ಮನವ ಗೆದ್ದ ಪರಿ

ಮನವ ಗೆದ್ದ ಪರಿ

ಮನಸನು ಅಪಹರಿಸಿ ಚಣದೊಳು
ನೀ ಬೇಸರಿಸಿ ಹೋಗಿದ್ದಾದರೂ ಎತ್ತ!
ಕನಸನು ಚೂರಾಗಿಸಿ ಕಣಕಣದಲಿ..
ಮತ್ತೆಂದು ಬರುವೆ ನೀ ಮನದತ್ತ!!

ಹಿತಮಿತ ಮಾತಿನಲಿ ತಲೆದೂಗಿಸಿ
ಕತ್ತಲ ಇರುಳಲಿ ಮರೆಯಾಗಿ ಹೋದೆ!
ನಿನ್ನ ಸವಿಗನಸುಗಳ ಮಾಲೆ ಧರಿಸಿ..
ಆ ರಾಧೆಯಂತೆ ನಾ ದಿನವೂ ಕಾದೆ!!

ಕಳೆದ ಜನುಮದ ಮೈತ್ರಿಯ ಬೆಸೆವ
ಆತ್ಮಬಂಧುವೇ ನೀನಾದೆ ನನಗೆ!
ಪನ್ನೀರ ಹನಿಯಂತೆ ಒಲವ ಹರಿಸುವ..
ಆ ಗುಳಿಕೆನ್ನೆಯ ನೋಟದಲೇ ಬೆಸುಗೆ!!

ಪದಗಳನು ಮುತ್ತಂತೆ ಅಣಿಯಾಗಿಸಿ
ಕವಿತೆ ಬರೆಯಲು ಆಗದು ನನಗೆ!
ಜನುಮಗಳ ಪ್ರೀತಿಯ ಬಂಧಿಸಿ..
ನುಡಿತೋರಣವಾಗಿಸಿ ಅರ್ಪಿಸಲೇ ನಿನಗೆ!!

ಸುಮನಾ ರಮಾನಂದ

Related post