ಮೊಬೈಲ್ ಅಥವಾ ಪುಸ್ತಕನಾ…..
ಮೊಬೈಲ್ ಅಥವಾ ಪುಸ್ತಕನಾ…..
ಮೊಬೈಲ್ ಇದ್ದರೆ ಟೈಮ್ ಪಾಸ್, ಕೈಯಲ್ಲಿ ಪುಸ್ತಕವಿದ್ದರೆ ಗುರಿ!
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅಡಗಿದೆ. ಅದೇ ಸಮಯದ ವ್ಯರ್ಥ. ಮೊಬೈಲ್ ನೀಡುವ ಮನರಂಜನೆ ತಾತ್ಕಾಲಿಕ. ಅದು ನಮಗೆ ಮಜಾ ನೀಡಬಹುದು, ಆದರೆ ಜ್ಞಾನವನ್ನಲ್ಲ. ಮೊಬೈಲ್ ಬೇಡ ಅನ್ನುತ್ತಿಲ್ಲ ಆದರೆ ಅದು ನಮ್ಮನ್ನು ಆಳಬಾರದು, ಅಷ್ಟರ ಮಟ್ಟಕ್ಕೆ ಬೇಡ . ತಂತ್ರಜ್ಞಾನವನ್ನು ಮಾಹಿತಿಗಾಗಿ ಬಳಸಿ, ಜ್ಞಾನಕ್ಕಾಗಿ ಪುಸ್ತಕಗಳನ್ನು ಅವಲಂಬಿಸಿ. ಮೊಬೈಲ್‌ನಲ್ಲಿ ಸ್ಕ್ರಾಲ್ ಮಾಡುವುದನ್ನು ಬಿಟ್ಟು, ಪುಸ್ತಕದ ಪುಟಗಳನ್ನು ತಿರುವಿ ನೋಡಿ. ನೀವು ಕೈಯಲ್ಲಿ ಮೊಬೈಲ್ ಹಿಡಿದರೆ ಕೇವಲ ಸಮಯ ಕಳೆಯಬಹುದು (Timepass), ಆದರೆ ಪುಸ್ತಕ ಹಿಡಿದರೆ ಖಂಡಿತವಾಗಿಯೂ ಜೀವನದ ಪರೀಕ್ಷೆಯಲ್ಲಿ ಅಥವಾ ನಿಮ್ಮ ಗುರಿಯಲ್ಲಿ ಯಶಸ್ವಿಯಾಗಬಹುದು (Goal Pass). ಆಯ್ಕೆ ನಿಮ್ಮದು.

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಸಾವಿರಾರು ಫ್ರೆಂಡ್ಸ್ ಮತ್ತು ಫಾಲೋವರ್ಸ್ ಇರುವ ಈ ಮೊಬೈಲ್ ಜಗತ್ತಿನಲ್ಲಿ ಮನುಷ್ಯ ಇಂದು ಹೆಚ್ಚು ಒಂಟಿಯಾಗುತ್ತಿದ್ದಾನೆ. ನಾವು ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೋಲ್ ಮಾಡುತ್ತೇವೆ. ಬೇರೆಯವರ ಹೊಳೆಯುವ ಬದುಕಿನ ಕ್ಷಣಗಳನ್ನು ನೋಡಿ ನಮ್ಮ ಜೀವನವನ್ನು ತುಲನೆ ಮಾಡಿಕೊಳುತ್ತಿದ್ದೇವೆ ಪಕ್ಕದಲ್ಲೇ ಕುಳಿತಿರುವವರ ಜೊತೆ ಮಾತನಾಡದೆ, ದೂರವಿರುವ ಯಾರೋ ಅಪರಿಚಿತರ ಲೈಕ್ಸ್‌ಗಾಗಿ ಕಾಯುವ ಈ ಹವ್ಯಾಸ ನಮ್ಮನ್ನು ನಿಜವಾದ ಸಂಬಂಧಗಳಿಂದ ದೂರವಿಟ್ಟು ಡಿಜಿಟಲ್ ಒಂಟಿತನಕ್ಕೆ ದೂಡುತ್ತಿದೆ. ಒಂಟಿತನದಿಂದ ಜಾಣತನದ ಕಡೆಗೆ ಸಾಗಲು ಪ್ರಯತ್ನಿಸಬೇಕಾದರೆ ಅದಕ್ಕೆ ಪುಸ್ತಕದ ಅವಶ್ಯಕತೆ ಬೇಕೇ ಬೇಕು.ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರಿಗೆ ಒಂಟಿತನ ಕಾಡುವುದಿಲ್ಲ. ಏಕೆಂದರೆ ಪುಸ್ತಕವು ಅತ್ಯುತ್ತಮ ಗೆಳೆಯ. ನೆನಪಿಡಿ ಮೊಬೈಲ್ ನಮಗೆ ಮಾಹಿತಿಯನ್ನು ನೀಡಬಹುದು ಅಷ್ಟೇ ಆದರೆ ಪುಸ್ತಕ ಮಾತ್ರ ನಮಗೆ ಸಂಸ್ಕಾರ ಮತ್ತು ಜಾಣತನವನ್ನು ನೀಡಬಲ್ಲದು.ನಿಮ್ಮ ಒಂಟಿತನವನ್ನು ಜ್ಞಾನವನ್ನಾಗಿ ಪರಿವರ್ತಿಸಿ.
