ಮ್ಯಾನ್ ಆಫ್ ದಿ ಮ್ಯಾಚ್
“ಮ್ಯಾನ್ ಆಫ್ ದಿ ಮ್ಯಾಚ್” ಬಹಳ ದಿನಗಳ ಮೇಲೆ ಒಂದು ವಿನೂತನ ಪ್ರಯೋಗಾತ್ಮಕ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಉತ್ಸಾಹಿ ನಿರ್ದೇಶಕರಾದ ಸತ್ಯ ಪ್ರಕಾಶ್ ತಮ್ಮ “ರಾಮ ರಾಮ ರೇ” ಹಾಗು “ಒಂದಲ್ಲ ಎರಡಲ್ಲ” ಚಿತ್ರಗಳ ನಂತರ “ಮ್ಯಾನ್ ಆಫ್ ದಿ ಮ್ಯಾಚ್” ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದಾರೆ. ಒಂದು ಒಳ್ಳೆಯ ರಂಗರೂಪಕವಾಗಬಹುದಾದ ಕಥೆಯನ್ನು ಯಶಸ್ವಿಯಾಗಿ ಚಲನಚಿತ್ರವನ್ನಾಗಿಸಿದ್ದಾರೆ.
ಈ ಚಿತ್ರಕ್ಕೆ ನಿಜವಾದ ಸೂತ್ರಧಾರ ಸತ್ಯಪ್ರಕಾಶ್ ಆದರೂ ಚಿತ್ರದಲ್ಲಿ ಆ ಸೂತ್ರದ ಧಾರವನ್ನು ನಾಯಕ ನಟ ‘ನಟರಾಜ್’ ಜಾಗ್ರತೆಯಿಂದ ಸಿನೆಮಾ ಮುಗಿಯುವವರೆಗೂ ಹಿಡಿದಿದ್ದಾರೆ. ಒಂದು ನಿರ್ದಿಷ್ಟ ಕಥೆಯೇ ಇಲ್ಲದೆ ಚಿತ್ರನಟರನ್ನು ಸಾಮೂಹಿಕವಾಗಿ ಆಡಿಷನ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅಲ್ಲಿ ನೆಡೆಯುವ ರೋಚಕ ಪ್ರಸಂಗಗಳನ್ನೇ ಒಂದು ಸಿನಿಮಾವನ್ನಾಗಿಸಿದ್ದಾರೆ. ಆಡಿಷನ್ ನಲ್ಲಿ ಭಾಗವಹಿಸಲು ಬರುವ ನಟರುಗಳು ಸಹ ಎಷ್ಟರ ಮಟ್ಟಿಗೆ ನಟಿಸಿದ್ದಾರೆಂದರೆ ಸಿನೆಮಾ ನೋಡುತ್ತಾ ನೋಡುತ್ತಾ ಇದು ಆಡಿಷನ್ ಗಾಗಿ ಮಾಡುತ್ತಿರುವ ನಟನೆಯ ಅಥವಾ ನೈಜ್ಯವ ಎಂದು ಪ್ರೇಕ್ಷಕರು ಮೊದಮೊದಲು ಗೊಂದಲಗೊಂಡರೂ ವಿರಾಮದ ನಂತರ ನೆಡೆಯುವ ಘಟನೆಗಳಿಂದ ರೋಚಕಗೊಳ್ಳುವುದು ಸುಳ್ಳಲ್ಲ.
ನಾಯಕನಟ ‘ನಟರಾಜ್ ಭಟ್’ ಕ್ರಾಂತಿಕಾರಿ ಚೆಗುವೆರಾ ಸ್ಟೈಲಿನಲ್ಲಿ ಕ್ಯಾಪ್ ಅನ್ನು ಹಾಕಿಕೊಂಡು ಗಳಿಗೆ ಸೂಚನೆಗಳನ್ನು ಕೊಡುತ್ತಾ ತಮ್ಮ ಆಕರ್ಷಕ ನಗುವಿನ ಮೂಲಕ ಇಡೀ ಚಿತ್ರವನ್ನು ಆವರಿಸಿದ್ದಾರೆ.
ಆಡಿಷನ್ ನನ್ನು ಕೇವಲ ನೋಡಿ ಹರಸಲು ಬರುವ ‘ಸುಂದರ್ -ವೀಣಾ ಸುಂದರ್’ ದಂಪತಿಗಳು ತಮಗೇ ಗೊತ್ತಿಲ್ಲದಂತೆ ಅಲ್ಲಿ ರೂಪುಗೊಳ್ಳುವ ಚಲನಚಿತ್ರದ ಭಾಗವಾಗುತ್ತಾರೆ.
