ಮಾನಸಿಕ ಖಿನ್ನತೆ ಹುಚ್ಚಲ್ಲ
ಮಾನಸಿಕ ಖಿನ್ನತೆ ಎಂದರೆ ಹುಚ್ಚಲ್ಲ, ಮನುಷ್ಯನ ದುರ್ಬಲ ಮನಃಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ಕಡಿಮೆ ಒಲವಿರುವ ಸ್ಥಿತಿಯನ್ನು ಮಾನಸಿಕ ಖಿನ್ನತೆ ಎನ್ನಲಾಗುತ್ತದೆ.
![](https://sahityamaithri.com/wp-content/uploads/2025/02/1000009178.jpg)
ಖಿನ್ನತೆಯು ಒಬ್ಬ ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಪ್ರೇರಣೆ, ಭಾವನೆಗಳು ಮತ್ತು ಆತನ ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರಬಹುದು. ಇದು ದುಃಖ, ಆಲೋಚನೆ ಮತ್ತು ಏಕಾಗ್ರತೆಯ ತೊಂದರೆ ಮತ್ತು ಹಸಿವು ಮತ್ತು ನಿದ್ರೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವನ್ನು ಮಾಡಬಹುದು. ಖಿನ್ನತೆಯು ಮನುಷ್ಯನನ್ನು ‘ಕೊಲ್ಲದೇ ಕೊಲ್ಲುವ ರೋಗ’ ಎಂದು ಹೇಳಬಹುದು. ದೇಶದಲ್ಲಿ ಪ್ರತೀ ಹತ್ತು ಮಂದಿಯಲ್ಲಿ ಎಂಟು ಜನರು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.
ಖಿನ್ನತೆ ಎಂದರೇನು?
ಸಾಮಾನ್ಯವಾಗಿ ಮನುಷ್ಯನ ಮನಸ್ಸು ಅವನ ನಿಯಂತ್ರಣದಲ್ಲಿ ಇರಬೇಕು. ಒಂದು ವೇಳೆ ವ್ಯಕ್ತಿಯ ಮನಸ್ಸು ಆತನ ನಿಯಂತ್ರಣದಲ್ಲಿ ಇರದೇ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಅದನ್ನು ಖಿನ್ನತೆ ಎನ್ನುತ್ತೇವೆ. ಖಿನ್ನತೆಯನ್ನು ಮನೋರೋಗಗಳ ಪಟ್ಟಿಗೆ ಸೇರಿಸಲಾಗಿದೆ. ಅಂದರೆ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಹುಚ್ಚು ಹಿಡಿದಿದೆ ಎಂದಲ್ಲ. ಯಾವುದೋ ಆಂತರಿಕ ಅಥವಾ ಬಾಹ್ಯ ಒತ್ತಡಕ್ಕೆ ಒಳಗಾಗಿ ವ್ಯಕ್ತಿಯು ಖಿನ್ನತೆಯ ಸಮಸ್ಯೆಗೆ ಬಲಿಯಾಗುತ್ತಾನೆ. ಪ್ರಾರಂಭದಲ್ಲಿ ಖಿನ್ನತೆಯು ಆತನಿಗೆ ಅಥವಾ ಇತರರಿಗೆ ತೊಂದರೆಯನ್ನು ಮಾಡದಿದ್ದರೂ ಇದು ಕೊನೆಯ ಹಂತ ತಲುಪಿದರೆ ವ್ಯಕ್ತಿ ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕುವ ಸಾಧ್ಯತೆಯಿದೆ. ಹಾಗಾಗಿ ಖಿನ್ನತೆಯನ್ನು ಪ್ರಾರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
![](https://sahityamaithri.com/wp-content/uploads/2025/02/1000009188.jpg)
ಅತೀವ ಖಿನ್ನತೆಯಿಂದ ಬಳಲುತ್ತಿರುವವರ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ ಸಹಜ ಜೀವನ ನಡೆಸುತ್ತಿರುವವರೂ ಬಹಳಷ್ಟು ಮಂದಿ ಇದ್ದಾರೆ, ಅದೇ ರೀತಿ ನಿರ್ಲಕ್ಷ್ಯದಿಂದ ಸಾವನ್ನಪ್ಪಿದವರೂ ಇದ್ದಾರೆ.
