ಯಾರು ಸರಿ?
ಇತರರು ಸರಿ ಇಲ್ಲ ಅಥವಾ ತಪ್ಪಿತಸ್ಥರು ಎನ್ನುವ ಅಧಿಕಾರ ನಮಗೆ ಎಂದೂ ಇರುವುದಿಲ್ಲ.
ಯಾವಾಗಲೂ ನಾವು, ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎಂದು ನಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಮತ್ತೊಬ್ಬರನ್ನು ದೂರುತ್ತಲೇ ಇರುತ್ತೇವೆ. ಆದರ ಬದಲಿಗೆ ನಾನೆಷ್ಟು ಸರಿ ಇದ್ದೇನೆ? ನಾನು ಸರಿ ಇದ್ದೇನೆಯೇ? ಎಂದು ನಮ್ಮನ್ನೇ ನಾವು ಪರೀಕ್ಷೆಯನ್ನು ಮಾಡಿಕೊಳ್ಳಬೇಕು.
ಒಮ್ಮೆ ಲೋಟದ ಒಳಗಿದ್ದ ದಪ್ಪನೆಯ ಹಾಲು ನೀರನ್ನು ನೋಡಿ ‘ನೋಡು ನಾನೆಷ್ಟು ಬಿಳಿ ಬಿಳಿಯಾಗಿ ಸ್ವಚ್ಛ ಮತ್ತು ಶುಭ್ರವಾಗಿ ಇದ್ದೇನೆ, ನೀನಾದರೂ ಬಣ್ಣವೇ ವಿಲ್ಲದವನು, ಸುಮ್ಮನೆ ನೀನು ನನ್ನೊಂದಿಗೆ ಬೆರೆತು ನನ್ನ ಶುಭ್ರತೆ ಹಾಗು ಪವಿತ್ರತೆ ಎರಡು ಹಾಳು ಮಾಡುತ್ತೀಯಾ. ನನ್ನೊಂದಿಗೆ ನೀನು ಸೇರಿದ ಕೂಡಲೇ ಜನರು ನನ್ನನ್ನು ತಿರಸ್ಕರಿಸುತ್ತಾರೆ. ಅಷ್ಟೊಂದು ಕೀಳು ವ್ಯಕ್ತಿತ್ವದವನು ನಿನು’ ಎಂದು ಮುಖ ಸಿಂಡರಿಸಿಕೊಂಡು ಹೇಳಿತು.
ಹಾಲು ತನ್ನ ಬಗ್ಗೆ ಹೇಳಿದ ಈ ಋಣಾತ್ಮಕ ಮತ್ತು ಕೀಳು ಅಭಿಪ್ರಾಯವನ್ನು ಕೇಳಿ ನೀರು ತುಂಬಾ ಬೇಸರಪಟ್ಟಿತು. ಆದರೂ ತುಸು ಯೋಚಿಸಿ ‘ಅಯ್ಯಾ ಹಾಲೇ, ನನ್ನನ್ನೇ ಕೆಟ್ಟ ವ್ಯಕ್ತಿತ್ವದವನು ಎನ್ನುವ ನಿನ್ನ ಮಾತನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಜನರು ಸಾರಾಯಿ ಕುಡಿಯುವಾಗ ನನ್ನನ್ನು ಸೇರಿಸಿಯೇ ಕುಡಿಯುತ್ತಾರೆ. ನಾನಿಲ್ಲದೇ ಸಾರಾಯಿ ಸೇವನೆಯು ಅಪೂರ್ಣವೆಂಬ ಮಾತಿದೆ. ಅದೂ ಅಲ್ಲದೆ ಪ್ರಾಣ ಬಿಡುತ್ತಿರುವ ವ್ಯಕ್ತಿಗೆ ತುಳಸಿ ದಳದಲ್ಲಿ ಒಂದು ತೊಟ್ಟು ನೀರು ಕೊಡಿ ಹೇಳುತ್ತಾರೆಯೇ ವಿನಃ ಒಂದು ತೊಟ್ಟು ಹಾಲನ್ನು ಕೊಡಿ ಎಂದು ಯಾರೂ ಹೇಳುವುದಿಲ್ಲ. ಹೀಗಿರುವಾಗ ನಾನು ಹೇಗೆ ಅಪವಿತ್ರ ಅಥವಾ ಕೀಳು ವ್ಯಕ್ತಿತ್ವದವನಾಗುತ್ತೇನೆ. ನಿನ್ನ ಜೊತೆ ನಾನು ಸೇರಿದಾಗಷ್ಟೇ ನನ್ನ ಹೆಸರು ಹಾಳಾಗುತ್ತಿದೆ. ಹಾಗಾಗಿ ಬಹುಶಃ ತಪ್ಪು ನಿನ್ನಲ್ಲೇ ಇರಬೇಕು’ ಎಂದು ಗರ್ವದಿಂದ ಹೇಳಿತು.