ಹೀರೋ ಆಗಬೇಕೆಂದು ಆಸೆಯಿಂದ ಆಡಿಷನ್ ಗೆ ಕಟ್ ಔಟ್ ಸಮೇತ ಬರುವ ‘ಅಥರ್ವ ಪ್ರಕಾಶ್’ ತಮ್ಮ ಮುದ್ದು-ಪೆದ್ದುತನದಿಂದ ರಂಜಿಸಿದರೆ ಹೀರೋ ಇನ್ ಪಾತ್ರದಾರಿ ‘ಮಯೂರಿ ನಟರಾಜ್’ ತಮ್ಮ ಅದ್ಬುತ ನಟನೆ ಹಾಗು ಚೆಲುವಿನಿಂದ ಕನ್ನಡ ಚಿತ್ರರಂಗಕ್ಕೆ ಮೋಹಕ ನಟಿಯಾಗುವ ಎಲ್ಲಾ ಭರವಸೆಯನ್ನು ಮೂಡಿಸಿದ್ದಾರೆ.
ಇನ್ನು ಈ ಆಡಿಷನ್ ನ ಕೇಂದ್ರ ಪಾತ್ರಧಾರಿಯಾಗಿ ಗಾಂಧೀ ರೂಪದಲ್ಲಿ ‘ಚಂದ್ರಶೇಖರ್ ಮಡಭಾವಿ’ ರವರ ನಟನೆ ಚಿತ್ರ ಮುಗಿದ ನಂತರವೂ ಪ್ರೇಕ್ಷಕರ ಮನದಲ್ಲಿ ಉಳಿಯಲು ಯಶಸ್ವಿಯಾಗಿದೆ.
ಇವರುಗಳಲ್ಲದೆ ಬೃಂದಾ ವಿಕ್ರಂ, ಶ್ರೀ ದತ್ತಾ ಎಲ್ಲರೂ ಇಡೀ ಚಿತ್ರದ ತುಂಬಾ ಪೈಪೋಟಿ ಯಿಂದ ನಟಿಸಿದ್ದರೆ ಎಲ್ಲಾ ನಟ-ನಟಿಯರನ್ನು ಹಿಂದೆ ಹಾಕುವುದು ‘ಧರ್ಮಣ್ಣ ಕಡೂರ್’, ಎಷ್ಟರಮಟ್ಟಿಗೆ ಎಂದರೆ ಬೇರೆಲ್ಲ ನಟರು ಒಂದೊಂದು ಸೀನಿಗೂ ತಮ್ಮ ಪರ್ಫಾರ್ಮೆನ್ಸ್ ಚೆನ್ನಾಗಿ ಬರುವಂತೆ ಅಭಿನಯಿಸಿದ್ದರು ಸಹ ಪ್ರತಿಯೊಂದು ಸೀನಿನಲ್ಲೂ ತಮ್ಮ ಟೈಮಿಂಗ್ ಡೈಲಾಗ್ ಗಳ ಮೂಲಕ ಕೌಂಟರ್ ಕೊಡುತ್ತಾ ಎಲ್ಲಾ ನಟರನ್ನು ಹಿಂದಿಕ್ಕಿದ್ದಾರೆ. ಅವರ ಪಾತ್ರವು ನಿರ್ದೇಶಕ ಪಾತ್ರಧಾರಿ ನಟರಾಜ್ ರನ್ನು ಬಿಡದೆ ಕಂಗಾಲಾಗಿಸುತ್ತಾರೆ. ಧರ್ಮಣ್ಣ ಈ ಚಿತ್ರದಿಂದ ಚಿತ್ರರಂಗದಲ್ಲಿ ಇನ್ನೂ ಹೆಚ್ಚು ಅವಕಾಶಗಳಿಸಿಕೊಳ್ಳುವುದಂತೂ ಸ್ಪಷ್ಟ.