ಖಿನ್ನತೆಗೆ ಕಾರಣಗಳು: ಖಿನ್ನತೆ ಬರಲು ನಿರ್ದಿಷ್ಟವಾದ ಒಂದೇ ಕಾರಣ ಎಂದು ಇರುವುದಿಲ್ಲ. ಕ್ಲಿನಿಕಲ್ ಖಿನ್ನತೆಗೆ ಹಲವಾರು ಅಂಶಗಳು ಕಾರಣವಾಗಿದ್ದು, ಹಲವು ಅಪಾಯಕಾರಿ ಅಂಶಗಳಿದ್ದಾಗ ಖಿನ್ನತೆಯ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಖಿನ್ನತೆ ಹೆಚ್ಚಲು ಪ್ರಮುಖ ಕಾರಣಗಳು ಹೀಗಿವೆ.
- ವಂಶವಾಹಿಗಳು: ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಅಂಶಗಳ ಕೈಪಿಡಿ ಆSಒ-5 ರ ಪ್ರಕಾರ, ಖಿನ್ನತೆಯು ಕುಟುಂಬದ ವಂಶವಾಹಿಯ ಮೂಲಕ ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ವೈದ್ಯಕೀಯ ಪರಿಸ್ಥಿತಿಗಳು: ಮನಸ್ಸಿನ ಮೇಲೆ ಪರಿಣಾಮವನ್ನು ಬೀಡುವ ಇತರ ಔಷಧಿಗಳನ್ನು ಸತತವಾಗಿ ಸೇವನೆ ಮಾಡುವುದರಿಂದಲೂ ಖಿನ್ನತೆ ಉಂಟಾಗಬಹುದು.
- ಮದ್ಯಪಾನ ಮತ್ತು ಮಾದಕ ವ್ಯಸನ: ಅಧ್ಯಯನದ ಪ್ರಕಾರ 12% ರಿಂದ 80% ರಷ್ಟು ಮದ್ಯಪಾನ ಮತ್ತು ಮಾದಕವಸ್ತು ಸೇವನೆ ಮಾಡುವವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಸಾಬೀತಾಗಿದೆ.
- ಮೆದುಳಿನಲ್ಲಿನ ನ್ಯೂರೋ ಟ್ರಾನ್ಸಮೀಟರ್ ನಿಂದ: ಖಿನ್ನತೆಗೆ ಮತ್ತೊಂದು ಕಾರಣವೆಂದರೆ ಮೆದುಳಿನಲ್ಲಿ ಇರುವ ಸಿರೊಟೋನಿನ್, ನೊರ್ಪೈನ್ಪಿçನ್ ಮತ್ತು ಡೋಪಮೈನ್‌ನಂತಹ ನರಪ್ರೇಕ್ಷಕಗಳ ಅಡ್ಡಿಯೂ ಕಾರಣವಾಗಿರುತ್ತದೆ.
- ಪಾರಿಸರಿಕ ಅಂಶಗಳು: ಒಬ್ಬ ವ್ಯಕ್ತಿಗೆ ಈ ಹಿಂದೆ ಆಗಿರುವ ಮಾನಸಿಕ ಆಘಾತ ಅಥವಾ ನಿಂದನೆಯು ಖಿನ್ನತೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಜೀವನದ ಘಟಿಸಿರುವ ದುರ್ಘಟನೆಗಳು ಮತ್ತು ಒತ್ತಡಗಳು ಖಿನ್ನತೆಯ ಬೆಳವಣಿಗೆಗೆ ಪ್ರಚೋದಕ ಅಂಶಗಳಾಗುತ್ತವೆ. ಉದಾ: ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ದುರ್ಘಟನೆಗಳನ್ನು ಕಣ್ಣಾರೆ ನೋಡುವುದು, ಹಣಕಾಸಿನ ತೊಂದರೆಗಳು ಮುಂತಾದ ಸನ್ನಿವೇಶಗಳು ಖಿನ್ನತೆಗೆ ಕಾರಣವಾಗುತ್ತವೆ.
ಖಿನ್ನತೆಯನ್ನು ಗುರುತಿಸುವುದು ಹೇಗೆ?
![](https://sahityamaithri.com/wp-content/uploads/2025/02/1000009189.jpg)
ಖಿನ್ನತೆ ಇರುವ ವ್ಯಕ್ತಿ ಎಲ್ಲರಂತೆ ಸಹಜವಾಗಿ ಇರದೇ ಸದಾ ಮಂಕಾಗಿಯೇ ಇರುತ್ತಾರೆ.
ಮಾತು ಮಾತಿಗೂ ಅತಿಯಾಗಿ ಸಿಟ್ಟಾಗುತ್ತಾರೆ.
ತಮ್ಮ ಬಗ್ಗೆ ತಾವೇ ಸದಾ ಕೀಳರಿಮೆ ಅನುಭವಿಸುತ್ತಾರೆ.
ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲ, ತಾನು ನಿಶ್ಚಯೋಜಕ ಎಂಬ ಭಾವನೆಯಿಂದ ಕೊರಗುತ್ತಾರೆ.
ಖಿನ್ನತೆ ಇರುವವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ.
ಅತಿಯಾದ ಮರೆವಿನಿಂದ ಬಳಲುತ್ತಾರೆ.
ಪ್ರತಿಯೊಂದು ವಿಚಾರಕ್ಕೂ ಅಳುವುದು.
ಕೆಲವೊಮ್ಮೆ ಅಸಹ್ಯವಾದ ತಲೆನೋವು.
ಈ ಮೇಲಿನ ಲಕ್ಷಣಗಳಲ್ಲದೇ ಇತರ ಕೆಲವು ಅನುಮಾನಕರ ಲಕ್ಷಣಗಳು ಸಹ ಗೋಚರಿಸಬಹುದು. ಅಥವಾ ಈ ಮೇಲಿನ ಯಾವುದಾದರೂ ಲಕ್ಷಣ ಕಂಡುಬಂದರೆ ಖಚಿತವಾಗಿ ಆ ವ್ಯಕ್ತಿಗೆ ಖಿನ್ನತೆ ಇದೆ ಎಂದೂ ಅಲ್ಲ.
ನಮ್ಮ ಜತೆಗಾರರಲ್ಲಿ ಯಾರಿಗಾದರೂ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ತಕ್ಷಣ ಅವರಿಗೆ ತಿಳಿಹೇಳಿ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು. ಅಥವಾ ಅವರ ಕುಟುಂಬಸ್ತರ ಗಮನಕ್ಕೆ ತರಬೇಕು, ಖಿನ್ನತೆಯೆಂದರೆ ಹುಚ್ಚಲ್ಲವೆಂದು ಸೂಕ್ಷ್ಮವಾಗಿ ಅರ್ಥ ಮಾಡಿಸಬೇಕು. ಖಿನ್ನತೆಯೆಂದ ಕೂಡಲೇ ವ್ಯಕ್ತಿಗೆ ಹುಚ್ಚು ಹಿಡಿದಿದೆ ಎಂದೇ ಅರ್ಥೈಸಿಕೊಳ್ಳುವವರು ಹೆಚ್ಚು. ಇಂತಹ ಸಂದರ್ಭಗಳಲ್ಲಿ ಖಿನ್ನ ವ್ಯಕ್ತಿಗಳು ಅವರ ಕುಟುಂಬದವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿಭಾಯಿಸಬೇಕು.
ಖಿನ್ನತೆಯನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿದರೆ ಧ್ಯಾನ, ಸರಿಯಾದ ನಿದ್ರೆ ಹಾಗೂ ಆಪ್ತಸಮಾಲೋಚನೆಯ ಮೂಲಕ ಖಿನ್ನತೆಯಿಂದ ಹೊರಬರಬಹುದು. ತೀರಾ ತಡವಾದರೆ ಅದಕ್ಕೆ ಸೂಕ್ತ ಚಿಕಿತ್ಸೆಯ ಮತ್ತು ಔಷಧಿಯ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಖಿನ್ನತೆ ಕೊನೆಯ ಹಂತ ತಲುಪಿದರೆ ಜೀವನಪರ್ಯಂತ ಆ ವ್ಯಕ್ತಿಯು ಖಿನ್ನತೆಗೆ ಸಂಬಂಧಿಸಿದ ಔಷಧಿ ಸೇವಿಸಬೇಕು. ಹಾಗಾಗಿ ಖಿನ್ನತೆಯನ್ನು ಪ್ರಾರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
ಖಿನ್ನತೆ ಇರುವವರನ್ನು ನೋಡಿಕೊಳ್ಳುವ ರೀತಿ:
![](https://sahityamaithri.com/wp-content/uploads/2025/02/1000009190.jpg)
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ನೋಡಿಕೊಳ್ಳುವ ಸುಲಭದ ಮಾತಲ್ಲ. ಆದ್ದರಿಂದ ಈ ಕೆಳಗಿನ ಅಂಶಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು.
ಅವರೊಂದಿಗೆ ಏನೇ ಆದರೂ ನಿನ್ನೊಂದಿಗೆ ನಾನಿದ್ದೇನೆ, ಭಯ ಪಡಬೇಡ ಎನ್ನುವ ಧೈರ್ಯ ತುಂಬಬೇಕು.
