ಮೊಸಳೆಯ ವಿರಾಮ
ಮೊಸಳೆಗಳು ಆಗಾಗ ನದಿಗಳ ತೀರದಲ್ಲಿ ನಿಶ್ಚಲವಾಗಿ ಹೆಬ್ಬಂಡೆಯಂತೆ ಬಾಯ್ತೆರೆದು ಬಿಸಿಲಿಗೆ ಮೈಯೊಡ್ಡಿ ಸೋಮಾರಿಗಳ ತರ ಬಿದ್ದಿರುವುದನ್ನ ನೋಡುತ್ತಿರುತ್ತೇವೆ. ಇವು ಈ ರೀತಿ ಕಿಂಚಿತ್ತು ಚಲನವಿಲ್ಲದೇ ಸೂರ್ಯನ ಬಿಸಿಲಿನಲ್ಲಿ ಬಾಯ್ತೆರೆದು ಬಿದ್ದುಕೊಳ್ಳಲು ಪ್ರಮುಖವಾಗಿ ಎರಡು ಕಾರಣಗಳಿವೆ.
1) ನದಿ ತೀರದ ಮರಳಿನಲ್ಲಿ ತನ್ನ ಹಿಂಗಾಲಿನಿಂದ ಗುಂಡಿ ತೋಡಿ ಮೊಟ್ಟೆ ಇಡುವ ಉಭಯವಾಸಿ ಮೊಸಳೆಗಳು ಎಕ್ಟೋಥರ್ಮಿಕ್ ಪ್ರಾಣಿಗಳು (Ectothermic).ಇವುಗಳ ದೇಹದ ಉಷ್ಣತೆ ಪರಿಸರಕ್ಕನುಸಾರವಾಗಿ ತನ್ನಷ್ಟಕ್ಕೆ ತಾನೇ ಸ್ವಯಂ ಬದಲಾಯಿಸಿಕೊಳ್ಳುವುದಿಲ್ಲ. ಅಂದರೇ ದೇಹದ ಉಷ್ಣತೆ ತನ್ನಷ್ಟಕ್ಕೆ ತಾನೇ ನಿಯಂತ್ರಿತವಾಗುವುದಿಲ್ಲ.
ಅವುಗಳ ದೇಹದ ಉಷ್ಣತೆ ಹೊರಗಿನ ಪರಿಸರದಿಂದ ಪ್ರಭಾವಿತವಾಗುತ್ತದೆ. ನೀರಲ್ಲಿರುವ ಮೊಸಳೆಗಳು ತಮ್ಮ ದೇಹದಲ್ಲಿನ ಉಷ್ಣತೆ ಕಡಿಮೆ ಆದಾಗ ಅದನ್ನ ಸಮತೂಗಿಸಲು ನದಿತೀರದ ಸೂರ್ಯನ ಬಿಸಿಲಿನಲ್ಲಿ ಮೈಯೊಡ್ಡಿ ಬಿದ್ದುಕೊಂಡು ತಮ್ಮ ಚರ್ಮದ ಮುಖಾಂತರ ಉಷ್ಣತೆಯನ್ನ ಹೀರಿಕೊಳ್ಳುತ್ತವೆ ಆದರೇ ಈ ರೀತಿ ಅತಿಹೆಚ್ಚಾಗಿ ಬಿಸಿಲಿಗೆ ಮೈಯೊಡ್ಡಿ ಬೀಳುವುದೂ ಇಲ್ಲ. ದೇಹದ ಅಂಗಾಂಗಗಳಿಗೆ ತಕ್ಕ ಚೈತನ್ಯ ಒದಗಿದ ನಂತರ ಮರಳಿ ನದಿಯ ನೀರಿಗೆ ತೆರಳುತ್ತವೆ.