ಸಂಕಲನಗಾರ “ಬಿ. ಎಸ್ ಕೆಂಪರಾಜು” ರವರಿಗೆ ಈ ಚಿತ್ರ 275 ನೆಯದು ಜೊತೆಗೆ ಇಡೀ ಚಿತ್ರದ ಮೂಲಕ ಸಂಕಲನಗಾರ ಪಾತ್ರಧಾರಿಯಾಗೆ ಕಾಣಿಸಿಕೊಂಡು 275ನೇ ಚಿತ್ರದ ನೆನಪನ್ನು ತಮ್ಮ ಜೊತೆಯಾಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿರುವ ಕೆಲವೇ ಹಾಡುಗಳಿಗೆ ಒಳ್ಳೆಯ ಟ್ಯೂನ್ ಗಳನ್ನೂ ಕೊಟ್ಟು ಯುವ ಸಂಗೀತ ನಿರ್ದೇಶಕ ಹಾಗು ಗಾಯಕ ವಾಸುಕಿ ವೈಭವ್ ಚಿತ್ರದ ತುಂಬಾ ತಮ್ಮ ಸಂಗೀತದಿಂದ ಆವರಿಸಿದ್ದಾರೆ. ಕೊನೆಯಲ್ಲಿ ಬರುವ ಕ್ಲೈಮಾಕ್ಸ್ ಗೆ ಸರಿಹೊಂದುವ “ರಂಗ ಮಂದಿರ, ಎಂತ ಸುಂದರ, ಅಂದುಕೊಂಡಿರಾ?” ಎಂಬ ಹಾಡಿನ ಬಿಟ್ ಒಂದು ಅವರ ಎಳೇ ಕಂಠದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.
ಇನ್ನೂ ಪಾತ್ರದ ಸಂಭಾಷಣೆಯು ಆಡಿಷನ್ ಗೆ ತಕ್ಕಂತೆ ನೈಜ್ಯವಾಗಿದ್ದರು ಗಾಂಧಿ ಪಾತ್ರಧಾರಿಗೆ “ಏನಿದು ನೀವು ಕರೆತಂದ ಜನರು ಇಷ್ಟು ಗಲಾಟೆ ರಾಧಾಂತ ಮಾಡುತ್ತಿರುವರು” ಎಂದು ಕೇಳಿದಾಗ ಗಾಂಧಿ ಪಾತ್ರಧಾರಿ “ಜನರನ್ನು ಸಂಘಟಿಸಿದ್ದು ನಾನಾದರೂ ಅವರ ಈ ಗಲಾಟೆ ರಾಧಾಂತ ಮಾಡಿಸಿದ್ದು ನೀವು” ಎಂಬ ಸಂಭಾಷಣೆ ಸ್ವಾತಂತ್ರದ ನಂತರದ ಗಲಭೆಗಳನ್ನು ಉದ್ದೇಶಿಸಿದ್ದೋ ಎಂಬಂತಹ ಪ್ರಶ್ನೆ ಕೆಲ ಸೂಕ್ಷ್ಮ ಪ್ರೇಕ್ಷಕರಲ್ಲಿ ಬರುವುದಂತೂ ನಿಜ.
ಎಲ್ಲರ ಪ್ರೀತಿಯ ಡಾ|| ಪುನೀತ್ ರಾಜಕುಮಾರ್ ಪ್ರಯೋಗಾತ್ಮಕ ಚಿತ್ರಗಳಿಗೆ ತಮ್ಮ ಎಂದಿನ ಪ್ರೋತ್ಸಾಹ ತೋರಿ ತಮ್ಮ ಪಿ ಆರ್ ಕೆ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲು ನೆರವಾಗಿದ್ದಾರೆ. ಬರಿಯ ಮಾಸ್ ಚಿತ್ರಗಳಿಗೆ ಮುಗಿಬೀಳುತ್ತಿರುವ ಕನ್ನಡ ಪ್ರೇಕ್ಷಕರು ಇನ್ನಾದರೂ “ಮ್ಯಾನ್ ಆಫ್ ದಿ ಮ್ಯಾಚ್” ನಂತಹ ಚಿತ್ರವನ್ನು ನೋಡಿ ಬೆಂಬಲಿಸಿದರೆ ಇನ್ನು ಮುಂದೆ ಅನೇಕ ಪ್ರಯೋಗಾತ್ಮಕ ಚಿತ್ರಗಳು ಬರುವುದಂತೂ ನಿಜ. ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಲಭ್ಯವಿದೆ, ಚಂದಾದಾರರಾಗಿ ನೋಡಿ ಆನಂದಿಸಿ ಹಾಗು ಇಂತಹ ಚಿತ್ರಗಳನ್ನು ನೋಡಿ ಬೆಂಬಲಿಸಿ.
ಕು ಶಿ ಚಂದ್ರಶೇಖರ್