ಮಾದಕ ವಸ್ತು ಬೇಡ – ಈ ಜೀವ ದೈವಿದತ್ತ

ಮಾದಕ ವಸ್ತು ಬೇಡ – ಈ ಜೀವ ದೈವಿದತ್ತ

‘ಕಷ್ಟಪಟ್ಟು ಬೆವರನ್ನು ಕೊಡುವ ಬದಲು ಒಂದು ಹನಿ ರಕ್ತ ಕೊಡಲು ಸಿದ್ಧರಿರುವ ಯುವಕರ ಒಂದು ಗುಂಪನ್ನು ನನಗೆ ಕೊಡಿರಿ, ಇಡೀ ಜಗತ್ತನ್ನೇ ಗೆಲ್ಲುತ್ತೇನೆ’ ಎಂದು ಹೇಳಿದ ಸಿಡಿಲ ಮರಿ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಸತ್ವವಿದೆ. ಆದರೆ ಇಂದಿನ ಯುವ ಪೀಳಿಗೆಯು ಹನಿ ರಕ್ತವನ್ನು ಕೊಡುವುದು ಇರಲಿ, ಹನಿ ಬೆವರನ್ನೂ ಕೊಡಲು ಒದ್ದಾಡುತ್ತಾ ಇರುವುದನ್ನು ಎಲ್ಲೆಡೆ ನಾವು ಕಾಣಬಹುದು. ಬದಲಿಗೆ ಹನಿ ಮಾದಕ ವಸ್ತುಗಳ ದಾಸರಾಗಿ ಜೀವನವನ್ನೇ ಅದರ ಸುಳಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿಕೊಂಡು ಕೊನೆಗೆ ತಮ್ಮ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುತ್ತಾ ಇರುವುದು ದುರಂತವೇ ಸರಿ.

ಈ ವ್ಯಸನಿಗಳು ತನ್ನ ಸುಖಕ್ಕೆ ಯಾರು ಸತ್ತರೂ ಪರವಾಗಿಲ್ಲ, ಯಾರು ಯಾರ ಗುಲಾಮರಾದರೂ ಪರವಾಗಿಲ್ಲ ತನ್ನ ಬದುಕಷ್ಟೇ ಸುಖದಿಂದ ಇರಬೇಕು ಎಂಬ ಭ್ರಮೆಗೆ ಒಳಗಾಗುತ್ತಾರೆ. ಕಾಲೇಜು ಶಿಕ್ಷಣ ಎನ್ನುವುದು ಇಂದು ಕೆಲವು ಮಕ್ಕಳಿಗೆ ಮಸ್ತಿ, ಮೋಜು, ಸ್ವೆಚ್ಚಾಚಾರಕ್ಕೆ ಸಿಮೀತವಾಗಿದೆ. ಇವುಗಳ ನಡುವೆ ಯುವಕರು ಮದ್ಯಪಾನ, ಧೂಮಪಾನ. ಗುಟ್ಕಾ ಸೇವನೆ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಗುರಿಯಾಗಿ ಕೌಟುಂಬಿಕ ಕೊಂಡಿಯಿಂದ ಕಳಚಿಕೊಳ್ಳುತ್ತಾರೆ.

ವ್ಯಕ್ತಿಯೊಬ್ಬ ಪ್ರತಿನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕದ್ರವ್ಯ ವ್ಯಸನ ಎನ್ನುತ್ತೇವೆ. ಮಾದಕ ವಸ್ತುಗಳನ್ನು ಸೇವಿಸಿದರಷ್ಟೇ ಸ್ವಾಭಾವಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ವ್ಯಸನಿಗಳು ಭಾವಿಸುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಿದ್ದರೆ ಅದರ ಹೊರತಾಗಿ ಬದುಕಲಸಾಧ್ಯ ಎಂಬಷ್ಟು ಮಾದಕ ವದಗತುಗಳ ದಾಸರಾಗಿ ಇರುತ್ತಾರೆ. ಈ ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾದಕ ವಸ್ತುಗಳು ಮನಸ್ಸನ್ನು ತಿಳಿಗೊಳಿಸುವ, ಹೊಸ ಉತ್ಸಾಹ ನೀಡುವ ಉತ್ತಮ ಹವ್ಯಾಸಗಳಷ್ಟೇ ಬಲವಾದ ಸಾಧನವೆಂದು ಹೆಚ್ಚಿನವರು ಯೋಚಿಸುತ್ತಾರೆ. ಮನುಷ್ಯನ ಮೆದುಳಿನ ಕಾರ್ಯ ವಿಧಾನವನ್ನು ಬದಲಾಯಿಸುವ ರಾಸಾಯನಿಕಗಳಿಗೆ ಮಾದಕದ್ರವ್ಯ ಎನ್ನಲಾಗುತ್ತದೆ. ಡ್ರಗ್ ಮಿದುಳಿಗೆ ಪ್ರವೇಶಿಸಿ, ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ‍್ಗಿಕ ರಾಸಾಯನಿಕಗಳ ಪ್ರಮಾಣವನ್ನು ಕುಗ್ಗಿಸುತ್ತದೆ. ಕಾಫಿ, ಮದ್ಯ, ತಂಬಾಕು, ದರ‍್ಘಕಾಲದ ಔಷಧ ಸೇವನೆ, ಮನೋಲ್ಲಾಸಕ್ಕಾಗಿ ಬಳಸುವ ಈ ಕೃತಕ ಸಾಧನಗಳನ್ನು ಡ್ರಗ್ಸ್ ಎಂದು ಕರೆಯಬಹುದು.

