ಸೂರಜ್ ಬಾಯ್ ಮೀನಾ – ಮೊದಲ ವನ್ಯಮಾರ್ಗದರ್ಶಿ
“ರಣಥಂಬೋರ್ ರಾಷ್ಟ್ರೀಯ ಉದ್ಯಾನವನ” ರಾಜಸ್ಥಾನದ ಸವಾಯಿ ಮಾಧೋಪುರ್ ನಗರಕ್ಕೆ ಹತ್ತಿರವಿರುವ ವಿಶಾಲವಾದ ವನ್ಯಜೀವಿ ಮೀಸಲು ತಾಣ. “ಸೂರಜ್ ಬಾಯ್ ಮೀನಾ” ಅಲ್ಲಿಯ ವನ್ಯಮಾರ್ಗದರ್ಶಿಗಳಲ್ಲೇ ಜನಪ್ರಿಯವಾಗಿರುವ ಹೆಸರು ಏಕೆಂದರೆ ಮೀನಾ ಅಲ್ಲಿನ ಮೊದಲ ಮಹಿಳಾ ವನ್ಯಮಾರ್ಗದರ್ಶಿ. “ಭೂರಿ ಪಹಾಡಿ” ಎಂಬ ಹಳ್ಳಿಯಲ್ಲಿ ಹುಟ್ಟಿದ ‘ಮೀನಾ’ ಕಳೆದ 15 ವರ್ಷಗಳಲ್ಲಿ ಹಲವು ವಿರೋಧಗಳ ನಡುವೆ ನಡೆದು ಬಂದ ದಾರಿ ಇದುವರೆಗು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.
“ಸೂರಜ್ ಮೀನಾ” ಹುಟ್ಟಿ ಬೆಳೆದ ‘ಭೂರಿ ಪಹಾಡಿ’ ಒಂದು ಕುಗ್ರಾಮ. ‘ಬನಾಸ್’ ನದಿ ತೀರದ ಆ ಹಳ್ಳಿಯಲ್ಲಿನ ಜನರು ಕೃಷಿಯನ್ನೇ ಮುಖ್ಯವಾಗಿ ಅವಲಂಬಿಸಿರುವರು. ಅದೆಷ್ಟೋ ಹಳ್ಳಿಯ ಜನರ ಮನಸ್ಥಿತಿಯಂತೆ ಅಲ್ಲಿನ ಜನರು “ಹೆಣ್ಣು ಮಕ್ಕಳು ಓದಬಾರದು, ಓದಿದರೆ ಮುಂದೆ ಅವರ ಮದುವೆಗೆ ಎರಡರಷ್ಟು ವರದಕ್ಷಿಣೆಯನ್ನು ತೆರಬೇಕಾಗುತ್ತದೆ” ಎಂದು ಬಲವಾಗಿ ನಂಬಿದವರು. ಮಹಿಳೆಗೆ ಅಲ್ಲಿನ ಜನರು ಕೊಟ್ಟಿದ್ದ ಮುಖ್ಯವಾದ ಜವಾಬ್ಧಾರಿಗಳೆಂದರೆ “ಅಡಿಗೆ ಮಾಡುವುದು, ಮಕ್ಕಳನ್ನು ಹೆರುವುದು” ಇಷ್ಟೇ. ಮೀನಾ ಅವರ ಮನೆಯಲ್ಲಿಯೂ ಕೂಡ ಮಹಿಳಾ ವಿದ್ಯಾಭ್ಯಾಸ ಹಾಗೂ ಸ್ವಾತಂತ್ರ್ಯಕ್ಕೆ ಪ್ರಭಲ ವಿರೋಧವಿತ್ತು.
