ್ಯ ಪ್ರಜ್ಞೆ,
ವಚನ ಬದ್ಧತೆ ಗಳನ್ನು ಮೊದಲ ನಾಲ್ಕುಸಾಲುಗಳಲ್ಲಿ ಕಂಡರೆ, ಉತ್ತರಾರ್ಧದಲ್ಲಿ…ಡಿ ವಿ ಜಿ ಯವರ ಜೀವನ ಧರ್ಮಯೋಗದ ಹೊಳಹನ್ನು ತುಂಬಿಸಿ ಕೊಡುತ್ತಾರೆ.

ಮೊದಲ ನಾಲ್ಕುಸಾಲುಗಳಲ್ಲಿ ಕಾಣುವ ಕರ್ತವ್ಯದ ಸಂದೇಶಗಳನ್ನು ಪಾಲಿಸಿದರೆ…ಕೆಳಗಿನ ನಾಲ್ಕುಸಾಲುಗಳ ಸಂದೇಶ ತಾನಾಗಿಯೇ ಕರಗತವಾಗುತ್ತದೆ.

ಸುಖವು ಸಖನಂತೆ …ಎಂದು ಹೇಳಿದ್ದಾರೆ.. ಸ್ನೇಹಿತನ ಒಡನಾಟದಲ್ಲಿ ಒದಗಿಬರುವ ಸುಖ ಮತ್ತಾರ ಸಹವಾಸದಲ್ಲೂ ಸಿಗಲಾರದು!

ಅಂತೆಯೇ ಸಖ ನೆಂದರೆ ಬಾಳ ಸಂಗಾತಿ ಎಂದೂ ಅರ್ಥೈಸಬಹುದು!!

ಡಿವಿಜಿ ಯವರ ಪ್ರಭಾವವನ್ನು ನಮ್ಮ ಕರ್ತೃ ಸುನಿಲ್ ರವರಲ್ಲಿ ಕಾಣಬಹುದು!!!

ಅವನಾಡುವ ಆಟ
ಜಗದ ಹಿತಕಾಗಿ
ಸೂತ್ರಧಾರನು ಆತ
ಪಾತ್ರಧಾರಿಯ ನಾನು

ಸೋಲು ಗೆಲುವುಗಳು
ಬದುಕಿನಾ ರೀತಿಯು
ನೋವು ನಲಿವುಗಳು
ಜೀವನಕೆ ನೀತಿಯು

ಬಾಳ ಪಗಡೆ ಆಟದಲ್ಲಿ
ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ
ಇಚ್ಚೆ ಯಾರು ಬಲ್ಲರು!!

ಕವಿವಾಣಿಯಂತೆ..ಇಲ್ಲಿ
ಆಧ್ಯಾತ್ಮದ ಬೆಳಕನ್ನು ಮೂಡಿಸಿದ್ದಾರೆ ನಮ್ಮ ಕವಿ
ಮಹಾಶಯರು.

ಭಗವಂತ ಏನೇ ಮಾಡಿದರೂ ಅದು ಜಗತ್ತಿನ ಒಳಿತಿಗಾಗಿ…

ಅವನು ಆಡಿಸುವ ಗೊಂಬೆಗಳು ನಾವೆಲ್ಲಾ!!!
ಅವನೇ ಗೊಂಬೆಗಳ ಸೂತ್ರಧಾರ,ಅವನು ಆಡಿಸಿದಂತೆಯೇ ನಾವು ಆಡುವುದು!!
ಇಲ್ಲಿ ನಾವು ಅಂದರೆ ಮನುಷ್ಯರು(ಎಲ್ಲಾ ಜೀವ ರಾಶಿಗಳು)ಕೇವಲ ಪಾತ್ರಧಾರಿಗಳು ಮಾತ್ರ!!

ಬದುಕಿನಲ್ಲಿ ಒದಗಿ ಬರುವ ಸೋಲು,ಗೆಲುವುಗಳು ನಮಗೆ ಒಂದೊಂದು ಪಾಠವನ್ನು ಕಲಿಸುತ್ತವೆ!
ಅಂತೆಯೇ ನೋವು ನಲಿವುಗಳು ಬದುಕಿನ ರೀತಿ ನೀತಿಗಳ ಅನುಭವವನ್ನು ಕಲಿಸುತ್ತವೆ!