ಪ್ರಾರಂಭದಲ್ಲಿ ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸುವ ಉದ್ದೇಶದಿಂದಲೋ, ಗೆಳೆಯರ ಒತ್ತಾಯಕ್ಕೋ, ವಿದ್ಯಾಭ್ಯಾಸ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ಹೆಚ್ಚಿಗೆ ಸಾಧಿಸುವ ಉದ್ದೇಶದಿಂದಲೋ ಅಥವಾ ಒತ್ತಡ ಹಾಗೂ ಇತರ ಸಮಸ್ಯೆಗಳನ್ನು ಮರೆಯುವ ಕಾರಣಕ್ಕೋ ಮಾದಕದ್ರವ್ಯಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಡ್ರಗ್ಸ್ ಬಳಕೆಯಿಂದ, ಮಿದುಳಿನಲ್ಲಿ ನಿಧಾನವಾಗಿ ಬದಲಾವಣೆಯಾಗಿ ವ್ಯಕ್ತಿಗಳು ಅತಿಯಾಗಿ ಮಾದಕ ವಸ್ತುಗಳನ್ನು ಬಯಸುವಂತೆ ಮಾಡುತ್ತದೆ. ಕೊನೆಗೆ ಇದರ ಬಳಕೆಯನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿ ಕೊನೆಗೆ ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ವ್ಯಸನದಿಂದ ಹೊರಬರಲು ಬಯಸಿದರೂ ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ. ಮಾನಸಿಕ ಸ್ವಾಸ್ತ್ಯ ಕಡಿಮೆ ಇದ್ದವರು ಮಾದಕ ವ್ಯಸನಿಗಳಾಗುತ್ತಾರೆ. ‘ಇನ್ನು ಮುಂದೆ ಡ್ರಗ್ ಸೇವಿಸುವುದಿಲ್ಲ’ ಎಂದು ದೃಢ ನಿಶ್ಚಯ ಮಾಡಿದರೆ ಈ ಚಟದಿಂದ ಹೊರಬರಬಹುದು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಧೂಮಪಾನ, ಗಾಂಜಾ, ಗುಟ್ಕಾ, ಆಲ್ಕೋಹಾಲ್, ಡ್ರಗ್ಸ್ ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಮುಂತಾದ ಮಾದಕ ದ್ರವ್ಯಗಳನ್ನು ಕೇವಲ ದೃಢ ನಿಶ್ಚಯದಿಂದ ನಿಲ್ಲಿಸಲು ಅಸಾಧ್ಯ. ಇದಕ್ಕೆ ವೈದ್ಯರ ಸಹಾಯ ಬೇಕೇ ಬೇಕು.

ಮನುಷ್ಯನ ಮಿದುಳಿಗೆ ಆಗುವ ದುಷ್ಪರಿಣಾಮ:

ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ‘ಡೋಪಮೈನ್’ಎನ್ನುವ ಹಾರ‍್ಮೋನ್ ಬಿಡುಗಡೆ ಆಗುತ್ತದೆ. ಯಾವಾಗ ವ್ಯಕ್ತಿ ಮಾದಕ ವಸ್ತುಗಳನ್ನು ಬಳಸುತ್ತಾನೋ ಆಗ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾರ‍್ತಿಸಿ ‘ಡೋಪಮೈನ್’ಎಂಬ ಹಾರ‍್ಮೋನ್ ಬಿಡುಗಡೆಯಾಗಿ, ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷ ಪಡಲು ಬಯಸಿ, ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ. ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲಾರಂಭಿಸಿದರೆ ಕ್ರಮೇಣ ಮಿದುಳಿನ ಸಂವೇದನಾಶೀಲತೆ ಕಡಿಮೆಯಾಗುತ್ತದೆ. ಪ್ರಾರಂಭದಲ್ಲಿ ಎಷ್ಟು ಪ್ರಮಾಣದ ಮಾದಕದ್ರವ್ಯವನ್ನು ಬಳಸಿದಾಗ ಸಂತೋಷ ದೊರೆಯುತ್ತಿತ್ತೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯವನ್ನು ಬಳಸಿದರೆ ಮಾತ್ರ ಮೊದಲು ದೊರೆಯುತ್ತಿದ್ದ ಸಂತೋಷದ ಅನುಭವ ನಂತರದ ಸೇವನೆಯಲ್ಲಿ ಸಿಗುತ್ತದೆಯೆಂಬ ಭ್ರಮೆಗೆ ವ್ಯಸನಿಗಳು ಸಿಲುಕುತ್ತಾರೆ.
ಮಾದಕದ್ರವ್ಯ ವ್ಯಸನದಿಂದ ಮಿದುಳಿನ ಆಲೋಚನಾ ಕ್ರಮದಲ್ಲಿ ಗೊಂದಲಗಳು ಉಂಟಾಗುತ್ತವೆಯೇ ವಿನಃ ವ್ಯಸನಿಗೆ ಯಾವ ಧನಾತ್ಮಕ ಉಪಯೋಗವನ್ನೂ ಕೊಡುವುದಿಲ್ಲ.

ದುರ್ಬಲಕಾಲದ ಮಾದಕದ್ರವ್ಯ ಸೇವನೆಯು ಮಿದುಳಿನ ತಿಳುವಳಿಕೆಯ ಕಾರ್ಯಕ್ಷಮತೆಯನ್ನು ಹಾನಿಗೊಳಿಸುತ್ತದೆ. ಅಧ್ಯಯನಗಳ ಪ್ರಕಾರ ಡ್ರಗ್ ಸೇವನೆಯಿಂದ ಕಲಿಯುವಿಕೆ, ನಿರ್ದಾರ ತೆಗೆದುಕೊಳ್ಳುವಿಕೆ, ಭಾವನೆಗಳ ನಿಯಂತ್ರಣ ಇತ್ಯಾದಿ ಪ್ರಕ್ರಿಯೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ವ್ಯಸನಿಗಳು ಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗೆ ಒಳಗಾಗಬಹುದು.

ಮಾದಕದ್ರವ್ಯ ವ್ಯಸನದ ದುಷ್ಪರಿಣಾಮಗಳು:

ಕೈಕಾಲುಗಳ ಅನಿಯಂತ್ರಿತ ನಡುಕ, ಹಸಿವು ಮತ್ತು ನಿದ್ರೆಯಲ್ಲಿ ವ್ಯತ್ಯಾಸವಾಗುತ್ತದೆ. ಎಲ್ಲೆಂದರಲ್ಲಿ ಆಗಾಗ ಮೂರ್ಛೆ ಹೋಗುವುದು, ದೇಹದ ತೂಕದಲ್ಲಿ ಏರಿಳಿತ ಅಥವಾ ವ್ಯತ್ಯಾಸ ಉಂಟಾಗುವುದು, ಸಾಮಾಜದಲ್ಲಿ ಪರಿತ್ಯಕ್ತಗೊಳ್ಳುವುದು, ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು, ಭಾವನೆಗಳ ಮೇಲಿನ ನಿಯಂತ್ರಣ ತಪ್ಪುವುದು, ಅತಿಯಾದ ಕೋಪ ಮತ್ತು ನಗು, ಸದಾ ಹೆದರಿಕೆ ಅಥವಾ ತಳಮಳ ಮತ್ತು ಆತಂಕ ಮತ್ತು ಮತಿವಿಕಲ್ಪಕ್ಕೆ ಒಳಗಾಗುವುದು ಇವೇ ಮೊದಲಾದ ದುಷ್ಪರಿಣಾಮಗಳು ವ್ಯಸನಿಗಳಿಗೆ ಉಂಟಾಗುತ್ತದೆ.

ಮಾದಕ ವ್ಯಸನದಿಂದ ಹೊರಬರಲು ಈ ಕೆಳಕಂಡ ಚಿಕಿತ್ಸೆಯ ಅವಶ್ಯಕತೆಯಿದೆ.

 ವ್ಯಕ್ತಿಯ ದೇಹದಿಂದ ಮಾದಕ ವಸ್ತುವಿನಿಂದ ಆಗಿರುವ ಮಾದಕ ದ್ರವ್ಯದ ದುಷ್ಪರಿಣಾಮಗಳನ್ನು ನಿವಾರಿಸುವುದು.

 ಅತಿಯಾದ ಬಯಕೆ ಮತ್ತು ವ್ಯಸನ ತ್ಯಜಿಸಬೇಕೆಂಬ ಭಾವನೆಗಳನ್ನು ಮನತುಂಬಿಕೊಳ್ಳಲು ವ್ಯಕ್ತಿಗೆ ಸಹಕಾರ ನೀಡುವುದು.