ಖಿನ್ನ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಅವರ ಮನಸ್ಸಿಗೆ ನೋವಾಗದಂತೆ ವರ್ತಿಸಬೇಕು.
ಯಾವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಾರೆ, ಸಮಸ್ಯೆಯೇನೆಂದು ಅರಿತು ಅದಕ್ಕೆ ಪರಿಹಾರ ಸೂಚಿಸಬೇಕು.
ಇವರು ಒಂಟಿಯಾಗಿರದಂತೆ ಜಾಗೃತರಾಗಿರಬೇಕು. ಇವರಿಗೆ ಆತ್ಮಹತ್ಯೆಯ ಯೋಚನೆಗಳು ಆಗಾಗ ಬರುತ್ತಿರುತ್ತದೆ.
ಇವರನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳಬೇಕೇ ವಿನಃ ಎಂದೂ ನಿರ್ಲಕ್ಷದಿಂದ ಮತ್ತು ಅವಹೇಳನ ಮಾಡಬಾರದು.
ಇವರು ಏನು ಹೇಳುತ್ತಿದ್ದಾರೆ, ಅವರ ಮನಸ್ಸಿನಲ್ಲೇನು ನೋವಿದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಯತ್ನಿಸಬೇಕು.
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ನಿದ್ರಿಸುವಂತೆ ನೋಡಿಕೊಳ್ಳಬೇಕು.
ನಿಯಮಿತವಾಗಿ ಔಷದೋಪಚಾರ ಮಾಡಿಸಬೇಕು. ಆಕೆ ಮಹಿಳೆಯಾದರೆ ಮತ್ತೂ ವಿಶೇಷ ಕಾಳಜಿ ವಹಿಸಬೇಕು.
ಖಿನ್ನ ವ್ಯಕ್ತಿಯು ಮಾನಸಿಕವಾಗಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು.
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯ ಮುಂದೆ ಬೈಗುಳದ ಭಾಷೆ, ಅಸಹ್ಯ ಭಾಷೆ ಮಾತನಾಡಬಾರದು.
ಖಿನ್ನತೆಯು ಕೇವಲ ಒಂದು ಮಾನಸಿಕ ಅಸ್ವಸ್ಥತೆಯಷ್ಟೇ, ಅದು ಒಂದು ರೋಗವಂತೂ ಖಂಡಿತಾ ಅಲ್ಲ. ದೇಹಕ್ಕೆ ಹೇಗೆ ಆಗಾಗ ರೋಗ ರುಜಿನಗಳು ಬರುತ್ತಿರುತ್ತವೆಯೋ ಅದೇ ರೀತಿ ಮನಸ್ಸಿಗೂ ಖಿನ್ನತೆಯೆಂಬ ಅಸ್ವಸ್ಥತೆ ಕೆಲವು ದಿನಗಳವರೆಗೆ ಆವರಿಸಿಕೊಳ್ಳುತ್ತದೆ. ಇದರಿಂದ ಹೊರಬರಲು ಉತ್ತಮ ಜೀವನಶೈಲಿಯ ಜೊತೆಗೆ ವೈದ್ಯರ ಸಲಹೆ ಪಡೆದರೆ ಸಾಕು ಖಿನ್ನತೆಯೆಂಬ ಜಾಡ್ಯವು ದೂರವಾಗುತ್ತದೆ.
ಬದುಕು ಎಂದಿಗೂ ನಿಂತ ನೀರಲ್ಲ. ಏರುಪೇರುಗಳು ಜೀವನದಲ್ಲಿ ಸಹಜವಾಗಿ ಇರುತ್ತದೆ. ಜೀವನದಲ್ಲಿ ಎಷ್ಟೇ ನಿರಾಶರಾದರೂ ಮತ್ತೆ ಉತ್ತಮ ಭಾವನೆಯನ್ನು ಹೊಂದಬಹುದು. ಖಿನ್ನತೆಗೆ ಕಾರಣ, ಅದರ ಲಕ್ಷಣಗಳು ಹಾಗೂ ಅದರ ವಿಧಗಳನ್ನು ತಿಳಿದುಕೊಂಡು ಸಕಾಲಿಕ ಚಿಕಿತ್ಸೆಯ ಮೂಲಕ ಈ ಸಮಸ್ಯೆಯಿಂದ ಹೊರಬಂದು ಉತ್ತಮ ಜೀವನ ನಡೆಸಬಹುದು.
![](http://sahityamaithri.com/wp-content/uploads/2024/09/Santosh-Rao-3-768x576-1.png)
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160