ಮನದ ಚಿಂತೆ

ಮನದ ಚಿಂತೆ

ದೂರದೂರಿನಲ್ಲಿ ನಿಂತು ಮನೆಗೆ ಮನವ ಹಚ್ಚಿಬಿಟ್ಟೆ
ಏನ್ ಕಾಣಲಿ ಅಲ್ಲಿ ನಮ್ಮದೇ ಮನೆಯ ನೆಟ್ಟುಬಿಟ್ಟೆ
ಊಟ ಸೇರದು, ಕಾಫಿ ಹೋಗದು, ನಿದ್ದೆ ಬಾರದು
ಕಾರಿದ್ರೂ ಬಸ್ಸಿದ್ರೂ ಮನ ಕೇಳತ್ತೆ ಎಲ್ಲಿ ಹೋಗೋದು

ಅಲ್ಲಿ ಕುಡಿದರೆ ನೀರು ಗಡಸು, ಸ್ನಾನಕ್ಕೆ ಅಂಟಂಟು
ಮನೆಯ ನೀರು ತೆಳುವು ಬಲು ಸಿಹಿಯುಂಟು ಬಗೆಬಗೆಯ ಸಿಹಿ ತಿಂಡಿಗಳು, ಬಾಳೆಲೆ ಊಟವುಂಟು
ಆದ್ರೂ ಮನೆಯಲ್ಲಿನ ಸಾರನ್ನಕ್ಕೆ ಎಣೆಯಲ್ಲುಂಟು

ಮೊದಮೊದಲು ಹೊರವೂರಿಗೆ ಹೋಗುವ ಹುಮ್ಮಸ್ಸು
ಹೋಗಲೇಬೇಕೆಂದು ಹಠ ಹಿಡಿಯುವ ಮನಸ್ಸು
ಒಂದೇ ಎರಡೇ ನೂರಾರು ಊರು ಸುತ್ತಿದ್ದಾಯ್ತು
ಬರೀ ಆರೇ ದಿನಗಳಲ್ಲಿ ಉಸ್ಸೆಂದಾಯ್ತು..

ಥಳುಕು ಬಳುಕಿನ ಬಗೆಬಗೆಯ ನೂರಾರು ಜನರು
ಹಳ್ಳಿ ಹಳ್ಳಿಗೂ ಬದಲಾಗುವ ಭಾಷೆ ಹಲವಾರು
ಆದ್ರೂ ದೇಶಸುತ್ತಿ ನೋಡು ಕೋಶ ಓದಿನೋಡು
ಅಂತ ಸುಮ್ಮನೇ ಹೇಳಿದವರ ಅನುಭವದ ಪಾಡು

ಬಂದದ್ದೆಲ್ಲಾ ಬರಲಿ ಅನುಭವಿಸಿದರೆ ಸಾಕು ನೋಡು
ಮನೆಯಲ್ಲಿ ಕುಳಿತಾಗ ನೆನಪುಗಳ ಸುಖದ ಹಾಡು
ಕೈಕಾಲು ಗಟ್ಟಿ ಇದ್ದಾಗ ಸುತ್ತದೇ ಉಳಿದರೆ
ಸವಿನೆನಪುಗಳ ಪಾಲಿಗೆ ಬರೀ ಬರೆ.

ಸಿ.ಎನ್ ಮಹೇಶ್

Related post