ಮೋಡ ಕಲಿಸಿದ ಪಾಠ
ಬಿರು ಬೇಸಿಗೆಯ ಬಿಸಿಲಿನಲ್ಲಿ ಬೆಂದ ಎಲ್ಲರಿಗೂ ಮಳೆರಾಯನ ಹಂಬಲವಿತ್ತು. ಆ ಹಂಬಲ ಮಳೆರಾಯನಿಗೆ ಮುಟ್ಟಿತೋ ಏನೋ ತಿಳಿಯದು! ದಟ್ಟವಾದ ಕಪ್ಪು ಮೋಡಗಳು ಬಾನಂಚಿನಲ್ಲಿ ಆವರಿಸಿ, ಕೆಂಡದಂತಹ ಬಿಸಿಲು ಬೀರುತ್ತಿದ್ದ ಸೂರ್ಯನನ್ನು ಮರೆಮಾಚಿದವು. ಬಿಟ್ಟು ಬಿಡದೆ ಸುರಿದ ಮಳೆ ದಣಿದ ಜೀವಕ್ಕೆ ತಂಪನ್ನೆರೆದಿತ್ತು.
ಅದೇಕೋ ಮಳೆರಾಯನಿಗೂ ಭುವಿಯನ್ನು ಮತ್ತೆ ಮತ್ತೆ ಚುಂಬಿಸುವ ಆಸೆ ಹೆಚ್ಚಾಯಿತೇನೋ? ತಂಪನ್ನೀಯಲು ಹರಸಿದ ವರುಣನು ಹಗಲು ರಾತ್ರಿ ಎನ್ನದೆ ಭೋರ್ಗರೆದು ಬೇಸಿಗೆ ಕಾಲ ಎಂಬ ಸುಳಿವೇ ಇಲ್ಲದಂತೆ ಮಾಡಿದನು.
ಸುರಿವ ಮಳೆಯಲ್ಲಿ, ಕೊರೆವ ಚಳಿಯಲ್ಲಿ, ರೈಲಿನಲ್ಲಿ ಅಂದು ಪ್ರಯಾಣ ಶುರುವಾಯಿತು. ಎಲ್ಲರು ಬೆಚ್ಚಗೆ ಕುಳಿತು ನಿದ್ರಿಸುತ್ತಿದ್ದರೂ ನನಗೇಕೋ ಬಾನಂಗಳದ ಕಪ್ಪು ಮೋಡಗಳು ಗಮನ ಸೆಳೆದಿದ್ದವು.
ದುಷ್ಕರ್ಮಿಗಳ ಕೋಪಕ್ಕೆ ಬೆಂದ ಜೀವಗಳಂತೆ, ಬಿಸಿಲಿನ ಬೇಗೆಗೆ ನೀರು ಕುದ್ದು ಆವಿಯಾದಂತೆ ತೋರ್ಪಡುತಿತ್ತು. ಆವಿಯಾದ ನೀರು ಆಗಸದಲ್ಲಿ ಮೋಡಗಳಾಗಿ ತೇಲುವಾಗ ಮನ್ನಸಿಗಾದ ನೋವು, ಸಂಕಟವನ್ನು ಹೊತ್ತೊಯ್ದಂತೆ ಕಾಣತೊಡಗಿತು. ಇನ್ನೆಷ್ಟು ಕಾಲ ಇರಬಲ್ಲದು ನೋವು. ಮೋಡಗಳು ಮಳೆನೀರಾಗಿ ಧರೆಗೆ ಸುರಿದಂತೆ, ನೋವು ಕಣ್ಣ ಹನಿಹನಿಯಾಗಿ ಸುರಿದುಹೋಗುವುದಲ್ಲವೇ! ಮೋಡದ ಕಗ್ಗತ್ತಲು ಸರಿದಂತೆ ಬೆಳಕು ಹೇಗೆ ಬರುವುದೋ ಹಾಗೆಯೇ ನೋವುಂಡ ಜೀವಕ್ಕೆ ಸಂತಸದ ದಿನಗಳು ಸಮೀಪಿಸುತ್ತಿದೆ ಎಂಬ ಅರಿವು ಇಲ್ಲದಿದ್ದರೂ ಬೆರಗಾಗುವ ಹಾಗೆ ಮನಸೆಳೆದಿತ್ತು.
ಶಿಲ್ಪ