ಹಿಂದೆ ಜ್ಞಾನ ಪಡೆಯಲು ಮೈಲುಗಟ್ಟಲೆ ನಡೆದು ಗ್ರಂಥಾಲಯಕ್ಕೆ ಹೋಗಬೇಕಿತ್ತು. ಆದರೆ ಇಂದು ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಾಹಿತ್ಯಗಳು ನಮ್ಮ ಮೊಬೈಲ್‌ನಲ್ಲಿವೆ. ವಿವೇಕಾನಂದರ ಚೈತನ್ಯದ ನುಡಿಗಳಿರಲಿ ಅಥವಾ ಅಬ್ದುಲ್ ಕಲಾಂರ ಕನಸಿನ ಮಾತುಗಳಿರಲಿ, ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ. ನಮ್ಮ ಕೈಯಲ್ಲಿರುವ ಆ ಪುಟ್ಟ ಮೊಬೈಲ್ ಫೋನ್ ಇಡೀ ಜಗತ್ತನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಆದರೆ, ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವ ಬದಲು, ಅದನ್ನು ಶ್ರೇಷ್ಠ ಪುಸ್ತಕಗಳನ್ನು ಓದಲು ಬಳಸಿದರೆ ಸಾಮಾನ್ಯ ವ್ಯಕ್ತಿಯೂ ಒಬ್ಬ ಅಪ್ರತಿಮ ಸಾಧಕನಾಗಬಲ್ಲ.
ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ನಮ್ಮ ಬದುಕಿಗೆ ಅರ್ಥ ಸಿಗುವುದು ನಾವು ಗಳಿಸುವ ಜ್ಞಾನದಿಂದಲೇ ಹೊರತು ಮೊಬೈಲ್ ಡೇಟಾದಿಂದಲ್ಲ. ಮಕ್ಕಳಿಗೆ ಮೊಬೈಲ್ ನೀಡುವ ಬದಲು ಉತ್ತಮವಾದ ಕಥೆ ಪುಸ್ತಕಗಳನ್ನು ನೀಡಿ, ಅವರಲ್ಲಿ ಸೃಜನಶೀಲತೆ ಬೆಳೆಸಿ. ಮೊಬೈಲ್ ಪರದೆಯ ಮೇಲೆ ಬೆರಳು ಆಡಿಸುವುದರಿಂದ ಬದುಕು ವ್ಯರ್ಥವಾದರೆ, ಪುಸ್ತಕದ ಪುಟಗಳನ್ನು ತಿರುಗಿಸುವುದರಿಂದ ಜೀವನಕ್ಕೆ ಹೊಸ ಅರ್ಥ ಸಿಗುತ್ತದೆ. ಜ್ಞಾನವೇ ಶಕ್ತಿ, ಆ ಜ್ಞಾನದ ಅರಮನೆಗೆ ಪುಸ್ತಕಗಳೇ ದಾರಿ. ಪುಸ್ತಕಗಳನ್ನು ಪ್ರೀತಿಸೋಣ, ಸುಂದರ ಬದುಕನ್ನು ರೂಪಿಸಿಕೊಳ್ಳೋಣ.
