ಮೇಘಸ್ಪೋಟ

ಮೇಘಸ್ಪೋಟ

ಈ ಮೇಘಸ್ಪೋಟ ಹೆಚ್ಚಾಗಿ ಸಮುದ್ರ ಮಟ್ಟದಿಂದ ಮೇಲೇ ಇರುವ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ದಟ್ಟ ಕಾಡುಮೇಡಿನಿಂದ ಆವೃತವಾದ ನಾಲ್ಕೈದು ಬೆಟ್ಟದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಇಂಗ್ಲಿಷಿನಲ್ಲಿ ಇದನ್ನ “Cloudburst” ಅಂತ ಕರೀತಾರೆ. ಒಂದು ಬೆಟ್ಟದ ಬದಿಯಿಂದ ದಟ್ಟವಾಗಿ ತೂರಿ ಬರುವ ಮೋಡಗಳಿಗೆ ಅಡ್ಡಲಾಗಿ ನಿಂತ ಮುಂದಿನ ಬೆಟ್ಟ ಪ್ರದೇಶವನ್ನ ತೂರಿ ಹೋಗಲಾಗದೇ ಮಧ್ಯದಲ್ಲಿ ಸಿಕ್ಕಿಬಿದ್ದಾಗ ವಿಪರೀತ ವಾಯುಭಾರ ಕುಸಿತ ಉಂಟಾಗುತ್ತದೆ. ಅದೇ ಸಮಯದಲ್ಲಿ ಕಾಡಿನಿಂದ ಆವೃತವಾದ ಬೆಟ್ಟ ಪ್ರದೇಶವು ಮೋಡಗಳನ್ನ ತಕ್ಷಣವೇ ನೀರಾಗಿ ಪರಿವರ್ತಿಸಲು ಪ್ರಚೋದಿಸುತ್ತವೆ. ಮೋಡಗಳು
ನೀರಾಗಿ ಪರಿವರ್ತನೆಯಾದ ಮೇಲಿಂದ ಸಾವಿರಾರು ಕೋಟ್ಯಾಂತರ ಲೀಟರಗಟ್ಟಲೇ ಪ್ರಮಾಣದ ನೀರು ಒಮ್ಮೆಗೆ ಭೂಮಿಯನ್ನ ಅಪ್ಪಳಿಸುತ್ತದೆ.

ಕೆಳಗಿರುವುದು ಮೇಘಸ್ಪೋಟದ ಒಂದು ಗ್ರಾಫಿಕ್ ವಿಡಿಯೋ.

ಒಂದು ಮಹಡಿಯ ಮೇಲಿಂದ ಮಾಮೂಲಿ ನೀರು ತುಂಬಿದ ಒಂದು ಬಲೂನು ಎಸೆದರೇನೆ ಎಷ್ಟೊಂದು ರಭಸದಿಂದ ಕೆಳಗೆ ಬೀಳುತ್ತದೆ ಅಂತ ಒಂದು ಸರ್ತಿ ಟ್ರೈ ಮಾಡಿ ನೋಡಿ . ಅಂತಾದ್ದರಲ್ಲಿ ಹೆಚ್ಚುಕಮ್ಮಿ ಒಂದು ಪುಟ್ಟ ಅಥವಾ ಮಧ್ಯಮಗಾತ್ರದ ಜಲಾಶಯ ಆಕಾಶದಿಂದ ದೊಪ್ಪನೆ ಬಿದ್ದು (ಸ್ಪೋಟಗೊಂಡ ಮೇಘ) ಭೂಮಿಯನ್ನ ಅಪ್ಪಳಿಸಿದಾಗ ಏನೆಲ್ಲಾ ಅನಾಹುತಗಳು ಸಂಭವಿಸಬಹುದೋ ಆ ಎಲ್ಲ ಅನಾಹುತಗಳು ಸಂಭವಿಸುತ್ತವೆ. ಮೇಘಸ್ಪೋಟಗೊಳ್ಳುವ ಪ್ರದೇಶದಲ್ಲಿ ಜನವಸತಿ ಮತ್ತು ಪಶು ಪ್ರಾಣಿಗಳು ( ವನ್ಯ ಮತ್ತು ಸಾಕು) ಇದ್ದರಂತೂ ಜೀವಹಾನಿಯ ಪ್ರಮಾಣ ತೀರಾ ಹೆಚ್ಚು . ಬೆಟ್ಡ ಪ್ರದೇಶಗಳಲ್ಲಿ ಸಡಿಲುಮಣ್ಣು ಕಲ್ಲುಗಳು ಇದ್ದರೆ ಆಗಸದಿಂದ ದಿಡೀರನೇ ಉಂಟಾಗುವ ಭಾರಿ ಪ್ರಮಾಣದ ಜಲಾಘಾತದ ರಭಸ ಮತ್ತು ಭಾರವನ್ನ ತಾಳಲಾರದೆ ಭೂಕುಸಿತ ಉಂಟಾಗುತ್ತದೆ.