ನೋವು ಬಂದಾಗ ಕುಗ್ಗದೇ
ನಲಿವು ಬಂದಾಗ ಅತಿಯಾಗಿ ಹಿಗ್ಗದೇ..ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ
ಬದುಕನ್ನು ಹಸನಾಗಿಸಿಕೊಳ್ಳಬೇಕು
ಎಂಬುದೇ ಇಲ್ಲಿನ ಸಂದೇಶ!

ಪೂರ್ವಾರ್ಧದ ಸಾಲುಗಳಲ್ಲಿ ಕಾಣುವ ಕಟು ಸತ್ಯವನ್ನು ಅರಿತಾಗ ಮಾತ್ರ…ಈ ಸೋಲು..ಗೆಲುವು,
ನೋವು..ನಲಿವು…ಗಳನ್ನು
ಸಮಾನವಾಗಿ ಕಂಡುಕೊಳ್ಳಲು ಸಾಧ್ಯ!
ಕಂಡದ್ದು ಮಿಥ್ಯವಾಗಿ
ಕಾಣದ್ದು ಸತ್ಯವಾಗಿ
ಸತ್ಯ ಮಿಥ್ಯಗಳಲಿ
ಹೊಯ್ದಾಡುವುದು ಬಾಳು

ಕಣ್ಣ ನೋಟದಲಿದೆ
ಬಾಹ್ಯ ಬದುಕಿನಾಟ
ಅಂತರಂಗದಲಿದೆ
ಬದುಕಿನಾ ಅರಿವು

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು

ಎಂದು ದಾರ್ಶನಿಕರು ಕರೆಕೊಟ್ಟಿದ್ದಾರೆ.

ಒಮ್ಮೊಮ್ಮೆ ನಾವು ಕಂಡದ್ದೇ
ಸುಳ್ಳಾಗಬಹುದು!!
ಕಣ್ಣಿಗೆ ಕಾಣದೇ ಇದ್ದರೂ ಅದು ಸತ್ಯವಾಗಿ ನಿಲ್ಲಬಹುದು!!
ಅನವರತ ಈ ಜಂಜಾಟದಲ್ಲಿ
ಬದುಕು ಹೈರಾಣವಾದರೂ
ಅಚ್ಚರಿಯಿಲ್ಲ!

ಹೊರಗಿನ ಕಣ್ಣುಗಳಿಗೆ ಕಾಣುವುದು ಬಾಹ್ಯ ಜಗತ್ತಿನ
ಬದುಕಿನ ಆಟಗಳು ಮಾತ್ರ!!!

ಆದರೆ…ಅಂತರಂಗದ ಕಣ್ಣುಗಳಲ್ಲಿ ಬದುಕಿನ ಅರಿವನ್ನು ಕಾಣುವ ಶಕ್ತಿ ಇದೇ ಎಂಬುದೇ ಕವಿಯ ಆಶಯ!!

ಇಲ್ಲಿ ಸತ್ಯ ಮಿಥ್ಯೆಗಳು
ಬದುಕನ್ನು ಹೇಗೆ ಆಡಿಸುತ್ತವೆ
ಎಂಬುದನ್ನು ಕವಿ ಮಾರ್ಮಿಕವಾಗಿ ಸೂಚಿಸಿದ್ದಾರೆ.

ಬೀಜವೊಂದು ಮೊಳೆತು
ಮೊಗ್ಗಾಗಿ ಹೂವರಳಿ
ಸುವಾಸನೆಯ ಬೀರಿ
ಬಾಡುವುದು ಸಹಜ

ಅರಳುತ್ತಾ ಬಾಡುತ್ತಾ
ರೂಪಾಂತರಗೊಳುವ
ಸೃಷ್ಟಿಯ ಚಕ್ರದಲಿ
ನಾನೆಂಬುದಿಹುದೇನು

ಇಲ್ಲಿ ಡಿವಿಜಿ ಯವರ ಪ್ರಖ್ಯಾತ ಕಗ್ಗದ ಸಾಲುಗಳು ನೆನಪಾಗುತ್ತದೆ.

ಸೃಷ್ಟಿಯೆಂಬ ಚಕ್ರದಲ್ಲಿ
ಬೀಜ ಮೊಳೆತು, ಮೊಗ್ಗಾಗಿ, ಹೂವಾಗಿ, ಹೂವು ಅರಳಿ, ಪರಿಮಳವನ್ನು ಬೀರಿ, ಬಾಡಿ ಹೋಗುವುದು ಸಹಜ ಹಾಗೂ ಪ್ರಕೃತಿಯ ನಿಯಮ!