ನೀರು ಮುಂದಿಟ್ಟ ವಾದವನ್ನು ಕೇಳಿದ ಹಾಲು ಬಾಯಿ ಮುಚ್ಚಿಕೊಂಡು ಸುಮ್ಮನಿತ್ತು. ಏಕೆಂದರೆ ನೀರಿನ ವಾದದಲ್ಲಿ ನೂರಕ್ಕೆ ನೂರು ಸತ್ಯವಿತ್ತು. ಏಕೆಂದರೆ ಯಾವುದೇ ವ್ಯಕ್ತಿಯು ಸಾಯುವಾಗ ಧರ್ಮ ರಹಿತವಾಗಿ ಎಲ್ಲರೂ ಅವರ ಬಾಯಿಗೆ ಜೀವ ಜಲವಾದ ನೀರನ್ನೇ ಹಾಕುತ್ತಾಯೇ ವಿನಃ ಹಾಲನ್ನು ಹಾಕುವುದಿಲ್ಲ ಎನ್ನುವ ಮಾತು ಹಾಲಿಗೆ ಕಪಾಳಮೋಕ್ಷ ಮಾಡಿದಂತೆ ಇತ್ತು. ಆ ದಿನದಿಂದ ಹಾಲು ಬೇರೆಯವರನ್ನು ನೀನು ಸರಿ ಇಲ್ಲ ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುವ ಋಣಾತ್ಮಕ ಮನೋಭಾವವನ್ನು ಬಿಟ್ಟಿತು.
ನೀರಿನ ತರ್ಕವು ನಿಜಕ್ಕೂ ಅತ್ಯದ್ಭುತವಾಗಿತ್ತು. ಯಾವಾಗಲೂ ನಾನು ಅವನ ಸಹವಾಸದಿಂದ ಹಾಳಾದೆ, ಆತನು ನಮ್ಮ ಮಗನನ್ನು ಹಾಳು ಮಾಡಿದ, ಆತ ನನ್ನ ಮಗಳ ತಲೆ ಕೆಡಿಸಿದ ಎಂದೆಲ್ಲಾ ಯಾವಾಗಲೂ ನಮ್ಮೊಳಗಿನ ತಪ್ಪನ್ನು ಇತರರ ಮೇಲೆ ಹಾಕುತ್ತಲೇ ಇರುತ್ತೇವೆ. ಇಲ್ಲಿ ನಾವೆಷ್ಟು ಪರಿಪೂರ್ಣರು ಎನ್ನುವ ಕುರಿತು ಯೋಚಿಸಬೇಕು. ನಮ್ಮ ಮಗ ಅಥವಾ ಮಗಳಿಗೆ ಇತರರಿಂದ ಪ್ರಭಾವಕ್ಕೆ ಒಳಗಾಗದಂತಹ ಸಂಯಮವನ್ನು ಎಷ್ಟು ನಾವೆಷ್ಟು ಹೇಳಿಕೊಟ್ಟಿದ್ದೇವೆ ಎಂದು ಯೋಚಿಸಬೇಕು. ಬಹುತೇಕ ಸಂದರ್ಭಗಳಲ್ಲಿ ಬೇರೆಯವರ ತಪ್ಪು 20 ಶೇಕಡಾ ಇದ್ದರೆ ನಮ್ಮ ತಪ್ಪು 80 ಶೇಕಡಾ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ ಇತರರನ್ನು ಸರಿ ಇಲ್ಲ ಅಥವಾ ತಪ್ಪಿತಸ್ಥ ಎನ್ನುವ ಅಧಿಕಾರ ನಮಗಿರುವುದಿಲ್ಲ. ಉಳಿದವರು ಸರಿಯಿಲ್ಲ ಎನ್ನುವ ಬದಲು ನಾವು ಸರಿ ಇದ್ದೇವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160