ಈ ಮೇಘಸ್ಪೋಟಗಳು ಈ ಮುಂಚೆಯೂ ಆಗುತ್ತಿದ್ದವು. ಆದರೆ ಆಗ ಮೋಡದ ಪ್ರಮಾಣ ಕಡಿಮೆ ಇದ್ದೂ ಕೆಳಗೆ ಭೂಮಿಯನ್ನ ಅಪ್ಪಳಿಸುವ ನೀರಿನ ಪ್ರಮಾಣ ಕಮ್ಮಿ ಇರುತ್ತಿತ್ತು. ಜೊತೆಗೆ ಬೆಟ್ಟದ ಕಾಡುಪ್ರದೇಶಗಳು ಒತ್ತೊತ್ತಾಗಿ ಮರಗಿಡಗಳನ್ನ ಹಬ್ಬಿಕೊಂಡಿದ್ದು ನೆಲದಲ್ಲಿ ತೂರಿರುವ ಅವುಗಳ ಬೇರುಗಳು ಅಲ್ಲಿನ ಮಣ್ಣು ಕಲ್ಲುಗಳನ್ನ ಸಾಕಷ್ಟು ಬಿಗಿಯಾಗಿ ಕವುಚಿ ಹಿಡಿದುಕೊಂಡಿರುತ್ತಿದ್ದವು.

ಆದರೇ ಈಗ ಬೆಟ್ಟ ಪ್ರದೇಶಗಳಲ್ಲಿ ಮರಗಿಡಗಳ ಪ್ರಮಾಣ ತೀರಾ ಇಳಿಮುಖವಾಗಿದೆ. ಹೀಗಾಗಿ ಮಣ್ಣು ಸಡಿಲುಗೊಂಡಿದೆ. ಅಭಿವೃದ್ಧಿಯ ದೃಷ್ಟಿಯಿಂದ ನಡೆಸಿದ ಕಾಮಗಾರಿಗಳು ಕಾಡಿನಲ್ಲಿ ಸಹಜವಾಗಿಯೇ ಒತ್ತೋತ್ತಾಗಿ ಬೆಳೆದು ನಿಂತ ಮರಗಿಡಗಳನ್ನ ಆಹುತಿ ತೆಗೆದುಕೊಂಡಿವೆ.

ದಿನೆ ದಿನೇ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದೂ ಆ ತಾಪಮಾನದಿಂದ ಅಂಟಾರ್ಟಿಕಾ ಮತ್ತು ಆರ್ಕಟಿಕ್ ಪ್ರದೇಶದಲ್ಲಿನ ಬೃಹತ್ ಗಾತ್ರದ ಮಂಜುಗಡ್ಡೆಗಳು ಭಾರಿ ವೇಗದಿಂದ ಕರಗತೊಡಗಿವೆ.ಇದರಿಂದ ಸಾಗರವನ್ನ ಸೇರುತ್ತಿರುವ ಸಿಹಿನೀರಿನ ಪ್ರಮಾಣ ಹೆಚ್ಚಾಗಿ ಸಮುದ್ರದ ಮಟ್ಟ ಏರಿಕೆಯಾಗುತ್ತಿದೆ.ಹೆಚ್ಚಿನ ಪ್ರಮಾಣದಲ್ಲಿ ಸಾಗರವನ್ನ ಸೇರಿಕೊಂಡ ಹೆಚ್ಚಿನ ನೀರು ಮರಳಿ ಆವಿಯಾಗಿ (ಭಾಷ್ಪಿಕರಣ) (ಭಾಷ್ಪಿಕರಣ) ಹೆಚ್ಚಿನ ಪ್ರಮಾಣದ ಮೋಡಗಳು ಆಗಸವನ್ನ ಸೇರುತ್ತಿವೆ. ಅತ್ಯಂತ ಕಡಿಮೆ ಸ್ಥಳದಲ್ಲಿ ಒತ್ತರಿಕೆಯಿಂದ ಸೇರಿದ ಮೋಡಗಳು ಸಮುದ್ರ ಮಟ್ಟದಿಂದ ಮೇಲಕ್ಕಿರುವ ಇಂತಹ ಪರ್ವತ ಪ್ರದೇಶಗಳಲ್ಲಿ ಶೇಖರಣೆಗೊಂಡಾಗ ಈ ರೀತಿಯ ಪ್ರಾಣಘಾತಕ ಜಲಸ್ಪೋಟಕಗಳಾಗಿ ಪರಿಣಮಿಸುತ್ತವೆ .