ಈ ಪ್ರಕ್ರಿಯೆಯಲ್ಲಿ ಯಾವ
ಸದ್ದೂ ಕೇಳಿಸುವುದಿಲ್ಲ, ಗಿಡವಾಗಲಿ, ಹೂವಾಗಲಿ ನಾನು ಅರಳಿ ನಿಂತಿರುವೆ ಎಂದು ಕೂಗಿ ಹೇಳುವುದೂ ಇಲ್ಲಾ!!

ಅದು ತಾನೇ ತಾನಾಗಿ ರೂಪಾಂತರ ಗೊಳ್ಳುತ್ತಾ ಸಾಗುತ್ತದೆ…

ಆದರೆ ಈ ಮನುಷ್ಯ ಜೀವಿ
ಮಾತ್ರ ಏನೇ ಮಾಡಿದರೂ
ನಾನು,ನನ್ನಿಂದ,ನನ್ನಿಂದಲೇ,
ನನ್ನಿಂದಾಗಿಯೇ…ಎಂದು ಸದ್ದು ಮಾಡುತ್ತಾನೆ!!

ಇಲ್ಲಿ ನಿನ್ನದು ಎಂಬುದು ಏನಿಲ್ಲಾ…ಎಲ್ಲಾ ಪ್ರಕೃತಿಯ
ನಿಯಮ…ಭಗವಂತನ ಆಣತಿಯಂತೆ ಸಾಗುವುದಷ್ಟೇ ನಮ್ಮ ಕರ್ತವ್ಯ !!..

ನಾನು ನಿಮಿತ್ತ ಮಾತ್ರ

ಎಂಬ ಅರಿವನ್ನು ಮೂಡಿಸುತ್ತದೆ ಈ ತನಗದ
ಸಾಲುಗಳು.

ಸುಕೃತದ ತೊಟ್ಟಿಲು
ಪ್ರಕೃತಿಯ ಮಡಿಲು
ವಿಕೃತಿಯ ಮಾಡದೇ
ಸುಕೃತಿಯನು ತೋರು

ನಮ್ಮ ಕರ್ಮಗಳಲಿ
ಪಾಪ ಪುಣ್ಯದ ಲೆಕ್ಕ
ನಾವು ಬಿತ್ತಿದ ಬೀಜ
ನಮ್ಮ ಗಂಗಾಳದೂಟ

ಪ್ರಕೃತಿಯ ಕಾಳಜಿ ಹೊತ್ತು
ಕಾಣುವ ತನಗ ಇದಾಗಿದೆ.

ಶಬ್ದಗಳ ಜೋಡಣೆ ಅದ್ಭುತ,
ಓದುಗರಿಗೆ ಅವುಗಳ ಶಬ್ದ
ಕೇಳಿಸುವಂತಿದೆ.
ಪ್ರಾಸಬದ್ಧವಾಗಿದ್ದು,ಅಕ್ಷರಗಳ ಜೊತೆ ಸರಸವಾಡಿದ್ದಾರೆ ನಮ್ಮ ಕವಿಗಳು .

ಪ್ರಕೃತಿಯ ಮಡಿಲು…ಸುಕೃತದ ತೊಟ್ಟಿಲು…

ಪ್ರಕೃತಿಯನ್ನು ವಿಕೃತ ಗೊಳಿಸಬೇಡಿ,
ಪ್ರಕೃತಿಯನ್ನು ಕಾಪಾಡಿದಾಗ
ಮಾತ್ರ ಅದು ಸುಕೃತದ ತೊಟ್ಟಿಲಾಗಲು ಸಾಧ್ಯ!
ಇಲ್ಲದಿದ್ದರೇ…ಪ್ರಕೃತಿಯೇ
ಮರಣದ ತೊಟ್ಟಿಲಾಗುವುದರಲ್ಲಿ ಸಂದೇಹವೇ ಇಲ್ಲಾ!!

ನಾವು ಬಿತ್ತಿದ ಬೀಜವೇ
ಮೊಳೆತು,ಗಿಡವಾಗಿ,ಮರವಾಗುತ್ತದೆ…ಬೇವಿನ ಬೀಜ ಬಿತ್ತಿ,ಮಾವಿನ ಗಿಡವನ್ನು ನಿರೀಕ್ಷಿಸಿದರೆ ಫಲ ಕೊಟ್ಟೀತೆ!

ಅಂತೆಯೇ ..ನಾವು ಮಾಡುವ ಕರ್ಮಗಳಲ್ಲಿ
ಪಾಪ ಪುಣ್ಯದ ಲೆಕ್ಕ ಅಡಗಿ ಕುಳಿತಿರುತ್ತದೆ!