ಮೊಬೈಲ್‌ನ ವ್ಯಸನ ಸೋಲಿಗೆ ದಾರಿಯಾದರೆ, ಪುಸ್ತಕದ ಹವ್ಯಾಸವು ನಮ್ಮ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಮೊಬೈಲ್‌ನಲ್ಲಿ ಸಿಗುವುದು ಮಾಹಿತಿ ಮಾತ್ರ, ಆದರೆ ಪುಸ್ತಕಗಳಲ್ಲಿ ಸಿಗುವುದು ಜ್ಞಾನ. ಆ ಜ್ಞಾನವೇ ನಮ್ಮನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಮೊಬೈಲ್ ಎಂಬುದು ಕೇವಲ ಸಂಪರ್ಕ ಸಾಧನವಾಗಲಿ, ಅದು ನಮ್ಮ ಬದುಕಿನ ಸರ್ವಸ್ವ ಆಗದಿರಲಿ. ಪುಸ್ತಕಗಳೊಂದಿಗೆ ಸ್ನೇಹ ಬೆಳೆಸೋಣ, ಜ್ಞಾನದ ದೀಪ ಹಚ್ಚೋಣ ಮತ್ತು ಸಾಧನೆಯ ಶಿಖರವನ್ನು ಅಚ್ಚುಮೆಚ್ಚಿನಿಂದ ಏರೋಣ.
ಯಾವಾಗ ಒಬ್ಬ ವ್ಯಕ್ತಿ ಜ್ಞಾನದಿಂದ ಸಮೃದ್ಧನಾಗುತ್ತಾನೋ ಆಗ ಜಗತ್ತು ಆತನನ್ನು ಗುರುತಿಸಲು ಪ್ರಾರಂಭಿಸುತ್ತದೆ. ಮೊಬೈಲ್‌ನಲ್ಲಿ ಜಗತ್ತನ್ನು ನೋಡುವುದರಿಂದ ನಾವು ಯಾರಿಗೂ ತಿಳಿಯುವುದಿಲ್ಲ. ಆದರೆ, ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ಜ್ಞಾನ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜದಲ್ಲಿ ಒಂದು ವಿಶೇಷ ಸ್ಥಾನ ಪಡೆಯುತ್ತೇವೆ. ಆಗ ಈ ಜಗತ್ತು ನಮ್ಮನ್ನು ಗುರುತಿಸುತ್ತದೆ.
ಮೊಬೈಲ್ ಬಳಕೆಯನ್ನು ಗಡಿಯಾರಕ್ಕೆ ಸೀಮಿತಗೊಳಿಸಿ, ಪುಸ್ತಕದ ಪ್ರೀತಿಯನ್ನು ಹೃದಯಕ್ಕೆ ಸೀಮಿತಗೊಳಿಸಿ. ಜ್ಞಾನದ ದೀವಿಗೆಯನ್ನು ಬೆಳಗಲು ಪುಸ್ತಕಕ್ಕಿಂತ ಮಿಗಿಲಾದ ಸ್ನೇಹಿತ ಮತ್ಯಾರೂ ಇಲ್ಲ. ಯಾರು ಮೊಬೈಲ್ ಎಂಬ ಸಣ್ಣ ಪರದೆಯನ್ನು ಮೀರಿ ಬೆಳೆಯುತ್ತಾರೋ ಅವರಿಗೆ ವಿಶಾಲವಾದ ಪ್ರಪಂಚ ಕಾಣಿಸುತ್ತದೆ. ಮೊಬೈಲ್ ಅನ್ನು ಒಂದು ಸಾಧನವಾಗಿ ಬಳಸಿ, ಅದಕ್ಕೆ ಗುಲಾಮರಾಗಬೇಡಿ. ನಿಮ್ಮ ಗುರಿ, ಕನಸು ಮತ್ತು ಕುಟುಂಬದ ಕಡೆಗೆ ನೀವು ತೋರುವ ಜವಾಬ್ದಾರಿಯೇ ನಿಮ್ಮನ್ನು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಮೊಬೈಲ್ ನಿಮ್ಮ ಜೀವನದ ಭಾಗವಾಗಿರಲಿ, ಜೀವನವೇ ಮೊಬೈಲ್ ಆಗದಿರಲಿ. ಇಂದೇ ನಿರ್ಧರಿಸಿ, ಬೇಜವಾಬ್ದಾರಿತನದ ಪರದೆಯನ್ನು ಸರಿಸಿ, ಜವಾಬ್ದಾರಿಯುತ ಬದುಕಿನತ್ತ ಹೆಜ್ಜೆ ಹಾಕಿ. ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ.
ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಕೈಯಿಂದ ಕೆಳಗೆ ಇಳಿಯದ ಒಂದು ವಸ್ತುವೆಂದರೆ ಅದು ಮೊಬೈಲ್. ಆದರೆ ಈ ಮೊಬೈಲ್ ಮತ್ತು ಪುಸ್ತಕಗಳ ನಡುವೆ ಒಂದು ಅದೃಶ್ಯವಾದ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನೇ ಈ ಮಾತು ಬಹಳ ಅರ್ಥಪೂರ್ಣವಾಗಿ ಹೇಳುತ್ತದೆ, “ಮೊಬೈಲ್ ನಮ್ಮನ್ನು ತಲೆ ತಗ್ಗಿಸಿ ಬದುಕುವಂತೆ ಮಾಡಿದರೆ, ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತದೆ.” ನೆನಪಿಡಿ, ಬಾಗಿ ನೋಡುವ ಮೊಬೈಲ್‌ಗಿಂತ ಜಗತ್ತನ್ನೇ ಎತ್ತರದಿಂದ ನೋಡುವಂತೆ ಮಾಡುವ ಪುಸ್ತಕಗಳೇ ನಮ್ಮ ನಿಜವಾದ ಗೆಳೆಯರು. ಮೊಬೈಲ್ ಕೇವಲ ಮಾಹಿತಿ ಪಡೆಯುವ ಒಂದು ಸಾಧನವಷ್ಟೇ, ಆದರೆ ಪುಸ್ತಕವು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಶಾಶ್ವತ ಸಂಪತ್ತು. ಪುಸ್ತಕಗಳು ನಮಗೆ ತಾಳ್ಮೆಯನ್ನು ಕಲಿಸುತ್ತವೆ. ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿಕೊಡುತ್ತವೆ. ದೊಡ್ಡ ಸಾಧಕರ ಜೀವನ ಚರಿತ್ರೆಗಳನ್ನು ಓದಿದಾಗ ನಮ್ಮಲ್ಲಿ ನಾವು ಯಾಕೆ ಸಾಧಿಸಬಾರದು? ಎಂಬ ಹಸಿವು ಅಥವಾ ದಾಹ ಹುಟ್ಟುತ್ತದೆ. ಈ ದಾಹವೇ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತದೆ.

ಓದುವ ಹವ್ಯಾಸವು ನಮ್ಮನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಇಂದೇ ಸಂಕಲ್ಪ ಮಾಡಿ ಮೊಬೈಲ್ ಬದಿಗಿರಿಸೋಣ, ಜ್ಞಾನದ ದೀವಿಗೆಯಾದ ಪುಸ್ತಕವನ್ನು ಜೊತೆಗಿರಿಸೋಣ. ಮೊಬೈಲ್ ಒಂದು ಸಾಧನವಾಗಬೇಕೇ ಹೊರತು ಅದು ನಮ್ಮ ಬದುಕಿನ ಯಜಮಾನನಾಗಬಾರದು. ಬೆರಳ ತುದಿಯ ಲೈಕ್ ಗಳಿಗಾಗಿ ಹಪಹಪಿಸುವ ಬದಲು, ಪುಸ್ತಕದ ಪುಟಗಳನ್ನು ತಿರುವಿ ಜ್ಞಾನದ ಬೆಳಕನ್ನು ಪಡೆಯೋಣ. ನೆನಪಿಡಿ, ಯಾರ ಕೈಯಲ್ಲಿ ಪುಸ್ತಕವಿರುತ್ತದೆಯೋ, ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಮೊಬೈಲ್ ನಿಮ್ಮನ್ನು ಬಳಸುವಂತೆ ಮಾಡಬೇಡಿ, ನೀವು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಪುಸ್ತಕದ ಪುಟಗಳಲ್ಲಿ ಅಡಗಿರುವ ಜ್ಞಾನದ ಬೆಳಕನ್ನು ಅರಸುತ್ತಾ, ಸುಂದರ ಭವಿಷ್ಯವನ್ನು ನಿರ್ಮಿಸಿಕೊಳ್ಳೋಣ.

ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು
9845568484