ಮಳೆ ಸುಗ್ಗಿ
ಭೂ ತಾಯಿ ತಣಿದಾಳ
ಹಸಿರುಟ್ಟು ಮೆರೆದಾಳ
ನಗೆಯೊಂದು ಚೆಲ್ಯಾಳ
ಮಳೆರಾಯನ ಕೂಡಿ ಹರಿಸ್ಯಾಳ
ಊರಿಗೆಲ್ಲ ನೆಮ್ಮದಿಯ ಉಳಿಸ್ಯಾಳ
ರೈತನ ಹೆಗಲಮ್ಯಾಲ ನೇಗೀಲ ಜೊತೆಯಾಯಿತು
ಊರೆಲ್ಲಾ ಹಸನಾಯಿತು
ಎಲ್ಲೆಲ್ಲೂ ಕಣವೂ
ತೂರುತಾರ ಧಾನ್ಯವು
ಆಗಸಕ್ಕ ಮುಟ್ತಾದ ಚೆಲ್ಲೀದ ಕಾಳು
ಊರೆಲ್ಲಾ ಸಂಭ್ರಮದ ಬೀಡಾಯಿತು
ಕೈಯಾಗಿನ ಕೋಲಿಗೂ ಹರೆಯಾ ಬಂತು
ಹುಲಿ ಮೀಸೆ ಕುಣಿದಾಡಿದಾಗ
ಹೊಲ್ದಾಗಿನ ಬತ್ತವೂ ತಲೆದೂಗಿತು.
ಹೈಕಳಾ ಕಣ್ಣಾಗ ಮೂಡೀದ ಬೆಳಕೀಗೆ ಊರೆಲ್ಲಾ ಬೆಳಕಾಗ್ಯಾದ
ಹೆಂಗಸರ ಕಣ್ಣಾಗ ಸಂತಸದ ಕೋಡೀ ಹರಿದಾಡ್ಯಾದ
ಬಂಗಾರ ಯಾತಕ ಸಿಂಗಾರ ಯಾತಕ
ಬೂ ತಾಯಿ ಸಿಂಗಾರ ಸಾಕೆಂದು ಹೇಳ್ಯಾರ
ಹೆಂಗಸ್ರೆಲ್ಲಾ ಕೂಡ್ಯಾರ ಆರತಿಯನೆತ್ತ್ಯಾರ
ಗಂಡಸರ ಕಣ್ಣಾಗ ಬೆಳಕೊಂದು ಹರಿದಾಡ್ಯಾದ
ಭೂತಾಯಿ ನಕ್ಕಾಗ ಅದೇ ನಮ್ಗ ದಸರಾ
ಊರೆಲ್ಲಾ ಸಡಗರವೆಂದಾರ
ಮಳೆರಾಯ ಹರಸೆನುತಾ
ಜಗಕೆಲ್ಲಾ ತುತ್ತುಣಿಸೆಂದು
ಬೇಡಿಕೊಳ್ಳುತ ಕೈಯ ಮುಗಿದಾರ.
ಪವನ ಕುಮಾರ್
ಬಳ್ಳಾರಿ