ನಾವು ಮಾಡಿದ ಕರ್ಮಗಳಿಗೆ
ಅನುಸಾರವಾಗಿ ನಮ್ಮ ದಿನ ನಿತ್ಯದ ಊಟ!

ಹಾಗಾಗಿ ಒಳ್ಳೆಯ ಕರ್ಮಗಳನ್ನು ಮಾಡಿ,ಒಳ್ಳೆಯ ಬೀಜಗಳನ್ನು ಬಿತ್ತಿ…

ಆಗ ಮಾತ್ರ ಪ್ರಕೃತಿ ಹಾಗೂ ಬದುಕು ಎರಡೂ ಉಸಿರಾಡಲು ಸಾಧ್ಯ ಎಂಬುದು
ಕವಿಯ ಧ್ಯೇಯ!

ಪ್ರಕೃತಿಯ ಸಹಾಯವಿಲ್ಲದೆ
ಮನುಷ್ಯ ಏನನ್ನೂ ಸಾಧಿಸಲು ಸಾಧ್ಯವಿಲ್ಲ!!

ಹಾಗಾಗಿ…

ಪ್ರಕೃತಿಯ ಮಡಿಲು
ಸುಕೃತದ ತೊಟ್ಟಿಲು.

ಇದ್ದೂ ಇಲ್ಲದಂತಿದೆ
ಬಯಲೆಂಬ ವಿಸ್ಮಯ
ಇದ್ದಂತೆ ತೋರುತಿದೆ
ಆಲಯದ ಬೆರಗು

ನಾನೆಂಬುದು ಆಲಯ
ನನ್ನೊಳಗೆ ಬಯಲು
ಬಯಲಿಂದ ಆಲಯ
ಆಲಯ ಬಯಲಲ್ಲ

ಬಯಲು…ಆಲಯ ಗಳ ಬಗ್ಗೆ ಸಾಕಷ್ಟು ತನಗಗಳು ಇಲ್ಲಿ
ಮೂಡಿಬಂದಿವೆ,

ಆದರೆ ..ಅವುಗಳಲ್ಲಿ ಇದು
ತುಂಬಾ ವಿಶೇಷ ಅನಿಸಿತು ನನಗೆ!!

ಇಲ್ಲಿ ಕವಿಯ ಚಿಂತನೆ ಅಧ್ಯಾತ್ಮದ ನೆರಳಲ್ಲಿ ಸಾಗುತ್ತದೆ….

ನಮ್ಮ ವಚನಕಾರರು ಕೂಡ
ಈ ರೀತಿಯ ಭಾವವನ್ನು
ಅವರ ವಚನಗಳಲ್ಲಿ ಪ್ರತಿಪಾದಿಸಿರುವ ಉಲ್ಲೇಖಗಳಿವೆ.

ಬಯಲಿಗೆ ಕೊನೆ ಎಲ್ಲಿದೆ ಸೃಷ್ಟಿಯಲ್ಲಿ!! ಇದೊಂದು ಕೌತುಕವೇನೋ.. ಸರಿ!!
ಆದರೆ…ಆಲಯದ ಅಚ್ಚರಿಯನ್ನು ಅಳೆದು ಕಣ್ತುಂಬಿಕೊಳ್ಳಬಹುದು!!

ಇವುಗಳ ಭಾವವನ್ನು ಕವಿ
ತನಗೆ ಹೋಲಿಸಿ ಕೊಳ್ಳುತ್ತಾ!!!

ನಾನು ಎಂಬುದು ಆಲಯ ಅಂತಾದರೆ,
ಬಯಲು ನನ್ನ ಒಳಗೇ ಇದೇ,
ಬಯಲಿನಲ್ಲಿ ಆಲಯವ ಕಾಣಬಹುದು,
ಆದರೆ…ಆಲಯವೇ ಬಯಲಲ್ಲಾ!!!

ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗನ ಒಲಿಸುವ ಪರಿ!!

ನಾನು ಎಂಬ ಅಹಂಕಾರವನ್ನು ತೊರೆದು
ಒಳಗಿರುವ ಬಯಲಿನಲ್ಲಿ ನೆಲೆಸಿರುವ ಆ ಪರಬ್ರಹ್ಮ
ನನ್ನು ಕಂಡು ಪರಿ ಶುದ್ಧ ಭಕ್ತಿಯಿಂದ ಶರಣಾಗು!!