ಸೂರಜ್ ಮೀನಾ ಳ ಅಣ್ಣ ಹೇಮರಾಜ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ದಲ್ಲಿ ವನ್ಯಮಾರ್ಗರ್ದರ್ಶಿಯಾಗಿ ಕಾರ್ಯನಿರ್ವಹಿಸಿತ್ತಿದ್ದು ಆಗಾಗ ಮೀನಾಳನ್ನು ಕರೆದುಕೊಂಡು ಹೋಗಿ ಅಭಯಾರಣ್ಯದಲ್ಲಿ ಸುತ್ತಿಸುತ್ತಿದ್ದನು, ಇದು ಮೀನಾಳಿಗೆ ಕಾಡಿನ ಹಾಗೂ ವನ್ಯಜೀವಿಯ ಬಗ್ಗೆ ಅಪಾರ ಆಸಕ್ತಿ ಮೂಡಿಸಿತು. ಅಣ್ಣ ಹೇಮರಾಜ್ ಮನೆಯಲ್ಲಿ ಒತ್ತಾಯ ಮಾಡಿ ಮೀನಾಳನ್ನು ‘ಸವಾಯ್ ಮಾಧೋಪುರ್’ ನಗರದಲ್ಲಿನ ಶಾಲೆಗೆ ಸೇರಿಸಿದನು. ವಿದ್ಯಾಭ್ಯಾಸ ಮುಗಿದನಂತರ ಮೀನಾ ಅರಣ್ಯ ಇಲಾಖೆ ಆಯೋಜಿಸುವ ತರಬೇತಿ ಶಾಲೆಗೆ ಸೇರಿ ಕಾಡುಗಳ ಬಗ್ಗೆ ಅಲ್ಲಿನ ಪ್ರಾಣಿಗಳ ಬಗ್ಗೆ ಮಾರ್ಗರ್ದರ್ಶಿಗಳಿಗೆ ಬೇಕಾದ ಮುಖ್ಯ ಮಾಹಿತಿಗಳನ್ನು ಪಡೆದುಕೊಂಡು ತಾನು ವನ್ಯಮಾರ್ಗದರ್ಶಿಯಾಗಬೇಕೆಂಬ ಕನಸು ಕಾಣತೊಡಗಿದಳು.
ಈ ಬಾರಿ ಮನೆಯಲ್ಲಷ್ಟೇ ಅಲ್ಲಾ ಮೀನಾಳ ಕನಸಿಗೆ ಊರಿನ ಜನರಿಂದಲೂ ಬಾರಿ ವಿರೋಧ ಉಂಟಾಯಿತು. ಅರಣ್ಯಕ್ಕೆ ಬರುವ ವಿದೇಶಿ ಪ್ರವಾಸಿಗರಿಂದ ತಮ್ಮ ಮಗಳ ಹೆಸರು ಹಾಳಾಗುತ್ತದೆ ಮತ್ತು ಮದುವೆಗೆ ಗಂಡು ಹುಡುಕಲು ಕಷ್ಟವಾಗುತ್ತದೆ ಎಂದು ಮನೆಯಲ್ಲಿ ವಿರೋಧಿಸಿದರೆ, ಇವಳನ್ನು ನೋಡಿ ಗ್ರಾಮದ ಹುಡುಗಿಯರು ಅದೇ ದಾರಿ ಹಿಡಿಯುತ್ತಾರೆ ಎಂದು ಊರಿನ ಮುಖಂಡರ ಚಿಂತೆಯಾಗಿತ್ತು. ಆದರೆ ಪ್ರತಿಬಾರಿಯಂತೆ ಈಗಲೂ ಮೀನಾಳ ಅಣ್ಣ ಹೇಮರಾಜ್ ಸಹೋದರಿಯ ಬೆಂಬಲವಾಗಿ ನಿಂತು ಮೀನಾ ಮಾರ್ಗರ್ದರ್ಶಿಯ ಕೆಲಸ ಮಾಡಲು ನೆರವಾದ. ತರಬೇತಿಯ ಆರಂಭದಲ್ಲೇ ಮೀನಾ ಬಾರಿ ಮುಜುಗರಗಳನ್ನು ಹಾಗೂ ವಿರೋಧಗಳನ್ನು ಅನುಭವಿ ಸಿದ್ದಳು. ಅರಣ್ಯದಲ್ಲಿ ಕೆಲಸ ಮಾಡುವ ಇತರೆ ಮಾರ್ಗದರ್ಶಿಗಳು ಈ ಕೆಲಸ ಒಂದು ಹೆಣ್ಣಿನಿಂದ ಸಾಧ್ಯವಾ? ಎಂದು ಅಪಹಾಸ್ಯ ಮಾಡಿ ಲೇವಡಿ ಮಾಡುತ್ತಿದ್ದರು. ಒಂದು ಕಡೆ ಮನೆ ಹಾಗೂ ಊರಿನವರ ವಿರೋಧದ ಜೊತೆಗೆ ಇಲ್ಲಿ ಸಹ ಕೆಲಸಗಾರರಿಂದ ಲೇವಡಿ ಮಾತು ಕೇಳಬೇಕಾಯಿತು. ಇದನೆಲ್ಲಾ ಸವಾಲಾಗಿ ತೆಗೆದುಕೊಂಡ ಮೀನಾ 2007 ರ ಅಕ್ಟೋಬರ್ ನಲ್ಲಿ ಮೊದಲ ಮಹಿಳಾ ವನ್ಯಮಾರ್ಗರ್ದರ್ಶಿಯಾಗಿ ತನ್ನ ಮೊದಲ ಪ್ರಯಾಣವನ್ನು ಶುರುಮಾಡಿದಳು. ಅವಳಿಗಾಗ ಹದಿನಾರು ವರ್ಷ ಅಷ್ಟೇ.