 ವ್ಯಕ್ತಿಯು ಮಾದಕದ್ರವ್ಯದ ಕಡೆಗೆ ಗಮನ ನೀಡದಂತೆ, ಹೊಸ ಜೀವನಶೈಲಿ ರೂಪಿಸಿಕೊಳ್ಳಲು ಸಹಾಯ ಮಾಡಿ ಪ್ರೇರಣೆ ನೀಡುವುದು.

ವ್ಯಸನದಿಂದ ಹೊರ ಬಂದ ನಂತರ ಜೀವನ ಶೈಲಿ ಹೇಗಿರಬೇಕು?

ವ್ಯಸನದಿಂದ ಹೊರ ಬಂದವರು ಹೊಸ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ವ್ಯಸನದ ದಿನಗಳನ್ನು ಮರೆಯುವ ಪ್ರಯತ್ನವನ್ನು ಮಾಡಬೇಕು. ಧನಾತ್ಮಕ ವ್ಯಕ್ತಿಗಳ ಸಂಗ ಮತ್ತು ಗೆಳೆತನವನ್ನು ಮಾಡಬೇಕು. ವ್ಯಸನಿಗಳಿಂದ ದೂರವೇ ಇರಬೇಕು. ಯೋಗ ಮತ್ತು ಧ್ಯಾನ ಮತ್ತು ಭಜನೆಯಲ್ಲಿ ಸಮಯವನ್ನು ಕಳೆಯಬೇಕು. ಕುಟುಂಬ ಮತ್ತು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಸಂಜೆಯ ವೇಳೆ ಆಟೋಟದಲ್ಲಿ ತೊಡಗಿಕೊಳ್ಳಬೇಕು. ಬೆಳಗ್ಗಿನ ಜಾವ ಬೇಗನೇ ಎದ್ದು ವಾಕಿಂಗ್ ಮತ್ತು ವ್ಯಾಯಾಮ ಮಾಡಬೇಕು. ಹೇರಳವಾಗಿ ನೀರನ್ನು ಕುಡಿಯುತ್ತಿರಬೇಕು. ಸಮಾಜ ಸೇವೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಮಾದಕ ವಸ್ತುಗಳಿಂದ ವ್ಯಕ್ತಿಗಳು ದೂರವಿರಬೇಕು. ವ್ಯಸನವನ್ನು ನಿಭಾಯಿಸುವ ಕೌಶಲಗಳನ್ನು ಗಳಿಸಿಕೊಳ್ಳಬೇಕು. ಧನಾತ್ಮಕ ವಿಚಾರಗಳಿರುವ ಪತ್ರಿಕೆ ಮತ್ತು ಪುಸ್ತಕಗಳನ್ನು ಓದಬೇಕು.

ವಿಶ್ವಸಂಸ್ಥೆಯು ಜೂನ್ 26ನ್ನು ವಿಶ್ವ ಮಾದಕ ವ್ಯಸನ ವಿರೋಧಿ ದಿನವೆಂದು ಆಚರಿಸುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತೇನೋ ಇದೆ, ಆದರೆ ಇಂದಿನ ಎಳೆಯ ಮಕ್ಕಳೇ ಮಾದಕ ವಸ್ತುಗಳ ಚಟಕ್ಕೆ ಸಿಲುಕದಂತೆ ತಡೆಯಬೇಕಿದೆ. ತಂದೆ ತಾಯಿಯಂತೂ ನನ್ನ ಮಗ ಅಥವಾ ಮಗಳು ಅಂಥಹ ಚಟಕ್ಕೆ ಬೀಳಲು ಸಾಧ್ಯವೇ ಇಲ್ಲವೆನ್ನುವ ಭ್ರಮೆಯಲ್ಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಅವಧಿಯಲ್ಲಿ ಹೆತ್ತವರು ಹೆಚ್ಚಿನ ನಿಗಾ ಇಡಬೇಕು. ಹದಿಹರೆಯದಲ್ಲಿ ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆಯಿದ್ದಂತೆ. ಆ ಗೋಡೆಗೆ ಕಲ್ಲೆಸೆದರೆ ಅಂಟಿಕೊಳ್ಳುವಂತೆ ಸರಿ ತಪ್ಪುಗಳ ಅರಿವಿಲ್ಲದೇ ದುಷ್ಚಟಗಳ ದಾಸರಾಗುತ್ತಾರೆ. ಹಾದಿ ತಪ್ಪುವ ಅವಧಿಯಲ್ಲಿ ಮಕ್ಕಳ ಕಾಳಜಿಯನ್ನು ಮಾಡಿ ಅವರಿಗೆ ತಿಳಿ ಹೇಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಕೈಲಾದ ಕೊಡುಗೆ ನೀಡಬೇಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post