ಪೃಥ್ವಿಯ ಮೇಲೆ ದಿನೆ ದಿನೆ ಏರುತ್ತಿರುವ ಜನಸಂಖ್ಯೆಯಿಂದ ನಾವು ಹೆಚ್ಚು ಆಹಾರ ಉತ್ಪಾದಿಸಬೇಕಾಗಿದೆ. ಇದಕ್ಕಾಗಿ ಕಾಡುಗಳನ್ನ ಕಡಿದು ಬೇಸಾಯದ ಭೂಮಿಯನ್ನಾಗಿ ಪರಿವರ್ತಿಸುವುದು ಅನಿವಾರ್ಯವಾಗಿದೆ.
ಕುಡಿಯುವ ನೀರಿನ ಸಲುವಾಗಿ ಒಂದು ನದಿಗೆ ಅಡ್ಡಲಾಗಿ ಐದಾರು ಸೇತುವೆ ನಿರ್ಮಿಸಬೇಕಾಗಿ ಬಂದಿದೆ. ಆರ್ಥಿಕತೆಯ ಪ್ರಗತಿ ಸಾಧಿಸಲು ಕೈಗಾರಿಕೆಗಳು ಅನಿವಾರ್ಯ. ಇದಕ್ಕೆ ಬೆಟ್ಟಗುಡ್ಡಗಳನ್ನ ಕಡಿದು ರಸ್ತೆ ರೈಲುಮಾರ್ಗ ನಿರ್ಮಿಸುವುದೂ ಸಹ ಅನಿವಾರ್ಯ. ಮಾನವನ ಅಗತ್ಯ ಮತ್ತು ಅನಿವಾರ್ಯಗಳ ಪಟ್ಟಿ ಹೀಗೆಯೇ ಸಾಕಷ್ಟು ಇವೆ .

ಈ ಮೇಘಸ್ಪೋಟದಿಂದ ಉಂಟಾಗುವ ಜೀವಹಾನಿಯನ್ನ ತಪ್ಪಿಸಲು ಒಂದೋ ಆ ಪರ್ವತ ಪ್ರದೇಶಗಳಲ್ಲಿ ಜನಸಂಖ್ಯೆಯ ಪ್ರಮಾಣವನ್ನ ಕಡಿತಗೊಳಿಸಿ ಅಲ್ಲಿ ಬೆಳೆದಿರುವ ದಟ್ಟ ಪ್ರಮಾಣದ ಮರಗಿಡಗಳನ್ನ ಕಡಿಯದೇ ಹಾಗೆಯೇ ಬಿಡಬೇಕು ಮತ್ತು ಶೀಘ್ರವೇ ಜಾಗತಿಕ ತಾಪಮಾನವನ್ನ ನಿಯಂತ್ರಿಸಬೇಕು. ಸರಕಾರಗಳು ಪರಿಸರಕ್ಕೆ ಪೋರಕವಾಗುವಂತಹ ವೈಜ್ಞಾನಿಕ ಅಭಿವೃದ್ದಿಗೆ ಒತ್ತು ಕೊಡಬೇಕು. ಜನ ಅದನ್ನ ಬೆಂಬಲಿಸಬೇಕು .

ಆದರೆ ಸಧ್ಯಕ್ಕೆ ಇದು ಯಾವುದೂ ಸಂಭವ ಇಲ್ಲ ಅನಿಸುತ್ತೆ . ಇಂತಹ ದುರಂತಗಳು ಸಂಬವಿಸಿದಾಗ ನಾಲ್ಕು ದಿನ ಮಾಧ್ಯಮಗಳು ನಾವೂ ನೀವೆಲ್ಲ ಮರಗುತ್ತೇವೆ .ನಂತರ ಮರೆತು ಮತ್ತದೇ ಯಥಾಸ್ಥಿತಿ ಅಧುನಿಕ ಯುಗದಲ್ಲಿ ಪ್ರಯಾಣಿಸುತ್ತಲೇ ಇರುತ್ತೇವೆ .

ಅನುಭವದಿಂದ ಮಾನವ ಬುದ್ದಿ ಕಲಿಯಲಾರದಷ್ಟು ಮುಂದೇ ಬಂದುಬಿಟ್ಟಿದ್ದೇವೆ.

ಮೃತ್ಯುಂಜಯ ನ. ರಾ.

Related post