ಹಿಂದಿ ಮಾಧ್ಯಮದಲ್ಲಿ ತನ್ನ ವಿಧ್ಯಾಭ್ಯಾಸವನ್ನು ಮುಗಿಸಿದ್ದ ಮೀನಾಳಿಗೆ ಇಂಗ್ಲಿಷ್ ಭಾಷೆಯದ್ದೇ ಸಮಸ್ಯೆಯಾಗುತಿತ್ತು. ಅಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಬೇಕು ಬೇಡಗಳನ್ನು ಹಾಗೂ ಅವರ ಪ್ರಶ್ನೆಗಳಿಗೆ ಅರ್ಥಮಾಡಿಕೊಂಡು ಉತ್ತರಿಸಲು ಬಹಳ ಕಷ್ಟ ಪಡುತಿದ್ದ ಮೀನಾ ಜೊತೆಗೆ ಒಂದು ನೋಟ್ ಬುಕ್ ತೆಗೆದುಕೊಂಡು ಹೋಗಲು ಶುರುಮಾಡಿದಳು. ಪ್ರವಾಸಿಗರ ಜೊತೆ ಮಾತನಾಡುವಾಗ ಕೇಳಿಸುತ್ತಿದ್ದ ಹೊಸ ಇಂಗ್ಲಿಷ್ ಪದಗಳನ್ನು ಹಿಂದಿಯಲ್ಲಿ ಗುರುತು ಹಾಕಿಕೊಂಡು ಮನೆಗೆ ಬಂದು ನಿಘಂಟನ್ನು ತೆಗೆದು ಅವನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಇದು ಅವಳ ಮುಂದಿನ ಪ್ರವಾಸದಲ್ಲಿ ವಿದೇಶಿಗರ ಮಾತುಗಳನ್ನು ಅರ್ಥಮಾಡಿಕೊಂಡು ಅವರಿಗೆ ವನ್ಯಜೀವಿಗಳ ಬಗ್ಗೆ ವಿವರಿಸಲು ಸಹಕಾರಿಯಾಯಿತು. ಇದಲ್ಲದೆ ಮೀನಾ ಪ್ರಾಣಿ ಪಕ್ಷಿಗಳ ಹೆಜ್ಜೆ ಗುರುತನ್ನು ಕಂಡುಹಿಡಿಯಲು ಕ್ರಮೇಣ ಕಲಿತು ಪ್ರವಾಸಿಗರಿಗೆ ಅದನ್ನು ತೋರಿಸುತ್ತ ಇಲ್ಲಿ ಇಂತದ್ದೇ ಪ್ರಾಣಿ ಹಾದು ಹೋಗಿದೆ ಎಂದು ನಿಖರವಾಗಿ ಹೇಳಲು ಕಲಿತಳು.