ಆಗ ವಿಸ್ಮಯವಾದ ಬಯಲಿನಲ್ಲಿ ಸಾಕ್ಷಾತ್ಕಾರ ಹೊಂದುವ ಭಾಗ್ಯ ನಿನ್ನದಾ ಗುತ್ತದೆ!!

ಎಂಬುದು ಕವಿಯ ಆಶಯ.

ವಿಶ್ಲೇಷಣೆ ಮಾಡಲು ಹೊರಟರೆ ಪ್ರತಿಯೊಂದು
ತನಗಗಳೂ ತಾ ಮುಂದು ತಾ ಮುಂದು ಎಂದು ಬಂದು ಮುಂದೆ ನಿಲ್ಲುತ್ತವೆ!!

ಈ ಕವನ ಸಂಕಲನದ ಪ್ರತಿಯೊಂದು ತನಗ ಗಳೂ ಒಂದೊಂದು ನಕ್ಷತ್ರದಂತೆ ಮಿನುಗುತ್ತಿವೆ.

ನಡುವಿನಲ್ಲಿ ಹತ್ತು ಹಲವು
ಧ್ರುವ ನಕ್ಷತ್ರಗಳನ್ನೂ ನಾವು
ಧಾರಾಳವಾಗಿ ಕಾಣಬಹುದು.

ಕನ್ನಡ ಸಾರಸ್ವತ ಲೋಕಕ್ಕೆ ಇದೊಂದು ಅಪರೂಪದ ಕೃತಿ ಆಗುವುದರಲ್ಲಿ ಸಂದೇಹವೇ ಇಲ್ಲಾ!!

ಇದರಲ್ಲಿ ನಮ್ಮ ಕವಿ ಮಹಾಶಯರ ಶ್ರದ್ಧೆ ಹಾಗೂ ಬದ್ಧತೆಗಳು ಎದ್ದು ಕಾಣುತ್ತವೆ.

ತಾಳ್ಮೆ ಇಲ್ಲದೇ ಈ ರೀತಿಯ
ರಚನೆಗಳು ಮೂಡಿ ಬರುವುದು ಕಷ್ಟ ಸಾಧ್ಯ!

ಏಳು ಅಕ್ಷರಗಳ ನಾಲ್ಕು ಸಾಲಿನಲ್ಲಿಯೇ ತನ್ನ ಎಲ್ಲಾ
ಕಲ್ಪನೆ ಹಾಗೂ ಭಾವನೆಗಳನ್ನು ಅರ್ಥಗರ್ಭಿತವಾಗಿ ಚಿತ್ರಸಬೇಕಾಗುತ್ತದೆ.

ಇಲ್ಲಿ ನಮ್ಮ ಕವಿ ಸುನಿಲ್ ರವರು
ಎರಡು ತನಗಗಳನ್ನು
ಜೋಡಿಯಾಗಿಸಿಕೊಂಡು, ಅತ್ಯಂತ ಸಮರ್ಪಕವಾಗಿ ,ಅರ್ಥಪೂರ್ಣವಾಗಿ,ಪರಿಣಾಮಕಾರಿಯಾಗಿ , ಛಂದೋ ಬದ್ಧವಾಗಿ,ಪ್ರಾಸಬದ್ಧವಾಗಿ
ಚಿತ್ರಿಸುವಲ್ಲಿ ಸಫಲರಾಗಿದ್ದಾರೆ.

ಶ್ರೀಯುತರ ಸಾಹಿತ್ಯ ಕೃಷಿಯಲ್ಲಿ,
ಕನ್ನಡ ಸಾಹಿತ್ಯದಲ್ಲಿನ ಎಲ್ಲಾ ಪ್ರಕಾರಗಳಲ್ಲೂ ಕೃತಿಗಳು ಮೂಡಿ ಬರುವಂತಾಗಲಿ,
ತನ್ಮೂಲಕ ಕನ್ನಡ ಸಾಹಿತ್ಯ ಭಂಡಾರ ಮತ್ತಷ್ಟು ಶ್ರೀಮಂತ ಗೊಳ್ಳಲಿ ಎಂದು
ಮನದುಂಬಿ ಹಾರೈಸುವೆ.

ಅಭಿನಂದನೆಗಳು ಸುನಿಲ್ ಸಾರ್…

ವಂದನೆಗಳೊಂದಿಗೆ

ಬ ನಾ ಸುಬ್ರಹ್ಮಣ್ಯ
ಮೈಸೂರು
🙏🙏

Related post