2) ಮಾಂಸಾಹಾರಿ ಮೊಸಳೆಗಳು ಹುಲಿ ಸಿಂಹ ಚಿರತೆ ಮತ್ತು ಇತರೆ ಭಕ್ಷಕ ಪ್ರಾಣಿಗಳಂತೆ ಭೇಟೆಯ ಮಾಂಸ ಹರಿದು ತಿನ್ನುವುದಿಲ್ಲ. ಅವು ತಮ್ಮ ಬಲಿಷ್ಟವಾದ ದವಡೆಯಿಂದ ಭೇಟೆಯ ಒಂದು ಅಂಗವನ್ನ ಬಲವಾಗಿ ಕಚ್ಚಿಹಿಡಿದು ಅದರ ಸುತ್ತ ತಮ್ಮ ದೇಹವನ್ನ ಜೋರಾಗಿ ಗಿರಗಿರನೆ ಸುರುಳಿ ಹೊಡೆಸುತ್ತವೆ. ಅದರ ರಭಸಕ್ಕೆ ಭೇಟೆಯ ಅಂಗ ಮುರಿದು ಹರಿದು ಹೋದಾಗ ನೇರವಾಗಿ ಆ ಅಂಗವನ್ನ ನುಂಗುತ್ತವೆ.ಇವುಗಳ ಜಠರರಸ ಮಾಂಸದ ಜೊತೆಗೆ ಮೂಳೆ ಹಲ್ಲು ಚರ್ಮದ ಜೊತೆಗೆ ಉಗುರುಗಳನ್ನೂ ಪಚಿಸುವಂತಹ ಆಮ್ಲವನ್ನ ಹೊಂದಿರುತ್ತದೆ. ಹಾಗೇ ನುಂಗುವಾಗ ಭೇಟೆಪ್ರಾಣಿಗಳ ಮೈಮೇಲಿನ ಪರಾವಲಂಬಿ ಜೀವಿಗಳು ಇವುಗಳ ಬಾಯಿ ಮತ್ತು ಹಲ್ಲು ಸಂದಿನಲ್ಲಿ ಸಿಕ್ಕಿಹಾಕಿಕೊಂಡು ಉಪದ್ರವ ಕೊಡತೊಡಗುತ್ತವೆ.
ಮೊಸಳೆಗಳು ಸತ್ತ ಪ್ರಾಣಿಯ ದೇಹವನ್ನೂ ಸಹ ಭಕ್ಷಿಸುತ್ತವೆ. ಆಗ ಕೊಳೆತ ಮಾಂಸವೂ ಇವುಗಳ ಹಲ್ಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಮೊಸಳೆಗಳು ಬಾಯಿ ತೆರೆದುಕೊಂಡು ನಿಶ್ಚಲವಾಗಿ ಬಿದ್ದಾಗ ಕೆಲವೊಂದು ಪುಟ್ಟ ಪಕ್ಷಿಗಳು ಇವುಗಳ ಬಾಯಿಯಲ್ಲಿ ನುಸುಳಿ ಈ ಪ್ಯಾರಾಸೈಟ್ ಮತ್ತು ಕೊಳೆತ ಮಾಂಸವನ್ನ ತಿಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಮೊಸಳೆಗಳು ಈ ರೀತಿ ಬಾಯಲ್ಲಿರುವ ಉಪ್ರದ್ರವಿ ಪ್ಯಾರಾಸೈಟಗಳನ್ನ ನಿವಾರಿಸಿಕೊಳ್ಳುತ್ತವೆ. ಆದರೆ ಇದೊಂದು ಕೇವಲ ಸಹಕಾರ ಅಷ್ಟೇ ಹೊರತು ತೀರಾ ಅನಿವಾರ್ಯವಾದ ಹೊಂದಾಣಿಕೆ ಅಲ್ಲ. ಮೊಸಳೆಗಳು ಕೆಲವೊಮ್ಮೆ ತಮ್ಮ ಬಾಯಿಯ ಹತ್ತಿರ ಬರುವ ಬಾತು ನೀರುಕಾಗೆಗಳನ್ನ ನುಂಗುವುದಿದೆ. ಕೊಳವಿ ಗೊರವದಂತಹ ಕೆಲವೊಂದು ಪಕ್ಷಿಗಳು ಮಾತ್ರವೇ ನಿರ್ಭಯವಾಗಿ ಮೊಸಳೆಗಳ ಬಾಯಿಯಲ್ಲಿ ಪ್ರವೇಶಿಸಿ ಪ್ಯಾರಾಸೈಟ್ ಗಳನ್ನ ತಿಂದು ಹೊರಗೆ ಬರುತ್ತವೆ.
ಮೃತ್ಯುಂಜಯ ನ. ರಾ