ಪುರುಷ ಉದ್ಯೋಗಿಗಳ ಜೊತೆ ಅವರ ಸಮಕ್ಕೆ ಅರಣ್ಯದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ ಆದರೆ ಮೀನಾ ತನ್ನ ಅದಮ್ಯ ಉತ್ಸಾಹ ಹಾಗೂ ಛಲದಿಂದ ಕಳೆದ ಹದಿನೈದು ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾಳೆ. ಊರಿನ ಹಾಗೂ ಮನೆಯವರ ವಿರೋಧಕ್ಕೆ ಮಣಿದಿದ್ದರೆ ಮೀನಾ ಸಂಸಾರ ಜೀವನವನ್ನಷ್ಟೇ ಮಾಡುತ್ತಾ ಜೀವನ ಸಾಗಿಸಬೇಕಾಗಿತ್ತು, ಆದರೆ ಎಲ್ಲವನ್ನು ಸವಾಲಾಗಿ ಸ್ವೀಕರಿಸಿದ ಮೀನಾ ತನ್ನ ಪತಿ ಹಾಗೂ ಎರಡು ಮುದ್ದಿನ ಮಕ್ಕಳೊಂದಿಗೆ ಅರಣ್ಯ ಮಾರ್ಗದರ್ಶಿಯ ಕೆಲಸ ಮಾಡುತ್ತಾ ಸಂಸಾರವನ್ನು ತೂಗಿಸುತ್ತ ನೆಮ್ಮದಿಯ ಜೀವನವನ್ನು ನಡೆಸುತಿದ್ದಾಳೆ.
ಮೀನಾಳ ಈ ಸಾಧನೆಯಿಂದ ಜಿಲ್ಲೆಯಲ್ಲಷ್ಟೇ ಅಲ್ಲದೆ ಇಡೀ ರಾಜಸ್ತಾನದ ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಲು ಪೋಷಕರು ಮುಂದಾಗಿದ್ದಾರೆ ಹಾಗೂ ವಿಧ್ಯಾಭ್ಯಾಸದ ನಂತರ ಹೆಣ್ಣು ಮಕ್ಕಳು ಹೊರಗಡೆ ಕೆಲಸಕ್ಕೂ ಕೂಡ ಹೋಗುತ್ತಿದ್ದಾರೆ. ರಣಥಂಬೋರ್ ನ ಸುತ್ತ ಮುತ್ತ ಶಾಲೆಗಳ ಸಮಾರಂಭಗಳಲ್ಲಿ ಮೀನಾಳನ್ನು ಅತಿಥಿಯಾಗಿ ಆಹ್ವಾನಿಸಿ ಅವಳಿಂದ ಮಹಿಳಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿಸುತ್ತಾರೆ. ಇವಳ ಸಾಧನೆಯನ್ನು ಗುರುತಿಸಿ ಜೈಪುರದ ಮಹಾರಾಜರು ಮೀನಾಳಿಗೆ “ಅತ್ಯುತ್ತಮ ಮಹಿಳಾ ಮಾರ್ಗರ್ದರ್ಶಿ” (Best Lady Guide) ಎಂದು ಸನ್ಮಾನಿಸಿದ್ದಾರೆ. ಇದಷ್ಟೇ ಅಲ್ಲದೆ ಸೂರಜ್ ಮೀನಾ ಸರ್ಕಾರೇತರ ಸಂಸ್ಥೆಗಳ (N G O) ಜೊತೆ ಸೇರಿ ಅರಣ್ಯ ಇಲಾಖೆಯ ಪ್ರಚಾರ ಕಾರ್ಯಗಳಲ್ಲಿಯೂ ಸಹ ಭಾಗವಹಿಸುತ್ತಾಳೆ.
“ಈಗಲೂ ನನಗೆ ಅರಣ್ಯದಲ್ಲಿ ಕಾಣಸಿಗುವ ಪ್ರತಿ ಪ್ರಾಣಿ ಪಕ್ಷಿಗಳನ್ನು ನೋಡಿದಾಗ ಆಗುವ ರೋಮಾಂಚನದಿಂದ ಪ್ರತಿ ಪ್ರವಾಸವು ಹೊಸದಂತೆ ತೋರುತ್ತದೆ ಹಾಗು ನನ್ನ ಈ ಕೆಲಸದ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ” ಎಂದು ಸೂರಜ್ ಮೀನಾ ಹೇಳುತ್ತಾರೆ.
ಕು ಶಿ ಚಂದ್ರಶೇಖರ್
ಚಿತ್ರಗಳು: ಅಂತರ್ಜಾಲ